Categories: ಲೇಖನ

ಹಿಂಸೆಯ ಇತಿಹಾಸಕ್ಕೆ ಅಹಿಂಸೆಯ ನೆಲದಲ್ಲಿ ಕೊನೆ ಎಂದು….?

ರಾಯಲಸೀಮಾ ರಕ್ತ ಚರಿತ್ರ, ಭೀಮಾತೀರದ ಹಂತಕರು, ಚಂಬಲ್ ಕಣಿವೆಯ ದರೋಡೆಕೋರರು, ಮುಂಬೈಯ ಮಾಫಿಯಾ ಡಾನ್ಗಳು,
ಕಾಶ್ಮೀರದ ಆಜಾದಿ – ಜಿಹಾದಿ ಭಯೋತ್ಪಾದಕರು, ಗೋಧ್ರಾ
ಹತ್ಯಾಕಾಂಡದ ನರಹಂತಕರು,
ಪಂಜಾಬಿನ ಖಾಲಿಸ್ತಾನ್ ಭಯೋತ್ಪಾದಕರು,
ಕೇರಳ ಕಣ್ಣೂರಿನ ಸರಣಿ ಹತ್ಯೆಗಳು,
ಮಂಗಳೂರಿನ ಪ್ರತಿಕಾರದ ಕೊಲೆಗಳು,
ಛತ್ತೀಸ್ಗಡದ ನಕ್ಸಲ್ ಹತ್ಯೆಗಳು, ಉತ್ತರ ಪ್ರದೇಶದ ಮೀರತ್ ಕೋಮು ಗಲಭೆಗಳು, ದೆಹಲಿಯ ಸಿಖ್ ಹತ್ಯಾಕಾಂಡ, ಮಣಿಪುರದ ಜನಾಂಗೀಯ ಕೋಮು ದಳ್ಳುರಿ, ಅಸ್ಸಾಂನ ಅಕ್ರಮ ವಲಸಿಗರ ರಕ್ತಪಾತ ಹೀಗೆ ಇನ್ನೂ ಅನೇಕ ಘಟನೆಗಳು, ಹಿಂಸೆಯ ವಿವಿಧ ರೂಪಗಳನ್ನು ಕಾಣುತ್ತೇವೆ.

ಕಾರಣಗಳೇನೆ ಇರಲಿ ಜಾತಿ, ಧರ್ಮ, ಭಾಷೆ, ಪ್ರದೇಶ, ವರ್ಗ ಮುಂತಾದ ಕಾರಣಗಳಿಂದ ಈ ಹಿಂಸಾತ್ಮಕ ಕೃತ್ಯಗಳು
ತಾಂಡವಾಡುತ್ತಿವೆ. ಭಾರತದ ಮಾನವೀಯ ಮೌಲ್ಯಗಳಿಗೆ, ಇಲ್ಲಿನ ಸಾಂಸ್ಕೃತಿಕ ವ್ಯಕ್ತಿತ್ವಕ್ಕೆ ನಿಜಕ್ಕೂ ಕಪ್ಪು ಚುಕ್ಕೆಯಂತೆ ಇವು ಇನ್ನೂ ಕ್ರಿಯಾಶೀಲವಾಗಿವೆ. ಭಾರತ ಅಭಿವೃದ್ಧಿಯ ಪತದತ್ತ ದಾಪುಗಾಲಾಕಿ ಮುನ್ನುಗ್ಗುತ್ತಿರುವಾಗಲೂ ಈ ಹಿಂಸೆಗಳು ಅದಕ್ಕೆ ತಡೆಯಾಗುತ್ತಿವೆ. ಪೋಲಿಸ್ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಮುಂತಾದ ಎಲ್ಲ ವ್ಯವಸ್ಥೆಗಳ ನಡುವೆಯೂ ಈ ರೀತಿಯ ಘಟನೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ನಿಜಕ್ಕೂ ಇದು ನಾಚಿಕೆಗೇಡಿನ ವಿಷಯ..

ಪ್ರೀತಿ ಮತ್ತು ಅಹಿಂಸೆಯನ್ನು ನಿರ್ಲಕ್ಷಿಸಿ ಅಥವಾ ತಿರಸ್ಕರಿಸಿ ಹಿಂಸೆ, ದ್ವೇಷ, ಅಸೂಯೆಯನ್ನು ಸಮಾಜದಲ್ಲಿ ಹೆಚ್ಚಾಗಿ ಸೃಷ್ಟಿಸಿದರೆ ಅದರ ಫಲ ನಾವು ಅನುಭವಿಸಬೇಕು. ವಿಶ್ವದ ಕೆಲವು ಧರ್ಮಾಂಧ ರಾಷ್ಟ್ರಗಳ ಸಮಕಾಲೀನ ಘಟನೆಗಳನ್ನು ನೋಡಿದರೆ ಮುಂದೆ ಇದು ನಮ್ಮ ದೇಶದಲ್ಲಿಯೂ
ವಾಸ್ತವವಾಗಬಹುದು. ಅದರ ಪ್ರಾರಂಭಿಕ ಗುಣಲಕ್ಷಣಗಳು ಹೀಗೆಯೇ ಇರುತ್ತದೆ….

ದೇಶದ – ಸಮಾಜದ ರಕ್ಷಣೆಯಲ್ಲಿ ಪ್ರೀತಿ ಮತ್ತು ಅಹಿಂಸೆಯ ಮಹತ್ವ ಪ್ರತಿಯೊಬ್ಬ ಪ್ರಜೆಯು ಅರ್ಥಮಾಡಿಕೊಳ್ಳಬೇಕು. ಅಹಿಂಸೆ ಎಂದರೆ ಶರಣಾಗತಿಯಲ್ಲ. ತನ್ನ ರಕ್ಷಣೆಯ ಮೊದಲ ಅಸ್ತ್ರವೇ ಅಹಿಂಸೆ. ಅದರಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸರ್ಕಾರಗಳು ಪೋಲೀಸ್, ಸೈನ್ಯ, ಅರೆ ಸೈನ್ಯ, ಗುಪ್ತದಳ, ಭಯೋತ್ಪಾದನೆ ನಿಗ್ರಹ ದಳ, ಇಂಟೆಲಿಜೆನ್ಸ್‌ ಹೀಗೆ ಅನೇಕ ವ್ಯವಸ್ಥೆಗಳನ್ನು ಹೊಂದಿದೆ.

ಆದರೆ ಇಲ್ಲಿ ಸರ್ಕಾರ ಮತ್ತು ಸಮಾಜ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ. ಕೆಲವು ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರು ಸಮುದಾಯಗಳ ನಡುವೆ ದ್ವೇಷ, ಅಸೂಯೆ ಉಂಟುಮಾಡುತ್ತಿವೆ. ಅದರ ದುಷ್ಪರಿಣಾಮಗಳೇ ಈ ರೀತಿಯ ಕೃತ್ಯಗಳಿಗೆ ಕಾರಣವಾಗಿದೆ. ಧರ್ಮಗಳು ಮನುಷ್ಯರ ಒಳಗಿನ ಮಾನವೀಯ ಪ್ರಜ್ಞೆಯನ್ನು ಬೆಳೆಸಿ ಶಾಂತಿಯ ಸಂದೇಶ ನೀಡಬೇಕಾದ ಸಂದರ್ಭದಲ್ಲಿ ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದು ಒಬ್ಬರ ನಾಶಕ್ಕೆ ಮತ್ತೊಬ್ಬರನ್ನು ಪ್ರಚೋದಿಸುವ ಕೆಲಸ ಮಾಡುತ್ತಿವೆ….

ಸಾಮಾನ್ಯ ಜನ ಸಹ ಇದರ ಅರಿವಿಲ್ಲದೆ, ಅವರ ಬಲೆಯೊಳಗೆ ಸಿಲುಕುತ್ತಿದ್ದಾರೆ. ಒಂದು ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ ಬಾಂಬುಗಳನ್ನು ಇಟ್ಟು ಅಮಾಯಕ ಜನರನ್ನು ಕೊಲ್ಲಲು ಚುನಾವಣೆ ನಡೆಯುವುದಿಲ್ಲ, ಬಹುಮತದ ಅವಶ್ಯಕತೆ ಇಲ್ಲ, ಬಹಿರಂಗ ಚರ್ಚೆಯು ನಡೆಯುವುದಿಲ್ಲ, ಅದಕ್ಕೆ ನಿರ್ದಿಷ್ಟ ಸಮಯವೂ ಇಲ್ಲ. ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಅತ್ಯಂತ ಗೌಪ್ಯವಾಗಿ ಕಾರ್ಯನಿರ್ವಹಿಸಿ ಬೃಹತ್ ಪ್ರಮಾಣದ ರಕ್ತ ಹರಿಸಬಹುದು. ನಮ್ಮ ಕಣ್ಣ ಮುಂದೆಯೇ ಹತ್ಯಾಕಾಂಡ ನಡೆಯಬಹುದು….

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆ ಮಾತನ್ನು ನೆನಪು ಮಾಡಿಕೊಳ್ಳಿ. ಈಗ ಕಾಲ ಇನ್ನೂ ಮಿಂಚಿಲ್ಲ. ಸಮುದಾಯಗಳ ನಡುವಿನ ಪ್ರೀತಿ ವಿಶ್ವಾಸವನ್ನು ಬಲಗೊಳಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಹಿಂಸೆಯ ವಿರುದ್ಧ ಅಹಿಂಸೆಯನ್ನು, ದ್ವೇಷದ ವಿರುದ್ಧ ಪ್ರೀತಿಯನ್ನು, ಅಸೂಯೆಯ ವಿರುದ್ಧ ಸಹಕಾರವನ್ನು, ಅಜ್ಞಾನದ ವಿರುದ್ಧ ಅರಿವನ್ನು, ಬಾಂಬಿನ ವಿರುದ್ಧ ಹೂವನ್ನು, ಸಿಡುಕಿನ ವಿರುದ್ಧ ಸುಂದರ ನಗುವನ್ನು ಸಮಾಜದಲ್ಲಿ ಹೆಚ್ಚು ಹೆಚ್ಚು ಪಸರಿಸಬೇಕಿದೆ…..

ನಮ್ಮ ನಿಮ್ಮ ಮಕ್ಕಳು ನಿಜ ಬಾಂಬುಗಳಿಗೆ ಬಲಿಯಾಗುವ ಮುನ್ನ ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸೋಣ. ಒಮ್ಮೆ ಈ ರೀತಿಯ ಭಯಾನಕ ದುರಂತ ಸಂಭವಿಸಿದರೆ ಮುಂದೆ ಹಿಂಸೆಗೆ ಕೊನೆ ಇರುವುದಿಲ್ಲ. ಅಪಘಾತಗಳು ಜೀವನದಲ್ಲಿ ನಿತ್ಯವೂ ನಡೆಯುವುದಿಲ್ಲ. ಆದರೆ ಒಮ್ಮೆ ನಡೆದರೆ ಬಹುತೇಕ ನಾವು ಇರುವುದಿಲ್ಲ. ಆ ಪ್ರಜ್ಞೆ ಸದಾ ಜಾಗೃತವಾಗಿರಲಿ…..

ಯಾರನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ. ಆದರೆ ಆ ಪ್ರಕ್ರಿಯೆಯಲ್ಲಿ ನಡೆಯುವ ಹಿಂಸೆ ವರ್ಣನಾತೀತ. ಆದ್ದರಿಂದ ಎಲ್ಲರೂ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಹೊಂದಾಣಿಕೆಯ ಮನೋಭಾವ ಪ್ರದರ್ಶಿಸೋಣ. ಯಾವುದೇ ರೀತಿಯ ಪ್ರಚೋದನೆಯನ್ನು ಮಾಡದಿರೋಣ. ಒಂದು ಸಮುದಾಯ ಸ್ವಲ್ಪ ಆಕ್ರಮಣಕಾರಿ ಇರಬಹುದು. ಮತ್ತೊಂದು ಸಮುದಾಯ ಸಂಯಮದಿಂದ ಅದನ್ನು ನಿಭಾಯಿಸಬೇಕು. ಮಕ್ಕಳಂತೆ ಕಚ್ಚಾಟ ಮಾಡಬಾರದು. ಎಲ್ಲರ ಅಂತಿಮ ಉದ್ದೇಶ ಪ್ರೀತಿ ಮತ್ತು ಅಹಿಂಸೆ ಮಾತ್ರ. ಇದು ಸಾಧ್ಯವಾದರೆ ವಿಭಜಕ ಶಕ್ತಿಗಳನ್ನು ನಿಗ್ರಹಿಸಲು ಸರ್ಕಾರಕ್ಕೆ ಸುಲಭವಾಗುತ್ತದೆ. ಇಲ್ಲದಿದ್ದರೆ ಕೇವಲ ರಕ್ಷಣಾ ವ್ಯವಸ್ಥೆಯಿಂದ ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ…..

ಇಲ್ಲಿ ಯಾವುದೇ ನಿರ್ದಿಷ್ಟ ಧರ್ಮವನ್ನು ಉಲ್ಲೇಖಿಸುತ್ತಿಲ್ಲ. ಏಕೆಂದರೆ ಮಾನವ ಧರ್ಮವೇ ಅಂತಿಮ. ಎಲ್ಲಾ ಧರ್ಮಗಳಲ್ಲಿ ಶಾಂತಿಯ ಇದೆ, ಹಿಂಸೆಯೂ ಇದೆ. ಧರ್ಮಗಳು ಅಳಿದರು ಮಾನವ ಉಳಿಯಲಿ ಎಂಬುದೇ ಎಲ್ಲರ ಆಶಯವಾಗಿರಬೇಕು.

ಬಾಂಬುಗಳು ಮತ್ತು ಧರ್ಮಗಳು ಮನುಷ್ಯರನ್ನು ಕೊಲ್ಲುತ್ತವೆ ಅಥವಾ ಅದರ ಅನುಯಾಯಿಗಳು ಕೊಲ್ಲುತ್ತಾರೆ. ಆದರೆ ಸಂವಿಧಾನ ಮತ್ತು ಮಾನವೀಯತೆ ಮನುಷ್ಯರನ್ನು ಮತ್ತು ಸಮಾಜವನ್ನು ರಕ್ಷಿಸುತ್ತದೆ. ಆಯ್ಕೆ ನಮ್ಮದು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

‘ಆಸರೆ’ ಯೋಜನೆ: ಒಂಟಿ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಭದ್ರತೆ, ಆರೋಗ್ಯ ನೆರವು ಹಾಗೂ ಯೋಗಕ್ಷೇಮ ವಿಚಾರಣೆ

'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…

2 hours ago

ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾದದ್ದು- ಸಿಎಂ ಸಿದ್ದರಾಮಯ್ಯ

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದ್ದಾರೆ..…

4 hours ago

ದಲಿತರ ಕಾಲೋನಿಗಿಲ್ಲ ಚರಂಡಿ ಭಾಗ್ಯ: ರಸ್ತೆ‌ ಮೇಲೆಯೇ ಹರಿಯುವ ಚರಂಡಿ ನೀರು: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಹಿಡಿ ಶಾಪ

ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ‌ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…

7 hours ago

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪ.ಪಂ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರಿಂದ ಹಲ್ಲೆ: ದೂರು ದಾಖಲು

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ‌ಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…

8 hours ago

ಬೆಂ.ಗ್ರಾ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಆಗಿ ಎ.ವಿ ಲಕ್ಷ್ಮಿನಾರಾಯಣ ನೇಮಕ

ಎ.ವಿ ಲಕ್ಷ್ಮಿನಾರಾಯಣ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರನ್ನಾಗಿ ನೇಮಕ ಮಾಡಲಾಗಿದೆ.. ಈ ಹಿಂದೆ ತುಮಕೂರು…

10 hours ago

ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾ ದಾಳಿ: ದಾಳಿ ವೇಳೆ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ

ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ದಾಳಿ ವೇಳೆ  14 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.…

11 hours ago