Categories: ಲೇಖನ

7 ನೇ ವೇತನ ಆಯೋಗ ಜಾರಿ……ಅಧಿಕಾರಿಗಳು ಇನ್ನು ಮುಂದೆ ದಕ್ಷತೆ, ಪ್ರಾಮಾಣಿಕ ಸೇವೆಗೆ ಹೆಚ್ಚು ಮಹತ್ವ ನೀಡಲಿ: ಭ್ರಷ್ಟಾಚಾರವನ್ನು ಸಾಧ್ಯವಾದಷ್ಟು ನಿಯಂತ್ರಿಸಿಕೊಳ್ಳಲಿ

ಏಳನೇ ವೇತನ ಆಯೋಗದ ವರದಿ ಜಾರಿಯಾಗಿದೆ. ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸರ್ಕಾರಿ ನೌಕರರ ಸಂಬಳ ಹೆಚ್ಚಾಗಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 20208 ( ಇಪ್ಪತ್ತು ಸಾವಿರದ ಇನ್ನೂರ ಎಂಟು ಕೋಟಿ ) ಹೆಚ್ಚುವರಿ ಒತ್ತಡ ಬೀಳಲಿದೆ…..

ತುಂಬಾ ಸಂತೋಷ ಸಂಬಳ ಹೆಚ್ಚಾಗಿದ್ದಕ್ಕೆ, ಅಭಿನಂದನೆಗಳು ಸುಖವಾಗಿರಿ….

ಆದರೆ ಎಲ್ಲಾ ಸರ್ಕಾರದ ಸಂಬಳ ಪಡೆಯುವ ಅಧಿಕಾರಿಗಳೇ, ಇನ್ನು ಮುಂದಾದರು ನಿಮ್ಮ ಆತ್ಮವನ್ನು ಮುಟ್ಟಿಕೊಂಡು, ಹೃದಯವನ್ನು ತೆರೆದುಕೊಂಡು, ಮನಸ್ಸನ್ನು ಅಪ್ಪಿಕೊಂಡು, ಸ್ವಲ್ಪ ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ…….

ಎಷ್ಟೊಂದು ಜನ ಎರಡು ಹೊತ್ತಿನ ಊಟ ಬಟ್ಟೆಗೆ ಅಥವಾ ತಾವು ಇಷ್ಟಪಟ್ಟ ಅಡುಗೆ ಮತ್ತು ತೊಡುಗೆ ತೊಡಲು ಎಷ್ಟೊಂದು ಶ್ರಮ ಪಡುತ್ತಾರೆಂದು. ಕೆಲವರಿಗೆ ಅದು ಸಿಗುವುದೇ ಇಲ್ಲ. ಸಣ್ಣಪುಟ್ಟ ಬೀದಿ ವ್ಯಾಪಾರ ಮಾಡುವ ಹಣ್ಣು ತರಕಾರಿ ಹೂವು ದಿನಸಿ ಔಷಧಿ ಮುಂತಾದ ಚಿಲ್ಲರೆ ಅಂಗಡಿಗಳ ಜನರು ಹತ್ತು/ಇಪ್ಪತ್ತು/ಮೂವತ್ತು ಸಾವಿರ ಲಾಭ ಮಾಡಲು ಎಷ್ಟೆಲ್ಲಾ ಕಷ್ಟಪಡುವರೆಂದು. ಕೆಲವೊಮ್ಮೆ ಲಾಭ, ಕೆಲವೊಮ್ಮೆ ನಷ್ಟ, ಅದರಿಂದಾಗಿ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುವರು, ಕೆಲವರು ಊರು ಬಿಡುವರು, ಮತ್ತೆ ಕೆಲವರು ಪರಾರಿಯಾಗುವರು……

ಎಷ್ಟೊಂದು ರೈತರು ಇಡೀ ವರ್ಷ ದುಡಿದರು ಲಕ್ಷ ರೂಪಾಯಿ ನೋಡಲು ಹರಸಾಹಸ ಪಡುವರು. ಕೆಲವರು ಇರುವ ಹಣವನ್ನೂ ಕಳೆದುಕೊಂಡು ಸಂಕಷ್ಟಕ್ಕೀಡಾಗುವವರು. ಈಗಲೂ ಅನೇಕ ಮಹಿಳೆಯರು ತಮ್ಮ ದೇಹವನ್ನು ಮಾರಿಕೊಂಡು ಮಕ್ಕಳು ಮತ್ತು ಕುಟುಂಬದ ನಿರ್ವಹಣೆ ಮಾಡುವ ಪರಿಸ್ಥಿತಿ ಇದೆ. ಎಷ್ಟೋ ಜನ ಬಿಇ, ಎಂಬಿಎ, ಎಂಸಿಎ, ಡಿಪ್ಲೋಮಾ, ಸ್ನಾತಕೋತ್ತರ ಪದವಿ ಇತ್ಯಾದಿ ಶಿಕ್ಷಣ ಪಡೆದವರು ಸಹ 10/15/20 ಸಾವಿರಕ್ಕೆ ಯಾವುದೇ ಭದ್ರತೆ ಇಲ್ಲದೆ ಈಗಲೂ ದುಡಿಯುತ್ತಿದ್ದಾರೆ….

ಎಷ್ಟೊಂದು ಜನ ಮಕ್ಕಳ ಶಾಲಾ ಫೀಸು ಕಟ್ಟದೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ, ಹಣಕಾಸಿನ ತೊಂದರೆಯಿಂದ ಪ್ರತಿದಿನ ನರಳುತ್ತಿರುತ್ತಾರೆ. ಕೆಲವರಂತೂ ಜೀವನಪೂರ್ತಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲೇ ಒದ್ದಾಡುತ್ತಿರುತ್ತಾರೆ. ಇಂತಹ ಸಂದರ್ಭ – ಸನ್ನಿವೇಶದಲ್ಲಿ ನೀವೆಷ್ಟು ಅದೃಷ್ಟವಂತರು ಯೋಚಿಸಿ……

ಪ್ರತಿ ತಿಂಗಳು ಹೆಚ್ಚು ಕಡಿಮೆ 30 ನೇ ತಾರೀಕು ನಿಮ್ಮ ಅಕೌಂಟಿಗೆ ಕನಿಷ್ಠವೆಂದರು ಐವತ್ತು ಸಾವಿರದಷ್ಟು ಹಣ ಕಡ್ಡಾಯವಾಗಿ ಜಮೆ ಆಗುತ್ತದೆ. ಇವತ್ತಿನ ಪರಿಸ್ಥಿತಿಯಲ್ಲಿ 50,000 ದಲ್ಲಿ ಒಂದು ಸರಳ ಬದುಕು ಬದುಕುವುದು ಏನು ಕಷ್ಟವಲ್ಲ. ಅನೇಕರಿಗೆ ಸಂಬಳ ಲಕ್ಷ ದಾಟುತ್ತದೆ……

ಹೌದು, ಬೆಲೆ ಏರಿಕೆ, ವಿದ್ಯಾಭ್ಯಾಸ, ಅನಾರೋಗ್ಯ, ಮದುವೆ ಮುಂತಾದ ಸಂದರ್ಭದಲ್ಲಿ ಒಂದಷ್ಟು ಹೆಚ್ಚು ಹಣ ಬೇಕಾಗುತ್ತದೆ. ಹೇಗಿದ್ದರೂ ಒಂದಷ್ಟು ಉಳಿತಾಯಗಳು ಸಹ ಇರುತ್ತದೆ. ಆದ್ದರಿಂದ ಇದೆಲ್ಲವನ್ನು ಗಮನಿಸಿ ಭ್ರಷ್ಟಾಚಾರವನ್ನು, ಲಂಚದ ಹಣ ಸ್ವೀಕರಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಿ. ಲಂಚದ ಹಣದಿಂದ ಬದುಕುವುದು ಇನ್ನೊಬ್ಬರ ಹೇಸಿಗೆ, ಎಂಜಲು ತಿನ್ನುವುದು ಎಂದು ಮನಸ್ಸಿಗೆ ಅರ್ಥ ಮಾಡಿಸಿ, ಕುಟುಂಬಗಳಿಗೆ ಅರ್ಥ ಮಾಡಿಸಿ. ಈ ಭ್ರಷ್ಟ ಹಣದಿಂದ ನನ್ನ ಮಕ್ಕಳನ್ನು ನಮ್ಮ ತಂದೆ ತಾಯಿಯನ್ನು ಸಾಕುವುದಿಲ್ಲ ಎಂದು ಅಂತರ್ಯದಲ್ಲಿ ಪ್ರತಿಜ್ಞೆ ಮಾಡಿಕೊಳ್ಳಿ……

ಬೇಕು ಬೇಕು ಎನ್ನುವ ಮನಸ್ಥಿತಿಯಿಂದ ಸಾಕು ಸಾಕು ಎನ್ನುವ ಮನಸ್ಥಿತಿಗೆ ಬನ್ನಿರಿ. ನಿಮಗೆ ಸಿಗುವ ಸಂಬಳಕ್ಕೆ ತೃಪ್ತರಾದ ನಂತರ ನೀವು ಮಾಡಬೇಕಾದ ಕೆಲಸ ಜನರ ಪ್ರಾಮಾಣಿಕ ಮತ್ತು ದಕ್ಷ ಸೇವೆ. ಲಂಚ ಸ್ವೀಕರಿಸಿಲ್ಲ ಎಂದ ಮಾತ್ರಕ್ಕೆ ನೀವು ಪ್ರಾಮಾಣಿಕರೆಂದು ಸೋಮಾರಿಗಳಾಗಬಾರದು. ಎಷ್ಟು ಸಾಧ್ಯವೋ ಅಷ್ಟು ನಿಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಜನರಿಗೆ ಸೇವೆ ಸಲ್ಲಿಸಿ. ಅದರಲ್ಲೂ ಲಂಚವಿಲ್ಲದೆ ಸಾರ್ವಜನಿಕ ಕೆಲಸಗಳು ಆದಾಗ ಆ ವ್ಯಕ್ತಿಗಳು ನಿಮ್ಮ ಬಗ್ಗೆ ತೋರುವ ಅಭಿಮಾನ, ಪ್ರೀತಿ, ವಿಶ್ವಾಸ, ಕೃತಜ್ಞತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದನ್ನು ಗಮನದಲ್ಲಿರಿಸಿಕೊಳ್ಳಿ…..

ಮಾನವೀಯ ಸಂಬಂಧಗಳು ಈ ಸಮಾಜದಲ್ಲಿ ಉಳಿಯಲು ಬಹು ಮುಖ್ಯ ಜವಾಬ್ದಾರಿ ಇರುವುದು ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮೇಲೆ. ಅವರೇನಾದರೂ ಒಂದಷ್ಟು ಪ್ರಾಮಾಣಿಕತೆ ಮತ್ತು ದಕ್ಷತೆ ತೋರಿಸಿದ್ದೇ ಆದರೆ ಖಂಡಿತವಾಗಲು ಈ ಸಮಾಜದ ಮುಂದಿನ ಭವಿಷ್ಯ ಉತ್ತಮ ಮಟ್ಟದಲ್ಲಿರುತ್ತೆ. ನಮ್ಮ ಮಕ್ಕಳು ಸಹ ನೆಮ್ಮದಿಯಿಂದ ಜೀವನ ಮಾಡುವ ಸಾಧ್ಯತೆ ಇದೆ…..

ರಾಜ್ಯ ಬೊಕ್ಕಸದ ಸುಮಾರು ಶೇಕಡ 50% ರಷ್ಟು ಹಣ ಹೆಚ್ಚು ಕಡಿಮೆ ಶಾಸಕಾಂಗ, ಕಾರ್ಯಂಗ ಮತ್ತು ನ್ಯಾಯಾಂಗವೇ ಉಪಯೋಗಿಸುತ್ತದೆ. ಅದಕ್ಕೆ ತಕ್ಕ ಸೇವೆಯನ್ನು ಸಲ್ಲಿಸಿ. ನೀವು ಒಳ್ಳೆಯವರಾದರೆ ಸಹಜವಾಗಿಯೇ ಇಡೀ ಸಮಾಜ ನಿಮ್ಮನ್ನು ಅನುಸರಿಸುತ್ತದೆ‌. ಜನರನ್ನು ಅನಾವಶ್ಯಕವಾಗಿ ಅಲೆದಾಡಿಸಬೇಡಿ. ಮುಂದೆ ಎಂಟನೇ ವೇತನ ಆಯೋಗ ನಿಮಗಾಗಿ ಎಷ್ಟೇ ಹಣ ನೀಡಿದರು ಜನ ಪ್ರಶ್ನಿಸುವುದಿಲ್ಲ. ಏಕೆಂದರೆ ನೀವು ಅವರ ಕೆಲಸಗಳನ್ನು ಸುಲಲಿತವಾಗಿ ಮಾಡಿಕೊಡುತ್ತೀರಿ ಎನ್ನುವ ಭರವಸೆ ಮೂಡಿರುತ್ತದೆ……

ಸಾಧ್ಯವಾದರೆ ಇದನ್ನು ಯಾರಾದರೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ತಲುಪಿಸಿ. ಅವರು ಇನ್ನೊಂದಿಷ್ಟು ಒಳ್ಳೆಯ ಅಂಶಗಳನ್ನು ಸೇರಿಸಿ ಇಡೀ ರಾಜ್ಯದ ಸರ್ಕಾರಿ ನೌಕರರಿಗೆ ಒಂದು ಸುತ್ತೋಲೆ ಹೊರಡಿಸಿ ಇನ್ನು ಮುಂದೆ ದಕ್ಷತೆ, ಪ್ರಾಮಾಣಿಕ ಸೇವೆಗೆ ಹೆಚ್ಚು ಮಹತ್ವ ನೀಡಲಿ. ಭ್ರಷ್ಟಾಚಾರವನ್ನು ಸಾಧ್ಯವಾದಷ್ಟು ನಿಯಂತ್ರಿಸಿಕೊಳ್ಳಲಿ. ಇದು ಈ ಸಮಾಜಕ್ಕೆ, ಈ ದೇಶಕ್ಕೆ, ಈ ರಾಜ್ಯಕ್ಕೆ ನಾವು ಕೊಡಬಹುದಾದ ಒಂದು ಸಣ್ಣ ಕೊಡುಗೆ ಎನ್ನುವ ಮನಃಪರಿವರ್ತನೆ ಸರ್ಕಾರಿ ಅಧಿಕಾರಿಗಳಲ್ಲಿ ಆಗಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್‌. ಕೆ

Ramesh Babu

Journalist

Recent Posts

ಟೋಲ್ ರಸ್ತೆಯಲ್ಲಿ ಮಿತಿಮೀರಿದ ಅಪಘಾತ: ರಸ್ತೆ ಸುರಕ್ಷತೆ ಕಾಪಾಡದ ಸುಂಕವಸೂಲಿ(ಟೋಲ್) ಗುತ್ತಿಗೆದಾರರು: ಹೆದ್ದಾರಿಯಲ್ಲಿ ಕುಳಿತು ಟೋಲ್ ವಿರುದ್ಧ ಧಿಕ್ಕಾರ ಕೂಗಿದ ರೈತರು, ಸಂಘಟನೆಗಾರರು…

ರಸ್ತೆ ನಿಯಮಗಳನ್ನು ಪಾಲಿಸದೆ ವಾಹನಸವಾರರಿಗೆ ಸಮಸ್ಯೆ ಮಾಡುತ್ತಿರುವ ಟೋಲ್ ಸಿಬ್ಬಂದಿ ವಿರುದ್ದ ರಾಜ್ಯ ರೈತ ಸಂಘ ಮತ್ತು ವಿವಿಧ ಕನ್ನಡಪರ…

2 minutes ago

ವಿಜಯಪುರದ ಬಸವ ಕಲ್ಯಾಣ ಮಠದಲ್ಲಿ 38ನೇ ವರ್ಷದ ಕಡ್ಲೆಕಾಯಿ ಪರಿಷೆ

ವಿಜಯಪುರ(ದೇವನಹಳ್ಳಿ): ಇಂದಿನ ಮಕ್ಕಳಿಗೆ ಶಿಕ್ಷಣದಷ್ಟೇ, ಆಚಾರ-ವಿಚಾರ ಒಳಗೊಂಡ ಸಂಸ್ಕಾರವನ್ನು ನೀಡುವುದು ಅವಶ್ಯವಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆತರುವ…

48 minutes ago

ಸಾಸಲು ಹೋಬಳಿಯಲ್ಲಿ ಮಿತಿಮೀರಿದ ಕೃಷಿ ಬೋರ್ ವೆಲ್ ಕೇಬಲ್ ಕಳ್ಳರ ಹಾವಳಿ: ಒಂದೇ ದಿನ ಹಲವು ಕಡೆ ಕೇಬಲ್ ಕಟ್

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ಬೋರ್ ವೆಲ್ ಗಳ ವಿದ್ಯುತ್ ಕೇಬಲ್ ಕಳ್ಳರ ಹಾವಳಿ ಮಿತಿಮೀರಿದೆ. ಕಳೆದ ರಾತ್ರಿ ಹತ್ತಾರು…

3 hours ago

ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ವಿದೇಶಗಳಿಂದ…

6 hours ago

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ: ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ ಗ್ರಾಪಂ ವಿಫಲ: ಸಿಡಿದ್ದೆದ್ದ ದಲಿತರು

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಏಕಿಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ. ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ…

9 hours ago

ಪ್ರಧಾನಿ ನರೇಂದ್ರ ಮೋದಿಯನ್ನ ಭೇಟಿಯಾದ ಸಿಎಂ ಸಿದ್ದರಾಮಯ್ಯ:ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ: ಬೇಡಿಕೆ ಯಾವುದು….?

ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು…

21 hours ago