Categories: ಲೇಖನ

ಸುಡಾನ್ ದೇಶದ ರಕ್ಕಸ ಅಂತರ್ಯುದ್ಧದ ಭೀಕರ ಘಟನೆಗಳು….

ಆಫ್ರಿಕಾದ ಸುಡಾನ್ ನಿಂದ ಮನಕಲಕುವ ಸುದ್ದಿ ಪ್ರಸಾರವಾಗುತ್ತಿದೆ. ಅಲ್ಲಿನ ಆಂತರಿಕ ಯುದ್ಧದಿಂದಾಗಿ ಸೂಡಾನ್ ಕೇವಲ ರಕ್ತಸಿಕ್ತವಾಗಿ ಮಾತ್ರವಲ್ಲ ಅತ್ಯಂತ ಅಮಾನವೀಯವಾಗಿ, ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತ ಘಟನೆಗಳು ನಡೆಯುತ್ತಿದೆ….

ಈ ರೀತಿಯ ಘಟನೆಗಳು ವಿಶ್ವ ಇತಿಹಾಸದಲ್ಲಿ, ಅದರಲ್ಲೂ ಯುದ್ಧ ಮತ್ತು ದಾಳಿಗಳ ಸಮಯದಲ್ಲಿ ವಿಶೇಷವೇನು ಅಲ್ಲ. ಸಾಮಾನ್ಯವಾಗಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುವುದು ಯುದ್ಧಗಳ ಒಂದು ಅನಧಿಕೃತ, ಅನೀತಿಯುತ, ಅನೈತಿಕತೆಯ ಭಾಗವೇ ಆಗಿದೆ…..

ಆದರೆ ಸುಡಾನ್ ನಲ್ಲಿ ಮಹಿಳೆಯರು ತಮ್ಮ ಮಕ್ಕಳು ಮತ್ತು ವೃದ್ಧ ಪೋಷಕರನ್ನು ಸಲುಹಲು ಸರತಿ ಸಾಲಿನಲ್ಲಿ ನಿಂತು, ಸೈನಿಕರಿಗೆ ಅವರ ಒತ್ತಡ ಮತ್ತು ಬಲವಂತಕ್ಕೆ ಮಣಿದು ತಮ್ಮ ದೇಹವನ್ನು ಅರ್ಪಿಸಿ, ತದನಂತರ ಅವರು ನೀಡುವ ಹಣ, ಆಹಾರ ಮತ್ತು ಇತರೆ ವಸ್ತುಗಳನ್ನು ಪಡೆದು ಮನೆಗೆ ತೆರಳುತ್ತಿದ್ದಾರೆ. ಈ ರೀತಿಯ ಸಾಕಷ್ಟು ಘಟನೆಗಳು ನಡೆಯುತ್ತಿರುವುದಾಗಿ ಅಲ್ಲಿನ ಮಹಿಳೆಯರು ದೂರುತ್ತಿದ್ದಾರೆ…..

ಹೀಗೆ ಲೈಂಗಿಕ ಶೋಷಣೆಗೆ ಒಪ್ಪದ ಒಬ್ಬ ಮಹಿಳೆಯ ಕಾಲುಗಳನ್ನು ಸುಟ್ಟು ಹಾಕಲಾಯಿತು…..

ಮೊದಲನೇ ಮಹಾಯುದ್ಧ, ಎರಡನೇ ಮಹಾಯುದ್ಧ, ಮುಂದೆ ಆಗಾಗ ನಡೆದ ಎಲ್ಲಾ ಯುದ್ದಗಳಲ್ಲೂ ಸಹ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರಕ್ಕೆ ಒಳಪಡಿಸಲಾಗುತ್ತದೆ. ಹಿಂದಿನ ಎಲ್ಲಾ ದೇಶಗಳ, ಎಲ್ಲಾ ಕಾಲದ, ಯುದ್ಧಗಳಲ್ಲೂ ಈ ರೀತಿಯ ಘಟನೆಗಳು ನಡೆಯುತ್ತಲೇ ಇದೆ……

ಕನಿಷ್ಠ ಕೊರೊನಾ ನಂತರದಲ್ಲಾದರೂ ಮಾನವ ಜಗತ್ತು ಕನಿಷ್ಠ ಮಾನವೀಯ ಪ್ರಜ್ಞೆ ಮೆರೆಯಬಹುದು ಎಂಬ ನಿರೀಕ್ಷೆಯು ಸುಳ್ಳಾಗಿದೆ. ಅಂದು ಒಂದು ಸಣ್ಣ ರೋಗಾಣುವಿನ ಕಾರಣಕ್ಕಾಗಿ ಭಯಬಿದ್ದು, ಸಾವಿಗೆ ಅಂಜಿ ಇಡೀ ವಿಶ್ವವೇ ಲಾಕ್ ಡೌನ್ ಆಗಿತ್ತು, ಜೀವ ಉಳಿದರೆ ಸಾಕು ಎನ್ನುವ ಪರಿಸ್ಥಿತಿ ಉಂಟಾಗಿತ್ತು. ಅದು ಮುಗಿದು ಕೇವಲ ಎರಡು ಮೂರು ವರ್ಷಗಳಷ್ಟೇ ಆಗಿದೆ. ಅಷ್ಟರಲ್ಲಾಗಲೇ ರಷ್ಯಾ ಉಕ್ರೇನ್, ಇಸ್ರೇಲ್ ಹಮಾಸ್ ಯುದ್ಧ, ಕೆಲವು ಕಡೆ ಅನೇಕ ಭಯೋತ್ಪಾದಕ ಕೃತ್ಯಗಳು ನಡೆಯುತ್ತಲೇ ಇದೆ. ನಮ್ಮ ಕಾಶ್ಮೀರದಲ್ಲೂ ಸಹ ಇತ್ತೀಚೆಗೆ ಭಯೋತ್ಪಾದನೆ ಕೃತ್ಯಗಳು ಹೆಚ್ಚಾಗುತ್ತಿದೆ. ಚೀನಾ ಸಹ ತೈವಾನ್ ಆಕ್ರಮಿಸಲು ಹೊಂಚು ಹಾಕುತ್ತಿದೆ……

ಈ ನಡುವೆ ಆಫ್ರಿಕಾದ ಕೆಲವು ದೇಶಗಳಲ್ಲಿ ಹಿಂದಿನಿಂದಲೂ ಇದ್ದ ಅಂತರಿಕ ಯುದ್ಧ ಮತ್ತೆ ಶುರುವಾಗಿದೆ. ಶಿಲಾಯುಗ ಕಾಲದ ಮಾನವನನ್ನು ಅನಾಗರಿಕ ಎಂದು ಕರೆಯಲಾಗುತ್ತಿತ್ತು. ಅನಂತರದ ಇತಿಹಾಸವನ್ನು ನಾಗರಿಕ ಇತಿಹಾಸ ಎನ್ನಲಾಗುತ್ತದೆ….

ಇದು ನಿಜವೇ, ಖಂಡಿತ ಇಲ್ಲ. ಆಗಿನ ಅನಾಗರಿಕ ಮಾನವ ತನ್ನ ಅಜ್ಞಾನದಿಂದ, ಅನುಭವದ ಕೊರತೆಯಿಂದ, ತನ್ನೊಳಗಿನ ಪಶುತ್ವದಿಂದ ಅಪ್ರಜ್ಞಾಪೂರ್ವಕವಾಗಿ ಆ ರೀತಿಯ ದುಷ್ಕೃತ್ಯಗಳಲ್ಲಿ ಭಾಗವಹಿಸಿರಬಹುದು. ಆದರೆ ಇಷ್ಟೆಲ್ಲಾ ಅನುಭವ, ತಂತ್ರಜ್ಞಾನ, ಧರ್ಮ, ಸಂಸ್ಕಾರ, ನಾಗರಿಕತೆ, ಅಭಿವೃದ್ಧಿ ಎಲ್ಲವೂ ಆದ ನಂತರ, ನೆಮ್ಮದಿಯಿಂದ ಜೀವನ ನಡೆಸಲು ಬೇಕಾದ ಎಲ್ಲಾ ಸೌಕರ್ಯಗಳು ಪಡೆದ ನಂತರವೂ, ಈ ರೀತಿ ಸರತಿ ಸಾಲಿನಲ್ಲಿ ಹೆಣ್ಣನ್ನು ನಿಲ್ಲಿಸಿ, ಅತ್ಯಾಚಾರ ಮಾಡಿ, ಆಕೆಗೆ ಆಹಾರ ನೀಡುವುದು ಬಹುಶಃ ಅನಾಗರಿಕತೆಗಿಂತಲೂ ಹೀನಾಯವಾದ ಮನಸ್ಥಿತಿ ಎಂದು ಕರೆಯಬೇಕಾಗುತ್ತದೆ…..

ಈಗಿನ ಸಮಾಜವನ್ನು ಅಥವಾ ಕಾಲವನ್ನು ಕ್ರೌರ್ಯಯುಗ ಎಂದು ಕರೆಯಬಹುದೇನೋ. ರಷ್ಯಾ, ಉಕ್ರೇನಿನ ಜನವಸತಿ ಪ್ರದೇಶಗಳು, ಶಾಲೆಗಳು, ಆಸ್ಪತ್ರೆಗಳು ಮುಂತಾದ ಸಾರ್ವಜನಿಕ ಪ್ರದೇಶಗಳ ಮೇಲೆ ಮಿಸೈಲ್ ದಾಳಿ ನಡೆಸಿ ಸಾವಿರಾರು ಜನರನ್ನು ಕೊಲ್ಲುತ್ತಿದೆ. ಹಾಗೆಯೇ ಹಮಾಸ್ ನವರು, ಇಸ್ರೇಲ್ ಒಳಗೆ ನುಗ್ಗಿ ಸಿಕ್ಕ ಸಿಕ್ಕ ಅಮಾಯಕರನ್ನು, ಅಸಹಾಯಕರನ್ನು ಇರಿದುಕೊಂದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಸಹ ಗಾಜಾ ಪ್ರದೇಶದ ಮಕ್ಕಳ ಆಸ್ಪತ್ರೆಯ ಮೇಲೂ ಬಾಂಬ್ ದಾಳಿ ನಡೆಸಿ ಕ್ರೌರ್ಯ ಮೆರೆದಿದೆ. ಈಗಲೂ ಗಾಜಾ ಪ್ರದೇಶದಲ್ಲಿ ಎಷ್ಟೋ ಜನ ಹಸಿವಿನಿಂದಲೇ ಸಾಯುತ್ತಿದ್ದಾರೆ…..

ಕಾರಣಗಳು, ನೆಪಗಳು ಏನೇ ಇರಲಿ, ಕ್ರೌರ್ಯವಂತೂ ನಡೆಯುತ್ತಲೇ ಇದೆ. ವಿಶ್ವ ಎಷ್ಟೇ ಮುಂದುವರಿದರೂ ಏನು ಪ್ರಯೋಜನ. ನಮ್ಮ ಕಣ್ಣೆದುರೇ ಅಮಾನವೀಯ ಘಟನೆಗಳು ನಡೆಯುವಾಗ, ವಿಶ್ವದ ಅನೇಕ ದೇಶಗಳು ಅದನ್ನು ಮೌನವಾಗಿ ಸಹಿಸಿಕೊಂಡಿರುವಾಗ, ವಿಶ್ವಸಂಸ್ಥೆ ಅಸಹಾಯಕತೆಯಿಂದ ನೋಡುತ್ತಿರುವಾಗ, ಇದನ್ನು ನಾಗರಿಕ ಸಮಾಜ ಎನ್ನಲು ಮನಸ್ಸಾಗೋದಿಲ್ಲ…..

ಆದ್ದರಿಂದ ಕ್ರೌರ್ಯಯುಗದ ಅಂತಿಮ ಕಾಲಘಟ್ಟದಲ್ಲಿ ನಾವಿದ್ದೇವೆ. ಮೂರನೇ ಮಹಾಯುದ್ಧ ಮುಂದೆಂದಾದರು ಸಂಭವಿಸಿದರೆ ಅದು ಈ ಯುಗದ ಅಂತ್ಯವಾಗಬಹುದೇನೋ,…..

ಹಾಗಾಗದಿರಲಿ, ಮಾನವೀಯ ಧರ್ಮ ಈ ಜಗತ್ತಿನಲ್ಲಿ ಮತ್ತೆ ಪುನರ್ ಸ್ಥಾಪಿತವಾಗಲಿ ಎಂದು ಆಶಿಸುತ್ತಾ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಲಾಕಪ್ ಡೆತ್ ಮತ್ತು ಮರಣದಂಡನೆ….

ಸುಮಾರು ಆರು ವರ್ಷಗಳ ಹಿಂದೆ ಅಂದರೆ 2020ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ಅಮಾನುಷ ಲಾಕಪ್ ಡೆತ್ ಬಗ್ಗೆ ಬರೆದ…

15 minutes ago

ತಂದೆ-ಮಗನ ಲಾಕಪ್ ಡೆತ್ ಕೇಸ್; ತಮಿಳುನಾಡಿನ 9 ಪೊಲೀಸರಿಗೆ ಗಲ್ಲು ಶಿಕ್ಷೆ

2020ರಲ್ಲಿ ತಮಿಳುನಾಡಿನಲ್ಲಿ ನಡೆದ ಸಾತಂಕುಲಂ ಕಸ್ಟಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮದ್ರಾಸ್ ಹೈಕೋರ್ಟ್‌ ಪೀಠವು 9 ಪೊಲೀಸ್ ಸಿಬ್ಬಂದಿಗೆ…

10 hours ago

ಇಂಧನ ತೈಲ ಮತ್ತು ಅನಿಲ ಪೂರೈಕೆ ಸಮಸ್ಯೆ – ರಾಜ್ಯದ ಜನತೆಗೆ ತೀವ್ರ ಸಂಕಷ್ಟ- ಸಚಿವ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯೆ

ರಾಜ್ಯದಲ್ಲಿ ಇಂಧನ ತೈಲ ಮತ್ತು ಅನಿಲ ಪೂರೈಕೆಯ ಸಮಸ್ಯೆ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ಆಹಾರ, ನಾಗರಿಕ ಸರಬರಾಜು ಮತ್ತು…

10 hours ago

ಆಟೋ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತ ನೂರಾರು ಆಟೋಗಳು

ಆಟೋ ಎಲ್‌ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ…

13 hours ago

ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

2026-27 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ(ಆಂಗ್ಲ ಮಾಧ್ಯಮ)ಗೆ ಸೇರಲು ಪರಿಶಿಷ್ಟ ಪಂಗಡದ ಪ್ರತಿಭಾವಂತ…

15 hours ago

ಛಲವಾದಿ‌‌ ಮಹಾಸಭಾ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಎಸ್ ಯು ರಮೇಶ್ ಅವಿರೋಧ ಆಯ್ಕೆ

ಛಲವಾದಿ‌‌ ಮಹಾಸಭಾ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷರಾಗಿ ಎಸ್ ಯು ರಮೇಶ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಜಿಲ್ಲಾಧ್ಯಕ್ಷ ನರೇಶ್ ನೇತೃತ್ವದಲ್ಲಿ ನಗರದ…

17 hours ago