Categories: ಲೇಖನ

ಸುಂದರ ಪ್ರದೇಶದಲ್ಲಿ ರಕ್ತ ದೋಕುಳಿಯಾಟ

ಮತ್ತೆ ತೆರೆದ ಕಾಶ್ಮೀರಿ ಫೈಲ್ಸ್ ಪುಟಗಳು……

ಸಾಯುವ ಆಟದಲ್ಲಿ ಒಮ್ಮೆ ಅವರು, ಒಮ್ಮೆ ಇವರು……..

” ಕಣ್ಣಿಗೆ ಕಣ್ಣು ಎನ್ನುವ ಸಿದ್ಧಾಂತದಲ್ಲಿ ಮುಂದುವರೆದರೆ ಮುಂದೊಂದು ದಿನ ಇಡೀ ಜಗತ್ತೇ ಕುರುಡಾಗಬಹುದು ” ಮಹಾತ್ಮ ಗಾಂಧಿ…..

ವಿಶ್ವದ ಸುಂದರ ಸ್ಥಳಗಳಲ್ಲಿ ಒಂದಾದ ಹಿಮಾಚ್ಛಾದಿತ ಕಾಶ್ಮೀರ ಕಣಿವೆಯು ಒಂದು ಸುಂದರ ಪ್ರದೇಶ ಪೆಹಲ್ಗಾವ್ ಎಂಬಲ್ಲಿ ರಕ್ತ ದೋಕುಳಿಯಾಟ ನಡೆದಿದೆ. ಭಯೋತ್ಪಾದಕರು ಅಮಾಯಕರನ್ನು ಹುಡುಕಿ ಹುಡುಕಿ ತೀರಾ ಹತ್ತಿರದಿಂದ ಗುಂಡಿಟ್ಟು ಕೊಂದಿದ್ದಾರೆ.

ಕಾಶ್ಮೀರದ ಗುಲ್ಮೊಹರ್ನ ಸೌಂದರ್ಯವನ್ನು ಸವಿಯಲು, ಮಧುಚಂದ್ರದ ಚಂದಮಾಮನನ್ನು ನೋಡಲು ಹೋಗಿದ್ದ ಪ್ರಣಯ ಪಕ್ಷಿಗಳು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಪ್ರಾಣ ಬಿಟ್ಟವು.

ಕೋಪದಲ್ಲಿ, ಆಕ್ರೋಶದಲ್ಲಿ,
ನೋವಿನಲ್ಲಿ ಭಯೋತ್ಪಾದಕರನ್ನು, ಪಾಕಿಸ್ತಾನವನ್ನು ನೇರವಾಗಿ ಮನಸ್ಸಿಗೆ ಇಷ್ಟವಾಗುವಷ್ಟು ನಿಂದಿಸಬಹುದು, ಸತ್ತವರನ್ನು ಹುತಾತ್ಮರು ಎಂದು ಕರೆಯಬಹುದು, ಭಯೋತ್ಪಾದಕರನ್ನು ಹೊಡೆದುರುಳಿಸಬಹುದು, ಪಾಕಿಸ್ತಾನದ ಮೇಲೆ ಹೇರ್ ಸ್ಟ್ರೈಕ್ ಮಾಡಬಹುದು ಎಲ್ಲವೂ ನಡೆಯುತ್ತದೆ. ಆದರೆ ಅನಾವಶ್ಯಕವಾಗಿ ಹೋದ ಜೀವಗಳು ಮರಳಿ ಬರುವುದಿಲ್ಲ. ಈ ಸೇಡಿನ, ಸಾವಿನ ಆಟ ಮುಂದುವರಿಯಬೇಕೆ ಅಥವಾ ಸಮಸ್ಯೆ ಬಗೆಹರಿದು ಕಣಿವೆ ರಾಜ್ಯದಲ್ಲಿ ನೆಮ್ಮದಿ ನೆಲೆಸಬೇಕೇ ?

ಬಹುತೇಕ ಮಾಧ್ಯಮಗಳು ಸೇಡಿಗೆ ತಹತಹಿಸುತ್ತಿವೆ. ಜನರ ಭಾವನಾತ್ಮಕ ಉದ್ರೇಕಕ್ಕೇ ತುಪ್ಪ ಸುರಿಯುತ್ತಿವೆ. ಒಂದು ವಿಷಯ ಅರ್ಥ ಮಾಡಿಕೊಳ್ಳಿ, ಭಯೋತ್ಪಾದಕರ ಸರ್ವನಾಶಕ್ಕೆ ಎಲ್ಲಾ ಸಾಮಾನ್ಯ ಜನರ, ಶಾಂತಿ ಪ್ರಿಯರ ಬೆಂಬಲ ಸದಾ ಇರುತ್ತದೆ. ಆದರೆ ಹೇಗೆ ?

ಧರ್ಮ ಎಂಬ ಅಫೀಮಿಗೆ ಬಹುತೇಕ ಎಲ್ಲರೂ ದಾಸರಾಗಿರುವ ಸನ್ನಿವೇಶದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವುದು ಹೇಗೆ ? ತುಂಬಾ ತುಂಬಾ ಕಷ್ಟ.

ಬಹುಶಃ ಭಾರತ ಸರ್ಕಾರದ ಈಗಿನ ನಿಲುವುಗಳನ್ನು ಗಮನಿಸಿದರೆ ಕೆಲವು ರಾಜತಾಂತ್ರಿಕ ಕಠಿಣ ಕ್ರಮಗಳನ್ನು ಮೀರಿ ಈ ಘಟನೆಯನ್ನೇ ಮುಖ್ಯವಾಗಿಟ್ಟುಕೊಂಡು ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಶೀಘ್ರದಲ್ಲೇ ದಾಳಿ ಮಾಡಬಹುದು ಅಥವಾ ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಬಹುದು. ಆಗ ಭಾರತ – ಪಾಕಿಸ್ತಾನದ ಮಧ್ಯೆ ನೇರ ಯುದ್ಧ ನಡೆಯಲೂಬಹುದು.

ಏಕೆಂದರೆ ಬಲೂಚಿಸ್ತಾನ್ ರೈಲು ಅಪಹರಣ ಘಟನೆಯಲ್ಲಿ ಪಾಕಿಸ್ತಾನದ ಸೈನ್ಯಕ್ಕೆ ಭಾರಿ ಹಿನ್ನಡೆ ಮತ್ತು ಅವಮಾನವಾಗಿದೆ. ಬಲೂಚಿ ಉಗ್ರರಿಗೆ ಭಾರತ ಸಹಾಯ ಮಾಡಿದೆ ಎಂಬ ಕೋಪ ಪಾಕಿಸ್ತಾನ ಸೈನ್ಯಕ್ಕಿದೆ. ಅದಕ್ಕೆ ಪ್ರತೀಕಾರವಾಗಿ ಕಾಶ್ಮೀರಿ ಭಯೋತ್ಪಾದಕರಿಗೆ ಅದು ತಕ್ಷಣದಲ್ಲಿ ಹೆಚ್ಚಿನ ಪ್ರಚೋದನೆ ನೀಡಿರುವ ಸಾಧ್ಯತೆಗಳಿವೆ. ಇತ್ತೀಚಿನ ಪಾಕಿಸ್ತಾನ ಸೈನ್ಯದ ಮುಖ್ಯಸ್ಥನ ಹೇಳಿಕೆ ಕೂಡ ಇದಕ್ಕೆ ಪೂರಕವಾಗಿದೆ.

ಒಟ್ಟಿನಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಶಾಂತಿ ಬೇಕಾಗಿಲ್ಲ. ಈ ಭೂಮಿ ರಕ್ತತರ್ಪಣವನ್ನು ಬಯಸುತ್ತಿದೆ. ಅದರಲ್ಲೂ ನಮ್ಮ ಕಾಶ್ಮೀರದ ನೆಲ ಸದಾ ರಕ್ತಸಿಕ್ತವಾಗಿಯೇ ಇರುವಂತೆ ತೋರುತ್ತಿದೆ.

ಈ ಕ್ಷಣದಲ್ಲಿ ಭಯೋತ್ಪಾದಕರ
ಅಡಗು ತಾಣಗಳನ್ನು ನಾಶಪಡಿಸಬಹುದು. ಭಯೋತ್ಪಾದಕರನ್ನು ಹುಡುಕಿ ಕೊಲ್ಲಬಹುದು. ಆದರೂ ಕಾಶ್ಮೀರ ಸಮಸ್ಯೆ ಮಾತ್ರ ಹಾಗೆಯೇ ಉಳಿಯುತ್ತದೆ. ಒಂದಲ್ಲ ಒಂದು ದಿನ ಮತ್ತೆ ಉಗ್ರರು ಸಂಘಟಿತರಾಗಿ ದಾಳಿ ಮಾಡಬಹುದು. ಈ ತೂಗು ಕತ್ತಿ ಸದಾ ಕಾಶ್ಮೀರದ ಮೇಲೆ ಇರುತ್ತದೆ.

ಏಕೆಂದರೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ
ಐ ಎಸ್ ಐ ಭಾರತದ ಮೇಲೆ ಸದಾ ನಿಗಾ ಇಟ್ಟಿರುತ್ತದೆ. ಭಾರತದಲ್ಲಿ ತ್ರಿವಳಿ ತಲಾಕ್ ನಿಷೇಧ, ರಾಮಜನ್ಮಭೂಮಿ ವಿವಾದ, ಸಿಐಎ ಕಾನೂನು, ವಕ್ಫ್ ತಿದ್ದುಪಡಿ ಮುಂತಾದ ವಿಷಯಗಳಿಂದ ಮುಸ್ಲಿಂ ಸಮುದಾಯದಲ್ಲಿ ಉಂಟಾಗಿರುವ ಅಸಮಾಧಾನವನ್ನು ಉಪಯೋಗಿಸಿಕೊಳ್ಳಲು ಸದಾ ಪ್ರಯತ್ನಿಸುತ್ತದೆ. ಶೇಕಡ 0.0001 ಅತೃಪ್ತರನ್ನು ಅದು ಮನವೊಲಿಸಲು ಯಶಸ್ವಿಯಾದರೂ ಭಯೋತ್ಪಾದನೆ ನಿಲ್ಲುವುದಿಲ್ಲ.

ಆದ್ದರಿಂದ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕಾಗಿದೆ. ಅಲ್ಲಿನ ಅಭಿವೃದ್ಧಿ, ರಕ್ಷಣೆ, ಭದ್ರತೆಯ ಹೆಚ್ಚಳ, ಅಲ್ಲಿನ ಸ್ಥಳಿಯ ಜನರ ವಿಶ್ವಾಸ ಈ ಎಲ್ಲವೂ ಒಂದು ಕಡೆಯಾದರೆ, ನೆರೆಯ ದೇಶ ಪಾಕಿಸ್ತಾನದೊಂದಿಗೆ ಈ ವಿವಾದವನ್ನು ಬಗೆಹರಿಸಿ ಭಯೋತ್ಪಾದನೆಗೆ ಇತಿಶ್ರೀ ಆಡಲು ಮಾತುಕತೆಯ ಅವಶ್ಯಕತೆಯೂ ಇದೆ ಎನಿಸುತ್ತದೆ. ಏಕೆಂದರೆ ಎಷ್ಟೇ ಬಾರಿ ವಿಫಲವಾದರೂ ಮಾತುಕತೆಯ ಅಸ್ತ್ರವನ್ನು ಸದಾ ಪ್ರಯೋಗಿಸುತ್ತಲೇ ಇರಬೇಕು. ಒಂದಲ್ಲ ಒಂದು ದಿನ ಅದಕ್ಕೆ ಪರಿಹಾರ ದೊರೆಯಬಹುದು.

ಈಗ ಕಾಶ್ಮೀರ ಸಮಸ್ಯೆ ಕೇವಲ ಕಾಶ್ಮೀರಕ್ಕೆ ಮಾತ್ರ ಸೀಮಿತವಾಗದೆ ಭಾರತ ಪಾಕಿಸ್ತಾನ, ಹಿಂದೂ ಮುಸ್ಲಿಂ ಎಂದು ವಿಭಜನೆಯಾಗಿ ಹೋಗಿದೆ. ಅದನ್ನು ಸರಿ ಮಾಡಿ ಪರಿಹಾರ ಸೂತ್ರ ರೂಪಿಸದೆ ಅದೊಂದು ಶಾಶ್ವತ ಸಾವಿನಾಟವಾಗಿಯೇ ಉಳಿದು ಹೋಗಬಹುದು.

ಇತ್ತೀಚಿನ ಬೆಳವಣಿಗೆ ಎಂದರೆ ಕಾಶ್ಮೀರದ ಬಹಳಷ್ಟು ಜನ ಶಾಂತಿ ಮತ್ತು ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ. ಸ್ಥಳೀಯ ಮುಸ್ಲಿಮರು ಸಹ ಈ ಆಂತರಿಕ ಯುದ್ಧ ವಿರೋಧಿಸುತ್ತಿದ್ದಾರೆ. ಕೆಲವರು ಹೇಳುವಂತೆ ಅಲ್ಲಿನ ಪ್ರವಾಸೋದ್ಯಮ ಉತ್ತಮವಾಗಿ ಬೆಳವಣಿಗೆ ಹೊಂದುತ್ತಿದೆ. ಸ್ಥಳೀಯರು ಪ್ರವಾಸಿಗಳನ್ನು ಅತಿಥಿಗಳಂತೆ ಗೌರವಯುತವಾಗಿ ನೋಡಿಕೊಳ್ಳುತ್ತಿದ್ದಾರೆ.

ಆದರೆ ಎಲ್ಲೋ ಕೆಲವು ಹುಚ್ಚು ಮತಾಂಧರು ಮಾತ್ರ ಈ ಭಯೋತ್ಪಾದನೆಗೆ ಇಳಿದಿದ್ದಾರೆ. ಆದ್ದರಿಂದ ಸೂಕ್ಷ್ಮವಾಗಿ ಈ ವ್ಯತ್ಯಾಸವನ್ನು ಗಮನಿಸಬೇಕು. ಅಲ್ಲಿನ ಎಲ್ಲಾ ಮುಸ್ಲಿಮರು ದೇಶ ವಿರೋಧಿಗಳಲ್ಲ. ಈ ವ್ಯವಸ್ಥೆಯೊಂದಿಗೆ ಸೇರಿ ಹೋಗಿದ್ದಾರೆ ಎಂಬುದನ್ನು ಮರೆಯಬಾರದು.

ಭಾರತದ ಅನೇಕ ಮುಸ್ಲಿಮರು ಈ ಘಟನೆಯನ್ನು ಖಂಡಿಸಿದ್ದಾರೆ. ಇಸ್ಲಾಂ ಭಯೋತ್ಪಾದನೆ ಮತ್ತು ಹಿಂಸೆಯನ್ನು ಸಹಿಸುವುದಿಲ್ಲ. ಕೊಲ್ಲುವ ಮನಸ್ಥಿತಿಯ ವ್ಯಕ್ತಿ ಮುಸ್ಲಿಂಮನೇ ಅಲ್ಲ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ.
ಇದನ್ನೂ ಗಮನಿಸಬೇಕು.

ಕೆಲವು ಪತ್ರಕರ್ತರು ಮತ್ತು ನಿವೃತ್ತ ಸೈನಿಕರ ಯುದ್ಧೋನ್ಮಾದಕ್ಕೆ ಸಾಮಾನ್ಯ ಜನ ಮರುಳಾಗಬಾರದು. ಯುದ್ದ ಅನಿವಾರ್ಯವಾಗುವವರೆಗೆ ಸಂಯಮವಿರಲಿ. ಯುದ್ಧದ ಪರಿಣಾಮ ಇದಕ್ಕಿಂತ ಭೀಕರ. ಬಡದೇಶ ಪಾಕಿಸ್ತಾನಕ್ಕಿಂತ ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಇದು ಹೆಚ್ಚು ತೊಂದರೆಯಾಗುತ್ತದೆ. ಚೀನಾ ಇದರ ಲಾಭ ಪಡೆಯಬಹುದು ಎಚ್ಚರ…….
**************************

ಹುತಾತ್ಮ ಯೋಧನ 5 ವರ್ಷದ ಪುಟ್ಟ ಮಗು ಕೇಳಿತು.
” ಅಮ್ಮಾ, ಅಪ್ಪ ಎಲ್ಲಿ ”
ತಾಯಿ ( ಕಣ್ಣೀರಾಗುತ್ತಾ )
” ಕಂದ ಅಪ್ಪನನ್ನು ಕೊಂದರು “.
ಮಗು, ” ಯಾರು “,?
ತಾಯಿ, ” ಧರ್ಮಾಂಧ ದೇಶದ್ರೋಹಿ ಭಯೋತ್ಪಾದಕರು ”
ಮಗು, ” ಯಾಕೆ ” ?
ತಾಯಿ, ” ನಮ್ಮಲ್ಲಿ ಭಯಮೂಡಿಸಿ ನಮ್ಮ ಕಾಶ್ಮೀರವನ್ನು ಕಿತ್ತುಕೊಳ್ಳಲು ”
ಮಗು, ” ಹಾಗಾದರೆ ನಾನು ಭಯಪಡುವುದಿಲ್ಲ. ಆ ಭಯೋತ್ಪಾದಕರನ್ನು ಕೊಂದು ನನ್ನ ದೇಶವನ್ನು ರಕ್ಷಿಸುತ್ತೇನೆ. ಇದು ನನ್ನ ಶಪಥ ಅಮ್ಮ “.

ಇತ್ತ ಅದೇ ಘಟನೆಯಲ್ಲಿ ಸತ್ತ ಭಯೋತ್ಪಾದಕನ ಮನೆಯಲ್ಲಿ ಅವನ ಪುಟ್ಟ ಮಗು, ” ಅಮ್ಮ ಅಪ್ಪ ಎಲ್ಲಿ. “?
ತಾಯಿ ( ಕಣ್ಣೀರಾಗುತ್ತಾ )
” ಮಗು ಅಪ್ಪನನ್ನು ಕೊಂದರು.”
ಮಗು, ” ಯಾರು “?
ತಾಯಿ, ” ಭಾರತದ ಸೈನಿಕರು ”
ಮಗು, ” ಯಾಕೆ “?
ತಾಯಿ ,” ನಮ್ಮ ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೇಳಿದ್ದಕ್ಕೆ ”
ಮಗು, ” ಹಾಗಾದರೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ನಾನು ಹೋರಾಡುತ್ತಲೇ ಇರುತ್ತೇನೆ. ಇದು ನನ್ನ ಶಪಥ ಅಮ್ಮ”.

ಕಾಶ್ಮೀರ ಸಮಸ್ಯೆಯ ಎರಡು ಮುಖಗಳಿವು.

ವಿಶ್ವ ಭೂಪಟದ ಭಾರತ ದೇಶದ ಕರ್ನಾಟಕದ ಬೆಂಗಳೂರಿನಲ್ಲಿ ಕುಳಿತ ನಾವು ಈ ಮಕ್ಕಳನ್ನು ಉಳಿಸಲು ಏನು ಮಾಡಬೇಕು. ಯಾವ ದೇವರೂ ಕಾಣುತ್ತಿಲ್ಲ. ಆಡಳಿತಗಾರರಿಗೆ ಸಾಧ್ಯವಾಗುತ್ತಿಲ್ಲ. ಇಬ್ಬರ ಬಳಿಯಲ್ಲೂ ಅಣುಬಾಂಬ್ ಗಳಿವೆ. ಎರಡು ವಿರುಧ್ಧ ಧರ್ಮಗಳು ಎದುರು ಬದರು ನಿಂತಿವೆ.
ಭಯೋತ್ಪಾದಕರ ಮತ್ತೇರಿದ ಅಧರ್ಮಯುಧ್ಧ, ಸೈನಿಕರ ರಾಷ್ಟ್ರ ರಕ್ಷಣೆಯ ಧರ್ಮಯುಧ್ಧ, ಈಗ ಮಾಡುವುದೇನು ?

ನಮ್ಮ ಬಳಿ ಮಂತ್ರ ದಂಡವಿಲ್ಲ. ಎಲ್ಲವನ್ನೂ ನನ
ನಮಗಿಷ್ಟಬಂದಂತೆ ಪರಿಹರಿಸಲು.
ಹಾಗಾದರೆ ಯುದ್ಧ ಅನಿವಾರ್ಯವೇ? ಆಗಲೂ ಈ ಗೋಳು ತಪ್ಪುವುದಿಲ್ಲ.
ಯುಧ್ಧದ ಫಲಿತಾಂಶ ಭೀಕರ, ಅಸ್ಪಷ್ಟ ಮತ್ತು ತಾತ್ಕಾಲಿಕ. ಸೋತವನು ಕೆಲ ವರ್ಷಗಳ ನಂತರ ಮತ್ತೆ ಯುದ್ಧಕ್ಕೆ ನಿಲ್ಲುತ್ತಾನೆ. ಚಾಣಕ್ಯನ ನೀತಿ ಸೂತ್ರದಂತೆ ಶತ್ರುವಿನ ಶತ್ರುವನ್ನು ಮಿತ್ರನಾಗಿಸಿಕೊಳ್ಳುತ್ತಾನೆ.

ಇದು ಸಣ್ಣ ವಿಷಯವಲ್ಲ. ಭಾರತ ಮತ್ತು ಪಾಕಿಸ್ತಾನದ ಸುಮಾರು 175 ಕೋಟಿ ಜೀವಗಳ ಭವಿಷ್ಯ. ಹುತಾತ್ಮ ಯೋಧರಿಗೆ ಶಾಂತಿ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಬದುಕಿರುವವರ ಗೋಳು ನೋಡಲಾಗುತ್ತಿಲ್ಲ. ನಾವಿಲ್ಲಿ ಸುಖವಾಗಿ ಊಟಮಾಡುತ್ತಾ, ಸಿನಿಮಾ ನೋಡುತ್ತಾ ಆರಾಮವಾಗಿದ್ದೇವೆ. ಇದು ಸತ್ತವರಿಗೆ ಅನ್ಯಾಯ ಮಾಡಿದಂತೆ. ಏಕೆಂದರೆ ದೇಶ ಕೇವಲ ಸೈನಿಕರಿಗೆ ಮಾತ್ರ ಸೇರಿದ್ದಲ್ಲ. ನಮ್ಮದೂ ಪಾಲಿದೆ. ಒಬ್ಬರ ನೋವು ಇನ್ನೊಬ್ಬರ ನಲಿವಾಗುವ ತಾರತಮ್ಯ ಬೇಡ.

ಆ ಪುಟ್ಟ ಮಗುವಿನ ಮುಖ ನೋಡಲಾಗುವುದಿಲ್ಲ. ಬೆಳೆದಂತೆ ತಂದೆ ಇಲ್ಲದ ಆ ಮಗುವಿನ ಮಾನಸಿಕ ಯಾತನೆ ಅನುಭವಿಸಿದವರಿಗಷ್ಟೇ ಗೊತ್ತು. ಜೈಕಾರ ಹಾಕುವುದು ಸುಲಭ. ಹುತಾತ್ಮ ಪಟ್ಟಕ್ಕಿಂತ ಜೀವ ಮುಖ್ಯ.

ತಾಳ್ಮೆಯಿಂದ, ವಿವೇಚನೆಯಿಂದ, ಶಕ್ತಿಯಿಂದ, ಯುಕ್ತಿಯಿಂದ,”ಸೈನಿಕರು ನಮ್ಮ ಮಕ್ಕಳು ಅವರ ಜೀವ ಅತ್ಯಮೂಲ್ಯ ” ಎಂದು ತಾಯಿ ಕರುಳಿನ ರೀತಿ ಯೋಚಿಸಿ – ಯೋಜಿಸಿದರೆ ಅವರನ್ನು ಬಹುತೇಕ ಉಳಿಸಿಕೊಳ್ಳಬಹುದು. ಎಲ್ಲಾ ಸಾಧ್ಯತೆಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು.

ಸೈನಿಕರಿರುವುದು ರಕ್ಷಣೆಗಾಗಿಯೇ ಹೊರತು ಅನಾವಶ್ಯಕ ದೇಹ ತ್ಯಾಗಕ್ಕಲ್ಲ. ಆ ಸಂಧರ್ಭ ಬಂದರೆ ಎಲ್ಲರೂ ಒಟ್ಟಿಗೆ ಹೋರಾಡುತ್ತಾ ಸಾಯೋಣ. ಸೈನಿಕರಷ್ಟಲ್ಲದಿದ್ದರೂ ನಮಗೂ ಶಕ್ತಿಯಿದೆ.

ಕೇವಲ ದೇಶಭಕ್ತಿಯ ಹೆಸರಲ್ಲಿ ಭಾವನೆಗಳನ್ನು ಕೆರಳಿಸಿ ನಮ್ಮ ಸಹೋದರರನ್ನು ಬಲಿಕೊಡಬೇಡಿ. ಸೈನಿಕರೇನೂ ಸಾಯಲು ಸಿದ್ದರಾದ ಕುರಿಗಳಲ್ಲ. ನಮ್ಮಂತೆ ಆಸೆ ಕನಸುಗಳ ಜೀವಗಳು. ಅವರನ್ನು ಉಳಿಸಿಕೊಳ್ಳುವುದು ಆಡಳಿತಗಾರರ ಕರ್ತವ್ಯ. ನಿಮ್ಮ ಅಹಂ ಬಿಟ್ಟು ವಾಸ್ತವ ಪ್ರಜ್ಞೆಯಿಂದ ಉಪಾಯ ಹುಡುಕಿದರೆ ಖಂಡಿತ ಅವರನ್ನು ಉಳಿಸಿಕೊಳ್ಳಬಹುದು.

ಜೈ ಜವಾನ್ ಎಂದು ಅವರನ್ನು ಸಾವಿನ ಕೂಪಕ್ಕೆ ತಳ್ಳುವುದಲ್ಲ. ಅವರ ಪ್ರತಿ ಜೀವವೂ 145 ಕೋಟಿ ಭಾರತೀಯರಷ್ಟೇ ಮುಖ್ಯ ಮತ್ತು ಬೆಲೆಯುಳ್ಳದ್ದು.
ನಮ್ಮನ್ನು ರಕ್ಷಿಸುವವರನ್ನು ನಾವು ರಕ್ಷಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಭಕ್ತಿ ಭಾವ ಉತ್ಸವದಲ್ಲಿ ಅಸಭ್ಯ ನೃತ್ಯ: ಸಾರ್ವಜನಿಕರಿಂದ ತೀವ್ರ ಅಸಮಾಧಾನ

ದೇವಿಯ ಕರಗ ಉತ್ಸವದಲ್ಲಿ ಅಶ್ಲೀಲ ನರ್ತನ ಮಾಡಿದ್ದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ…

18 minutes ago

ಏ.5ಕ್ಕೆ ತೂಬಗೆರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ

ಬಾಬು ಜಗಜೀವನ್ ರಾಮ್ ಜಯಂತಿ ಪ್ರಯುಕ್ತ ಏ.5ರ ಭಾನುವಾರ ತೂಬಗೆರೆ ಸರ್ಕಾರಿ ಶಾಲೆಯಲ್ಲಿ ಬಾಬು ಜಗಜೀವನ ರಾಮ್ ರಾಷ್ಟ್ರೀಯ ಶಿಕ್ಷಣ…

3 hours ago

ಡ್ರಿಪ್ ಹಾಕಿಸಿಕೊಂಡೇ SSLC ಪರೀಕ್ಷೆ ಬರೆದ ವಿದ್ಯಾರ್ಥಿ….

ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಹೊಟ್ಟೆನೋವಿಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ನೇರವಾಗಿ ಪರೀಕ್ಷಾ ಕೊಠಡಿಗೆ…

7 hours ago

ಜೈಲಿನ ಜೈಲರ್ ಲೋಕಾಯುಕ್ತ ಬಲೆಗೆ

ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಜೈಲಿನ ಜೈಲರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.. ಕೈದಿಗೆ ಸರ್ಕಾರದಿಂದ ಬಂದ ಹಣ ನೀಡಲು 60 ಸಾವಿರ…

11 hours ago

ದ್ವಿಚಕ್ರ ವಾಹನ ಹಾಗೂ ಪಂಪ್ ಸೆಟ್ ಗೆ ಅಳವಡಿಸಿದ್ದ ಮೋಟಾರ್ ಗಳ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ರಾಮನಗರ ಗ್ರಾಮಾಂತರ ಹಾಗೂ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಜಮೀನಿನಲ್ಲಿ ಪಂಪ್ ಸೆಟ್ ಗಳಿಗೆ ಅಳವಡಿಸಿದ್ದ…

1 day ago

ಬಿಸಿಲಿನ ಬೇಗೆ: ಬಾಯಾರಿದ ಕೋತಿ ನೀರಿಗಾಗಿ ಪರದಾಟ: ವಾಟರ್ ಬಾಟಲ್ ನೀರು ಕುಡಿಯಲು ಹರಸಾಹಸ

ಬಿರುಬಿಸಿಲಿಗೆ ಬಾಯಾರಿಕೆಯಿಂದ ಕೋತಿಯೊಂದು ನೀರಿಗಾಗಿ ವಾಟರ್ ಬಾಟಲ್ ಹಿಡಿದು ಒಂದೊಂದು ಹನಿಗೂ ಪರದಾಡಿದ ದೃಶ್ಯ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ…

1 day ago