
ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೇರಳೇಘಟ್ಟ ಕಾಲೋನಿಯಲ್ಲಿ ನಡೆದಿದೆ.
ಕೊಲೆಯಾದವರನ್ನು ನರಸಪ್ಪ (61) ಎಂದು ಗುರುತಿಸಲಾಗಿದ್ದು, ಆರೋಪಿ ಅಳಿಯ ಲಕ್ಷ್ಮಣ (40) ಎಂದು ತಿಳಿದುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಲಕ್ಷ್ಮಣ ಮತ್ತು ಆತನ ಪತ್ನಿ ನರಸಪ್ಪ ಅವರ ಮನೆಯಲ್ಲಿ ವಾಸವಾಗಿದ್ದರು. ಈ ವೇಳೆ ಮನೆ ಬಿಟ್ಟು ಹೋಗುವಂತೆ ನರಸಪ್ಪ ಪದೇ ಪದೇ ಹೇಳುತ್ತಿದ್ದು, ಈ ವಿಚಾರವಾಗಿ ಕುಟುಂಬದಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಜೂನ್ 14ರಂದು ನರಸಪ್ಪ ತನ್ನ ಮಗಳೊಂದಿಗೆ ಜಗಳವಾಡಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು, ಇದರಿಂದ ಕೋಪಗೊಂಡ ಲಕ್ಷ್ಮಣ “ನನ್ನ ಹೆಂಡತಿಗೆ ಹೊಡೆಯುತ್ತೀಯಾ” ಎಂದು ಪ್ರಶ್ನಿಸಿ ಮಾವನೊಂದಿಗೆ ವಾಗ್ವಾದ ನಡೆಸಿದ್ದಾನೆ. ಬಳಿಕ ಹಲ್ಲೆ ನಡೆಸಿ, ಕಲ್ಲಿನಿಂದ ಎರಡು ಕಾಲುಗಳಿಗೆ ಗಂಭೀರ ಗಾಯಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಗಾಯಗೊಂಡ ನರಸಪ್ಪ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಆರೋಪಿ ಲಕ್ಷ್ಮಣನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.