ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇಡುವ ಠೇವಣಿ ಹಣವನ್ನು ಸಹಕಾರಿ ಬ್ಯಾಂಕುಗಳಲ್ಲಿಯೇ ತೊಡಗಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು. ಸಹಕಾರಿ ಬ್ಯಾಂಕುಗಳು ಸುಸ್ಥಿರವಾಗಿರಬೇಕು. ಸುಸ್ಥಿರವಾಗಿದ್ದರೆ ಮಾತ್ರ ಅವು ರೈತರಿಗೆ ಸಾಲ ನೀಡಲು ಸಾಧ್ಯ. ರೈತರಿಗೆ ವ್ಯವಸಾಯ ಮಾಡಲು ಸಕಾಲದಲ್ಲಿ ಸಾಲ ಸಿಕ್ಕರೆ ವ್ಯವಸಾಯ ಮಾಡಲು ಅನುಕೂಲವಾಗಿ ಉತ್ಪಾದನೆಯೂ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಖಿಲ ಭಾರತ ಸಹಕಾರಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಸರ್ಕಾರ ಒಂದು ವರ್ಷಕ್ಕೆ 1,200 ಕೋಟಿ ರೂ.ಗಳನ್ನು ಕ್ಷೀರ ಭಾಗ್ಯ ಕಾರ್ಯಕ್ರಮಕ್ಕೆ ಖರ್ಚು ಮಾಡುತ್ತಿದೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಹಕಾರ ಸಂಘಗಳಲ್ಲಿ ರೈತರು ಪಡೆದ 50 ಸಾವಿರದವರಗೆ ಸಂಪೂರ್ಣ ಸಾಲ ಮನ್ನಾ ಮಾಡಲಾಯಿತು. ಹೀಗೆ ಮನ್ನಾ ಮಾಡದ್ದರಿಂದ ಸಹಕಾರಿ ಸಂಘಗಳು ಹಾಗೂ ಸಹಕಾರ ಬ್ಯಾಂಕುಗಳಿಗೆ ಶಕ್ತಿ ಬರಲು ಸಾಧ್ಯವಾಯಿತು ಎಂದರು.
ನಮ್ಮ ಸರ್ಕಾರ ಬಜೆಟ್ ಮಂಡಿಸಿದಾಗ ಜೀರೋ ಪರ್ಸೆಂಟ್ ಸಾಲವನ್ನು 3 ರಿಂದ 5 ಲಕ್ಷದವರೆಗೆ ಏರಿಸುವ ಕೆಲಸ ಮಾಡಿದೆ. ರೈತರಿಗೆ ಸಾಲ ನೀಡಬೇಕೆಂದು ನಬಾರ್ಡ್ ಹಾಗೂ ಪ್ರಧಾನಮಂತ್ರಿಗಳಿಗೆ ಕೂಡಲೇ ಪತ್ರ ಬರೆಯುವ ಕೆಲಸ ಮಾಡುತ್ತೇವೆ. ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ 3 ಲಕ್ಷದವರೆಗೆ ಶೇ. 3 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು. ಈಗ ಅದನ್ನು ಬಡ್ಡಿ ರಹಿತವಾಗಿ 5 ಲಕ್ಷದವರೆಗೆ ನೀಡುವ ಕೆಲಸ ಮಾಡಲಾಗಿದೆ. ಶೇ 3 ರಷ್ಟು ಬಡ್ಡಿಯನ್ನು 15 ಲಕ್ಷ ಆಗುವವರೆಗೆ ಮಾತ್ರ ನೀಡಬೇಕು ಎಂದು ತಿಳಿಸಿದರು.
ಯಾವುದೇ ಬ್ಯಾಂಕಿನಲ್ಲಿ ಎಲ್ಲರೂ ನಿಸ್ವಾರ್ಥವಾಗಿ ಕೆಲಸ ಮಾಡಿದರೆ ಮಾತ್ರ ಅದು ಲಾಭದಾಯಕವಾಗಿ ನಡೆಯುತ್ತದೆ. ಸ್ವಾರ್ಥ ಬಿಟ್ಟು ಸೇವೆ ಮಾಡುವ ಕ್ಷೇತ್ರವಿದು. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ನಾಯಕತ್ವ ಬೆಳೆಸಿಕೊಳ್ಳುವ ಅವಕಾಶ ದೊರಯುತ್ತದೆ. ವಿಜಯಪುರ ಡಿಸಿಸಿ ಬ್ಯಾಂಕ್ ಪ್ರಾರಂಭವಾಗಿ 105 ವರ್ಷಗಳಾಗಿರುವ ಸ್ಮರಾಣಾರ್ಥ 15-16 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ಕಟ್ಟಿರುವುದರ ಅರ್ಥ ಬ್ಯಾಂಕು ಆರ್ಥಿಕವಾಗಿ ಸುಸ್ಥಿರವಾಗಿರುವುದರ ದ್ಯೋತಕವಾಗಿದೆ ಎಂದು ಹೇಳಿದರು.
ಸಹಕಾರಿ ತತ್ವದ ಮೇಲೆ ಜಾಗೃತಿ, ಸಮಾಜದಲ್ಲಿನ ಬಡತನ, ಅಸಮಾನತೆ ಹೋಗಲಾಡಿಸುವ ಪ್ರಯತ್ನ ಮಾಡಬೇಕು. ನಮ್ಮ ಸರ್ಕಾರ ಅಸಮಾನತೆ ತೊಲಗಿಸಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಶಕ್ತಿ ಯೋಜನೆಯಡಿ 100 ಕೋಟಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಸಣ್ಣ ಪುಟ್ಟ ದೋಷಗಳ ಹೊರತಾಗಿಯೂ ನೂರಕ್ಕೆ 90 ಭಾಗ ಬಡವರಿಗೆ, ಮಹಿಳೆಯರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಈ ಕಾರ್ಯಕ್ರಮ ರೂಪಿಸಿ ಆರ್ಥಿಕ ಶಕ್ತಿಯನ್ನು ತುಂಬಲಾಗಿದೆ. ಸಹಕಾರ ಕ್ಷೇತ್ರ ಹೇಗೆ ಜಾತಿ ಧರ್ಮಗಳಿಂದ ಹೊರತಾಗಿದೆಯೋ ಅದೇ ರೀತಿ ನಮ್ಮ ಕಾರ್ಯಕ್ರಮಗಳು ಎಲ್ಲಾ ಜಾರಿ ಧರ್ಮಗಳ ಜನರಿಗೆ, ಮೇಲ್ವರ್ಗದ ಬಡವರಿಗೂ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ ಎಂದರು.
ಸ್ವಾತಂತ್ರ್ಯಪೂರ್ವದಿಂದಲೂ ಸಹಕಾರಿ ಕ್ಷೇತ್ರ ಬೆಳೆಯುತ್ತಾ ಬಂದಿದೆ. ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರು ಸಹಕಾರ ಸಂಘ ಪ್ರಾರಂಭಿಸಿದರು, ಇಂದು ರಾಜ್ಯದಲ್ಲಿ 45,600 ಸಹಕಾರ ಸಂಘಗಳಿದ್ದು, ಭಾರತದಲ್ಲಿ ಸುಮಾರು 8.50 ಲಕ್ಷ ಸಹಕಾರ ಸಂಘಗಳಲ್ಲಿ 31 ಕೋಟಿ ಸದಸ್ಯರಿದ್ದಾರೆ. ಸಹಕಾರಿ ಕ್ಷೇತ್ರದ ದೇಶದಾದ್ಯಂತ ವ್ಯಾಪಕವಾಗಿ ಬೆಳೆದಿರುವುದಕ್ಕೆ ಇದೇ ಸಾಕ್ಷಿ. ಈ ಬೆಳವಣಿಗೆ ದೇಶದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯನ್ನೂ ಬಿಂಬಿಸುತ್ತದೆ ಎಂದು ಹೇಳಿದರು.
ಸಹಕಾರಿ ರಂಗ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ರಂಗ ವ್ಯಾಪಿಸಿಕೊಂಡಿದೆ. ಸಹಕಾರಿ ರಂಗದ ಅಭಿವೃದ್ಧಿ, ರಾಜ್ಯ ಮತ್ತು ದೇಶದ ಜಿಡಿಪಿಯ ಬೆಳವಣಿಗೆಯ ಮೇಲೂ ಪರಿಣಾಮವನ್ನು ಬೀರುತ್ತದೆ. ದೇಶದ ಆಂತರಿಕ ಕೊಡುಗೆಯ ಹೆಚ್ಚಳದಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ದೇಶದಲ್ಲಿ ಅನೇಕ ಜಾತಿ ಧರ್ಮಗಳಿವೆ. ಆದರೆ ಸಹಕಾರಿ ರಂಗಕ್ಕೆ ಯಾವ ಜಾತಿ ಧರ್ಮಗಳ ಸೋಂಕು ಇಲ್ಲ. ಜಾತಿ ರಹಿತವಾದ ಧರ್ಮರಹಿತವಾದ ಕ್ಷೇತ್ರವೆಂದರೆ ಸಹಕಾರಿ ಕ್ಷೇತ್ರ ಎಂದರು.
ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಸಹಕಾರ ಸಂಘದ ಸದಸ್ಯರಾಗಲು ಸರ್ಕಾರವೇ ಜನರ ಪರವಾಗಿ ಶೇರು ಮೊತ್ತವನ್ನು ಭರಿಸಲಾಗಿತ್ತು. ಈ ಕಾರ್ಯಕ್ರಮ ಇಂದಿಗೂ ಮುಂದುವರೆಯುತ್ತಿದೆ. ಎಲ್ಲ ದಲಿತರು ಹಾಗೂ ಮಹಿಳೆಯರು ಸಹಕಾರ ಸಂಘದ ಸದಸ್ಯರಾಗಬೇಕು. ಸರ್ಕಾರದ ಸಹಾಯದಿಂದಾಗಿ ದಲಿತರು ಹಾಗೂ ಮಹಿಳೆಯರು ಹಾಲು ಸಹಕಾರ ಸಂಘದಲ್ಲಿ ಸದಸ್ಯರಾಗುತ್ತಿದ್ದಾರೆ. ನಮ್ಮ ಸರ್ಕಾರ ಹಾಲಿನ ಪ್ರತಿ ಲೀ.ಗೆ ರೂ. 5 ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈಗ ಪ್ರೋತ್ಸಾಹ ಧನವನ್ನು ಪ್ರತಿ ಲೀ.ಗೆ 5 ರೂ. ನಿಂದ ಹಿಡಿದು 8 ರೂ.ಗೆ ಹೆಚ್ಚಳ ಮಾಡಿ ನೀಡಲಾಗುತ್ತಿದ್ದು, ಈ ಮೊತ್ತ ರೈತರಿಗೆ ನೇರವಾಗಿ ತಲುಪುತ್ತಿದೆ ಎಂದಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘದವರು ಹಾಲು ಉತ್ಪಾದನೆ ಜಾಸ್ತಿಯಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಸಹಾಯ ಮಾಡಬೇಕೆಂಬ ಬೇಡಿಕೆಯನ್ನು ಸಲ್ಲಿಸಿತ್ತು. ಆದ್ದರಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಹಾಲು ನೀಡುವ ಯೋಜನೆಯನ್ನು ಹಮ್ಮಿಕೊಂಡು, ಹಾಲು ಉತ್ಪಾದಕರ ಸಮಸ್ಯೆ ಬಗೆಹರಿಸುವ ಜೊತೆಗೆ ಮಕ್ಕಳ ಪೌಷ್ಟಿಕತೆ ಹೆಚ್ಚಳಕ್ಕೂ ಅನುಕೂಲ ಕಲ್ಪಿಸಲಾಯಿತು ಎಂದು ಹೇಳಿದರು.
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…