Categories: ಲೇಖನ

ಸಾವು ಗೆದ್ದ ಸಾತ್ವಿಕನ ಮನದಾಳದಿಂದ…….

ಅಮ್ಮ ಮೆಣಸಿನಕಾಯಿ ಬಜ್ಜಿ ಕೊಟ್ಟಿದ್ರು, ಅದನ್ನ ತಿನ್ಕೊಂಡು ಅಲ್ಲಿ ಒಂದು ಕೋಳಿ ಮರಿ ಹೋಗ್ತಾ ಇತ್ತು. ಅದನ್ನು ನೋಡಿ ಆ ಕಡೆ ಹೋಗ್ತಾ ಇದ್ದೆ. ಏನಾಯ್ತೋ ಏನೋ ಬೋರ್ವೆಲ್ ಪೈಪ್ ಒಳಗೆ ಬಿದೋಗ್ಬಿಟ್ಟೆ…….

ಕೆಳಗಡೆಗೆ ಹೋಗಿಬಿಟ್ಟೆ. ಕಾಲು ಮೇಲೆ ತಲೆ ಕೆಳಗೆ. ನಂಗೆ ಭಯ ಆಗ್ಬಿಡ್ತು. ಏನಪ್ಪ ಮಾಡೋದು. ಯಾರು ನೋಡಿಲ್ವೇ ನಾನು ಬಿದ್ದಿರೋದು. ಅಮ್ಮ ಯಾಕೆ ಇನ್ನೂ ಬರಲಿಲ್ಲ, ಚಿಕ್ಕಪ್ಪ ಯಾಕೆ ಬರಲಿಲ್ಲ, ಅಕ್ಕ ಯಾಕೆ ಬರಲಿಲ್ಲ, ಅಪ್ಪ ಬಂದ್ರೆ ಹೊಡಿಬಹುದು, ಏನ್ ಮಾಡೋದು ಈಗ….

ತುಂಬಾ ಭಯ ಆಗ್ತಾ ಇತ್ತು. ಯಾರು ಯಾಕೆ ಬರ್ತಾ ಇಲ್ಲ ಅಂತ ಯೋಚನೆ ಮಾಡ್ತಾ ಇದ್ದೆ. ಅಳು ಬಂತು. ಜೋರಾಗಿ ಅತ್ತುಬಿಟ್ಟೆ‌. ಆಮೇಲೆ ತಲೆ ಕೆಳಗಡೇ ಇದ್ರು ಸ್ವಲ್ಪ ಹೊತ್ತಿಗೆ ನಿದ್ದೆ ಮಾಡಿದೆ. ಎಚ್ಚರ ಆದಾಗ ಹಾಂಗೇ ಇದ್ದೇ. ಈಗ ಭಯ ಇನ್ನೂ ಜಾಸ್ತಿ ಆಯ್ತು. ಗುಮ್ಮ ಬಂದ್ರೆ ಏನ್ಮಾಡೋದು, ಒಬ್ಬನೇ ಇದ್ದೀನಿ, ಅಮ್ಮನೂ ಇಲ್ಲ ಅಂತ…

ಏನು ಮಾಡೋಕೆ ಆಗ್ತಾ ಇಲ್ಲ, ಯಾಕೆ ಯಾರು ನೋಡಿಲ್ವಾ, ಸ್ವಲ್ಪ ಹೊತ್ತು ನಿದ್ದೆ ಮಾಡೋದು, ಸ್ವಲ್ಪ ಹೊತ್ತು ಅಳೋದು, ಹಾಗೆ ಮಲಗೋದು, ಹೊಟ್ಟೆ ಬೇರೆ ಹಸಿವಾಯ್ತು. ಮೊಮ್ಮು ಕೊಡೋರು ಯಾರು ಇರಲಿಲ್ಲ. ಮತ್ತೆ ಜೋರಾಗಿ ಅತ್ತುಬಿಟ್ಟೆ‌. ಅಮ್ಮ ಅಪ್ಪ ಅಂತ ಕೂಗಿದೆ….

ಸ್ವಲ್ಪ ಹೊತ್ತಿನ ನಂತರ ಯಾರೋ ಕಾಲ್ಗೆ ಏನು ಕಟ್ಟಿದಂಗೆ ಆಯ್ತು, ಯಾರು ಇರಬಹುದು, ಯಾಕೆ ನನ್ನ ತಗೋತಾ ಇಲ್ಲ ಅಂತ ಯೋಚನೆ ಮಾಡ್ತಾ ಇದ್ದೆ. ಸ್ವಲ್ಪ ಹೊತ್ತಾದ್ಮೇಲೆ ಅದೇನು ತಣ್ಣಗೆ ಗಾಳಿ ಬಿಟ್ರು, ಹೋ ಯಾರು ಬಂದಿದ್ದಾರೆ ಅನ್ಕೊಂಡೆ. ಈಗ ನನ್ನ ಎಳ್ಕೋತಾರೆ ಅಂದ್ಕೊಂಡೆ ಇಲ್ಲ ಯಾರು ಎಳಕೊಂಡೇ ಇಲ್ಲ ಮತ್ತೆ ಭಯ ಆಯಿತು…….

ಏನೋ ಆಚೆಕಡೆ ಸೌಂಡ್ ಆಗ್ತಾ ಇತ್ತು, ಯಾವುದೋ ಗಾಡಿ ಹೋಗ್ತಾ ಇದ್ದಂಗೆ, ಯಾರೋ ಮಾತಾಡ್ದಂಗೆ, ಓ ಎಲ್ಲಾ ಬಂದಿದ್ದಾರೆ ಅಂತ ಅನ್ಕೊಂಡೆ, ಎಷ್ಟೊತ್ತಾದ್ರೂ ಏನು ಆಗಲಿಲ್ಲ, ಎಷ್ಟೊತ್ ನಿದ್ದೆ ಮಾಡಿದ್ನೋ ಏನೋ ಗೊತ್ತಿಲ್ಲ ಕತ್ತಲು ಹಂಗೇ ಇತ್ತು, ಅಮ್ಮನ ಮೇಲೆ ಅಪ್ಪನ ಮೇಲೆ ಕೋಪ ಬಂತು. ಅಜ್ಜೀನು ಬರ್ಲಿಲ್ಲ. ಎಲ್ಲರೂ ನನ್ನ ಬಿಟ್ಟುಬಿಟ್ಟವ್ರೆ ಅಂತ ಅನ್ನಿಸ್ತು…….

ಅಮ್ಮ ಇಷ್ಟೊತ್ತಾದ್ರೂ ಮಮ್ಮು ತಗೊಂಡು ಬರಲೇ ಇಲ್ಲ ಅಂತ ಕೋಪ ಬರ್ತಾ ಇತ್ತು. ಅಪ್ಪ ನಾನು ಎಲ್ಲಿದ್ದರೂ ಸಾತ್ವಿಕ್ ಅಂತ ಕೂಗಿಕೊಂಡು ಬರಲೇ ಇಲ್ಲ. ಯಾಕೋ ನನಗೂ ಗೊತ್ತಾಗ್ತಿಲ್ಲ. ನಾನೇನಾದ್ರೂ ಜಾಸ್ತಿ ತೀಟೆ ಗಲಾಟೆ ಹಠ ಮಾಡಿ ಅವರು ಕೋಪ ಮಾಡ್ಕೊಂಡವ್ರೋ ಏನೋ ಅಂದ್ಕೊಂಡೆ…..

ಏನೋ ಎಷ್ಟೊತ್ತೋ ಹಾಗೆ ಇದ್ದೆ. ಆವಾಗ ಇದ್ದಕ್ಕಿದ್ದಂಗೆ ಅದು ಯಾರೋ ಅಂಕಲ್ ನನ್ನನ್ನ ಎಳ್ಕೊಂಡು ಕೈಯಲ್ಲಿ ಇಟ್ಕೊಂಡು ಅದೇನೋ ಹಗ್ಗದ ಮೇಲೆ ಹಾಕಿ ಕಟ್ಟಿ ಹೇಳುದ್ರು. ನೋಡುದ್ರೆ ಕತ್ತಲೆಲ್ಲ ಮಾಯ, ಬೆಳಕು ಬಂದ್ಬಿಡ್ತು, ಜನ ಎಲ್ಲಾ ಸುತ್ತ ಇದ್ರೂ ನನಗೆ ಭಯ ಆಗೋಯ್ತು, ಅಳೋಕ್ಕೆ ಶುರು ಮಾಡ್ಬಿಟ್ಟೆ. ಏನಪ್ಪಾ ಏನಾಯ್ತು ನನಗೆ ಇಷ್ಟು ಜನ ಯಾಕ್ ಸೇರಿದ್ದಾರೆ ಅಂತ ಗೊತ್ತಾಗಿಲ್ಲ, ಆಮೇಲೆ ಅಮ್ಮನ್ನ ನೋಡ್ದೇ. ಅಮ್ಮ ಅಲ್ಲೇ ಇದ್ರು. ಬಾಚಿ ತಬ್ಬಿಕೊಂಡ್ರು. ನನಗೆ ಖುಷಿಯಾಗೋಯ್ತು. ಅಪ್ಪ ಓಡಿ ಬಂದು ಎತ್ಕೊಂಡ್ ಬಿಡ್ತು. ಅಪ್ಪ ಅಮ್ಮ ಎಲ್ಲರೂ ಸೇರಿ ಗಾಡಿಯಲ್ಲಿ ಎತ್ಕೊಂಡು ಕರ್ಕೊಂಡು ಹೋದರು….

ಆಸ್ಪತ್ರೆಯಲ್ಲಿ ಎಷ್ಟೊಂದು ಡಾಕ್ಟರ್ ಬಂದು ಏನೇನೋ ಚೆಕ್ ಮಾಡುದ್ರು. ನಂಗೇನು ಆಗೇ ಇಲ್ಲ. ನಾನು ಸುಮ್ಮನೆ ಆಟ ಆಡ್ಕೊಂಡು ಇದ್ದೀನಿ. ಎಲ್ಲರೂ ಬಂದು ತಿಂಡಿ ಬೇಕಾ ಮಗನೇ, ಚಾಕಲೇಟ್ ಬೇಕಾ ಮಗು, ಆರಾಮ್ ಇದ್ಯಾ ಕಂದ, ಅಂತ ಜಾಸ್ತಿ ಪ್ರೀತಿ ಮಾಡ್ತಾ ಇದ್ದಾರೆ. ನನಗೂ ಖುಷಿಯೋ ಖುಷಿ……

ಅದು ಎರಡು ವರ್ಷದ ಪುಟ್ಟ ಮಗುವಾಗಿದ್ದರಿಂದಾಗಿ ಅದಕ್ಕೆ ಸಾವಿನ ಭಯ ಕಾಡಲಿಲ್ಲ. ಭವಿಷ್ಯದ ಭಯ ನೆನಪಾಗಲಿಲ್ಲ. ಸಂಬಂಧಗಳು, ಆಸ್ತಿ ಅಂತಸ್ತುಗಳು, ಅಧಿಕಾರಗಳ ಮೋಹವಿರಲಿಲ್ಲ. ಒಂದು ವೇಳೆ ನಮ್ಮಂತ ದೊಡ್ಡವರಾಗಿದ್ದರೆ ಅವರ ಈ ಪರಿಸ್ಥಿತಿಗೆ ಬಿಪಿ ಶುಗರ್ ಎಲ್ಲವೂ ಒಮ್ಮೆಲೆ ಹೆಚ್ಚಾಗಿ ಏನೇನೋ ಇಲ್ಲಸಲ್ಲದ ಊಹೆಗಳು ಬಂದು ಅಲ್ಲಿಯೇ ಸಾಯುವ ಸಾಧ್ಯತೆಗಳಿದ್ದವು. ಆದರೆ ಮುಗ್ಧ ಮಗುವಿಗೆ ಆ ಯಾವ ಭಾವನೆಗಳು ಇರುವುದಿಲ್ಲ. ಆದ್ದರಿಂದಲೇ ಸುಮಾರು 20 ಗಂಟೆಗಳ ದೀರ್ಘಕಾಲ ತಲೆಕೆಳಗಾಗಿ ಇದ್ದರೂ ಮಗು ಆರೋಗ್ಯವಾಗಿ ಹೊರ ಬಂದಿದೆ ಮತ್ತು ಯಾವುದೇ ಶಾಕ್ ಇಲ್ಲದೆ ಸಹಜವಾಗಿಯೇ ವರ್ತಿಸುತ್ತಿದೆ. ನಾವಾಗಿದ್ದರೆ ಇದೊಂದು ಪುನರ್ಜನ್ಮ ಎಂದು ಅತಿಯಾದ ಭಾವನೆಗಳಿಗೆ ಒಳಗಾಗಿ ಸಿಲುಕುತ್ತಿದ್ದೆವಲ್ಲದೆ ಚೇತರಿಸಿಕೊಳ್ಳುವುದೇ ಕಷ್ಟವಾಗುತ್ತಿತ್ತು. ಮಾಧ್ಯಮಗಳು ನಮ್ಮನ್ನು ಮತ್ತಷ್ಟು ಹಿಂಸಿಸುತ್ತಿದ್ದವು……
**************************
ಮತ್ತೆ ಮಗುವಾಗೋಣ…..
**************************

ಬೆಂಗಳೂರು ಜಲ ಮಂಡಳಿಯ ಅತಿರೇಕ….

ಇತ್ತೀಚೆಗೆ ಬೆಂಗಳೂರು ಜಲ ಮಂಡಳಿ ಅಧ್ಯಕ್ಷರು ನೀರಿನ ದುರ್ಬಳಕೆ ತಡೆಯಲು ಒಂದು ಪತ್ರಿಕಾ ಹೇಳಿಕೆಯನ್ನು ನೀಡಿ, ಯಾರು ವಾಹನಗಳನ್ನು ನೀರಿನಲ್ಲಿ ತೊಳೆಯುತ್ತಾರೋ ಅವರಿಗೆ 5000 ದಂಡ ವಿಧಿಸಲಾಗುವುದು ಎಂದು ಘೋಷಿಸಿದ್ದಾರೆ. ಬಹುಶಃ ಅದು ಕಾನೂನು ರೂಪವನ್ನು ಪಡೆದಿರಬಹುದು…..

ಇಲ್ಲಿ ಮುಖ್ಯವಾಗಿ ನಾವು ಚರ್ಚಿಸ ಬೇಕಾಗಿರುವುದು ದಂಡಗಳೇ ಎಲ್ಲಕ್ಕೂ ಪರಿಹಾರವಲ್ಲ ಅದೊಂದು ಸುಲಭ ತಂತ್ರಗಾರಿಕೆಯಾಗುತ್ತದೆಯಷ್ಟೇ. ನೀರಿನ ನಿರ್ವಹಣೆಯ ಅಸಮರ್ಪಕತೆ, ನಗರ ಬೆಳವಣಿಗೆಯ ತಡೆಗಟ್ಟುವಿಕೆ, ಎಲ್ಲವನ್ನು ನಿರ್ಲಕ್ಷಿಸಿ ಸಾಮಾನ್ಯ ಜನರಿಗೆ ದಂಡ ಹಾಕುವುದೇ ಒಂದು ಮಹತ್ಕಾರ್ಯ ಎಂದು ನಮ್ಮ ಜನರನ್ನೇ ಶಿಕ್ಷಿಸುವುದು ಅಷ್ಟು ಒಳ್ಳೆಯ ಲಕ್ಷಣವಲ್ಲ….

ಶಿಕ್ಷೆಗಿಂತ ಶಿಕ್ಷಣ ಮುಖ್ಯವಾಗಬೇಕು ಎಂಬುದು ನಮ್ಮೆಲ್ಲರ ಆಶಯ ಮತ್ತು ಅದು ಈ ನೆಲಕ್ಕೆ ಹೆಚ್ಚು ಹೊಂದಿಕೆಯಾಗುವ ವಿಷಯ. ಯಾಕೆಂದರೆ ನಾವು ಒಂದಷ್ಟು ತಪ್ಪು, ಸೋಮಾರಿತನ ಎಲ್ಲ ಇದ್ದರೂ ಕೂಡ ಹೆಚ್ಚು ಸಭ್ಯತೆಯನ್ನು, ಭಯ ಮನಸ್ಥಿತಿಯನ್ನು ಹೊಂದಿರುವವರು. ಈ ಯುಗಾದಿ – ರಂಜಾನ್ ಹಬ್ಬದ ಸಂದರ್ಭದಲ್ಲಿ ಈ ರೀತಿಯ ಕಾನೂನು ಜನರನ್ನು ಬೆದರಿಸುವಂತಿದೆ. ಅಲ್ಲದೇ 5000 ಒಂದು ದೊಡ್ಡ ಮೊತ್ತ. ಅಲ್ಲದೇ ನೀರನ್ನು ಹೆಚ್ಚು ಖರ್ಚು ಮಾಡಿದ್ದಾರೆ ಎಂದು ನಿರ್ಧರಿಸುವ ಮಾನದಂಡಗಳು ಸಹ ತುಂಬಾ ಕಷ್ಟವಾಗುತ್ತದೆ…..

ಎಷ್ಟೋ ಜನರಿಗೆ ಈ ನಿಯಮ ಇನ್ನೂ ತಿಳಿದುಬಂದಿಲ್ಲ. ಜನರು ಸಹ ಅಷ್ಟು ದೊಡ್ಡ ಮೊತ್ತದ ದಂಡವನ್ನು ವಿಧಿಸಿದಾಗ ರೊಚ್ಚಿಗೇಳುವ ಸಾಧ್ಯತೆಯೂ ಇದೆ. ಜಲಮಂಡಳಿಯ ಆತ್ಮೀಯ ಗೆಳೆಯರು ಕರೆ ಮಾಡಿ ಒಂದು ವೇಳೆ ನಾವು ಇಷ್ಟು ದೊಡ್ಡ ಮೊತ್ತವನ್ನು ದಂಡವಾಗಿ ಹಾಕಿದರೆ ಜನ ನಮ್ಮ ಮೇಲೆ ಹಲ್ಲೆ ಮಾಡುವ ಸಾಧ್ಯತೆಗಳಿವೆ. ಈ ಚುನಾವಣಾ ಸಂದರ್ಭದಲ್ಲಿ ಪೋಲೀಸರ ನೆರವು ಸಹ ಸರಿಯಾಗಿ ಸಿಗುವುದಿಲ್ಲ. ಆದ್ದರಿಂದ ಇದನ್ನು ಮುಂದೂಡಬೇಕು ಅಥವಾ ಬೇರೆ ರೂಪದಲ್ಲಿ ಜನರಿಗೆ ಎಚ್ಚರಿಸುವ ಕೆಲಸ ಆಗಬೇಕು. ಇಲ್ಲದಿದ್ದರೆ ಈ ಸರ್ಕಾರಗಳು ಜನರನ್ನು ನಿಯಂತ್ರಿಸಲು ಶಿಕ್ಷೆ – ದಂಡ ಇವುಗಳನ್ನೇ ಅಸ್ತ್ರಗಳನ್ನಾಗಿ ಮಾಡಿಕೊಳ್ಳುತ್ತಾರೆ. ಆದರೆ ಅದೇ ಸಮಯದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಹೇಳುತ್ತಾ, ಅವರನ್ನು ಶೋಷಿಸುತ್ತಾ, ತಾವು ಮಾತ್ರ ಜನರಿಗೆ ಕೈಮುಗಿದು ನಂತರ ಅವರ ಕಾಲು ಎಳೆಯುತ್ತಾರೆ. ಇದು ಜನರಿಂದಲೇ ಆಯ್ಕೆಯಾಗುವ ಸರ್ಕಾರಗಳ ಧೋರಣೆ. ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೈಮುಗಿಯುವ ಇವರು ಶಿಕ್ಷಾರ್ಹ ಕಾನೂನು ರೂಪಿಸುವಾಗ ಸ್ವಲ್ಪ ಸಂವೇದನೆ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳದಿದ್ದರೆ ತಪ್ಪಾಗುತ್ತದೆಯಲ್ಲವೇ…..

ಸ್ವಲ್ಪ ಯೋಚಿಸಿ. ಅದರಿಂದ ನೀರಿನ ಉಳಿತಾಯ ಆಗುವ ಸಾಧ್ಯತೆ ಇರಬಹುದು. ಆದರೆ ಅದನ್ನು ತಡೆಯುವ ವಿಧಾನ ತುಂಬಾ ಕಠಿಣವಾಗುತ್ತದೆ. ನಿಯಮಗಳು ಸಾಧ್ಯವಾದಷ್ಟು ಸರಳವಾಗಿರಲಿ ಎಂಬ ಕಳಕಳಿಯ ಮನವಿ….
***”*********************

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

‘ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ’…

ಯುದ್ಧದ ವಿರುದ್ಧವೇ ಯುದ್ಧ ಸಾರಬೇಕಿದೆ, " War against war... " ಅಸಹಾಯಕರ ನೋವಿನ ಧ್ವನಿ,... ದಯವಿಟ್ಟು ಬನ್ನಿ ಭಾಗವಹಿಸಿ......…

1 hour ago

ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಸ್ನೇಹಿತರು ಸಾವು

ಇಬ್ಬರು ಸ್ನೇಹಿತರು ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ರಾಮಸಮುದ್ರ ಕೆರೆಯಲ್ಲಿ…

3 hours ago

ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಒಂದೇ ದಿನ ಇಬ್ಬರು ಯುವಕರು ಆತ್ಮಹತ್ಯೆ….!

ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…

16 hours ago

ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ- ಸಿಎಂ ಸಿದ್ದರಾಮಯ್ಯ

ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ…

16 hours ago

ತೂಬಗೆರೆಯಲ್ಲಿಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ: ಗ್ರಾಮೀಣ ಜನರ ಆರೋಗ್ಯ ಬಹಳ ಮುಖ್ಯ- ಡಾ. ಜ್ಞಾನೇಶ್ವರಿ

ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಅತ್ಯಂತ ಅವಶ್ಯಕ. ಇಂತಹ ಶಿಬಿರಗಳು ಕಾಲಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ…

17 hours ago

ಜಾತ್ರೆಯಲ್ಲಿ ವ್ಯಕ್ತಿಯ ಭೀಕರ ಕೊಲೆ

ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…

23 hours ago