
2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ರಾಗಿಯನ್ನು ಖರೀದಿಸುವ ಕಾರ್ಯ ದೊಡ್ಡಬಳ್ಳಾಪುರದ ಎಂಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ.
ಈಗಾಗಲೇ ನೋಂದಣಿ ಮಾಡಿಕೊಂಡಿರುವ ರೈತರು ಟ್ರ್ಯಾಕ್ಟರ್ ಹಾಗೂ ಇತರೆ ಗೂಡ್ಸ್ ವಾಹನಗಳಲ್ಲಿ ರಾಗಿ ತಂದಿದ್ದಾರೆ. ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಹೊತ್ತ ಟ್ರ್ಯಾಕ್ಟರ್ ಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿದೆ…..
ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಅಂದಾಜು 6 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಸುವ ಗುರಿಯನ್ನು ಹೊಂದಿದ್ದು, ರೈತರಿಂದ ನೇರವಾಗಿ ರಾಗಿ ಖರೀದಿಸಿ ಅದರ ಹಣವನ್ನು ಯಾವುದೇ ಮಧ್ಯವರ್ತಿಗೆ ಆಸ್ಪದ ನೀಡದೇ ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಸಂದಾಯ ಮಾಡಲಾಗುತ್ತಿದೆ.

ಪ್ರತಿ ಕ್ವಿಂಟಾಲ್ ರಾಗಿಗೆ ರೂ. 4886/- ನಿಗದಿ*
2025-26 ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಪ್ರತಿ ಕ್ವಿಂಟಾಲ್ ರಾಗಿಗೆ ರೂ.4886/- ನಿಗದಿ ಪಡಿಸಲಾಗಿದೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಟ 50 ಕ್ವಿಂಟಾಲ್ ಗಳನ್ನು ಮೀರದಂತೆ ಉತ್ತಮ ಗುಣಮಟ್ಟದ ರಾಗಿ ಖರೀದಿಸಲಾಗುವುದು. ಪ್ರಸಕ್ತ ಸಾಲಿನ ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಎರಡು ಬಾರಿ ಬಯೋಮೆಟ್ರಿಕ್ ಬಳಕೆಯಾಗುತ್ತದೆ. ಒಂದು ಬಾರಿ ನೋಂದಣಿ ಸಂದರ್ಭದಲ್ಲಿ ಇನ್ನೊಂದು ರಾಗಿ ಖರೀದಿ ವೇಳೆಯಲ್ಲಿ ಹಾಗಾಗಿ ನೋಂದಾಯಿತ ರೈತರೇ ರಾಗಿ ಖರೀದಿ ಕೇಂದ್ರಗಳಿಗೆ ರಾಗಿ ತರುವುದು ಕಡ್ಡಾಯವಾಗಿರುತ್ತದೆ.

*ತಾಲ್ಲೂಕುವಾರು ರೈತರ ನೋಂದಣಿ ವಿವರ:*
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು- 3678, ದೊಡ್ಡಬಳ್ಳಾಪುರ ತಾಲ್ಲೂಕು- 12687, ಹೊಸಕೋಟೆ ತಾಲೂಕು-1240, ನೆಲಮಂಗಲ ತಾಲೂಕು- 5619 ಸೇರಿ ಒಟ್ಟು 23224 ರೈತರು ರಾಗಿ ಪೂರೈಕೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ.