Categories: ಲೇಖನ

ಸಂವಿಧಾನ ಪುಸ್ತಕ ರೂಪದ ಅಕ್ಷರಗಳಲ್ಲ… ಅದು ಭಾರತೀಯ ಸಮಾಜದ ಸಾಂಸ್ಕೃತಿಕ ವ್ಯಕ್ತಿತ್ವ…

ಸಂವಿಧಾನ ದಿನದ ನೆನಪಿನ ಸಂದರ್ಭದಲ್ಲಿ ಮಾನವೀಯತೆಯ ತೊಳಲಾಟ ಮತ್ತು ಹುಡುಕಾಟ…..

” ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ ”
ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಗಳ ಆಗ್ರಹ……..

” ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿತ್ತು. ಸ್ವಾತಂತ್ರ ನಂತರ ಜಾತ್ಯತೀತ ರಾಷ್ಟ್ರವಾಯಿತು. ಆದರೆ ಈಗ ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು ”

ಕೆಲವು ತಿಂಗಳುಗಳ ಹಿಂದೆ ಇದೇ ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ” ಸಂಸ್ಕೃತ ಕಲಿತವರು ಮಾತ್ರ ಸ್ವರ್ಗಕ್ಕೆ ಹೋಗಬಹುದು ” ಎಂದು ಹೇಳಿದ್ದನ್ನು ಮಾಧ್ಯಮಗಳಲ್ಲಿ ಕೇಳಿದ್ದೇವೆ…..

ಹಿಂದಿನ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಗಳು ಒಂದು ಸಂದರ್ಶನದಲ್ಲಿ
” ಹಿಂದುತ್ವವೂ ಇರಬೇಕು ಬ್ರಾಹ್ಮಣತ್ವವೂ ಇರಬೇಕು ” ಎಂದು ಹೇಳಿದ್ದರು. ಹಾಗೆಯೇ ಮತ್ತೊಂದು ಕಾರ್ಯಕ್ರಮದಲ್ಲಿ ” ಹಿಂದೂ ಧರ್ಮಕ್ಕೆ ಜಾತಿ ವ್ಯವಸ್ಥೆ ಒಂದು ಶಾಪ ” ಎಂದೂ ಹೇಳಿದ್ದರು ಮತ್ತು ಅದೇ ಉಡುಪಿ ಮಠದಲ್ಲಿ ಇವತ್ತಿಗೂ ಪಂತಿಭೇದ ನಡೆಯುತ್ತಲೇ ಇದೆ…..

ಶೋಷಿತರು ಹೇಳಬೇಕಾದ, ಕೇಳಬೇಕಾದ ಮಾತುಗಳನ್ನು ಶೋಷಕರೇ ಹೇಳುತ್ತಿರುವುದು ಇತಿಹಾಸದ ವ್ಯಂಗ್ಯ. ಇಡೀ ವ್ಯವಸ್ಥೆ ಜಾತೀಯತೆಯಿಂದ, ಜಾತಿಯ ಕೊಳಕು ಮನಸ್ಥಿತಿಯಿಂದ ನರಳುತ್ತಿರುವಾಗ ಹಿಂದುಗಳು ಎಂದು ಹೇಳಲೇ ಸಂಕೋಚ ಪಡಬೇಕಾಗಿದೆ…..

ಜಾತಿ ವ್ಯವಸ್ಥೆಯಲ್ಲಿ ಮೇಲ್ಪದರದಲ್ಲಿ ಕುಳಿತಿರುವ ಜನಗಳು ಜಾತಿ ಪದ್ಧತಿಯ ಅತ್ಯಂತ ಕೆಳ ಸ್ತರದಲ್ಲಿರುವ ದಲಿತರು, ಹಿಂದುಳಿದವರನ್ನು ಅಪ್ಪಿಕೊಂಡು ತಮ್ಮ ಮಠಮಾನ್ಯಗಳಿಗೆ ಪೂರ್ಣ ಕುಂಭ ಸ್ವಾಗತ ಕೋರಿ, ಎಲ್ಲ ದೇವಸ್ಥಾನಗಳಿಗೂ ಮುಕ್ತ ಪ್ರವೇಶ ಕಲ್ಪಿಸಿ, ದೇವರುಗಳನ್ನು ಮುಟ್ಟಿಕೊಳ್ಳಲು, ಅಪ್ಪಿಕೊಳ್ಳಲು ಬಿಟ್ಟು, ಅವರೊಂದಿಗೆ ಸಹ ಭೋಜನ ಮಾಡುತ್ತಾ, ಸಂಬಂಧಗಳನ್ನು ಬೆಳೆಸುತ್ತಾ, ಬೆಸೆಯುತ್ತಾ,
” ಹಿಂದೂ ನಾವೆಲ್ಲ ಒಂದು ” ಎಂದು ಕಾರ್ಯರೂಪಕ್ಕೆ ತರುವ ಯೋಜನೆಗಳನ್ನು
ಕೈ ಬಿಟ್ಟು, ಪ್ರಸಾದ ನೀಡಲು ಮಡಿವಂತಿಕೆ ತೋರುತ್ತಾ, ಮುಟ್ಟಿಸಿಕೊಳ್ಳಲು ಅಸಹ್ಯಪಡುತ್ತಾ, ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುವ ಇವರಿಗೆ ಹಿಂದುತ್ವದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ…..

ಹಿಂದುತ್ವದ ವಿಭಜನೆಗೆ, ವಿನಾಶಕ್ಕೆ ಕಾರಣರಾದವರೇ ಇವರು. ಭಾರತದ ಮೇಲೆ ಎಲ್ಲಾ ದಾಳಿಕೋರ ವಿದೇಶಿ ಶಕ್ತಿಗಳು ಮುಗಿಬೀಳಲು ಇವರ ಈ ಅಸಮಾನತೆಯ, ಅಮಾನವೀಯ, ವಿಭಜನಾತ್ಮಕ ಸಾಮಾಜಿಕ ವ್ಯವಸ್ಥೆಯೇ ಕಾರಣ…..

ಉಡುಗೆ, ತೊಡುಗೆ, ಭಾಷೆ, ಆಹಾರ ಎಲ್ಲದರಲ್ಲೂ ಶ್ರೇಷ್ಠತೆಯ ವ್ಯಸನವನ್ನು ತುಂಬಿಕೊಂಡು, ಅಮಾನವೀಯ ನಡವಳಿಕೆ ಈಗಲೂ ತೋರಿಸುತ್ತಿದ್ದಾರೆ. ಸಸ್ಯಾಹಾರ, ಮಾಂಸಾಹಾರ ಎಂದು ವಿಭಜಿಸುತ್ತಾರೆ. ಮನುಷ್ಯರಿಗಿಂತ ಹಸು ಶ್ರೇಷ್ಠ ಎಂದು ಹೇಳುತ್ತಾರೆ. ಒಂದು ಇಡೀ ದಲಿತ ಸಮುದಾಯವನ್ನು ಊರಿನಿಂದ ಹೊರಗಿಟ್ಟು ಪಶುಗಳಿಗಿಂತ ಕಡೆಯಾಗಿ ನೋಡಿ, ಈಗ ಅದು ಸುಧಾರಣೆಯಾಗುತ್ತಿರುವಾಗ ಹಳೆಯದರ ಬಗ್ಗೆ ಒಮ್ಮೆಯೂ ಕ್ಷಮೆಯನ್ನೂ ಕೇಳಿಲ್ಲ…..

ಈ ನೆಲದ ನಿಜವಾದ ಹಿಂದೂ ಗೌತಮ ಬುದ್ಧ, ಮಹಾವೀರ, ಸಂತ ಕಬೀರ, ಮೀರಾಬಾಯಿ, ಬಸವಣ್ಣ, ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್, ರಾಮ್ ಮನೋಹರ್ ಲೋಹಿಯಾ ಇಂತಹವರನ್ನು ಎಂದಿಗೂ ತಮ್ಮ ಮಠಮಾನ್ಯಗಳಲ್ಲಿ ಸ್ಮರಿಸಿಕೊಳ್ಳದ ಇವರು, ಯಾವ ಹಿಂದುವನ್ನು ನಮ್ಮವರು ಎಂದು ಕರೆಯುತ್ತಾರೆ. ಕಾಲ್ಪನಿಕ ದೇವರುಗಳನ್ನು ವಿಜೃಂಭಿಸುತ್ತಾ, ಜನರನ್ನು ಮೌಢ್ಯದಲ್ಲಿರಿಸಿ ಶೋಷಿಸುತ್ತಾ, ದೇವರಿಗಿಂತ ಮಿಗಿಲಾದ ಈ ನೆಲದ ಮಹಾತ್ಮರ ವಿಚಾರಗಳನ್ನು ಕಡೆಗಣಿಸುತ್ತಾ, ತಿರಸ್ಕರಿಸುತ್ತಾ, ದ್ವೇಷಿಸುತ್ತಾ ಹೀಗೆ ಹಿಂದುತ್ವದ ಬಗ್ಗೆ ಮಾತನಾಡುವುದು ಎಷ್ಟು ಸರಿ…..

ಸಂವಿಧಾನಕ್ಕಿಂತ ಹೆಚ್ಚಿನ ಸಮಾನತೆಯನ್ನು ಯಾವ ಧರ್ಮ ನೀಡುತ್ತದೆ, ಸಂವಿಧಾನ ಧರ್ಮ ವಿರೋಧಿಯಲ್ಲ ಸಂವಿಧಾನ ಧರ್ಮದ ಮುಂದುವರಿದ ಸುಧಾರಿತ ಪ್ರಗತಿಪರ ನೀತಿ ನಿಯಮಗಳ ಸಂಪುಟ. ಯಾರನ್ನು ಭೇದವೆಣಿಸದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣುತ್ತದೆ. ಎಲ್ಲೋ ಕೆಲವು ಧಾರ್ಮಿಕ ವಿಷಯಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ವಿಷಯದಲ್ಲಿ ಒಂದಷ್ಟು ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಅದನ್ನು ರಾಜಕೀಕರಣಗೊಳಿಸದೆ ಸಹಜವಾಗಿಯೇ ಸ್ವೀಕರಿಸಿ ಈ ದೇಶದ ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಅತ್ಯುತ್ತಮವಾಗಿ ಬದುಕಬಹುದು….

ಭಾರತೀಯತೆ ಎಂಬುದನ್ನು ಮುಂದೆ ಮಾಡಬೇಕು, ಹಿಂದುತ್ವ ಎಂದು ಕೇವಲ ಮೇಲ್ವರ್ಗದವರು ಮಾತ್ರ ಬಡಿದಾಡಿದರೆ ಅದು ಕಪಟ ನಾಟಕವಾಗುತ್ತದೆ. ಕೆಲವು ಬಲಿಷ್ಠ ಜಾತಿಗಳನ್ನು ಕೆಳ ವರ್ಗದವರ ಮೇಲೆ ಎತ್ತಿಕಟ್ಟುವ ಕುತಂತ್ರವನ್ನು ನಿಲ್ಲಿಸಬೇಕು……

” ಸಂವಿಧಾನ ”
ಈ ನೆಲದ ಸಾಂಸ್ಕೃತಿಕ ವ್ಯಕ್ತಿತ್ವ…….

ನವೆಂಬರ್ 26…

ಕಾನೂನು ದಿನ – ಈಗ – ಸಂವಿಧಾನ ದಿನ…………

ಸಂವಿಧಾನ ಎಂದರೇನು ?

ಅದೊಂದು ಸಂಸ್ಕೃತಿಯೇ ? ಸಂಪ್ರದಾಯವೇ ? ಪದ್ದತಿಯೇ ? ಸಿದ್ಧಾಂತವೇ ? ಆಚರಣೆಯೇ ?
ನೀತಿ ನಿಯಮಗಳೇ ? ಬದುಕೇ ?
ಜೀವನ ವಿಧಾನವೇ ? ರಕ್ಷಾ ಕವಚವೇ ? ಮಾರ್ಗಸೂಚಕಗಳೇ ?
ನಾಗರಿಕ ಮಾನದಂಡಗಳೇ ? ಧರ್ಮದ ಮುಂದುವರಿದ ಭಾಗವೇ ? ಅನಿವಾರ್ಯ ಹಕ್ಕು ಮತ್ತು ಕರ್ತವ್ಯಗಳೇ ? ದುಷ್ಟರಿಗೆ ಶಿಕ್ಷೆ ಶಿಷ್ಟರಿಗೆ ರಕ್ಷಣೆಯ ಸೂತ್ರಗಳೇ ? ಸ್ವಾತಂತ್ರ್ಯ – ಸಮಾನತೆಯ ಲಕ್ಷಣಗಳೇ ? ಮಾನವೀಯ ಮೌಲ್ಯಗಳೇ ? ಸೃಷ್ಟಿಯ ನಿಷ್ಠೆಯೇ ? ಜೀವಪರ ನಿಲುವುಗಳೇ ? ದೇಶ ಮತ್ತು ಜನತೆಯ ನೆಮ್ಮದಿಯ ತಂತ್ರಗಳೇ ?
ಅಥವಾ ಇವುಗಳೆಲ್ಲವುಗಳ ಒಟ್ಟು ಸಮೀಕರಣವೇ ?

ಬಹುಶಃ ಭಾರತದ ಸಂವಿಧಾನದ ಪೀಠಿಕೆ ಮತ್ತು ಅದರ ಆಳ ಅಗಲಗಳನ್ನು ಗಮನಿಸಿದಾಗ ಈ ಎಲ್ಲಾ ಸಾರಾಂಶಗಳ ಒಟ್ಟು ಮೊತ್ತ ಎಂದು ನಿರ್ಧರಿಸಬಹುದು.

ಧರ್ಮ ಮತ್ತು ಸಂವಿಧಾನ…….

ಧರ್ಮದ ಮುಂದುವರಿದ ಭಾಗವೇ ಸಂವಿಧಾನ ಎಂದೂ ಅರ್ಥೈಸಬಹುದು. ಆದರೆ ಧರ್ಮವನ್ನು ಮೀರಿದ ಸ್ವಾತಂತ್ರ್ಯ, ಸಮಾನತೆ, ಮಾನವೀಯತೆ, ಸಹಜತೆ ಸಂವಿಧಾನದಲ್ಲಿ ಅಡಕವಾಗಿರುತ್ತದೆ. ಅನೇಕ ಕಾರಣಗಳಿಗಾಗಿ ಎಲ್ಲಾ ಧರ್ಮದಲ್ಲಿ ಒಂದಷ್ಟು ಅಮಾನವೀಯ ಅಸ್ವಾಭಾವಿಕ ಹುಳುಕುಗಳು ಸೇರಿರುತ್ತವೆ. ಶ್ರೇಷ್ಠತೆಯ ವ್ಯಸನ ಧರ್ಮಗಳ ಬಹುದೊಡ್ಡ ಲೋಪ. ಹಾಗೆಯೇ ಸಾಮಾನ್ಯವಾಗಿ ಧರ್ಮಗಳು ಬದಲಾವಣೆಗಳನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ….

ಆದರೆ ಸಂವಿಧಾನದಲ್ಲಿ ಆ ರೀತಿಯ ಲೋಪದೋಷಗಳು ತುಂಬಾ ಕಡಿಮೆ ಮತ್ತು ಕಾಲದ ಪ್ರವಾಹದಲ್ಲಿ ಆ ರೀತಿಯ ವ್ಯತ್ಯಾಸ ಕಂಡುಬಂದರೆ ತಿದ್ದುಪಡಿಗೆ ಸದಾ ಅವಕಾಶ ಇದ್ದೇ ಇರುತ್ತದೆ….

ಸಂವಿಧಾನ ಮತ್ತು ಧರ್ಮದ ಆಯ್ಕೆಯಲ್ಲಿ ನಮ್ಮ ನಿಲುವು ಯಾವುದಿರಬೇಕು ? ಬಹುಶಃ ಇದು ಪಂಥೀಯ ವಾದಗಳು ಹೆಚ್ಚು ಪ್ರಚಲಿತದಲ್ಲಿರುವ ಈ ಸಂದರ್ಭದಲ್ಲಿ ಬಹುಮುಖ್ಯ ಪ್ರಶ್ನೆಯಂತೆ ಕೆಲವರನ್ನು ಕಾಡುತ್ತಿರಬಹುದು. ಧಾರ್ಮಿಕ ಮೂಲಭೂತವಾದಿಗಳು ಧರ್ಮ ಎಂದರೆ, ಅತಿರೇಕದ ಎಡಪಂಥೀಯರು ಸಂವಿಧಾನ ‌ಎಂದರೆ, ಮಧ್ಯಮ ಮಾರ್ಗಿಗಳು ಎರಡೂ ಮುಖ್ಯ ಎಂದು ಹೇಳುವುದನ್ನು ಗಮನಿಸಿದ್ದೇನೆ. ಸಾಮಾಜಿಕ ರಾಜಕೀಯ ಸಾಮರಸ್ಯ ತೀರಾ ಕೆಳಹಂತದಲ್ಲಿ ಇಳಿದಿರುವಾಗ ಇದು ಸಹಜ……

ಹಾಗಾದರೆ ವಾಸ್ತವ ಏನು ?

ಧರ್ಮ ಮತ್ತು ಸಂವಿಧಾನ ಎರಡು ವಿರುದ್ಧ ಚಿಂತನೆಗಳೇನಲ್ಲ. ಸಾಮಾನ್ಯ ಜ್ಞಾನವನ್ನು ಉಪಯೋಗಿಸಿದರೆ ಸಾಕು ಅವು ಎರಡು ಒಂದಕ್ಕೊಂದು ಪೂರಕ, ಅದರಲ್ಲೂ ಭಾರತದ ಸಂವಿಧಾನ ಬಹುತೇಕ ಎಲ್ಲಾ ರೀತಿಯ ಸ್ವಾತಂತ್ರ್ಯವನ್ನು ಮುಖ್ಯವಾಗಿ ಧಾರ್ಮಿಕ ಸ್ವಾತಂತ್ರ್ಯವನ್ನು ಎಲ್ಲರಿಗೂ ನೀಡಿದೆ ಎಂದು ಅರ್ಥವಾಗುತ್ತದೆ…..

ಸಾಮಾನ್ಯ ಜನರಲ್ಲಿ ಸಂವಿಧಾನವನ್ನೇ ಒಂದು ಧರ್ಮ ಎಂದು ಆಚರಿಸುವುದು ಒಂದು ಸಮಸ್ಯೆಯಲ್ಲ. ಸಂವಿಧಾನದಲ್ಲಿ ಧಾರ್ಮಿಕ ಆಧ್ಯಾತ್ಮಿಕ ಆಚರಣೆಗೆ ಎಲ್ಲಾ ಅವಕಾಶಗಳು ಇವೆ. ಆದರೆ ಸಮಸ್ಯೆ ಇರುವುದು ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದ ಮುಖಂಡರಿಂದ. ರಾಜಕೀಯ ಮೇಲಾಟಕ್ಕಾಗಿ ಧರ್ಮವನ್ನು ಎಳೆದು ತರುವುದು, ಹಾಗೆಯೇ ಧರ್ಮಾಧಿಕಾರಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಧರ್ಮದ ಅಮಲನ್ನು ಜನರಲ್ಲಿ ತುಂಬುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಒಂದು ಸಣ್ಣ ಉದಾಹರಣೆ ನೋಡಿ.‌‌‌…

ಧರ್ಮಗಳು ( ಮತಗಳು ) ಜನರನ್ನು ಹಿಂದು ಮುಸ್ಲಿಮ್ ಕ್ರಿಶ್ಚಿಯನ್ ಸಿಖ್ ಪಾರ್ಸಿ ಜೈನ್ ಬೌದ್ಧ ವೀರಶೈವ ಲಿಂಗಾಯತ ಎಂದು ವಿಂಗಡಿಸಿದರೆ ನಮ್ಮ ಸಂವಿಧಾನ ಎಲ್ಲರನ್ನೂ ಭಾರತೀಯರು ಎಂದು ಸಮನಾಗಿ ಕಾಣುತ್ತದೆ. ಹಾಗಾದರೆ ನಮ್ಮ ಆಯ್ಕೆ ವಿಭಜನೆಗೋ ಸಮಾನತೆಗೋ ಯೋಚಿಸಿ ನಿರ್ಧರಿಸಿ…..

ಹಾಗಾದರೆ ಸಂವಿಧಾನದಿಂದ ಭಾರತದ ಎಲ್ಲಾ ಪ್ರಜೆಗಳಿಗೆ ಸ್ವಾತಂತ್ರ್ಯ ಮತ್ತು ಸಮಾನತೆ ದೊರೆತಿದೆಯೇ ಎಂದರೆ ಖಂಡಿತ ಇಲ್ಲ ಎಂದೇ ಹೇಳಬೇಕಾಗುತ್ತದೆ. ತಾಂತ್ರಿಕವಾಗಿ ಮತ್ತು ಪುಸ್ತಕದಲ್ಲಿ ಸಮಾನತೆ ಇದ್ದರು ವಾಸ್ತವದಲ್ಲಿ ಅದು ಬಲಿಷ್ಠರ ಮತ್ತು ಅಪರಾಧಿಗಳ ಆಶ್ರಯ ತಾಣವೇ ಆಗಿದೆ. ” ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರು ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ” ಎಂಬ ಉದಾತ್ತ ಧ್ಯೇಯದ ದುರುಪಯೋಗ ಎಲ್ಲೆಡೆಯೂ ಕಂಡುಬರುತ್ತಿದೆ. ಹಣ – ಸಾಕ್ಷಿ ಮತ್ತು ತಂತ್ರಗಾರಿಕೆಯೇ ಕಾನೂನಿನ ಮುಖ್ಯ ಆಧಾರ ಸ್ಥಂಭವಾಗಿ ನೈತಿಕತೆಗೆ ಯಾವ ಜಾಗವೂ ಇಲ್ಲ…..

ಆದ್ದರಿಂದಲೇ ಸುಪ್ರೀಂ ಕೋರ್ಟ್ ಸಹ ” Courts will delivers the law not the Justice ”
” ನ್ಯಾಯಾಲಯಗಳು ಕಾನೂನು ನೀಡುತ್ತವೆಯೇ ಹೊರತು ನ್ಯಾಯವೇ ಆಗಿರುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ ” ಎಂಬ ಅರ್ಥದ ಮಾತುಗಳನ್ನು ಹೇಳಿದೆ ಎಂದು ವಕೀಲರೊಬ್ಬರು ಹೇಳಿದರು….

ಇದರ ಒಟ್ಟು ತಾತ್ಪರ್ಯ ಇಷ್ಟೇ. ಧರ್ಮವೇ ಇರಲಿ, ಕಾನೂನೇ ಇರಲಿ ವ್ಯಕ್ತಿಗಳಲ್ಲಿ ಮತ್ತು ಸಮಾಜದಲ್ಲಿ ನೈತಿಕತೆ ಮತ್ತು ಮಾನವೀಯತೆ ಕುಸಿದಾಗ ಎಲ್ಲವೂ ವಿಫಲವಾಗುತ್ತದೆ….

ಈ ಕ್ಷಣದಲ್ಲಿ ಸಂವಿಧಾನವೂ ಕೂಡ ಸಮಾಧಾನಕರವಾಗಿ ಜನರ ಹಿತ ರಕ್ಷಣೆಯನ್ನು ಮಾಡುತ್ತಿದೆ ಎಂದು ಆತ್ಮಸಾಕ್ಷಿಯಾಗಿ ಹೇಳಲು ಸಾಧ್ಯವಾಗುತ್ತಿಲ್ಲ…..

ಯಾವುದೇ ಅಪರಾಧಗಳಲ್ಲಿ ಶೇಕಡಾ 90 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಪಕ್ಷಾಂತರ ನಿಷೇಧ ಕಾನೂನು ಜಾರಿಯಲ್ಲಿದ್ದರು ಶಾಸಕರ ಮಾರಾಟ ಬಹಿರಂಗವಾಗಿ ನಡೆಯುತ್ತಿದೆ, ಭ್ರಷ್ಟಾಚಾರ ವಿರೋಧಿ ಕಾನೂನುಗಳು ಇದ್ದರು ಇಡೀ ವ್ಯವಸ್ಥೆ ಭ್ರಷ್ಟಗೊಂಡಿದೆ….

ಆದ್ದರಿಂದ ಸಂವಿಧಾನ ದಿನದ ಇಂದು ಕನಿಷ್ಠ
” ಸಂವಿಧಾನ ಎಂಬುದು ಕೇವಲ ಧರ್ಮವಲ್ಲ ಅಥವಾ ಕಾನೂನಲ್ಲ. ಅದು ಭಾರತೀಯ ಸಮಾಜದ ಜೀವನ ವಿಧಾನ. ನಾಗರಿಕ ಸಮಾಜದ ಹಕ್ಕು ಮತ್ತು ಕರ್ತವ್ಯಗಳ ಪ್ರಜ್ಞೆ. ಮಾನವೀಯ ಮೌಲ್ಯಗಳ ವಿಕಾಸದ ಮಾರ್ಗ. ಅದನ್ನು ಗೌರವಿಸೋಣ – ಅನುಸರಿಸೋಣ – ಕಾಲಕ್ಕೆ ತಕ್ಕಂತೆ ಪ್ರಜಾಪ್ರಭುತ್ವ ನಿಯಮಗಳ ಅಡಿಯಲ್ಲಿ ತಿದ್ದುಪಡಿ ಒಪ್ಪಿಕೊಳ್ಳೋಣ – ಜನರ ಜೀವನಮಟ್ಟ ಸುಧಾರಿಸಲು ಮತ್ತಷ್ಟು ಬಲಪಡಿಸೋಣ ” ಎಂದು ಆತ್ಮಸಾಕ್ಷಿಯ ಪ್ರತಿಜ್ಞೆ ಮಾಡೋಣ….

” ಸಂವಿಧಾನ ಪುಸ್ತಕ ರೂಪದ ಅಕ್ಷರಗಳಲ್ಲ. ಅದು ಭಾರತೀಯ ಸಮಾಜದ ಸಾಂಸ್ಕೃತಿಕ ವ್ಯಕ್ತಿತ್ವ “…

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಗಣೇಶ ಹಬ್ಬದ ಸಂಭ್ರಮದ ನಡುವೆ ಮಸಣವಾದ ಮನೆ: ಅಗ್ನಿ ದುರಂತಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ

ಬೆಳಗಾವಿ: ಗಣೇಶ ಚತುರ್ಥಿ ದಿನವೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿರುವ…

1 hour ago

ಗುಂಡಿ ರಸ್ತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳೇ ಬಲಿಪಶು: ಹದಗೆಟ್ಟ ರಸ್ತೆ–ನಿರ್ವಹಣೆ ಕೊರತೆ; ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುವ ಬಸ್‌ಗಳಿಂದ ಪ್ರಯಾಣಿಕರ ಪರದಾಟ

ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.…

13 hours ago

ಗಜಮುಖನ ಆರಾಧನೆಯಲ್ಲಿ ಮಿಂದೆದ್ದ ದೊಡ್ಡಬಳ್ಳಾಪುರ: ಬೆಸ್ತರಪೇಟೆಯಲ್ಲಿ 14 ಅಡಿ ಎತ್ತರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ: 7ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ಮೆರುಗು

ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…

14 hours ago

ಗಣೇಶ ವಿಸರ್ಜನೆಗೆ ಗುಂಡಮಗೆರೆ ಕೆರೆ ಬಳಿ ವಿಶೇಷ ವ್ಯವಸ್ಥೆ

ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…

15 hours ago

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

19 hours ago

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

1 day ago