ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ: ನಾಲ್ವರಿಗೆ ಗಂಭೀರ ಗಾಯ: ಸೂಕ್ತ ಸಮಯಕ್ಕೆ ಬಾರದ ಆಂಬುಲೆನ್ಸ್: ರಕ್ತದ ಮಡುವಿನಲ್ಲಿ ಗಾಯಾಳುಗಳ ನರಳಾಟ

ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ನಾಲ್ವರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಆರೂಡಿ, ಸಾಸಲು ರಸ್ತೆಯ ಗುಮ್ಮನಹಳ್ಳಿ ಸಮೀಪ ಇಂದು ಸಂಜೆ ನಡೆದಿದೆ.

ತಾಲೂಕಿನ ಗುಮ್ಮನಹಳ್ಳಿ-ಲಿಂಗದವೀರನಹಳ್ಳಿ ಗೇಟ್ ನಡುವಿನ ತಿರುವಿನಲ್ಲಿ ಮುಖಾಮುಖಿಯಾದ ಸ್ಕೂಟರ್ ಮತ್ತು ಬೈಕ್‌ ಡಿಕ್ಕಿ ಹೊಡೆದಿವೆ. ಘಟನೆಯಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗಾಯಗೊಂಡವರನ್ನು ತಾಲೂಕಿನ ಬಿಜವಾರ ಗ್ರಾಮದ ತಾಯಿ ಮತ್ತು ಮಗ ಎನ್ನಲಾಗಿದ್ದು, ಇನ್ನಿಬ್ಬರು ನೇಪಾಳಿ ಮೂಲದವರು ಎನ್ನಲಾಗುತ್ತಿದೆ.

ಘಟನೆ ಬೆನ್ನಲ್ಲೇ ಸ್ಥಳೀಯರು, ಪ್ರತ್ಯಕ್ಷದರ್ಶಿಗಳು ಆಂಬುಲೆನ್ಸ್ ಗೆ ಕರೆ ಮಾಡಿ ಒಂದೂವರೆ ಗಂಟೆ ಕಾದರು ಸ್ಥಳಕ್ಕೆ ಬಾರದೆ ಇರುವ ಕಾರಣ, ಗಾಯಾಳುಗಳು ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು.

ಘಟನೆ ಸಂಭವಿಸಿದ ದಾರಿಯಲ್ಲಿಯೇ ತೆರಳುತ್ತಿದ್ದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರು, ಅಪಘಾತ ಕಂಡು ಕಾರು ನಿಲ್ಲಿಸಿ ಸ್ಥಳಕ್ಕೆ ಬಂದು, ಆಂಬುಲೆನ್ಸ್ ಬಾರದ ಹಿನ್ನೆಲೆ ಸಂಬಂಧಪಟ್ಟವರಿಗೆ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿ, ತಮ್ಮ ಕಾರಿನಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಲು ಮುಂದಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು‌.

ಹೊಸಹಳ್ಳಿ ಮತ್ತು ದೊಡ್ಡಬೆಳವಂಗಲ ಪೊಲೀಸ್‌ ಠಾಣೆ ವ್ಯಾಪ್ತಿಯ ನಡುವೆ ಘಟನೆ ಸಂಭವಿಸಿದ್ದು, ಯಾವ ಠಾಣೆ ವ್ಯಾಪ್ತಿಯೆಂದು ಸದ್ಯ ಖಚಿತವಾಗಿಲ್ಲ.

ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್ ಲಭ್ಯವಿಲ್ಲವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ ಇರುವುದರಿಂದ ಕೆರಳಿದ ಯುವಕರು ಸಾಸಲು ಸರ್ಕಾರಿ ಆಸ್ಪತ್ರೆ ಬಾಗಿಲಿಗೆ ಬೇಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಸಲು ಹೋಬಳಿ ಕೇಂದ್ರವಾಗಿದ್ದು, 24X7 ಕಾರ್ಯನಿರ್ವಹಿಸಬೇಕಿದೆ. ಆದರೆ ಇಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯಿಂದ ರೋಗಿಗಳಿಗೆ, ಅಪಘಾತದಲ್ಲಿ ಗಾಯಗೊಂಡವರಿಗೆ ಯಾವುದೇ ಸೌಲಭ್ಯ ದೊರಕುತ್ತಿಲ್ಲವೆಂದು ಸ್ಥಳೀಯರು ಆಕ್ರೋಶವ್ಯಕ್ತಪಡಿಸಿ ಬೇಲಿ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!