
ದೊಡ್ಡಬಳ್ಳಾಪುರ: ದಾಬಸ್ಪೇಟೆ–ಹೊಸಕೋಟೆ ಹೆದ್ದಾರಿಯ ಕೆಸ್ತೂರು ಗೇಟ್ ಬಳಿ ಕಾರು ಡಿಕ್ಕಿ ಹೊಡೆದ ಪರಿಣಾಮ 70 ವರ್ಷದ ವೃದ್ಧೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಕೆಸ್ತೂರು ಗ್ರಾಮದ ನಿವಾಸಿ ಲಕ್ಷ್ಮಮ್ಮ (70) ಮೃತಪಟ್ಟ ದುರ್ದೈವಿ.
ಮುಂಜಾನೆ ಹೊಲದ ಕಡೆಗೆ ತೆರಳಿದ್ದ ಲಕ್ಷ್ಮಮ್ಮ ಅವರು ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಬರುವ ವೇಳೆ ಹೆದ್ದಾರಿಯನ್ನು ದಾಟುತ್ತಿದ್ದರು. ಈ ಸಂದರ್ಭದಲ್ಲಿ ದಾಬಸ್ಪೇಟೆ ಕಡೆಯಿಂದ ವೇಗವಾಗಿ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೋಲಾರ ಮೂಲದ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.