ಸಹೋದ್ಯೋಗಿಗಳಿಗೆ ಸುದೀರ್ಘ ಪತ್ರ ಬರೆದ‌ ನೂತನ ಪೊಲೀಸ್‌ ಮಹಾನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ ಸಲೀಂ

ರಾಜ್ಯದ ನೂತನ ಪೊಲೀಸ್‌ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ. ಸಲೀಂ ಅವರು ಇಲಾಖೆಯ ಸುಧಾರಣೆ, ಕ್ರಿಯಾಶೀಲತೆ, ಸಾಮರ್ಥ್ಯ ವೃದ್ಧಿ ಸಂಬಂಧ ಸಹೋದ್ಯೋಗಿಗಳಿಗೆ ಸುದೀರ್ಘ ಪತ್ರ ಬರೆದು ಬೆಂಬಲ ಕೋರಿದ್ದಾರೆ. ಶಾಂತಿ, ಸೌಹಾರ್ದತೆ ಕಾಪಾಡಲು ಅವರು ಕರೆ ನೀಡಿದ್ದಾರೆ.

ಸಮಾಜಸ್ನೇಹಿಯಾಗಿ ಇಲಾಖೆಯನ್ನು ಆಧುನೀಕರಣಗೊಳಿಸಲು ಸೂಚಿಸಿದ್ದಾರೆ. ಕಿರಿಯ ಅಧಿಕಾರಿಗಳಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ಎಲ್ಲರೂ ಬೆಂಬಲ ನೀಡಬೇಕೆಂದು ಅವರು ಕೋರಿದ್ದಾರೆ.

ಸಲೀಂ ಅವರು ಕಾನೂನು ಸುವ್ಯವಸ್ಥೆ ಕಾಪಾಡುವುದು ಮತ್ತು ಅಪರಾಧ ತಡೆಗೆ ಕ್ರಮಗಳನ್ನು ಸೂಚಿಸಿದ್ದಾರೆ. ತಂತ್ರಜ್ಞಾನ ಯುಗದಲ್ಲಿ ಸೈಬರ್ ಅಪರಾಧ ತಡೆಗೆ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.

ಈ ಗುರಿ ಸಾಧನೆಗೆ, ಪೊಲೀಸ್‌ ಇಲಾಖೆಯ ಅಡಿಪಾಯವಾಗಿರುವ ಕಿರಿಯ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಹಿಡಿದು ಹಿರಿಯ ಪೊಲೀಸ್‌ ಅಧಿಕಾರಿಗಳವರೆಗಿನ ಎಲ್ಲಾ ಸಹೋದ್ಯೋಗಿಗಳಿಂದ ಸದಾ ಬೆಂಬಲ ಅಪೇಕ್ಷಿಸುತ್ತೇನೆ. ಸಮಾಜದಲ್ಲಿ ನೆಮ್ಮದಿ ಹೆಚ್ಚಿಸುವ, ಶಾಂತಿ ಸ್ಥಾಪಿಸುವ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ, ದುರ್ಬಲ ವರ್ಗದವರು ಮತ್ತು ನೊಂದವರಿಗೆ ನ್ಯಾಯ ಕೊಡಿಸುವ ವಿಶೇಷ ಅವಕಾಶ ಮತ್ತು ಜವಾಬ್ದಾರಿ ಪೊಲೀಸರ ಮೇಲಿದೆ ಎಂಬುದನ್ನು ಮರೆಯಕೂಡದು. ಈ ನಾಡು ಮತ್ತು ನಾಡಿನ ಜನತೆಯ ಒಳಿತಿಗಾಗಿ ಎಲ್ಲರೂ ಶಕ್ತಿ ಮೀರಿ ಪಾರದರ್ಶಕತೆ, ವೃತ್ತಿಪರತೆಯಿಂದ ಸೇವೆ ಸಲ್ಲಿಸಿ ಕರ್ನಾಟಕವನ್ನು ದೇಶದಲ್ಲೇ ಅತಿ ಹೆಚ್ಚು ಸುರಕ್ಷಿತ ವಾತಾವರಣವಿರುವ ಹಾಗೂ ಅತ್ಯುತ್ತಮ ವಾಸ ಯೋಗ್ಯ ತಾಣವಾಗಿ ಪರಿವರ್ತಿಸಲು ಪಣ ತೊಡೋಣ ಎಂದು ಕಿವಿಮಾತು ಹೇಳಿದ್ದಾರೆ.

ಪತ್ರದಲ್ಲಿನ ಅಂಶಗಳು…

* ಕಾನೂನು ಸುವ್ಯವಸ್ಥೆ, ಸೌಹಾರ್ದತೆ ಕಾಪಾಡುವುದು, ಅಹಿತಕರ ಘಟನೆಗಳಿಗೆ ಆಸ್ಪದವಿಲ್ಲದಂತೆ ಪರಿಣಾಮಕಾರಿ ಹಾಗೂ ಸಮಯೋಚಿತ ಕ್ರಮಗಳನ್ನು ಕೈಗೊಳ್ಳುವುದು. ಕಾನೂನು ಸುವ್ಯವಸ್ಥೆ ಮತ್ತು ಸೌಹಾರ್ದತೆಗೆ ಅಪಾಯ ತಂದೊಡ್ಡಬಹುದಾದ ವ್ಯಕ್ತಿಗಳ ಹಾಗೂ ಶಕ್ತಿಗಳ ವಿರುದ್ಧ ಅವಶ್ಯಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು.

* ಅಪರಾಧಗಳನ್ನು ವ್ಯವಸ್ಥಿತವಾಗಿ ತಡೆಯುವ ಕ್ರಮ ಕೈಗೊಳ್ಳುವುದು ಮತ್ತು ಅಪರಾಧ ಪ್ರಕರಣಗಳ ಸಮರ್ಥ ಹಾಗೂ ನಿಖರ ತನಿಖೆಯನ್ನು ನಡೆಸುವ ಮೂಲಕ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದನ್ನು ತಡೆದು, ನೊಂದವರಿಗೆ ಶೀಘ್ರ ನ್ಯಾಯ ದೊರಕಿಸಿಕೊಡಲು ಅನುವಾಗುವುದು.

* ಈವರೆಗೆ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಅನುಸರಿಸುತ್ತಿದ್ದ ಅಪರಾಧಿ ಕೇಂದ್ರಿತ ವ್ಯವಸ್ಥೆಯನ್ನು ಸಂತ್ರಸ್ತ ಕೇಂದ್ರಿತ ವ್ಯವಸ್ಥೆಯ ಪಥವಾಗಿ ಬದಲಿಸಿಕೊಳ್ಳುವುದು. ಇಂತಹ ಕ್ರಮದಿಂದ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುವುದರ ಜತೆಗೆ ಸಂತ್ರಸ್ತರಿಗೆ ನ್ಯಾಯ, ಅರ್ಹ ಸವಲತ್ತು ದೊರಕಿಸಿಕೊಡಲು ಮತ್ತು ಅವರನ್ನು ಪುನಶ್ಚೇತನಗೊಳಿಸಲು ಪ್ರಯತ್ನಿಸಬಹುದಾಗಿದೆ.

* ಪೊಲೀಸ್‌ ಅಧಿಕಾರಿಗಳು ಪ್ರಾಮಾಣಿಕತೆಯಲ್ಲಿ ರಾಜಿಯಾಗಬಾರದು. ಸಹೋದ್ಯೋಗಿಗಳಿಂದ ಎಲ್ಲರ ನಿರೀಕ್ಷೆಯೂ ಇದೇ ಆಗಿದೆ. ತಾವೆಲ್ಲರೂ ಸದಾ ಪ್ರಾಮಾಣಿಕತೆಗೆ ಮೊದಲ ಆದ್ಯತೆ ನೀಡುವಿರಿ ಎಂಬ ವಿಶ್ವಾಸವಿದೆ. ಪ್ರತಿಯೊಂದು ಅಧಿಕೃತ ಪ್ರಕ್ರಿಯೆಗಳಲ್ಲೂ ಪಾರದರ್ಶಕತೆಗೆ ಹೆಚ್ಚು ಒತ್ತು ನೀಡುವುದರಿಂದ ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆ ಮೂಡುತ್ತದೆ ಮತ್ತು ದುರ್ಬಲ ವರ್ಗ, ಆರ್ಥಿಕವಾಗಿ ಹಿಂದುಳಿದವರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ. ಇಂತಹ ಪ್ರಾಮಾಣಿಕತೆಯ ಸಿದ್ಧಾಂತಗಳು ನೈತಿಕತೆ ಮತ್ತು ಆತ್ಮತೃಪ್ತಿಯನ್ನು ದ್ವಿಗುಣಗೊಳಿಸುತ್ತವೆ.

* ಉತ್ತಮ ಮಾನವ ಸಂಪನ್ಮೂಲವೇ ಪೊಲೀಸ್‌ ಇಲಾಖೆಯ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಸಹೋದ್ಯೋಗಿಗಳು ಸದೃಢರಾಗಿರಲು ಹಾಗೂ ಆರೋಗ್ಯ ಸ್ಥಿತಿ ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳುವುದು. ನಿಯಮಿತ ವ್ಯಾಯಾಮ, ಕೆಲಸದ ಒತ್ತಡ ನಿವಾರಣೆ, ದೀರ್ಘಕಾಲದ ಕರ್ತವ್ಯಗಳ ವಿಭಜನೆ, ಉತ್ತಮ ಕರ್ತವ್ಯದ ವಾತಾವರಣ ನಿರ್ಮಾಣ, ನೈತಿಕ ಉತ್ಸಾಹ ಹೆಚ್ಚಿಸುವ ಕ್ರಮಗಳು, ವಿನಾಕಾರಣ ರಜೆ ನಿರಾಕರಿಸದಿರುವುದು, ಉತ್ತಮ ಸೇವೆ ಗುರುತಿಸಿ ಪುರಸ್ಕರಿಸುವುದರಿಂದ ಅವರು ಪ್ರೇರೇಪಣೆಗೊಂಡು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ. ಸಿಬ್ಬಂದಿಯ ಕುಟುಂಬದ ಕ್ಷೇಮಾಭಿವೃದ್ಧಿಗೆ ಒತ್ತು ನೀಡುವ ಆಚರಣೆಗಳನ್ನು ಹಿರಿಯ ಅಧಿಕಾರಿಗಳು ಆದ್ಯತೆ ಎಂದು ಪರಿಗಣಿಸಬೇಕು.

* ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಪೊಲೀಸರ ಹೊಣೆ ಮತ್ತು ಪ್ರಥಮ ಆದ್ಯತೆ. ಇದಕ್ಕಾಗಿ ಚಾಲ್ತಿಯಲ್ಲಿರುವ ಕಾನೂನಿನ ಪರಿಣಾಮಕಾರಿ ಜಾರಿ, ಅಪರಾಧಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಹಾಗೂ ಸುರಕ್ಷತೆ ವಾತಾವರಣ ನಿರ್ಮಾಣಕ್ಕಾಗಿ ಸಾರ್ವಜನಿಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

* ನಾಡಿನ ಯುವಜನತೆಗೆ ಮಾರಕವಾಗಿರುವ ಮಾದಕವಸ್ತುಗಳ ವಿರುದ್ಧದ ಸಮರ ನಿರಂತರವಾಗಿರಬೇಕು. ರಾಜ್ಯದಲ್ಲಿ ಮಾದಕ ವಸ್ತುಗಳ ಉತ್ಪಾದನೆ, ಸಾಗಣೆ ಹಾಗೂ ಮಾರಾಟಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದರೊಂದಿಗೆ ಮಾದಕ ದ್ರವ್ಯದ ವಿರುದ್ಧ ಆಂದೋಲನಗಳು ಹಾಗೂ ಮದ್ಯ ವ್ಯಸನಕ್ಕೆ ಬಲಿಯಾದ ವ್ಯಕ್ತಿಗಳ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುವುದು.

* ಜೂಜಾಟ, ಮಟ್ಕಾ, ವೇಶ್ಯಾವಾಟಿಕೆ ಹಾಗೂ ಎಲ್ಲಾರೀತಿಯ ಅನೈತಿಕ ಚಟುವಟಿಕೆಗಳು ನಾಡಿನ ಯಾವುದೇ ಸ್ಥಳದಲ್ಲಿ ನಡೆಯದಂತೆ ಹದ್ದಿನ ಕಣ್ಣಿಡುವುದು. ರೌಡಿ, ಸಮಾಜಘಾತುಕ ಶಕ್ತಿಗಳು ಹಾಗೂ ಇತರ ಸಂಘಟಿತ ಅಪರಾಧಗಳನ್ನು ತಡೆಯಲು ಕಾನೂನುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು.

* ಇಂದಿನ ತಂತ್ರಜ್ಞಾನ ಯುಗದಲ್ಲಿ ಭೌತಿಕ ಅಪರಾಧಗಳನ್ನು ಹಿಮ್ಮೆಟ್ಟಿಸಿ, ಸೈಬರ್‌ ಅಪರಾಧಗಳ ನಾಗಾಲೋಟವನ್ನು ಸಮರ್ಥವಾಗಿ ತಡೆದು, ವಂಚಿತ ಹಣವು ಸಂತ್ರಸ್ತರಿಗೆ ಶೀಘ್ರವಾಗಿ ತಲುಪುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು.

* ರಸ್ತೆಗಳಲ್ಲಿಉತ್ತಮ ಸಂಚಾರ ನಿರ್ವಹಣೆ ಜಾರಿ ಹಾಗೂ ರಸ್ತೆ ಅಪಘಾತಗಳ ಪರಿಣಾಮಕಾರಿ ನಿಯಂತ್ರಣದಿಂದ ಅಮಾಯಕರ ಜೀವ ಉಳಿಸುವ ಹೊಣೆ ಪೊಲೀಸರ ಮೇಲಿದೆ ಎಂಬುದನ್ನು ಅರಿಯಬೇಕು.

Ramesh Babu

Journalist

Recent Posts

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಸಾಧನೆ

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಮುನ್ನ ( ಏಪ್ರಿಲ್ ‌14 ) ಅವರ ವ್ಯಕ್ತಿತ್ವ ಮತ್ತು…

9 minutes ago

Документ_12

In der heutigen akademischen Welt steht die Qualität der schriftlichen Arbeiten im Mittelpunkt des Interesses.…

4 hours ago

‘ಆಸರೆ’ ಯೋಜನೆ: ಒಂಟಿ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಭದ್ರತೆ, ಆರೋಗ್ಯ ನೆರವು ಹಾಗೂ ಯೋಗಕ್ಷೇಮ ವಿಚಾರಣೆ

'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…

12 hours ago

ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾದದ್ದು- ಸಿಎಂ ಸಿದ್ದರಾಮಯ್ಯ

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದ್ದಾರೆ..…

15 hours ago

ದಲಿತರ ಕಾಲೋನಿಗಿಲ್ಲ ಚರಂಡಿ ಭಾಗ್ಯ: ರಸ್ತೆ‌ ಮೇಲೆಯೇ ಹರಿಯುವ ಚರಂಡಿ ನೀರು: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಹಿಡಿ ಶಾಪ

ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ‌ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…

18 hours ago

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪ.ಪಂ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರಿಂದ ಹಲ್ಲೆ: ದೂರು ದಾಖಲು

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ‌ಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…

19 hours ago