ಹೊಸ ಹೋರಾಟಗಾರರು ಸೃಷ್ಟಿಯಾಗಬೇಕಿದೆ,
ಹಳೆಯ ಹೋರಾಟಗಾರರು ಮರುಹುಟ್ಟು ಪಡೆಯಬೇಕಿದೆ, ಸಮಕಾಲೀನ ಹೋರಾಟಗಾರರು ಹೋರಾಟದ ಮಾರ್ಗಗಳನ್ನು ಪುನರ್ ರೂಪಿಸಿಕೊಳ್ಳಬೇಕಿದೆ……
1995/2000 ಇಸವಿಯ ನಂತರ ಭಾರತದ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮತ್ತು ಮಾನಸಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ಕಡು ಬಡವರು ಮತ್ತು ಅತ್ಯಂತ ಶ್ರೀಮಂತರು ಸಂಖ್ಯೆಗೆ ಹೋಲಿಸಿದಾಗ ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗ ಶೇಕಡ 70 ರಿಂದ 80 ರಷ್ಟು ವ್ಯಾಪಕವಾಗಿ ಅಸ್ತಿತ್ವದಲ್ಲಿದೆ.
ಈ ಆಧುನಿಕ ಮಧ್ಯಮ ವರ್ಗ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಮನರಂಜನಾ ಉದ್ಯಮಗಳು, ಧಾರ್ಮಿಕ ಆಚರಣೆಗಳು, ರಾಜಕೀಯ ಚಟುವಟಿಕೆಗಳು, ಸೈದ್ಧಾಂತಿಕ ನಿಲುವುಗಳು ಎಲ್ಲದರ ಸಾಮಾನ್ಯ ಅರಿವಿನೊಂದಿಗೆ ಬೆಳೆಯುತ್ತಿದೆ. ಬಹುತೇಕ ಕಾರ್ಪೊರೇಟ್ ವ್ಯವಸ್ಥೆಯ ಕೊಳ್ಳುಬಾಕ ಸಂಸ್ಕೃತಿ ಇವರನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನಿಯಂತ್ರಿಸುತ್ತಿದೆ. ಇವರ ಯೋಚನಾ ಶಕ್ತಿಯ ಮೇಲೆ ದಾಳಿ ಮಾಡಿದೆ.
ಅದರ ಪರಿಣಾಮವಾಗಿ ಈ ಜನರಲ್ಲಿ ಹೋರಾಟದ ಮನೋಭಾವ ಕಡಿಮೆಯಾಗಿದೆ. ಭಯ ಜಾಸ್ತಿಯಾಗಿದೆ. ರಿಸ್ಕ್ ಇಲ್ಲದ ಜೀವನಕ್ಕಾಗಿ ಹಾತೊರೆಯುತ್ತಾರೆ. ಜೀವನದಲ್ಲಿ ಸುರಕ್ಷಾ ವಲಯಕ್ಕೆ ಹೋಗಲು ಬಯಸುತ್ತಾರೆ. ಅಗತ್ಯ ವಸ್ತುಗಳ ಪೂರೈಕೆಯ ನಂತರ ಕಂಫರ್ಟ್ ಜೋನ್ ಸೇರಿಕೊಳ್ಳಲು ತದನಂತರ ಲಕ್ಷುರಿ ಜೋನ್ ಗೆ ಹೋಗಲು ವೇಗ ಮತ್ತು ಸ್ಪರ್ಧೆಯ ಸಮಾಜದಲ್ಲಿ ಅತ್ಯಂತ ಬ್ಯುಸಿಯಾಗಿ ಕಳೆದುಹೋಗುತ್ತಿದ್ದಾರೆ.
ಈಗ ಬಹುತೇಕ ಹಣ ಕೇಂದ್ರೀಕೃತ ಸಮಾಜ ನಿರ್ಮಾಣವಾಗಿದೆ. ಸಮಯದ ಒತ್ತಡ ತೀರಾ ಹೆಚ್ಚಾಗಿದೆ. ಆರೋಗ್ಯವೂ ಮೊದಲಿನಂತಿಲ್ಲ. ಎಲ್ಲರೂ ಬಹುತೇಕ ಕಲಬೆರಕೆ ಸಂಸ್ಕೃತಿಗೆ ಬಂದಾಗಿದೆ ಮತ್ತು ಒಗ್ಗಿಕೊಂಡಿದ್ದಾರೆ.
ಇಂತಹ ಸನ್ನಿವೇಶದಲ್ಲಿ ಡಿ ಕೆ ಶಿವಕುಮಾರ್ ಅಂತಹವರು ಉಪಮುಖ್ಯಮಂತ್ರಿಯಾಗುತ್ತಾರೆ, ವಿಜಯೇಂದ್ರ ಅಂತಹವರು ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗುತ್ತಾರೆ, ಪ್ರಜ್ವಲ್ ರೇವಣ್ಣರಂತಹವರು ಸಂಸದರಾಗುತ್ತಾರೆ, ಜನಾರ್ಧನ್ ರೆಡ್ಡಿ ತರಹದವರು ಕೋಟ್ಯಂತರರು ಹಣ ಖರ್ಚು ಮಾಡಿ ಗಂಗಾವತಿ ಕ್ಷೇತ್ರದ ಶಾಸಕರಾಗುವುದಲ್ಲದೆ, ತಮ್ಮ ಮಗನನ್ನು ದೊಡ್ಡ ಬಜೆಟ್ ನ ಸಿನಿಮಾದ ನಾಯಕನನ್ನಾಗಿ ಮಾಡುತ್ತಾರೆ. ಪ್ರಥಮ್ ಮತ್ತು ರಕ್ಷಕ್ ಎಂಬ ಇಬ್ಬರು ನಟರೆಂಬ ಹೆಸರಿನ ವ್ಯಕ್ತಿಗಳ ಮುಂದೆ ಮಹಾನ್ ಸಾಧನೆ ಮಾಡಿದವರಂತೆ ಅವರ ಅಭಿಪ್ರಾಯ ಕೇಳಲು ಇಡೀ ಮಾಧ್ಯಮ ಲೋಕ ಮೈಕು ಹಿಡಿಯುತ್ತದೆ.
ರಂಗನಾಥ್, ಅಜಿತ್ ಹನುಮಕ್ಕನವರ್, ರಾಧಾ ಹಿರೇಗೌಡರ್, ರೆಹಮಾನ್, ರಾಕೇಶ್ ಶೆಟ್ಟಿ ಮುಂತಾದವರು ಸಾಮಾಜಿಕ ಅಭಿಪ್ರಾಯ ರೂಪಿಸುವ ಬಹುದೊಡ್ಡ ಪತ್ರಕರ್ತರಾಗುತ್ತಾರೆ. ಜಾಹೀರಾತುಗಳ ಮೂಲಕ ಕಾರ್ಪೊರೇಟ್ ದಂಧೆ ಮಾಡುವ ಬಹುದೊಡ್ಡ ವೈದ್ಯರುಗಳು ಸೃಷ್ಟಿಯಾಗಿದ್ದಾರೆ. ಸರಳತೆಯ ಅರ್ಥವೇ ಬದಲಾಗಿದೆ. 100 ಕೋಟಿ ಬೆಲೆಬಾಳುವ ಮನೆಯಲ್ಲಿ ವಾಸ ಮಾಡುವ ಸುಧಾ ಮೂರ್ತಿ ಅಂತಹವರು ಸರಳತೆಯ ಪ್ರತೀಕವಾಗುತ್ತಾರೆ.
ಕೊಲೆ ಆರೋಪದ ನಂತರವೂ ನಟ ದರ್ಶನ್ ಜನಪ್ರಿಯತೆ ಕಡಿಮೆಯಾಗುವುದಿಲ್ಲ. ಸಿಡಿ ಬಹಿರಂಗವಾದ ನಂತರವೂ ರಮೇಶ್ ಜಾರಕಿಹೊಳಿ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಅನುವಂಶಿಯತೆಯ ಬಗ್ಗೆ ಮಾತನಾಡುವ ಸಮಾಜವಾದಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಿ ಶಾಸಕನಾಗಿ ಮಾಡುತ್ತಾರೆ. ಪೋಕ್ಸೋ ಪ್ರಕರಣದ ಆರೋಪಿ ಯಡಿಯೂರಪ್ಪ ಈಗಲೂ ಲಿಂಗಾಯತರ ರಾಜಕೀಯ ನಾಯಕರಾಗುತ್ತಾರೆ. ಅತ್ಯಾಚಾರದ ಆರೋಪದ ನಂತರವೂ ರಾಮಚಂದ್ರಪುರ ಮಠದ ಸ್ವಾಮೀಜಿಯ ಪರವಾಗಿ ಹವ್ಯಕ ಮಹಿಳೆಯರೇ ಸಾರ್ವಜನಿಕವಾಗಿ ಬಹಿರಂಗ ಬೆಂಬಲ ವ್ಯಕ್ತಪಡಿಸುತ್ತಾರೆ. ಧರ್ಮಸ್ಥಳದ ಬಗ್ಗೆ ಗಂಭೀರ ಕೊಲೆ ಮತ್ತು ಅತ್ಯಾಚಾರಗಳ ಎಸ್ಐಟಿ ತನಿಖೆ ನೆಡೆಯುವಾಗಲೂ ಅಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.
ಹಿಂದಿನ ಕಾಲದಲ್ಲಿ ಹಳೆ ಕಬ್ಬಿಣ, ಹಳೆ ಪಾತ್ರೆ, ಹಳೆ ಬಟ್ಟೆ, ಹಳೆ ಪುಸ್ತಕ, ಹಳೆ ಬಾಡಿಗೆ ಮನೆ, ವಧು ವರ ಜೋಡಿ ಹುಡುಕುತ್ತಿದ್ದವರು, ಸೆಕೆಂಡ್ ಹ್ಯಾಂಡ್ ವಾಹನ ಮಾರುತ್ತಿದ್ದವರು ಈಗ ಫ್ಲಿಪ್ಕಾರ್ಟ್, ಅಮೆಜಾನ್, ಶಾದಿ ಡಾಟ್ ಕಾಮ್, 99 acre.com ಮುಂತಾದ ಆನ್ಲೈನ್ ಮೂಲಕವೇ ಕೋಟ್ಯಾಧಿಪತಿಯಾಗಿದ್ದಾರೆ.
ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರನ್ನು ಅನ್ಯಾಯದ ವಿರುದ್ಧ, ಶೋಷಣೆಯ ವಿರುದ್ಧ, ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ಸಜ್ಜುಗೊಳಿಸುವುದು ತುಂಬಾ ಪ್ರಾಯಾಸಕರ ಕೆಲಸ. ಈಗ ಯಾವುದೇ ಹೋರಾಟಕ್ಕೆ ಇರುವುದರಲ್ಲಿ ಕೆಲವೇ ಜನ ಮಾತ್ರ ಸೇರುತ್ತಾರೆ. ಇವರದೂ ಸಹ ಒಂದು ರೀತಿ ಆರ್ಕೆಸ್ಟ್ರಾ ಟೀಮ್ ಆಗಿದೆ. ಎಲ್ಲರೂ ಅವರವರೇ. ಅವರೇ ಅತಿಥಿಗಳು, ಅವರೇ ಕಾರ್ಯಕರ್ತರು, ಅವರೇ ಸಾಮಾನ್ಯ ಜನರು.
ಅದು ಕನ್ನಡ ಹೋರಾಟವಿರಲಿ, ರೈತ ಹೋರಾಟವಿರಲಿ, ದಲಿತ ಚಳವಳಿ ಇರಲಿ, ಕಾರ್ಮಿಕ ಹೋರಾಟವಿರಲಿ, ಬೆಲೆ ಏರಿಕೆ ವಿರುದ್ಧವಾದ ಹೋರಾಟವಿರಲಿ, ಯಾವುದೇ ಇರಲಿ ನಿರ್ದಿಷ್ಟವಾಗಿ ಅಷ್ಟು ಜನ ಮಾತ್ರವೇ ಭಾಗವಹಿಸುತ್ತಾರೆ . ಅದೇ ಮುಖಗಳು.
ಹಾಗೆಯೇ ರಾಜಕೀಯ ಪಕ್ಷಗಳ ಹೋರಾಟ, ಜಾತಿ ಧರ್ಮದ ಹೋರಾಟಕ್ಕೆ ಮಾತ್ರ ಸಿಕ್ಕಾಪಟ್ಟೆ ಜನ ಸೇರುತ್ತಾರೆ. ಈಗ ಇದನ್ನು ನಾವು ಗ್ರಹಿಸಬೇಕಿದೆ. ಹೋರಾಟದ ದಿಕ್ಕನ್ನು ಬದಲಾಯಿಸಬೇಕಿದೆ. ಈ ಮಧ್ಯಮ ವರ್ಗದ ಜನರನ್ನು ತಲುಪುವ ಮಾರ್ಗಗಳನ್ನು ಹುಡುಕಬೇಕಿದೆ. ಇಲ್ಲದಿದ್ದರೆ ಮತ್ತೆ ಅದೇ ದುಷ್ಟ ಶಕ್ತಿ ಈ ಆಧುನಿಕ ಕಾಲದಲ್ಲೂ ನಮ್ಮ ಮೇಲೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ವ್ಯಕ್ತಿಗತವಾಗಿ ದಾಳಿ ಮಾಡುವುದು ನಿಶ್ಚಿತ ಈಗಾಗಲೇ ದಾಳಿ ಮಾಡುತ್ತಿದೆ ಸಹ.
ಆದ್ದರಿಂದ ಅತ್ಯಂತ ಸೂಕ್ಷ್ಮವಾಗಿ ಈ ಜನರ ಮಾನಸಿಕತೆಯನ್ನು ಗುರುತಿಸಿ ಅವರ ಮನ: ಪರಿವರ್ತನೆಗೆ ಹೋರಾಟಗಾರರು ಕೆಲಸ ಮಾಡಬೇಕಾಗಿದೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ಜಾಗೃತಿ ಮೂಡಿಸದೆ ಪ್ರತಿನಿತ್ಯ ಜಾಗೃತಿಯ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಕನಿಷ್ಠ ಅವರ ಚಿಂತನಾಶಕ್ತಿಯನ್ನು ವಿಶಾಲಗೊಳಿಸಿ, ವ್ಯಕ್ತಿತ್ವವನ್ನು ಬೆಳೆಸುವ, ಮಾನವೀಯ ಮೌಲ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲಾ ಚಿಂತಕರು ಕೆಲಸ ಮಾಡಬೇಕಾಗಿದೆ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ
ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದ ಮೂಲಕ ಹಾದುಹೋಗುವ ಶ್ರೀ ಘಾಟಿ ಸುಬ್ರಹ್ಮಣ್ಯ ದೇವಾಸ್ಥನ ರಸ್ತೆಗೆ ಅಡ್ಡಲಾಗಿ ರೈಲು ಹಳಿ ಹಾದುಹೋಗಿದ್ದು,…
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಉತ್ತೇಜಿಸುವ ಹಾಗು ಸಾರ್ವಜನಿಕ ದಾಖಲೆಗಳನ್ನು ಮುಕ್ತವಾಗಿ ಜನರ ಮುಂದೆ ಇಡುವುದು ಮಾಹಿತಿ…
ಧರ್ಮಸ್ಥಳ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿ, ಧರ್ಮಸ್ಥಳ ವಿಶ್ವದಲ್ಲೇ ಪವಿತ್ರವಾದ ಸ್ಥಳ. ಅವಷೇಶ ಮತ್ತೊಂದು…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ…
ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು…
ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಡೆದ ಕರ್ನಾಟಕ ಸೂಫಿಗಳ ಸಾಹಿತ್ಯ ಸಂಸ್ಕೃತಿ ಅನುಸಂಧಾನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ…