
ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬಿಟ್ಟೂಬಿಡದೇ ಸುರಿದ ಜಡಿ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಹಲವು ಕಡೆ ರೈತರು ಬೆಳೆದಿದ್ದ ಬೆಳೆಗಳು ನೆಲಕಚ್ಚಿವೆ. ಇದರಿಂದ ರೈತನಿಗೆ ಸಾಕಷ್ಟು ನಷ್ಟವುಂಟಾಗಿದೆ.
ಅದೇರೀತಿ ತಾಲೂಕಿನ ಕಂಟನಕುಂಟೆ ಗ್ರಾಮದ ಸಿದ್ದಲಿಂಗಪ್ಪ ಎಂಬ ರೈತ ಒಂದು ಎಕರೆ ಭೂಮಿಯಲ್ಲಿ ಸುಮಾರು 2ಲಕ್ಷ ಖರ್ಚು ಮಾಡಿ ಕಡ್ಡಿ ಬೀನ್ಸ್ ಬೆಳೆದಿದ್ದರು. ಈಗ ಜಡಿ ಮಳೆಯಿಂದಾಗಿ ಬೆಳೆಯಲ್ಲಾ ನೆಲಕಚ್ಚಿ ನೀರುಪಾಲಾಗಿದೆ. ಇದರಿಂದ 6-7ಲಕ್ಷ ರೂ. ನಷ್ಟವುಂಟಾಗಿದೆ. ಇನ್ನೇನು ಫಸಲನ್ನು ಕಟಾವ್ ಮಾಡಿ ಮಾರುಕಟ್ಟೆಗೆ ಹಾಕಿ ಖರ್ಚು ಮಾಡಿದ್ದ ಬಂಡವಾಳವನ್ನು ತೆಗೆಯುವ ವೇಳೆ ಈ ಅವಾಂತರ ಸೃಷ್ಟಿಯಾಗಿದೆ…

ಈ ಕುರಿತು ರೈತ ಸಿದ್ದಲಿಂಗಪ್ಪ ಮಾತನಾಡಿ, 2ಲಕ್ಷ ಖರ್ಚು ಮಾಡಿ ಸುಮಾರು 70 ದಿನಗಳಿಂದ ಮಗುವನ್ನು ಸಾಕುವ ರೀತಿಯಲ್ಲಿ ಕಡ್ಡಿ ಬೀನ್ಸ್ ಬೆಳೆಯನ್ನು ಬೆಳೆಯಲಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಬಿದ್ದ ಮಳೆಗೆ ಈಗ ಬೆಳೆಯಲ್ಲಾ ಸಂಪೂರ್ಣ ನೆಲಕಚ್ಚಿದೆ. ಇದರಿಂದ ಸುಮಾರು 6-7ಲಕ್ಷ ರೂ. ನಷ್ಟವಾಗಿದೆ. ಒಂದು ಕೆಜಿ ಕಡ್ಡಿ ಬೀನ್ಸ್ ಗೆ ಮಾರುಕಟ್ಟೆಯಲ್ಲಿ 120ರೂ. ಇತ್ತು. ಮಳೆಯಿಂದಾಗಿ ಕೆಜಿಗೆ 25 ರೂ.ಗೆ ಇಳಿದಿದೆ ಇದರಿಂದ ನಮಗೆ ಹಾಕಿರುವ ಬಂಡವಾಳವೂ ಸಹ ಬರುವುದಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡರು.
