ಗ್ರಾಪಂ ನೌಕರರ ಬೇಡಿಕೆಗಳ ಈಡೇರಿಕೆಗೆ ಜಿಪಂ ಮುಂದೆ ಪ್ರತಿಭಟನೆ

ಕೋಲಾರ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ನೇತೃತ್ವದ ಗ್ರಾಮ ಪಂಚಾಯಿತಿ ನೌಕರರು ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಗ್ರಾಮ ಪಂಚಾಯಿತಿ ನೌಕರರಿಗೆ 36,000 ಕನಿಷ್ಠ ವೇತನ, ಪಿಂಚಣಿ ಕನಿಷ್ಠ 6,000 ಕ್ಕೆ ನಿಗದಿಪಡಿಸುವುದು, ಎಲ್ಲ ಗ್ರಾಮ ಪಂಚಾಯಿತಿಗಳಿಗೆ ದ್ವಿತೀಯ ದರ್ಜೆ ಗುಮಾಸ್ತರ ನೇಮಕ, ಹಳೆ ಪಿಂಚಣಿ ಯೋಜನೆ ಜಾರಿ, ಗ್ರಾಚ್ಯುಟಿ ಪರಿಹಾರ 90 ದಿನಕ್ಕೆ ಹೆಚ್ಚಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನಕಾರರು ಒತ್ತಾಯಿಸಿದರು‌.

ಗ್ರಾಮ ಪಂಚಾಯಿತಿಗಳಿಗೆ ಎರಡನೇ ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ ಈಗಾಗಲೇ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುವ ನೌಕರರ ಕಂಪ್ಯೂಟರ್‌ ಜ್ಞಾನ ಹಾಗೂ ವಿದ್ಯಾರ್ಹತೆ ಹೊಂದಿದ್ದರೆ ಅವರಿಗೆ ಅವಕಾಶ ನೀಡಬೇಕು. ನೌಕರರಿಗೆ ವರ್ಗಾವಣೆಗೆ ಅವಕಾಶ ನೀಡಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ಲೆಕ್ಕ ಸಹಾಯಕ ಹುದ್ದೆ ಸ್ಥಾಪಿಸಬೇಕು. ಸೇವಾ ಹಿರಿತನ ಪರಿಗಣಿಸಿ ವೇತನ ಹೆಚ್ಚಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಎಲ್ಲಾ ನೌಕರರಿಗೆ ಕೋವಿಡ್ ಪರಿಹಾರ ನಿಧಿ, ಬಾಕಿ ವೇತನ, ಅನುಕಂಪ ಆಧಾರಿತ ಕೆಲಸ, ತೆರಿಗೆ ಸಂಗ್ರಹ ಗುರಿ ಉಪಧನ ಕೊಡಿಸಲು ಜಿಲ್ಲಾ ಪಂಚಾಯಿತಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಮರನಾರಾಯಣ ಕೇಶವರಾವ್, ರಾಮಕೃಷ್ಣಪ್ಪ, ಮೋಹನ್, ಚಂದ್ರಪ್ಪ ವೆಂಕಟರಾಮೇಗೌಡ, ನಾಗೇಶ್, ರೆಡ್ಡೆಪ್ಪ, ಶಿವ, ರಾಮಚಂದ್ರಪ್ಪ ಮುಂತಾದವರು ಇದ್ದರು

Leave a Reply

Your email address will not be published. Required fields are marked *

error: Content is protected !!