ಸರ್ಕಾರಿ ಸೌಲಭ್ಯ ನೇರವಾಗಿ ಜನರಿಗೆ ತಲುಪಿಸಬೇಕು: ತಪ್ಪಿದಲ್ಲಿ ಕಠಿಣ ಕ್ರಮ: ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ

ಸರ್ಕಾರಿ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ದೇವನಹಳ್ಳಿ ತಾಲ್ಲೂಕು, ಬೀರಸಂದ್ರ ಗ್ರಾಮ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ 2022-23 ಹಾಗೂ 2023-24 ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆ.ಡಿ.ಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಹಿಳೆಯರು, ಮಕ್ಕಳು, ಯುವಜನರು, ಬಡವರು, ದುರ್ಬಲ ವರ್ಗದವರ ಅಭಿವೃದ್ದಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಅಧಿಕಾರಿಗಳು ಸಭೆಗೆ ಕಡ್ಡಾಯವಾಗಿ ಹಾಜರಾಗಿ ತಮ್ಮ ಇಲಾಖೆಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ನೀಡಬೇಕು. ಜನಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡಬೇಕು ಎಂದರು.

ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಕುಡಿಯುವ ನೀರಿನ ಕುರಿತು ಚರ್ಚೆ ನಡೆಸಿದ ಸಚಿವರು ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಹೊಸಕೋಟೆ ಶಾಸಕರು ಹಾಗೂ ನೆಲಮಂಗಲ ಶಾಸಕರು ತಮ್ಮ ಕ್ಷೇತ್ರದ ಕೆಲವು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ತುರ್ತಾಗಿ ಕ್ರಮವಹಿಸುವಂತೆ, ಸ್ಥಗಿತಗೊಂಡಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಶೀಘ್ರ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಹದಗೆಟ್ಟಿರುವ ಸಿಸಿ ರಸ್ತೆಗಳನ್ನು ರಸ್ತೆ ಸರಿಪಡಿಸಬೇಕು ಎಂದರು.

ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಪ್ರಸ್ತುತ 5 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 10 ಕೆಜಿ ನೀಡಲು ನಿರ್ಧರಿಸಿದ್ದೇವೆ. ಅಕ್ಕಿ ವಿತರಿಸಲು, ಅಕ್ಕಿ ಸಂಗ್ರಹಿಸುವ ಉಗ್ರಾಣ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ನೆಲಮಂಗಲದಲ್ಲಿ ಪ್ಲಾಸ್ಟಿಕ್ ಅಕ್ಕಿ ಎಂದು ಪತ್ತೆಯಾಗಿರುವ ವರದಿಯನ್ನು ಪ್ರಸ್ತಾಪಿಸಿ ಪ್ಲಾಸ್ಟಿಕ್ ಅಕ್ಕಿ ಸಾಮಾನ್ಯವಾಗಿ ಎಲ್ಲೂ ಪತ್ತೆಯಾಗಿಲ್ಲ, ಅಕ್ಕಿಯಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಪ್ರತಿ 100 ಕೆಜಿ ಅಕ್ಕಿಗೆ 01ಕೆಜಿ ಫೋರ್ಟಿಫೈಡ್(fortified rice)ಅಕ್ಕಿಯನ್ನು ಬೆರೆಸುತ್ತಾರೆ, ನೆಲಮಂಗಲದಲ್ಲಿ ಅದೇ ರೀತಿ ಆಗಿರಬಹುದು ಇದರ ಬಗ್ಗೆ ಪರಿಶೀಲಿಸಿ ಶೀಘ್ರ ವರದಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆಗಳು ಪ್ರಾರಂಭದ ಹಿನ್ನಲೆಯಲ್ಲಿ ಲಭ್ಯವಿರುವ ಶಿಕ್ಷಕರು, ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳ ಮಾಹಿತಿಯನ್ನು ಪಡೆದುಕೊಂಡು ಪ್ರತಿಕ್ರಿಯಿಸಿದ ಸಚಿವರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳು, ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ಸಿಎಸ್‌ಆರ್ ಅನುದಾನವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿ ಬಳಸಿಕೊಂಡು ಖಾಸಗಿ ಶಾಲೆಗಳಂತೆಯೇ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕರೆತರಲು ಆಕರ್ಷಿಸಬೇಕು. ಪ್ರತಿ ಮಗುವೂ ಉತ್ತಮ ಶಿಕ್ಷಣ ಸೌಲಭ್ಯ ಪಡೆಯಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರಿಗೆ ಕೃಷಿ, ತೋಟಗಾರಿಕೆ ಇಲಾಖೆಯ ಯೋಜನೆಯ ಕುರಿತು ಮಾಹಿತಿಯ ಕೊರತೆಯಿದ್ದು, ಶಾಸಕರ ನೇತೃತ್ವದಲ್ಲಿ ರೈತರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಯೋಜನೆಗಳ ಮಾಹಿತಿ ನೀಡಲು ಕ್ರಮವಹಿಸಬೇಕು. ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿಗೆ ಕ್ರಮ ವಹಿಸಬೇಕು. ನಗರೀಕರಣದಿಂದಾಗಿ ದೇವನಹಳ್ಳಿಯ ಮೂಲ ಚಕೋತಾ, ಮಲ್ಲಿಗೆ ಬೆಳೆ ನಶಿಸುತ್ತಿದ್ದು, ಈ ಬೆಳೆಗಳನ್ನು ಬೆಳೆಯಲು ಉತ್ತೇಜಿಸಬೇಕು. ದ್ರಾಕ್ಷಿ ಬೆಳೆಗಾರರಿಗೆ ಇರುವ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಹೇಳಿದರು.

ಮೇಲ್ಛಾವಣಿ, ಗೋಡೆ, ಶೌಚಾಲಯ ಸೇರಿದಂತೆ ಜಿಲ್ಲೆಯಲ್ಲಿ ಶಿಥಿಲಗೊಂಡು ದುರಸ್ತಿ ಹಂತದಲ್ಲಿರುವ ಅಂಗನವಾಡಿಗಳನ್ನು ತ್ವರಿತವಾಗಿ ದುರಸ್ತಿ ಮಾಡಬೇಕು ಹಾಗೂ ದುರಸ್ತಿ ಕಾರ್ಯವು ಗುಣಮಟ್ಟದಿಂದ ಕೂಡಿರಬೇಕು ಎಂದರಲ್ಲದೆ ರಾಜ್ಯ ಸರ್ಕಾರದ ಐದು ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆ ಸೌಲಭ್ಯದ ಕುರಿತು ಅರಿವು ಮೂಡಿಸಿ ಎಂದರು.

ಅನ್ಯ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯದ ಕೊರತೆ ಹೆಚ್ಚಿದೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ್ದು ಅಪಘಾತಗಳಾದಾಗ ತುರ್ತು ಚಿಕಿತ್ಸೆಗೆ ಬೆಂಗಳೂರು ನಗರವನ್ನೇ ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ ಶೀಘ್ರ ಜಿಲ್ಲಾಸ್ಪತ್ರೆ, ಟ್ರಾಮಾ ಸೆಂಟರ್, ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ವಹಿಸಬೇಕು ಎಂದು ಶಾಸಕರು ಸಚಿವರನ್ನು ಒತ್ತಾಯಿಸಿದರು.

ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಲವು ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಕಲ್ಪಿಸುವ ಮುನ್ನ ಆಯಾ ಶಾಸಕರ ಗಮನಕ್ಕೆ ತರಬೇಕು ಎಂದರಲ್ಲದೆ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ವರ್ಗದವರು ಹೆಚ್ಚಿನ‌ ಸಂಖ್ಯೆಯಲ್ಲಿ ಇದ್ದು ವಸತಿ ಯೋಜನೆಯಡಿ ನಿಗದಿಗೊಳಿಸಿರುವ ಅಲ್ಪಸಂಖ್ಯಾತರ ಫಲಾನುಭವಿಗಳ ಸಂಖ್ಯೆ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಕಳೆದ ವರ್ಷ ಜಿಲ್ಲೆಯಲ್ಲಿ ಕಾಲುಬಾಯಿ ರೋಗ, ಚರ್ಮಗಂಟು ರೋಗದಿಂದ ಹಲವು ಜಾನುವಾರುಗಳು ಸಾವನ್ನಪ್ಪಿರುವ ವರದಿಯಾಗಿದೆ ಇದನ್ನು ತಡೆಯುವ ನಿಟ್ಟಿನಲ್ಲಿ ನಿಟ್ಟಿನಲ್ಲಿ ಶೀಘ್ರವೇ ಮುಂಜಾಗ್ರತೆ ಕ್ರಮವಾಗಿ ಕಾಲುಬಾಯಿ ರೋಗ, ಚರ್ಮಗಂಟು ರೋಗ ಲಸಿಕೆ ಬಾರದಂತೆ ಎಲ್ಲ ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಿ ಎಂದರಲ್ಲದೆ, ಪಶುಪಾಲನಾ ಇಲಾಖೆ ವತಿಯಿಂದ ಲಭ್ಯವಿರುವ ಯೋಜನೆಗಳ ಮೂಲಕ ಸಬ್ಸಿಡಿ ರೂಪದಲ್ಲಿ ರೈತರಿಗೆ ಹೆಚ್ಚು ಹೆಚ್ಚು ಜಾನುವಾರುಗಳನ್ನು ನೀಡಿ, ಹಾಲು ಉತ್ಪಾದನೆ ಹೆಚ್ಚಿಸಲು ಕ್ರಮವಹಿಸಿ ಎಂದು ಅಧಿಕಾರಿಗಳ ಸೂಚಿಸಿದರು.

ಹೊಸಕೋಟೆ ತಾಲೂಕಿನಲ್ಲಿ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಸ್ವೈನ್ ಫ್ಲೂ ರೋಗದಿಂದ ಹಂದಿಗಳು ಸಾವನ್ನಪ್ಪಿವೆ. ಇದುವರೆಗೂ ರೈತನಿಗೆ ಪರಿಹಾರದ ಹಣ ದೊರೆತಿಲ್ಲ, ಶೀಘ್ರವೇ ಪರಿಹಾರ ಹಣ ತಲುಪಿಸಲು ಅಧುಕಾರಿಗಳು ಗಮನಹರಿಸಿ ಎಂದರು.

ಮಹತ್ಮಾ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳೊಂದಿಗೆ, ವೈಯಕ್ತಿಕ ಕಾಮಗಾರಿಗಳಿಗೂ ಆದ್ಯತೆ ನೀಡಬೇಕು. ಜಲ ಜೀಲನ್ ಮಿಷನ್ ಯೋಜನೆಯಡಿ ವಿವಿಧ ಕಾಮಗಾರಿಗಳು ಪ್ರಾರಂಭವಾಗಿ ತಿಂಗಳುಗಳು ಕಳೆದರೂ ರಸ್ತೆಗಳನ್ನು ಅಗೆದು ನೀರಿನ ಪೈಪ್ ಅಳವಡಿಸಲಾಗಿದೆ. ರಸ್ತೆಗಳ ದುರಸ್ತಿಗಳಾಗಿಲ್ಲ. ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡಬೇಕು. ಕೆಸಿ ವ್ಯಾಲಿ ನೀರು, ಹೆಚ್.ಎನ್ ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡಿ ಜಿಲ್ಲೆಯ ಕೆರೆಗಳಿಗೆ 5 ವರ್ಷದಲ್ಲಿ ಹಂತ ಹಂತವಾಗಿ ಸರಬರಾಜು ಮಾಡುವ ಯೋಚನೆ ಇದ್ದು ಪ್ರತಿಯೊಂದು ಗ್ರಾಮಕ್ಕೂ ನೀರಿನ ಸೌಲಭ್ಯ ಒದಗಿಸುವುದು ನಮ್ಮ ಜವಾಬ್ದಾರಿ ಅಗಿದೆ ಎಂದರು.

ಜನಪ್ರತಿನಿಧಿಗಳ ಸಹಕಾರದಿಂದೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದರು.

ಸಭೆಯಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶರತ್‌ ಕುಮಾರ್ ಬಚ್ಚೇಗೌಡ, ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀನಿವಾಸಯ್ಯ, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಅ.ದೇವೇಗೌಡ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣೀತ್‌ ನೇಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆ ಆರಂಭಕ್ಕೂ ಮುನ್ನ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರ ಕೊಠಡಿಯ ಉದ್ಘಾಟನಾ ಕಾರ್ಯಕ್ರಮವು ಜಿಲ್ಲಾಡಳಿತ ಭವನದಲ್ಲಿರುವ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 120 ರಲ್ಲಿ ನಡೆಯಿತು.

Ramesh Babu

Journalist

Recent Posts

22 ವರ್ಷದ ಯುವಕ‌ ಮನೆಯಲ್ಲಿ ನೇಣಿಗೆ ಶರಣು

22 ವರ್ಷದ ಯುವಕ‌ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ‌ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ…

24 minutes ago

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…

11 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ, ಹಲ್ಲೆ ಯತ್ನ ಪ್ರಕರಣ: ಆರೋಪಿ ಯಶಸ್ವಿನಿ‌ ಗೌಡ, ಬೇಕರಿ ರಘುಗೆ ನ್ಯಾಯಾಂಗ ಬಂಧನ: ಸತ್ಯಕ್ಕೆ ಸಿಕ್ಕ ಜಯ ಎಂದ ಪ್ರಥಮ್

ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ‌ ಗೌಡ,…

11 hours ago

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳು ಗುರುತು

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…

15 hours ago

ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…

17 hours ago

ತಿರುಮಗೊಂಡನಹಳ್ಳಿ ರೈಲ್ವೆ ಮೇಲ್ಸೇತುವೆ ಅತೀ ಶೀಘ್ರದಲ್ಲಿ ನಿರ್ಮಾಣ- ಸಚಿವ ಕೆ.ಎಚ್ ಮುನಿಯಪ್ಪನವರು ಯಾರನ್ನೂ ಕಡೆಗಣಿಸುವುದಿಲ್ಲ- ಆರ್.ಮುರುಳಿಧರ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…

20 hours ago