
ಕೋಲಾರ: ನಗರ ಹೊರವಲಯದ ಸಹಕಾರ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನವ ವಿವಾಹಿತೆ ಮಾನಸಾ (24) ಅವರ ಪೋಷಕರು, ಭಾನುವಾರ ಅಳಿಯನ ಮನೆ ಮುಂದೆ ಪುತ್ರಿಯ ಶವವಿಟ್ಟು ಪ್ರತಿಭಟನೆ ನಡೆಸಿದರು.
ವರದಕ್ಷಿಣೆ ಹಾಗೂ ಮಾನಸಿಕ ಕಿರುಕುಳದಿಂದಲೇ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿದರು. ಮಾನಸಾ ಪತಿ ಉಲ್ಲಾಸ್‍ಗೌಡ ಅವರ ತುರಾಂಡಹಳ್ಳಿ ಗ್ರಾಮದ ನಿವಾಸದ ಮುಂದಿನ ರಸ್ತೆಯಲ್ಲೇ ಅಂತ್ಯಕ್ರಿಯೆ ನಡೆಸಲು ಮುಂದಾದರು. ಆಗ ಅವರನ್ನು ತಡೆದ ಪೊಲೀಸರು, ನ್ಯಾಯ ಕೊಡಿಸುವ ಭರವಸೆ ನೀಡಿದರು.
ಬಳಿಕ ಪತಿ ಮನೆಯ ಪಕ್ಕದಲ್ಲಿನ ಕೈತೋಟದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಪತಿ ಹಾಗೂ ಅವರು ಕುಟುಂಬದವರು ಇರಲಿಲ್ಲ. ಒಂದು ವರ್ಷದ ಹಿಂದೆ ಮಾನಸಾ ಹಾಗೂ ಉಲ್ಲಾಸ್‍ಗೌಡ ವಿವಾಹವಾಗಿದ್ದರು. ಅವರು ಬೆಂಗಳೂರಿನ ಗಿರಿನಗರದಲ್ಲಿ ವಾಸವಿದ್ದರು.
ವರದಕ್ಷಿಣೆ ಹಾಗೂ ಮಾನಸಿಕ ಕಿರುಕುಳದ ದೂರು ಬಂದಾಗ ಹಿರಿಯರು ಹಲವರು ಬಾರಿ ರಾಜಿ ಸಂಧಾನ ನಡೆಸಿದ್ದರು. ಆನಂತರ ಪತಿ ಕುಟುಂಬದವರು ಮಾನಸಾ ಅವರನ್ನು ತವರು ಮನೆಗೆ ಕಳುಹಿಸಿದ್ದರು ಎನ್ನಲಾಗಿದೆ. ವಿಚ್ಚೇದನ ಪಡೆದುಕೊಳ್ಳುವ ಉದ್ದೇಶದಿಂದ ವಕೀಲರ ಕಡೆಯಿಂದ ನೋಟಿಸ್ ಕೂಡ ಬಂದಿತ್ತು ಎಂಬುದು ಗೊತ್ತಾಗಿದೆ.
ಕೌಟುಂಬಿಕ ಕಲಹದಿಂದ ಬೇಸತ್ತು ಮಾನಸಾ, ಶನಿವಾರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
‘ನನ್ನ ಸಾವಿಗೆ ಯಾರೂ ಕಾರಣರಲ್ಲ, ನನ್ನ ಜೀವನ ಉಲ್ಲಾಸ್ ಕುಟುಂಬದಿಂದ ಮುಗಿದಿದೆ. ದಯವಿಟ್ಟು ನನ್ನ ಒಡವೆಯನ್ನು ನನ್ನ ಮನೆಗೆ ವಾಪಸ್ ಮಾಡಿ, ಧನ್ಯವಾದಗಳು’ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.
ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ಕೋಲಾರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಕಾಂತರಾಜ್ ಹಾಗೂ ಪಿಎಸ್‌ಐ ವಿ.ಭಾರತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
‘ಮಾನಸಾ ಎಂಬ ವಿವಾಹಿತೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣಿ ಕಿರುಕುಳದಿಂದ ಸಾವು ಸಂಭವಿಸಿರುವ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪತಿ ಉಲ್ಲಾಸ್, ಅವರ ಅಪ್ಪ, ಅಮ್ಮ ಹಾಗೂ ಅವರ ಮಾವಂದಿರು ಸೇರಿದಂತೆ ಐವರ ಮೇಲೆ ದೂರು ನೀಡಿದ್ದಾರೆ. ಈ ವಿಚಾರವಾಗಿ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಿದ್ದೇವೆ. ಪತಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ತನಿಖೆ ನಡೆಸಿ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನು ಪತ್ತೆ ಹಚ್ಚುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದರು.
ಪತಿ ಮನೆ ಮುಂದೆ ಯುವತಿಯ ಪೋಷಕರು ಪ್ರತಿಭಟನೆ ನಡೆಸಿರುವ ಸಂಬಂಧ ಪ್ರತಿಕ್ರಿಯಿಸಿ, ‘ಇದು ಕುಟುಂಬದ ವೈಯಕ್ತಿಕ ವಿಚಾರ. ಮನವೊಲಿಸಿ ಅಂತ್ಯಕ್ರಿಯೆ ನಡೆಸಲಾಗಿದೆ. ಅವರಿಗೆ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದೇವೆ’ ಎಂದರು.