Categories: ಲೇಖನ

ಸಂಸ್ಕೃತಿ – ವಿಕೃತಿ….. ಆದರ್ಶ ಮತ್ತು ವಾಸ್ತವ….

ಮಕ್ಕಳನ್ನೇ ಕೊಲ್ಲುವ ಮರ್ಯಾದೆ ಹತ್ಯೆಗಳು,

ಪ್ರೀತಿಸಿ ಮದುವೆಯಾಗುವ ಬೇರೆ ಬೇರೆ ಜಾತಿಯ ಪ್ರೇಮಿಗಳನ್ನು ಕೊಂದು
ಜೈಲಿಗೆ ಹೋಗುವ ಸಂಬಂಧಿಗಳೇ ಧೀರರು – ಗೌರವಸ್ತರು – ಮರ್ಯಾದಸ್ತರು,

ಮದುವೆ ಮಂಟಪದಲ್ಲಿ ದುಬಾರಿ ಕಾರನ್ನು ಬಹಿರಂಗವಾಗಿ ಪ್ರದರ್ಶಿಸಿ ವರದಕ್ಷಿಣೆಯನ್ನು
ಕೊಡುವವರು ತಮ್ಮ ಮನೆತನದ ಹೆಚ್ಚುಗಾರಿಕೆ – ಗೌರವ ಕಾಪಾಡುವ ಮಾನಸ್ಥರು,

ಹಣ – ಹೆಂಡ ಹಂಚಿ – ತಲೆಹಿಡಿದು ಟಿಕೆಟ್ ಗಿಟ್ಟಿಸಿ – ಚುನಾವಣೆಯಲ್ಲಿ ಗೆದ್ದು
ರಾಜಕೀಯ ಸ್ಥಾನಮಾನ ಪಡೆಯುವವರು ಆದರ್ಶ ವ್ಯಕ್ತಿಗಳು,

ಮೂರೂ ಬಿಟ್ಟು ಅತ್ತೆ ಮನೆಗೆ ಹೋಗಿ ಬಂದಂತೆ ಜೈಲಿಗೆ ಹೋಗಿ ಬಂದರೂ, ಏನೂ ಆಗಿಲ್ಲದಂತೆ ಛಲ ಬಿಡದೆ ಮತ್ತೆ ಅಧಿಕಾರ ಸ್ಥಾಪಿಸುವ ರೌಡಿಗಳು – ಭ್ರಷ್ಟರು ನಮಗೆ ಪ್ರೇರಣೆ,

ಏನಾದರೂ ಮಾಡು, ಹೇಗಾದರೂ ಮಾಡು, ಒಟ್ಟಿನಲ್ಲಿ ಹಣ ಮಾಡು ಎಂದು ಬೋಧಿಸಿ, ಅದೇ ರೀತಿ ದುಡ್ಡು, ದೌಲತ್ತು ಪ್ರದರ್ಶಿಸುವವರು ನಮಗೆ ಮಾದರಿ,

ಧರ್ಮಾಧಿಕಾರಿಯಾಗು‌ – ಜಾತಿನಾಯಕನಾಗು – ಭ್ರಷ್ಟ ಅಧಿಕಾರಿಯಾಗು – ಏನಾದರೂ ಆಗು, ಮೊದಲು ಹಣ ಮಾಡುವ ಜನಪ್ರಿಯ ನಾಯಕನಾಗು ಎನ್ನುವವರೇ ನಮಗೆ ಸ್ಪೂರ್ತಿ,

ತಲೆ ಹಿಡಿದರೂ ಪರವಾಗಿಲ್ಲ – ತಲೆ ಹೊಡೆದರೂ ಪರವಾಗಿಲ್ಲ –
ಕಾಲಿಡಿದರೂ ಪರವಾಗಿಲ್ಲ – ಜುಟ್ಟಿಡಿದರೂ ಪರವಾಗಿಲ್ಲ –
ಕೈ ಮುಗಿದರೂ ಪರವಾಗಿಲ್ಲ – ಕಾಲ್ ಮುರಿದರೂ ಪರವಾಗಿಲ್ಲ,
ಒಟ್ಟಿನಲ್ಲಿ ದೊಡ್ಡ ನಾಯಕನಾಗು ನೀನೆ ನಮಗೆ ಆದರ್ಶ,

ಸುಳ್ಳಾದರೂ ಹೇಳು – ಅಸಹ್ಯವನ್ನಾದರೂ ತೋರಿಸು,
ರಕ್ತವನ್ನಾದರೂ ಪ್ರದರ್ಶಿಸು – ಮೌಢ್ಯವನ್ನಾದರೂ ವಿಜೃಂಭಿಸು,
ಅನೈತಿಕವಾದರೂ ಆಗಿರಲಿ – ಅಸಭ್ಯವಾದರೂ ಆಗಿರಲಿ,
ಒಟ್ಟಿನಲ್ಲಿ ನೀನೇ ನಂಬರ್‌ ಒನ್ ಚಾನಲ್ ಆಗಿರಬೇಕು,

ಎಚ್ಚೆತ್ತುಕೊಳ್ಳೋಣ,

ನಾವು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ನಮ್ಮ ಮಕ್ಕಳಿಗಾಗಿ,
ಒಂದು ಉತ್ತಮ ವಾತಾವರಣ ನಿರ್ಮಿಸಿ ಕೊಡೋಣ,
ಪಾಪ ಮಕ್ಕಳು ಈಗಿರುವ ವ್ಯವಸ್ಥೆಯಲ್ಲಿ ನರಕಯಾತನೆ ಅನುಭವಿಸುವುದು ಬೇಡ.

ಅದಕ್ಕಾಗಿ,

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು,

ಬ್ರಾಹ್ಮಣರ ಎಲ್ಲಾ ಅಗ್ರಹಾರಗಳನ್ನು ನಾಶಪಡಿಸಬೇಕು. ಊರ ಒಳಗಿನ ಎಲ್ಲರ ಜೊತೆ ಸಹಜವಾಗಿ ಬದುಕುವಂತೆ ಮಾಡಬೇಕು,

ಹಾಗೆಯೇ,
ಜಾತಿಗಳ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಎಲ್ಲಾ ಕೇರಿ, ಹಟ್ಟಿ, ಬೀದಿ, ಓಣಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಪ್ರದೇಶಗಳನ್ನು ನಾಶಪಡಿಸಿ ಅದರ ನೆನಪೂ ಉಳಿಯದಂತೆ ಮಾಡಬೇಕು,

ಅದೇರೀತಿ ,
ಒಂದು ಪ್ರತ್ಯೇಕ ಸ್ಥಳಗಳಲ್ಲಿ ಒಟ್ಟಾಗಿ ಗುಂಪು ಗುಂಪಾಗಿ ವಾಸಿಸುತ್ತಿರುವ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಭೌದ್ದರು, ಸಿಖ್ಖರು, ಪಾರ್ಸಿಗಳು ಮುಂತಾದವರನ್ನು ಅಲ್ಲಿಂದ ಬೇರ್ಪಡಿಸಿ ಊರ ಒಳಗೆ ಚದುರಿದಂತೆ ವಾಸಿಸಲು ಅವಕಾಶ ಕಲ್ಪಿಸಿಕೊಡಬೇಕು‌,

ಜಾತಿ ಹೆಸರೇಳುವುದು ಅವಮಾನ ಅನಾಗರಿಕತೆ,
” ಭಾರತೀಯತೆ ” ಒಂದು ಹೆಮ್ಮೆ ಎಂದು ಹೇಳಲು ಯುವ ಜನಾಂಗವನ್ನು ಪ್ರೇರೇಪಿಸಬೇಕು,

ಜಾತಿ, ಧರ್ಮ, ನಂಬಿಕೆ, ಸಂಪ್ರದಾಯಗಳಿಗಿಂತ ನಾಗರಿಕ ಪ್ರಜ್ಞೆ ಆಧುನಿಕ ಸಮಾಜದ ಮುಖ್ಯ ಗುಣಲಕ್ಷಣಗಳು ಎಂದು ಭಾವಿಸುವಂತಾಗಬೇಕು,

ಯಾರಾದರೂ ಸ್ವಯಂ ಇಚ್ಛೆಯಿಂದ ಅಧೀಕೃತ ಜಾತಿಯ ಕಾಲಂನಲ್ಲಿ ಜಾತಿಯ ಹೆಸರು ನಮೂದಿಸದೆ
” ಭಾರತೀಯ ” ಎಂದು ಬರೆಯಲು ಅವಕಾಶ ಕಲ್ಪಿಸಬೇಕು ಮತ್ತು ಅವರಿಗೆ ಏನಾದರೂ ಒಂದಷ್ಟು ಪ್ರೋತ್ಸಾಹಕ ಕೊಡುಗೆ ನೀಡಬೇಕು,

ಅಂತರ್ಜಾತೀಯ ವಿವಾಹವಾಗಿ ೧೫ ವರ್ಷ ಪೂರೈಸಿದ ಕುಟುಂಬಕ್ಕೆ, ಕೌಟುಂಬಿಕ ನ್ಯಾಯಾಲಯ ಇದನ್ನು ದೃಢಪಡಿಸಿದಲ್ಲಿ
ಅವರ ಕುಟುಂಬಕ್ಕೆ ಜೀವನ ಪರ್ಯಂತ ಯಾವುದೇ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಸರ್ಕಾರ ಒದಗಿಸಬೇಕು,

ಅಸ್ಪೃಶ್ಯತೆ ಆಚರಣೆ ದೇಶ ದ್ರೋಹಕ್ಕೆ ಸಮಾನ ಎಂದು ಘೋಷಿಸಬೇಕು,
ಪಂಕ್ತಿಬೇಧ, ಜಾತಿಯ ಆಧಾರದ ಪಕ್ಷಪಾತ, ಪ್ರವೇಶ ನಿಷೇಧ, ವ್ಯಕ್ತಿಯ
ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಆಚರಣೆ ಇರುವ ಎಲ್ಲಾ ದೇವ ಮಂದಿರಗಳನ್ನು ಸರ್ಕಾರ ವಶಕ್ಕೆ ಪಡೆಯಬೇಕು,

ಎಲ್ಲಾ ಮಂದಿರ, ಮಸೀದಿ, ಚರ್ಚು, ಗುರುದ್ವಾರ, ಭೌದ್ದ, ಜೈನ, ಪಾರ್ಸಿ ಮಂದಿರಗಳಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಬೇಕು.
ಅಲ್ಲಿ ನಂಬಿಕೆಯ ಆಚರಣೆಗಳಿಗಿಂತ ಧ್ಯಾನ ಕೇಂದ್ರಗಳಂತೆ ಕಾರ್ಯನಿರ್ವಹಿಸಲು ಹೆಚ್ಚಿನ ಆಧ್ಯತೆ ಕೊಡಬೇಕು,

ಹೆಸರುಗಳ ಮುಂದೆ ಜಾತಿ ಸೂಚಕ ಪದವನ್ನು ನಿಷೇಧಿಸಬೇಕು,

ಹೊಟ್ಟೆಯಲ್ಲಿರುವ ಮಗುವಿನ ಲಿಂಗ ಪರೀಕ್ಷೆ ನಿಷೇಧಿಸಿದಂತೆ ಜಾತಿಯನ್ನು ಮದುವೆ, ಚುನಾವಣೆ ಮುಂತಾದ ಸಾರ್ವಜನಿಕ ಕಾರ್ಯಗಳಲ್ಲಿ ಬಹಿರಂಗಪಡಿಸದಂತೆ ನಿಷೇಧವಿರಬೇಕು.

ಜಾತಿ ಹೆಸರಿನ ಮತ್ತು ಜಾತಿ ಆಧಾರಿತ ಸಂಘಟನೆಗಳನ್ನು ನಿಷೇಧಿಸಬೇಕು. ಅದಕ್ಕೆ ಬದಲಾಗಿ ಕ್ರೀಡಾ, ಸಾಂಸ್ಕೃತಿಕ, ಸಾಹಿತ್ಯಕ, ಸಾಹಸ ಸಂಘಟನೆಗಳನ್ನು ಪ್ರೋತ್ಸಾಹಿಸಬೇಕು,

ಅದಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ, ಅ – ಅಗಸ, ಈ – ಈಶ, A – Apple, D – Dog ಎಂಬ ಕ್ರಮವನ್ನು ಕೇವಲ Supplement ಆಗಿ ಕಲಿಸಿ ಮುಖ್ಯ ಶಿಕ್ಷಣ ಇಲ್ಲಿನ ಬದುಕಿನ ಅವಶ್ಯಕತೆ, ಕ್ರಿಯಾತ್ಮಕತೆ, ಸಹಜತೆ ಮತ್ತು ಜೀವಪರ ನಿಲುವಿನ ಕ್ರಮವನ್ನು ರೂಪಿಸಬೇಕು,

SSLC ನಂತರದ ಒಂದು ವರ್ಷದ ಶಿಕ್ಷಣವನ್ನು ಕಡ್ಡಾಯವಾಗಿ ದೈಹಿಕ ಮತ್ತು ಮಾನಸಿಕ ತರಬೇತಿಯ ಕ್ರಮವಾಗಿ ( Military training ) ರೂಪಿಸಬೇಕು,

ಶಿಕ್ಷಣದ ಗುಣಮಟ್ಟವನ್ನು ಅತ್ಯಂತ ಮೇಲ್ದರ್ಜೆಗೆ ಏರಿಸಿ ಅದರ ಖರ್ಚನ್ನು ಕಡಿಮೆಗೊಳಿಸಿ, ಕೃಷಿ ಮತ್ತು ಅದಕ್ಕೆ ಪೂರಕ ಉದ್ಯೋಗ ಸೃಷ್ಟಿಸಿ, ಭಾರತ ಹೊರತುಪಡಿಸಿ ಇಡೀ ವಿಶ್ವದ ಆಹಾರದ ಅವಶ್ಯಕತೆ ಗಮನಿಸಿ ಆ ವಸ್ತುಗಳನ್ನು ರಪ್ತು ಮಾಡಲು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು,

ನಿರುದ್ಯೋಗಿಗಳಿಗೆ ಕೆಲಸ ಸಿಗುವವರೆಗೂ ಒಂದಷ್ಟು ತೃಪ್ತಿದಾಯಕ ಭತ್ಯೆ ನೀಡಿ, ಹೆಚ್ಚು ಹೆಚ್ಚು ಉದ್ಯೋಗ ಕಲ್ಪಿಸಬೇಕು,

ಜಾತಿಯನ್ನೇ ನಾಶ ಮಾಡಿದರೆ ಜಾತಿಯ ಮೀಸಲಾತಿ ಪ್ರಶ್ನೆಯೇ ಉದ್ಭವಾಗುವುದಿಲ್ಲ,
ಪರೋಕ್ಷವಾಗಿ ಭ್ರಷ್ಟಾಚಾರವೂ ಸ್ವಲ್ಪ ಕಡಿಮೆಯಾಗುತ್ತದೆ,

ಹೀಗೆ ಹಲವಾರು ವಿಚಾರಗಳು ಮನದಲ್ಲಿ ಮೂಡುತ್ತದೆ. ಇದೂ ಪರಿಪೂರ್ಣವೇನು ಅಲ್ಲ. ವಾಸ್ತವವಾಗಿ ಕಾರ್ಯರೂಪಕ್ಕೆ ಬರುವಾಗ ಪ್ರಾಯೋಗಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಒಂದಷ್ಟು ಬದಲಾವಣೆಗಳೂ ಅವಶ್ಯ,

ಇದು ಈಗಿನ ಜನರ ಮನೋಭಾವದಲ್ಲಿ‌ ಕಷ್ಟ ಎನಿಸಿದರೂ ಒಳ್ಳೆಯ ವಾತಾವರಣ ಮತ್ತು ನಂಬಿಕೆ ಸೃಷ್ಟಿಯಾದರೆ ಸಾಧ್ಯವಾಗಲೂ ಬಹುದು.

ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು,
ಹಾಗಾಗಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

15 hours ago

ಭಾರತೀಯರ ಆಹಾರ ವೈವಿಧ್ಯತೆ…. ರುಚಿ – ತೃಪ್ತಿ – ಸಮಾನತೆ…..

ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…

1 day ago

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

2 days ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

2 days ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

2 days ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

2 days ago