ಹೊರಗುತ್ತಿಗೆ ನೇಮಕಾತಿಯಲ್ಲೂ ಎಸ್‌ಸಿ, ಎಸ್‌ಟಿಗೆ ಮೀಸಲಾತಿ ಕಡ್ಡಾಯ- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ SCSP-TSP ಅನುದಾನವನ್ನು ಸಮರ್ಪಕವಾಗಿ ಬಳಸದ ಇಲಾಖೆಗಳ ಮುಂದಿನ ಹಣಕಾಸು ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಎಚ್ಚರಿಕೆ ನೀಡಿದರು.

2026-27ನೇ ಸಾಲಿನ SCSP-TSP ಯೋಜನೆಯಡಿ ವಿವಿಧ ಇಲಾಖೆಗಳು ಕೈಗೊಂಡಿರುವ ಕ್ರಿಯಾ ಯೋಜನೆಗಳ ಪರಿಶೀಲನೆ ಹಾಗೂ ರಾಜ್ಯ ಅಭಿವೃದ್ಧಿ ಪರಿಷತ್ತಿಗೆ ಶಿಫಾರಸು ಮಾಡುವ ಸಂಬಂಧ ನಡೆದ ನೋಡಲ್ ಏಜೆನ್ಸಿ ಸಭೆಯ ಎರಡನೇ ದಿನ 16 ಇಲಾಖೆಗಳ ಪ್ರಗತಿಯನ್ನು ಸಚಿವರು ಪರಿಶೀಲಿಸಿದರು.

ಸರ್ಕಾರದ ಅನುದಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಬೇಕು. ಫಲಾನುಭವಿಗಳಿಗೆ ನೀಡುವ ಸಾಲ ಮತ್ತು ಸಹಾಯಧನ ನಿಗದಿತ ಉದ್ದೇಶಕ್ಕೆ ಬಳಕೆಯಾಗುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ವಾಹನ, ಹೈನುಗಾರಿಕೆ, ಕೃಷಿ ಯಂತ್ರೋಪಕರಣ ಸೇರಿದಂತೆ ಯಾವ ಉದ್ದೇಶಕ್ಕಾಗಿ ಸಾಲ ಪಡೆದಿದ್ದಾರೋ ಅದೇ ಉದ್ದೇಶಕ್ಕೆ ಬಳಸಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

SCSP-TSP ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಇತರೆ ಉದ್ದೇಶಗಳಿಗೆ ವರ್ಗಾಯಿಸಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ

ಎಲ್ಲಾ ಇಲಾಖೆಗಳ ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ನಿಯಮ ಪಾಲಿಸಬೇಕು. ಪರಿಶಿಷ್ಟ ಜಾತಿಗೆ ಶೇ.17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7ರ ಮೀಸಲಾತಿ ಅನುಸಾರ ನೇಮಕಾತಿ ನಡೆಸಬೇಕು ಎಂದು ಸಚಿವರು ಸೂಚಿಸಿದರು.

ಎಲ್ಲಾ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಪ್ರವೇಶಾವಕಾಶ ಕಲ್ಪಿಸುವಂತೆ ಸೂಚಿಸಿದ ಅವರು, 30 ವರ್ಷಕ್ಕಿಂತ ಹಳೆಯದಾದ ಹಾಸ್ಟೆಲ್ ಕಟ್ಟಡಗಳನ್ನು ತಜ್ಞರ ಅಭಿಪ್ರಾಯ ಪಡೆದು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಕಲಾವಿದರಿಗೆ ಮಾಸಾಶನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಎಸ್‌ಸಿ, ಎಸ್‌ಟಿ ಸಮುದಾಯದ ಕಲಾವಿದರನ್ನು ಗುರುತಿಸಿ, ಅವರ ಕಲೆಗೆ ಅಗತ್ಯವಿರುವ ಸಲಕರಣೆಗಳಿಗೆ ಅನುದಾನ ನೀಡಬೇಕು. 55 ವರ್ಷ ಪೂರ್ಣಗೊಂಡಿರುವ ಅರ್ಹ ಎಸ್‌ಸಿ, ಎಸ್‌ಟಿ ಕಲಾವಿದರಿಗೆ ನವೆಂಬರ್ 1ರೊಳಗೆ ಮಾಸಾಶನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣದ ಪ್ರವೇಶದಲ್ಲಿ ಒಳಮೀಸಲಾತಿ ನಿಯಮ ಪಾಲಿಸಬೇಕು. ಕೌನ್ಸೆಲಿಂಗ್‌ನಲ್ಲಿ ಯಾವುದೇ ಅಭ್ಯರ್ಥಿಗೆ ಅನ್ಯಾಯವಾಗದಂತೆ ನಿಗಾವಹಿಸುವುದರ ಜತೆಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅವಕಾಶ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.

ಪತ್ರಿಕೋದ್ಯಮ ತರಬೇತಿಗೆ ಅನುದಾನ

ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಎಸ್‌ಸಿ, ಎಸ್‌ಟಿ ಯುವಕರಿಗೆ ಗುಣಮಟ್ಟದ ತರಬೇತಿ ನೀಡಲು ಅರ್ಹ ಪದವೀಧರರ ಪಟ್ಟಿ ಸಿದ್ಧಪಡಿಸಬೇಕು. ಅನುಭವ ಹೊಂದಿರುವ ಪತ್ರಕರ್ತರ ಮೂಲಕ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಸಮುದಾಯದವರಿಗೆ ಪ್ರೋತ್ಸಾಹ ನೀಡುವ ಜಾಹೀರಾತುಗಳಿಗೆ ಯೋಜನೆಯಡಿ ಅನುದಾನ ಒದಗಿಸಲಾಗುವುದು ಎಂದು ಮುನಿಯಪ್ಪ ತಿಳಿಸಿದರು.

ಡಿಸಿಆರ್‌ಇ ಸೆಲ್‌ಗಳ ಮೂಲಕ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಜಾತಿನಿಂದನೆ ಪ್ರಕರಣಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ರಘುಮೂರ್ತಿ, ಸಲಹೆಗಾರ ಇ. ವೆಂಕಟಯ್ಯ, ಸರ್ಕಾರದ ಕಾರ್ಯದರ್ಶಿ ಮೋಹನ್ ರಾಜ್, ಆಯುಕ್ತ ರಾಕೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!