ಆಣೆ ಪ್ರಮಾಣ ರಾಜಕೀಯ ವಿಚಾರ: ಶಾಸಕ ಧೀರಜ್ ಮುನಿರಾಜ್ ಪ್ರತಿಕ್ರಿಯೆ: ನಾನೇನು ನಿತ್ಯಾನಂದ ಸ್ವಾಮಿ ಅಲ್ಲ- ಅವರ ರೀತಿ ಹೊಸ ದೇಶ ಕಟ್ಟಿ, ಹೊಸ ಕರೆನ್ಸಿ ಜಾರಿ ಮಾಡಿ, ಕೈಲಾಸ ಸೃಷ್ಟಿ ಮಾಡೋದಕ್ಕೆ ಆಗಲ್ಲ- ನಾನು ದೊಡ್ಡಬಳ್ಳಾಪುರ ಅಭಿವೃದ್ಧಿ ಮಾಡುತ್ತೇನೆ- ಶಾಸಕ ಧೀರಜ್ ಮುನಿರಾಜ್

ತಾಲ್ಲೂಕಿನ ರಾಜಕಾರಣದ ಇತಿಹಾಸದಲ್ಲಿ ಸಿದ್ದಲಿಂಗಯ್ಯ, ರಾಮೇಗೌಡ, ಆರ್.ಎಲ್ ಜಾಲಪ್ಪ, ನರಸಿಂಹಸ್ವಾಮಿ ಸೇರಿದಂತೆ ಘಟಾನುಘಟಿ ನಾಯಕರ ರಾಜಕಾರಣದಲ್ಲಿ ಈವರೆಗೆ ರಾಜಕೀಯದ ಎಲ್ಲೆ ಮೀರಿ ಮಾತನಾಡಿದ್ದಾಗಲಿ.. ಆಣೆ ಪ್ರಮಾಣ ರಾಜಕೀಯಗಳಾಗಲಿ.. ವೈಯಕ್ತಿಯ ಆರೋಪ – ಪ್ರತ್ಯಾರೋಪಗಳಾಗಿ ನಡೆದಿರಲಿಲ್ಲ. ಇದೀಗ ಬದಲಾದ ರಾಜಕಾರಣದಲ್ಲಿ ಹಾಲಿ ಶಾಸಕ ಧೀರಜ್ ಮುನಿರಾಜು ಮತ್ತು ಮಾಜಿ ಶಾಸಕ ವೆಂಕಟರಮಣಯ್ಯ ಮಧ್ಯೆ ವೈಯಕ್ತಿಯ ಆರೋಪ-ಪ್ರತ್ಯಾರೋಪಗಳು ಆರಂಭವಾಗಿದ್ದು, ಸವಾಲು – ಎದಿರು ಸವಾಲುಗಳು ನಡೆಯುತ್ತಿವೆ. ಮಾಜಿ ಶಾಸಕರ ವೆಂಕಟರಮಣಯ್ಯ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಅನುದಾನ ವಿಚಾರಗಳಿಗೆ ಸರ್ಕಾರದಲ್ಲಿ ಪರೋಕ್ಷವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಶಾಸಕ ಧೀರಜ್ ಮುನಿರಾಜು ನೇರವಾಗಿ ದೂರುತ್ತಿದ್ದಾರೆ. ಇತ್ತ ಮಾಜಿ ಶಾಸಕ ವೆಂಕಟರಮಣಯ್ಯ ನಾನು ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸಿಲ್ಲ. ಕುಣಿಯಲಾರದೆ ನೆಲ ಡೋಂಕು ಎನ್ನುತ್ತಿದ್ದಾರೆ. ಪ್ರಬುದ್ಧತೆಯೇ ಇಲ್ಲ, ಬೇಕಾದರೆ ಧರ್ಮಸ್ಥಳದ ಮಂಜುನಾಥಸ್ವಾಮಿ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡಿ ಹೇಳುತ್ತೇನೆ. ನೀನು ಬಂದು ಪ್ರಮಾಣ ಮಾಡು ಎಂದು ಶಾಸಕ ಧೀರಜ್ ಮುನಿರಾಜುಗೆ ಸವಾಲು ಹಾಕಿದ್ದರು. ಇದಕ್ಕೆ ಶಾಸಕ ಧೀರಜ್ ಮುನಿರಾಜ್ ಇಂದು ಪ್ರತಿಕ್ರಿಯಿಸಿ, ಐದು ವರ್ಷ ಕ್ಷೇತ್ರದ ಕೆಲಸ ಮಾಡೋದಕ್ಕೆ ಜನ ವೋಟ್ ಹಾಕಿ ಗೆಲ್ಲಿಸಿದ್ದಾರೆ. ಅದೇ ಜನ ಈ ಹಿಂದೆ ಮಾಜಿ ಶಾಸಕ ಟಿ ವೆಂಕಟರಮಣಯ್ಯ ನವರಿಗೆ 10 ವರ್ಷ ಅವಕಾಶ ಮಾಡಿಕೊಟ್ಟಿದ್ದರು. ಯಾವುದೇ ಮಾಜಿ ಶಾಸಕರ ಬಗ್ಗೆ ಧೀರಜ್ ಮುನಿರಾಜ್ ಮಾತಾಡೋದಿಲ್ಲ ಎಂದರು.

ಸಿದ್ದಲಿಂಗಪ್ಪ, ರಾಮೇಗೌಡ, ಜಾಲಪ್ಪ, ಗಂಟಿಗಾನಹಳ್ಳಿ ಕೃಷ್ಣಪ್ಪ, ಆರ್ ಜಿ ವೆಂಕಟಾಚಲಯ್ಯ, ನರಸಿಂಹಸ್ವಾಮಿ ಕಾಲದಿಂದ ಮಾಜಿ ಶಾಸಕ ಟಿ ವೆಂಕಟರಮಣಯ್ಯ ಕಾಲದವರೆಗೆ ಕೆಲಸ ಆಗಿದೆ. ಅದೇ ಕೆಲಸವನ್ನ ಶಾಸಕನಾಗಿ ನಾನು ಮುಂದುವರಿಸಿಕೊಂಡು ಹೋಗಬೇಕು. ನಾನೇನು ನಿತ್ಯಾನಂದ ಸ್ವಾಮಿ ಅಲ್ಲ. ಅವರ ರೀತಿ ಹೊಸ ದೇಶ ಕಟ್ಟಿ, ಹೊಸ ಕರೆನ್ಸಿ ಜಾರಿ ಮಾಡಿ, ಕೈಲಾಸ ಸೃಷ್ಟಿ ಮಾಡೋದಕ್ಕೆ ಆಗಲ್ಲ. ನಾನು ದೊಡ್ಡಬಳ್ಳಾಪುರ ಅಭಿವೃದ್ಧಿ ಮಾಡುತ್ತೇನೆ. ನಾನು ದೊಡ್ಡಬಳ್ಳಾಪುರವನ್ನೇ ಅಭಿವೃದ್ಧಿ ಮಾಡಬೇಕು. ಅದರಲ್ಲಿ ಏನು ಬೇಕೋ ಅದನ್ನ ಮಾಡ್ತೀನಿ. ಮಾಜಿ ಶಾಸಕರ ಬಗ್ಗೆ ಮಾತನಾಡೋದಿಲ್ಲ ಎಂದು ಹೇಳಿದರು.

ಏನಾದರೂ ಅವರು ಅಂದರೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯನವರು ನನ್ನ ಪ್ರತಿ ಸ್ಪರ್ಧಿಯಾಗಿ ಟಿಕೆಟ್ ತಂದರೆ ನಡೆಯುವಂತಹ ವಿಚಾರಗಳು ಬೇರೆ ಇರುತ್ತವೆ. ಸಾರ್ವಜನಿಕವಾಗಿ ನಾನು ಅವರ ಬಗ್ಗೆ ಮಾತಾಡಲ್ಲ. ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಾಗಿಲ್ಲ. ಅವರು ಹತ್ತು ವರ್ಷಗಳ ಕಾಲ ಶಾಸಕರಾಗಿ ಕೆಲಸ ಮಾಡಿರುವುದು ಹಾಗೂ ನಾನು ಮಾಡಿರುವ ಕೆಲಸಗಳ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಚುನಾವಣೆಗೆ ಬರುತ್ತೇನೆ. ಆಣೆ ಪ್ರಮಾಣ ವಿಚಾರವನ್ನು ರಾಜಕೀಯದಲ್ಲಿ ನಾನು ತರಲು ನಾನು ಇಷ್ಟಪಡುವುದಿಲ್ಲ. ದೇವರ ಮೇಲೆ ಆಣೆ ಪ್ರಮಾಣ ಮಾಡಿದರೆ ಬರುವಂತಹ ಕಷ್ಟಗಳು ಅಷ್ಟಿಷ್ಟಲ್ಲ. ನಮ್ಮ ಆತ್ಮಸಾಕ್ಷಿಗಿಂತ ದೊಡ್ಡ ದೇವರಿಲ್ಲ. ನಾನು ಇಡೀ ಜಗತ್ತಿಗೆ ಮೋಸ ಮಾಡಬಹುದು, ನನ್ನ ಆತ್ಮಸಾಕ್ಷಿಗೆ ನಾನು ಮೋಸ ಮಾಡಿಕೊಳ್ಳುವುದಿಲ್ಲ. ಅವರು ಟಿಕೆಟ್ ತರಲಿ, ಟಿಕೆಟ್ ತಂದಾಗ ಮಾತನಾಡುತ್ತೇನೆ. ಟಿಕೆಟ್ ತರುವ ಕಡೆ ಗಮನಹರಿಸಲಿ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!