ಸರಳವಾಗಿ ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಣೆಗೆ ನಿರ್ಧಾರ

ಕೋಲಾರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದಾಗಿ ಈ ಬಾರಿ ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಣೆಯನ್ನು ಮಾ.15ರ ಸೋಮವಾರಂದು ಸರಳವಾಗಿ ಆಚರಿಸಲಾಗುವುದೆಂದು ಬಲಿಜ ಸಮುದಾಯದ ಮುಖಂಡ ಹಾಗೂ ಯೋಗಿ ನಾರಾಯಣ ಬಲಿಜ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಪ್ರಸಾದ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾಡಳಿತವು ಜಯಂತಯನ್ನು ಸರಳವಾಗಿ ಆಚರಿಸಲು ಅನುಮತಿ ನೀಡಿರುವುದರಿಂದ ಯಾವುದೇ ಮೆರವಣಿಗೆ ವೇದಿಕೆ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಣೆ ಮಾಡದೆ ಸರಳ ಹಾಗೂ ಸಾಂಕೇತಿಕವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಮಾ.25ರ ಸೋಮವಾರ ಬೆಳಗ್ಗೆ 9 ಗಂಟೆಗೆ ನಗರದ ಟೇಕಲ್ ರಸ್ತೆಯಲ್ಲಿರುವ ಯೋಗಿನಾರೇಯಣ ಯತೀಂದ್ರರ ಪುತ್ಥಳಿಗೆ ಪೂಜೆ ಸಲ್ಲಿಸಿ ತದ ನಂತರ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಬೆಳಿಗ್ಗೆ 10 ಗಂಟೆಗೆ
ಜಿಲ್ಲಾ ಆಡಳಿತ ಸಾಂಕೇತಿಕವಾಗಿ ನಡೆಸುವ ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಣೆಯನ್ನು ಸಮುದಾಯದ ಎಲ್ಲಾ ಜನತೆ ಭಾಗವಹಿಸಲಿದ್ದಾರೆಂದು ತಿಳಿಸಿದರು.

ಜುಲೈ ತಿಂಗಳಿನಲ್ಲಿ ಬರುವ ಗುರುಪೂರ್ಣಿಮೆಯಂದು ಪ್ರತಿಭಾ ಪುರಸ್ಕಾರ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಸಭೆ ನಡೆಸಿ ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳುವುದಾಗಿಯೂ ಹೇಳಿದರು.

ಸಮುದಾಯದ ಮುಖಂಡ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ವೆಂಕಟಸ್ವಾಮಿ ಮಾತನಾಡಿ ಸರಳವಾಗಿ ಹಾಗೂ ಭಕ್ತಿ ಪೂರಕವಾಗಿ ನಡೆಯಲಿರುವ ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಯೋಗಿನಾರೇಯಣ ಯತೀಂದ್ರರ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ನಗರಸಭೆ ಮಾಜಿ ಸದಸ್ಯ ರಘು ಚಿಟ್ಟಿ, ಸಮುದಾಯದ ಮುಖಂಡರಾದ ರಂಗನಾಥ್, ಎಸ್.ಎಸ್.ಶ್ರೀಧರ್, ಗಾಂಧಿನಗರ ರಾಜೇಶ್, ಮಹೇಶ್, ಎಂ.ಜಿ.ಮಂಜುನಾಥ್, ಗೋವರ್ಧನ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *