ಸಿನಿಮಾ ನೋಡಲು ಹೋದ ಕುಟುಂಬದ ಮನೆಗೆ ಕನ್ನ; 130 ಗ್ರಾಂ ಚಿನ್ನದೊಂದಿಗೆ ಸಿಕ್ಕಿಬಿದ್ದ ಕಳ್ಳ!

ಮನೆಯವರೆಲ್ಲರೂ ಸಿನಿಮಾ ನೋಡಲು ತೆರಳಿದ್ದ ವೇಳೆ ಮನೆಗೆ ನುಗ್ಗಿ 130 ಗ್ರಾಂ ಚಿನ್ನ ಕಳವು ಮಾಡಿದ್ದ ಆರೋಪಿಯೊಬ್ಬ, ಮನೆ ಮಾಲೀಕನ ಸಮಯಪ್ರಜ್ಞೆಯಿಂದ ಸಿಕ್ಕಿಬಿದ್ದ ಘಟನೆ ದೇವನಹಳ್ಳಿ ತಾಲ್ಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕೃಷ್ಣಪ್ಪ ಎಂಬುವವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಆರೋಪಿ, ಮನೆಯವರೆಲ್ಲರೂ ಸಿನಿಮಾ ನೋಡಲು ತೆರಳಿದ್ದನ್ನು ಗಮನಿಸಿ ಮನೆಗೆ ನುಗ್ಗಿದ್ದಾನೆ. ಈ ವೇಳೆ 130 ಗ್ರಾಂ ಚಿನ್ನ ಕಳವು ಮಾಡಿದ್ದಾನೆ. ಬಳಿಕ ಮನೆಯಿಂದ ಹೊರಬರಲು ಸಾಧ್ಯವಾಗದೆ, ಒಳಗಿನಿಂದಲೇ ಬಾಗಿಲು ಲಾಕ್ ಆಗುವಂತೆ ಮಾಡಿಕೊಂಡಿದ್ದಾನೆ.

ಮನೆಗೆ ಮರಳಿದ ಕೃಷ್ಣಪ್ಪ ಅವರಿಗೆ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಅನುಮಾನ ಮೂಡಿಸಿದೆ. ತಕ್ಷಣ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಬಳಿಕ ಕುಟುಂಬಸ್ಥರು ಮನೆಯೊಳಗೆ ಹುಡುಕಾಟ ನಡೆಸಿದಾಗ ಆರೋಪಿ ಮಂಚದ ಕೆಳಗೆ ಅವಿತುಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಆತನನ್ನು ಹಿಡಿದು, ಕಳವು ಮಾಡಿದ್ದ 130 ಗ್ರಾಂ ಚಿನ್ನದ ಸಮೇತ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳದ ಚಿತ್ತಿಲಪಲ್ಲಿ ಮೂಲದ ಅಜಯ್ ಎಂದು ಗುರುತಿಸಲಾಗಿದೆ. ಈತ ಯಲಹಂಕ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಸ್ನೇಹಿತರೊಂದಿಗೆ ವಾಸವಿದ್ದು, ಓಲಾ ಮತ್ತು ಉಬರ್ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಕಳ್ಳತನಕ್ಕೂ ಮುನ್ನ ಎರಡು-ಮೂರು ದಿನಗಳಿಂದ ಮನೆಯವರ ಚಲನವಲನಗಳ ಮೇಲೆ ಆರೋಪಿ ನಿಗಾ ಇಟ್ಟಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!