Categories: ಲೇಖನ

ಸೀಡ್ ಲೆಸ್ ಜನಾಂಗವೊಂದು ಸೃಷ್ಟಿಯಾಗುತ್ತಿದೆಯೇ ಎಂಬ ಅನುಮಾನ….

 

ಸೀಡ್ ಲೆಸ್ ಯುವ ಜನಾಂಗ…..

ಹೌದು ಹಣ್ಣು ತರಕಾರಿಗಳಲ್ಲಿ ಸೀಡ್ ಲೆಸ್ ಸೃಷ್ಟಿಯಾಗುತ್ತಿರುವಂತೆ ಭಾರತೀಯ ಸಮಾಜದ ಯುವಕ ಯುವತಿಯರ ಮಾನಸಿಕ ಸ್ಥಿತಿ ಗಮನಿಸಿದರೆ ಸೀಡ್ ಲೆಸ್ ಜನಾಂಗವೊಂದು ಸೃಷ್ಟಿಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಜಾಗತೀಕರಣದ ಪ್ರಭಾವದಿಂದಾಗಿ ಭಾರತದ ಮಧ್ಯಮ ವರ್ಗದ ಕುಟುಂಬಗಳಲ್ಲಿ ಬಡತನ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. ಊಟ ಬಟ್ಟೆ ವಸತಿಯ ವಿಷಯದಲ್ಲಿ ಮಕ್ಕಳಿಗೆ ಹೆಚ್ಚಿನ ಕೊರತೆಯಾಗದಂತೆ ಪೋಷಕರು ನೋಡಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡುಬಂದಿತು. ಅವಿಭಕ್ತ ಕುಟುಂಬಗಳು ಶಿಥಿಲವಾಗಿ ಚಿಕ್ಕ ಸಂಸಾರಗಳು ಅಸ್ತಿತ್ವಕ್ಕೆ ಬಂದವು.

ಅದರಿಂದಾಗಿ ಮಕ್ಕಳ ಮೇಲೆ ಪೋಷಕರು ಪ್ರೀತಿ ಹೆಚ್ಚಾಯಿತು. ಟಿವಿ ಮೊಬೈಲ್ ವಿಡಿಯೋ ಗೇಮ್ ಸಿನಿಮಾ ಮನರಂಜನೆ ಮುಂತಾದ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಿಂದ ಮಕ್ಕಳ ಮನಸ್ಥಿತಿ ಹೆಚ್ಚು ಶಾರ್ಪ್ ಆಯಿತು. ಕಲಬೆರಕೆ ಆಹಾರ, ಜಂಕ್ ಪುಡ್ ಮುಂತಾದ ರಸಾಯನಿಕ ಮಿಶ್ರಿತ ಪದಾರ್ಥಗಳ ತಿಂಡಿಗಳು ಮತ್ತು ಅತಿಯಾದ ವಾಹನಗಳ ಬಳಸುವಿಕೆ ಹಾಗು ಪರಿಸರ ಮಾಲಿನ್ಯದಿಂದ ದೇಹ ಮತ್ತು ಮನಸ್ಸುಗಳಲ್ಲಿ ಆಲಸ್ಯ ಉಂಟಾಯಿತು.

ತೀರಾ ಹಸಿವಿನ ಸಂಕಷ್ಟಗಳ ಅನುಭವ ಅವರಿಗೆ ಆಗಲೇ ಇಲ್ಲ. ಯಾವುದೇ ಭಯಂಕರ ಯುದ್ಧ, ಪ್ರಾಕೃತಿಕ ವಿಕೋಪ, ಹಿಂಸೆಯ ಕ್ರಾಂತಿ ಇತ್ತೀಚಿನ ವರ್ಷಗಳಲ್ಲಿ ನಡೆಯಲಿಲ್ಲ. ಇದರ ಜೊತೆಗೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಮತ್ತು ಉಚಿತ ಇಂಟರ್ ನೆಟ್ ಸೌಲಭ್ಯ ಮತ್ತು ಓಡಾಡಲು ದ್ವಿಚಕ್ರ ವಾಹನ ದೊರೆಯಿತು. ಕೈಗೊಂದಿಷ್ಟು ಕಾಸು ಹತ್ತಿರದಲ್ಲಿ ಮಾಲ್ ಗಳು. ಇಷ್ಟು ಸಾಕಲ್ಲವೇ ????

ಇತಿಹಾಸದ ನೋವುಗಳ ನೆನಪುಗಳಿಲ್ಲ, ಭವಿಷ್ಯದ ಕನಸುಗಳು ಮುನ್ನೋಟವಿಲ್ಲ. ಈ ಕ್ಷಣದ ಮಜಾ ಮಾತ್ರ ಅವರ ಪ್ರಾಮುಖ್ಯತೆಯಾಯಿತು. ಸ್ವಂತಿಕೆ ಮತ್ತು ಸ್ವಾಭಿಮಾನ ಇಲ್ಲದೇ ಹೋಯಿತು.

ಇದಕ್ಕಾಗಿಯೇ ಹೊಂಚು ಹಾಕಿ ಕುಳಿತಿದ್ದ ಕೆಲವು ರಾಜಕೀಯ ಪಕ್ಷಗಳು ಕೋತಿಗಳಿಗೆ ಕಡಲೆ ಬೀಜ ಹಾಕಿ ಬೋನಿಗೆ ಬೀಳಿಸುವಂತೆ ಭ್ರಷ್ಟಾಚಾರ, ಧರ್ಮ, ಜಾತಿ, ಭಾಷೆ, ಪಂಥ, ದೇಶಪ್ರೇಮ ಅದು ಇದು ಎಂಬ ಮಸಾಲೆ ಹಾಕಿದ ಕಡಲೇ ಬೀಜಗಳನ್ನು ಎಸೆದರು ನೋಡಿ. ಈ ಯುವಕರು ಸುಲಭವಾಗಿ ಅದರ ಬಲೆಗೆ ಬಿದ್ದರು.

ಇದರ ಜೊತೆಗೆ ಎಲ್ಲೆಲ್ಲೂ ಬಾರ್ ಅಂಡ್ ರೆಸ್ಟೋರೆಂಟ್ ಗಳು, ಶಾಪಿಂಗ್ ಮಾಲ್ ಗಳು, ಸಿಗರೇಟು ಗಾಂಜಾಗಳು ಸುಲಭವಾಗಿ ದೊರೆಯತೊಡಗಿದವು, ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ರಣಭೀರ್ ಕಪೂರ್ ಗಳು, ಕರೀನಾ ತಮನ್ನಾ, ದೀಪಿಕಾ ಪಡುಕೋಣೆ, ಕತ್ರಿನಾ ಕೈಪ್ ಗಳು, ದರ್ಶನ್, ಸುದೀಪ್, ಯಶ್ ಗಳು, ಜೊತೆಗೊಂದಿಷ್ಟು ಬೆಟ್ಟಿಂಗ್ ಕಟ್ಟಲು ತೆಂಡೂಲ್ಕರ್ ಕೊಹ್ಲಿ, ಧೋನಿಗಳು, ಹುಚ್ಚೆಬ್ಬಿಸಲು ಮೋದಿ ರಾಹುಲ್, ಮಮತಾಗಳು,…..

ಇನ್ನೆಲ್ಲಿಯ ಸ್ವಂತಿಕೆ. ಸೀಡ್ ಲೆಸ್ ಜನಾಂಗ ಸೃಷ್ಟಿಯಾಗದೆ ಇನ್ನೇನಾಗುತ್ತದೆ. ಆದರ್ಶಗಳಿಲ್ಲದ ಕೇವಲ ಆಡಂಬರಗಳು.

ಇತ್ತೀಚೆಗೆ ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥರಾಗಿದ್ದ ಡಾಕ್ಟರ್ ಮಂಜುನಾಥ್ ಅವರು ” ಹಿಂದೆ ಮಕ್ಕಳು ತಂದೆ ತಾಯಿ ಮುಂತಾದ ಹಿರಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಈಗ ತಂದೆ ತಾಯಿಗಳು ಮಕ್ಕಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿರುವ ಬದಲಾವಣೆಯ ದೃಶ್ಯಗಳನ್ನು ನೋಡುತ್ತಿದ್ದೇವೆ ಎಂದು ಹೇಳಿದರು.

ಇದು ದೇಹ ಸೀಡ್ ಲೆಸ್ ಆಗಿರುವುದಕ್ಕೆ ಒಂದು ಉದಾಹರಣೆ. ಹಾಗೆಯೇ ಯಾವುದೇ ಗಹನವಾದ ತರ್ಕಬದ್ಧವಾದ ಆಳವಾದ ಚಿಂತನೆಯಿಲ್ಲದೆ ವಿಷಯವನ್ನು ಕೇವಲ ವಾಕ್ಚಾತುರ್ಯ ಮತ್ತು ನಿರೂಪಣೆಯಿಂದ ಯುವ ಸಮೂಹವನ್ನು ಮೆಚ್ಚಿಸಿ ಅವರಿಂದ ಚಪ್ಪಾಳೆ ಮತ್ತು ಓಟು ಪಡೆಯಬಹುದು ಎಂಬುದು ಅವರ ಮಾನಸಿಕ ಸೀಡ್ ಲೆಸ್ ತನಕ್ಕೆ ಮತ್ತಷ್ಟು ಉದಾಹರಣೆಗಳು. ಆದ್ದರಿಂದಲೇ ಹಣ ಇರುವ ಜಾತಿ ರಾಜಕಾರಣದ ಭ್ರಷ್ಟ ವ್ಯಕ್ತಿಗಳು ಸುಲಭವಾಗಿ ಜನ ಪ್ರತಿನಿಧಿಗಳಾಗಿ ಮತ್ತೆ ಮತ್ತೆ ಆಯ್ಕೆಯಾಗುತ್ತಾರೆ.

ಮದುವೆಯಾಗಲು ಹುಡುಗ ಹುಡುಗಿಯರು ಕೇಳುತ್ತಿರುವ ಅಥವಾ ಬಯಸುತ್ತಿರುವ ಬೇಡಿಕೆಗಳು, ಕೆಲವೇ ತಿಂಗಳುಗಳಲ್ಲಿ ಅವರ ನಡುವೆ ಉಂಟಾಗುತ್ತಿರುವ ಭಿನ್ನಾಭಿಪ್ರಾಯಗಳು, ಹಣದ ಬಗೆಗಿನ ಮೋಹ, ವ್ಯಕ್ತಿತ್ವ ಮತ್ತು ಮೌಲ್ಯಗಳ ಬಗೆಗಿನ ತಿರಸ್ಕಾರ ಗಮನಿಸಿದರೆ ಈ ಸೀಡ್ ಲೆಸ್ ಜನಾಂಗದ ಬಗ್ಗೆ ಸ್ವಲ್ಪ ಅರ್ಥವಾಗಬಹುದು.

ಸ್ವಾಮಿ ವಿವೇಕಾನಂದರ ಕನಸಿನ,
ಉಕ್ಕಿನ ದೇಹದ, ಕಠಿಣ ಮನಸ್ಥಿತಿಯ, ಶುದ್ದ ವ್ಯಕ್ತಿತ್ವದ, ಕ್ರಿಯಾತ್ಮಕ ಚಿಂತನೆಯ ಭಾರತದ ಯುವ ಜನಾಂಗ ಎಲ್ಲಿ ಹೋಯಿತು.

ದ್ವೇಷ ಕಾರುವ, ಶ್ರೇಷ್ಠತೆಯ ವ್ಯಸನದ, ಸಣ್ಣ ಮನಸ್ಸಿನ ಅಸೂಯಾಪರ ಯುವ ಜನಾಂಗವನ್ನು ನೋಡಿ ಮನಸ್ಸು ಒದ್ದಾಡುತ್ತಿದೆ.

ಒಳ್ಳೆಯ ಅಂಶಗಳು ಇಲ್ಲವೆಂದಲ್ಲ. ಪಾಪ ಅವರಿಗೆ ಒಳ್ಳೆಯ ಮಾರ್ಗದರ್ಶನ ಸಿಗುತ್ತಿಲ್ಲ. ಒಳ್ಳೆಯದನ್ನು ಗ್ರಹಿಸುವ ಮನಸ್ಥಿತಿಯನ್ನು ಅವರಲ್ಲಿ ನಾವು ಬೆಳೆಸುತ್ತಿಲ್ಲ.

ಎಳನೀರಿನ ಜಾಗದಲ್ಲಿ ಪೆಪ್ಸಿ ಕೋಲಾಗಳು, ಸಹಜತೆಯ ಜಾಗದಲ್ಲಿ ಕೃತಕ ಬಣ್ಣಗಳು ಅವರನ್ನು ಆಕರ್ಷಿಸುತ್ತಿವೆ.

ಅಪ್ಪ ಹೇಳುತ್ತಿದ್ದರು,
ಬೇಡುವ ಕೈ ನಿನ್ನದಾಗುವುದು ಬೇಡ,
ಕೊಡುವ ಕೈ ನಿನ್ನದಾಗಲಿ.

ಅಮ್ಮ ಹೇಳುತ್ತಿದ್ದರು,
ಅವಮಾನ ಸಹಿಸಬೇಡ,
ಸ್ವಾಭಿಮಾನದ ಬದುಕು ನಿನ್ನದಾಗಲಿ,

ಗುರುಗಳು ಹೇಳುತ್ತಿದ್ದರು,
ದೇಶದ್ರೋಹಿ ಸ್ವಾರ್ಥಿ ಆಗಬೇಡ,
ದೇಶಪ್ರೇಮಿ ತ್ಯಾಗ ಜೀವಿ ನೀನಾಗು.

ಮಾರ್ಗದರ್ಶಿಗಳು ಹೇಳುತ್ತಿದ್ದರು,
ದ್ವೇಷ ಭಾವನೆ ತೊಡೆದು ಹಾಕು,
ಪ್ರೀತಿಯ ಭಾಷೆ ನಿನ್ನದಾಗಲಿ.

ನೀತಿ ಕಥೆಗಳಲ್ಲಿ ಓದುತ್ತಿದ್ದೆ,
ಪರರ ಸ್ವತ್ತು, ಪರ ಸ್ತ್ರೀ ಮೇಲಿನ ಮೋಹ,
ಅನೈತಿಕ ಅಸಹ್ಯಕ್ಕೆ ಸಮಾನ,
ದುಡಿದ ಶ್ರಮದ ಫಲ ಮಾತ್ರ ನಿನ್ನದಾಗಲಿ.

ಹಿರಿಯರು ಹೇಳುತ್ತಿದ್ದರು,
ಮೋಸ ವಂಚನೆ ಕಳ್ಳತನ ನಿನ್ನ ಬಳಿ ಸುಳಿಯದಿರಲಿ,
ಸ್ನೇಹ ವಿಶ್ವಾಸ ತಾಳ್ಮೆ ನಿನ್ನಿಂದ ಅಳಿಯದಿರಲಿ.

ಪುಸ್ತಕಗಳಲ್ಲಿ ಬರೆದಿದ್ದರು,
ನಿನ್ನಲ್ಲಿರುವ ಹಣ ಆಸ್ತಿ ಯಾವಾಗ ಬೇಕಾದರೂ ನಾಶವಾಗಬಹುದು.
ಆದರೆ, ನೀನು ಕಲಿತಿರುವ ವಿಧ್ಯೆ ನಿನ್ನನ್ನು ಕೊನೆಯವರೆಗೂ ಕಾಪಾಡುತ್ತದೆ.

ಈಗಲೂ ಇದು ಪ್ರಸ್ತುತವೇ ?
ನಮ್ಮ ಮಕ್ಕಳಿಗೆ ಇದನ್ನು ಈಗಲೂ ಕಲಿಸುತ್ತಿದ್ದೇವೆಯೇ ?
ಇದು ಸಾರ್ವಕಾಲಿಕ ಸತ್ಯವೇ ?
ಬದಲಾವಣೆ ಅವಶ್ಯವೇ ?
ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದನ್ನು ನಮ್ಮ ಮಕ್ಕಳಿಗೆ ಕಲಿಸುವುದರಿಂದ ಅವರಿಗೆ ಯಶಸ್ಸು ಸಿಗುವುದೆ ? ಅಥವಾ ವಾಸ್ತವದಲ್ಲಿ ಗೊಂದಲಕ್ಕೆ ಒಳಗಾಗುವರೆ ?

ಒಳ್ಳೆಯದೆಲ್ಲವೂ ಒಳ್ಳೆಯದಾಗಿ ಇನ್ನೂ ಉಳಿದಿದೆಯೇ ?
ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಮಕ್ಕಳಿಗೆ ನಾವು ನೈತಿಕ ಶಿಕ್ಷಣದ ಪಾಠಗಳಲ್ಲಿ ಏನು ಹೇಳಿಕೊಡಬೇಕು ?
ಹಳೆಯದು ಮತ್ತು ಹೊಸದರ ಸಮ್ಮಿಲನ ಸಾಧಿಸುವುದು ಹೇಗೆ ?

ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಸಾಗಲಿ.
ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಇದು ಅತ್ಯವಶ್ಯ……..

ಮತ್ತೊಮ್ಮೆ ಯುವಕರನ್ನು ಈ ವಿಷ ಚಕ್ರದಿಂದ ಬಿಡುಗಡೆ ಮಾಡಿ ಸಹಜ ಮೌಲ್ಯಯುತ ಸುಂದರ ಬದುಕಿನತ್ತ ಕರೆದೊಯ್ಯುವ ಜವಾಬ್ದಾರಿ ನಾವು ಹೊರಬೇಕಿದೆ. ಅದರ ಪ್ರಯತ್ನದ ಒಂದು ಸಣ್ಣ ಭಾಗವೇ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಒಂದೇ ಗ್ರಾಮದ ನಾಲ್ವರು ಯುವಕರು ದುರ್ಮರಣ: ಮುಗಿಲು ಮುಟ್ಟಿದ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂದನ: ಇಡೀ ಗ್ರಾಮದಲ್ಲಿ ಮನೆ ಮಾಡಿದ ಸೂತಕದ ವಾತಾವರಣ

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವಂತಹ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ…

3 hours ago

ಅಭಿಮಾನಿಗಳ ಅತಿರೇಕ….ಯಾಕಪ್ಪಾ, ಏನಾಗಿದೆ ಸಮಸ್ಯೆ…?

ಅಭಿಮಾನಿಗಳ ಅತಿರೇಕ.... ಹುಚ್ಚುತನದ ಪರಮಾವಧಿ..... ದಚ್ಚು - ಕಿಚ್ಚ. (ದರ್ಶನ್ - ಸುದೀಪ್) + (ಡೆವಿಲ್ - ಮಾರ್ಕ್)........ ಅವರ…

4 hours ago

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…

23 hours ago

ಜಗತ್ತಿನ ಬೆಳಕಿನ ಹಬ್ಬ – ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ…..

ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…

1 day ago

ಖಾಸಗಿ ಬಸ್ ಲಾರಿಗೆ ಡಿಕ್ಕಿ: ಹೊತ್ತಿ ಉರಿದ ಬಸ್: 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನ

ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…

1 day ago