ಸ್ಥಳೀಯ ಸಂಸ್ಥೆಗಳಲ್ಲಿ ಚುರುಕಾಗಬೇಕಿದೆ ಬಿಎಂಸಿ: ಕೆರೆ, ಕುಂಟೆ, ಗೋಮಾಳ, ಅರಣ್ಯ ಸಂರಕ್ಷಣೆಗೆ ನಿರ್ಲಕ್ಷ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ನೈಸರ್ಗಿಕ ಸಂಪನ್ಮೂಲ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗಾಗಿ ರಚಿಸಲಾಗಿರುವ ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳು (ಬಿಎಂಸಿ) ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಸಮಿತಿಗಳ ರಚನೆಯಾದರೂ ನಿಯಮಿತ ಸಭೆ, ಜೀವ ವೈವಿಧ್ಯದ ಮಾಹಿತಿ ಸಂಗ್ರಹಣೆ, ಸಂರಕ್ಷಣಾ ಕಾರ್ಯಯೋಜನೆ ರೂಪಿಸುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳು ಹಲವು ಕಡೆ ಕುಂಠಿತವಾಗಿವೆ.

 

ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಸೇರಿದಂತೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೆರೆ, ಕುಂಟೆ, ಗೋಮಾಳ, ಅರಣ್ಯ ಪ್ರದೇಶ, ಕೃಷಿ ಭೂಮಿ ಹಾಗೂ ವಿವಿಧ ಜಲಮೂಲಗಳಿವೆ. ಇವುಗಳ ಸುತ್ತಮುತ್ತಲಿನ ಸಸ್ಯ, ಪ್ರಾಣಿ, ಪಕ್ಷಿ, ಜಲಚರ ಹಾಗೂ ಇತರ ಜೀವ ಸಂಕುಲದ ಸಂರಕ್ಷಣೆಯಲ್ಲಿ ಬಿಎಂಸಿಗಳು ಪ್ರಮುಖ ಪಾತ್ರ ವಹಿಸಬೇಕಿದೆ. ಆದರೆ,  ಹಲವು ಕಡೆ ಸಮಿತಿಗಳು ಕೇವಲ ಕಾಗದಕ್ಕೆ ಸೀಮಿತವಾಗಿವೆ ಎಂಬ ಆರೋಪಗಳಿವೆ.

ಜೈವಿಕ ವೈವಿಧ್ಯ ಕಾಯ್ದೆಯಡಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿಎಂಸಿಗಳನ್ನು ರಚಿಸುವುದು ಕಡ್ಡಾಯ. ಸ್ಥಳೀಯವಾಗಿ ಕಂಡುಬರುವ ಸಸ್ಯ, ಪ್ರಾಣಿ, ಜಲಚರ, ಸ್ಥಳೀಯ ತಳಿಗಳು ಹಾಗೂ ಸಾಂಪ್ರದಾಯಿಕ ಜ್ಞಾನವನ್ನು ದಾಖಲಿಸಿ ಸಂರಕ್ಷಿಸುವುದು ಸಮಿತಿಗಳ ಪ್ರಮುಖ ಉದ್ದೇಶ. ಸಮಿತಿಗಳು ಸಕ್ರಿಯವಾಗದ ಪರಿಣಾಮ ಅಪರೂಪದ ಹಾಗೂ ಔಷಧೀಯ ಸಸ್ಯಗಳು, ಸ್ಥಳೀಯ ಬೆಳೆ ತಳಿಗಳು, ಪಕ್ಷಿಗಳು, ಜಲಚರಗಳು ಮತ್ತು ಸಾಂಪ್ರದಾಯಿಕ ಜ್ಞಾನ ದಾಖಲಿಸುವ ಕಾರ್ಯವೂ ನಿಧಾನಗತಿಯಲ್ಲಿದೆ.

ದಾಖಲಾತಿ ನವೀಕರಣಕ್ಕೂ ನಿರ್ಲಕ್ಷ್ಯ

ಸ್ಥಳೀಯ ಜೀವ ವೈವಿಧ್ಯದ ಸಮಗ್ರ ಮಾಹಿತಿಯನ್ನು ದಾಖಲಿಸುವ ಜನತಾ ಜೀವ ವೈವಿಧ್ಯ ದಾಖಲಾತಿ (ಪೀಪಲ್ಸ್ ಬಯೋಡೈವರ್ಸಿಟಿ ರಿಜಿಸ್ಟರ್) ಸಿದ್ಧಪಡಿಸುವುದು ಬಿಎಂಸಿಯ ಪ್ರಮುಖ ಜವಾಬ್ದಾರಿ. ಸ್ಥಳೀಯ ಜೈವಿಕ ಸಂಪನ್ಮೂಲಗಳು, ಅವುಗಳ ಬಳಕೆ, ಔಷಧೀಯ ಗುಣಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಸಾಂಪ್ರದಾಯಿಕ ಜ್ಞಾನವನ್ನು ದಾಖಲಿಸುವುದು ಇದರ ಉದ್ದೇಶ.

ಪಕ್ಷಿಗಳು, ಪ್ರಾಣಿಗಳು, ಸಸ್ಯಗಳು ಹಾಗೂ ಜಲಚರಗಳು ಸೇರಿದಂತೆ ಸ್ಥಳೀಯ ಜೀವ ಸಂಕುಲದ ಮಾಹಿತಿಯನ್ನು ದಾಖಲಿಸಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕಿದೆ. ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಇತ್ತೀಚೆಗೆ ಜನತಾ ಜೀವ ವೈವಿಧ್ಯ ದಾಖಲಾತಿ ಪುಸ್ತಕ ಬಿಡುಗಡೆ ಮಾಡಿರುವುದನ್ನು ಹೊರತುಪಡಿಸಿದರೆ, ಜಿಲ್ಲೆಯ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಈ ಕುರಿತ ಸಮರ್ಪಕ ದಾಖಲೆಗಳೇ ಇಲ್ಲದಂತಾಗಿದೆ.

ದಾಖಲಾತಿ ಸಿದ್ಧಪಡಿಸುವುದಷ್ಟೇ ಅಲ್ಲದೆ, ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ಮಾಹಿತಿಯನ್ನು ಕಾಲಕಾಲಕ್ಕೆ ನವೀಕರಿಸಬೇಕಿದೆ. ಈ ನಿಟ್ಟಿನಲ್ಲೂ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ.

ನಗರೀಕರಣದ ನಡುವೆ ಜಲಮೂಲಗಳ ಸಂರಕ್ಷಣೆ ಅಗತ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 107 ಗ್ರಾಮ ಪಂಚಾಯಿತಿಗಳು, ಮೂರು ನಗರಸಭೆಗಳು, ಮೂರು ಪುರಸಭೆಗಳು ಹಾಗೂ ಒಂದು ಪಟ್ಟಣ ಪಂಚಾಯಿತಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ವ್ಯಾಪ್ತಿಯ ಕೆರೆ, ಹಳ್ಳ, ಕುಂಟೆ ಸೇರಿದಂತೆ ವಿವಿಧ ಜಲಮೂಲಗಳ ಸಂರಕ್ಷಣೆಯಲ್ಲಿ ಬಿಎಂಸಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ.

ಜಲಮೂಲಗಳ ಸುತ್ತಲಿನ ಪಕ್ಷಿಗಳು, ಚಿಟ್ಟೆಗಳು, ಕೀಟಗಳು, ಮೀನುಗಳು ಸೇರಿದಂತೆ ವಿವಿಧ ಜೀವ ಸಂಕುಲದ ಸಂರಕ್ಷಣೆಯಲ್ಲೂ ಸಮಿತಿಗಳು ಪಾತ್ರ ವಹಿಸಬೇಕು. ಜೈವಿಕ ಸಂಪನ್ಮೂಲಗಳ ಅಕ್ರಮ ಸಂಗ್ರಹಣೆ ಅಥವಾ ವ್ಯಾಪಾರ ಕಂಡುಬಂದರೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುವುದು ಹಾಗೂ ಸಾರ್ವಜನಿಕರಲ್ಲಿ ಜೀವ ವೈವಿಧ್ಯ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಸಮಿತಿಗಳ ಕರ್ತವ್ಯವಾಗಿದೆ.ಕೈಗಾರಿಕರಣ ಮತ್ತು ನಗರೀಕರಣ ವೇಗವಾಗಿ ನಡೆಯುತ್ತಿರುವ ಜಿಲ್ಲೆಯಲ್ಲಿ ಕೆರೆಗಳು ಕಲುಷಿತಗೊಳ್ಳುವುದು, ನೈಸರ್ಗಿಕ ಪ್ರದೇಶಗಳು ಕುಗ್ಗುವುದು ಹಾಗೂ ಜೀವ ಸಂಕುಲಕ್ಕೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಸಿಗಳ ಕಾರ್ಯ ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ. ಆದರೆ ಕೆಲವೆಡೆ ಸಮಿತಿಗಳ ರಚನೆಯಲ್ಲೇ ವಿಳಂಬವಾಗಿದ್ದು, ರಚನೆಯಾದ ಕಡೆಗಳಲ್ಲೂ ನಿರೀಕ್ಷಿತ ಚಟುವಟಿಕೆಗಳು ನಡೆಯುತ್ತಿಲ್ಲ ಎಂಬ ಆರೋಪಗಳಿವೆ.

ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲೂ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಕಡ್ಡಾಯವಾಗಿರುತ್ತದೆ. ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಸಮಿತಿಗಳನ್ನು ಚುರುಕುಗೊಳಿಸಲು ಸೂಚನೆ ನೀಡಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ್ ಹೇಳಿದ್ದಾರೆ.

 

ಬಿಎಂಸಿಯ ಪ್ರಮುಖ ಜವಾಬ್ದಾರಿಗಳು

  • ಸ್ಥಳೀಯ ಜೀವ ವೈವಿಧ್ಯದ ಮಾಹಿತಿ ಸಂಗ್ರಹಿಸುವುದು.
  • ಜನತಾ ಜೀವ ವೈವಿಧ್ಯ ದಾಖಲಾತಿ ಸಿದ್ಧಪಡಿಸಿ ಕಾಲಕಾಲಕ್ಕೆ ನವೀಕರಿಸುವುದು.
  • ಸ್ಥಳೀಯ ಸಸ್ಯ, ಪ್ರಾಣಿ ಹಾಗೂ ಜಲಚರಗಳ ಸಂರಕ್ಷಣೆ.
  • ಸಾಂಪ್ರದಾಯಿಕ ಜ್ಞಾನ ಮತ್ತು ಸ್ಥಳೀಯ ತಳಿಗಳ ದಾಖಲಾತಿ.
  • ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆಗೆ ಸಲಹೆ ನೀಡುವುದು.
  • ಸಾರ್ವಜನಿಕರಲ್ಲಿ ಜೀವ ವೈವಿಧ್ಯ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು.

ದಾಖಲಾತಿಯಲ್ಲಿ ಏನಿರಬೇಕು?

ಜನತಾ ಜೀವ ವೈವಿಧ್ಯ ದಾಖಲಾತಿಯಲ್ಲಿ ಸ್ಥಳೀಯ ಹಣ್ಣು, ಹೂವು ಮತ್ತು ಮೇವಿನ ಸಸ್ಯಗಳು, ಮಣ್ಣಿನ ವಿಧಗಳು, ಔಷಧೀಯ ಸಸ್ಯಗಳು, ಸಾಕು ಪ್ರಾಣಿಗಳು ಹಾಗೂ ಅವುಗಳ ಮಾರುಕಟ್ಟೆ, ಕಾಡುಪ್ರಾಣಿಗಳು, ಜಲವಾಸಿ ಜೀವ ವೈವಿಧ್ಯ, ಸ್ಥಳೀಯ ಸಂಸ್ಥೆಯ ವ್ಯಾಪ್ತಿಯ ಇತಿಹಾಸ ಹಾಗೂ ಅಜೈವಿಕ ನೈಸರ್ಗಿಕ ಸಂಪತ್ತು ಸೇರಿದಂತೆ ಹಲವು ಪ್ರಮುಖ ಅಂಶಗಳನ್ನು ದಾಖಲಿಸಬೇಕಿದೆ.

 

Ramesh Babu

Journalist

Recent Posts

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

1 hour ago

ಸರ್ಕಾರಿ ಗೋಮಾಳ ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಕ್ರಮ: ನಕಲಿ ಭೂದಾಖಲೆ ಸೃಷ್ಟಿ ಹಾಗೂ ಅಕ್ರಮ ಖಾತೆ ಬದಲಾವಣೆ ಕಂಡುಬಂದರೆ ಕಠಿಣ ಕ್ರಮ- ಕಂದಾಯ ಸಚಿವ ಡಾ.ಜಿ ಪರಮೇಶ್ವರ್

ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ…

3 hours ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಅ.07-10-2026: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ, ಚೆಕ್‌-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 942 ಗ್ರಾಂ…

6 hours ago

ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಸಚಿವ ಜಿ. ಪರಮೇಶ್ವರ್ ದಿಢೀರ್ ಭೇಟಿ

ದೇವನಹಳ್ಳಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ…

7 hours ago

ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ರೈಲಿಗೆ ಸಿಲುಕಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…

14 hours ago

ದಸರಾ….

ಮೈಸೂರು ದಸರಾ, ಮಹಿಷಾ ದಸರಾ, ಚಾಮುಂಡಿ ದಸರಾ..... ವಿಜಯ ದಶಮಿ - ಆಯುಧ ಪೂಜೆ..... ದುಷ್ಟ ಶಕ್ತಿಗಳ ವಿರುದ್ಧ ವಿಜಯದ…

14 hours ago