ಮಳೆ ಕೊರತೆ; ಮತ್ಸ್ಯ ಕೃಷಿಗೂ ಹೊಡೆತ!

ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ ಬರಿದಾಗಿರುವ ಪರಿಣಾಮ ಮೀನುಮರಿ ಬಿತ್ತನೆ ಕುಂಠಿತಗೊಂಡಿದ್ದು, ಮೀನು ಉತ್ಪಾದನೆಯಲ್ಲೂ ಭಾರಿ ಹಿನ್ನಡೆ ಕಂಡುಬಂದಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಮೀನುಗಳ ಪೂರೈಕೆ ಕೊರತೆಯಾಗಿ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ಒಟ್ಟು 1,032 ಕೆರೆಗಳಿದ್ದು, 103 ಕೆರೆಗಳನ್ನು ಮೀನುಗಾರಿಕೆಗೆ ಗುರುತಿಸಲಾಗಿದೆ. ಈ ಕೆರೆಗಳನ್ನು ಟೆಂಡರ್ ಮೂಲಕ ಮೀನುಗಾರಿಕೆಗೆ ಹಸ್ತಾಂತರಿಸಲಾಗುತ್ತದೆ. ಆದರೆ ಪ್ರಸಕ್ತ ಸಾಲಿನಲ್ಲಿ 103 ಕೆರೆಗಳ ಪೈಕಿ 32 ಕೆರೆಗಳನ್ನು ಮಾತ್ರ ಮೀನುಗಾರಿಕೆಗೆ ವಿಲೇವಾರಿ ಮಾಡಲಾಗಿದೆ. ಇದರಿಂದ ಶೇ.31ರಷ್ಟು ಮಾತ್ರ ಸಾಧನೆಯಾಗಿದೆ. ಕೆರೆಗಳ ಹರಾಜು ಪ್ರಕ್ರಿಯೆಯನ್ನು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ನೀಡಲಾಗುತ್ತಿದ್ದು, ಈಗಾಗಲೇ ಹರಾಜು ಮಾಡಿರುವ ಕೆರೆಗಳ ನವೀಕರಣ ಕಾರ್ಯವನ್ನು ಮೀನುಗಾರಿಕೆ ಇಲಾಖೆ ಕೈಗೊಳ್ಳುತ್ತಿದೆ.

ಮೀನುಮರಿ ಬಿತ್ತನೆಗೆ ಮಳೆ ಅಡ್ಡಿ: ಸಾಮಾನ್ಯವಾಗಿ ಮುಂಗಾರು ಆರಂಭವಾದ ಬಳಿಕ ಕೆರೆಗಳಿಗೆ ಹೊಸ ನೀರು ಹರಿದುಬಂದಾಗ ಮೀನುಮರಿ ಬಿತ್ತನೆ ಮಾಡಲಾಗುತ್ತದೆ. ಆದರೆ ಈ ಬಾರಿ ಮುಂಗಾರು ಆರಂಭದಲ್ಲೇ ಮಳೆ ಕೊರತೆ ಎದುರಾದ ಕಾರಣ ಕೆರೆಗಳಲ್ಲಿ ಅಗತ್ಯ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಹೀಗಾಗಿ ಮೀನುಮರಿ ಬಿತ್ತನೆ ಗುರಿ ಸಾಧನೆಯಲ್ಲೂ ಭಾರಿ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ವಾರ್ಷಿಕವಾಗಿ 69.56 ಲಕ್ಷ ಮೀನುಮರಿಗಳ ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಆದರೆ ಸೆಪ್ಟೆಂಬರ್ ಆರಂಭದ ವೇಳೆಗೆ 37.80 ಲಕ್ಷ ಮೀನುಮರಿಗಳನ್ನು ಮಾತ್ರ ಬಿತ್ತನೆ ಮಾಡಲಾಗಿದೆ. ಇದರಿಂದ ಶೇ.54ರಷ್ಟು ಗುರಿ ಸಾಧನೆಯಾಗಿದ್ದು, ಶೇ.46ರಷ್ಟು ಗುರಿ ಬಾಕಿ ಉಳಿದಿದೆ.

ಗ್ರಾಪಂ ಕೆರೆಗಳಲ್ಲೂ ನೀರಿಲ್ಲ

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲೂ ಮತ್ಸ್ಯಪಾಲನೆ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಜಿಲ್ಲೆಯ 115 ಗ್ರಾಪಂ ಕೆರೆಗಳಲ್ಲಿ ಮತ್ಸ್ಯಪಾಲನೆ ಗುರಿ ಹೊಂದಲಾಗಿದ್ದು, ಕೇವಲ 20 ಕೆರೆಗಳಲ್ಲಿ ಮಾತ್ರ ಮತ್ಸ್ಯಪಾಲನೆ ಅಳವಡಿಸಲಾಗಿದೆ. ಗ್ರಾಪಂ ಕೆರೆಗಳಿಗೆ 25.20 ಲಕ್ಷ ಮೀನುಮರಿಗಳ ಬಿತ್ತನೆ ಗುರಿ ನಿಗದಿಪಡಿಸಿದ್ದರೂ, ಇದುವರೆಗೆ ಕೇವಲ 4.35 ಲಕ್ಷ ಮೀನುಮರಿಗಳನ್ನು ಬಿತ್ತನೆ ಮಾಡಲಾಗಿದೆ. ಇದರಿಂದ ಈ ವಿಭಾಗದಲ್ಲೂ ಗುರಿ ಸಾಧನೆ ತೀವ್ರವಾಗಿ ಕುಸಿದಿದೆ. ಖಾಸಗಿ ಕೊಳಗಳಿಗೂ ಬರದ ಬಿಸಿ: ಖಾಸಗಿ ಕೊಳಗಳ ಮತ್ಸ್ಯಪಾಲನೆ ಮೇಲೂ ಬರದ ಪರಿಣಾಮ ಬೀರಿದೆ. 11.56 ಹೆಕ್ಟೇರ್ ಖಾಸಗಿ ಕೊಳಗಳಲ್ಲಿ ಮತ್ಸ್ಯಪಾಲನೆ ಮಾಡುವ ಗುರಿ ಹೊಂದಿದ್ದರೂ, ಕೇವಲ 4.32 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಮತ್ಸ್ಯಪಾಲನೆ ನಡೆಯುತ್ತಿದೆ. ಖಾಸಗಿ ಕೊಳಗಳಲ್ಲಿ 1.26 ಲಕ್ಷ ಮೀನುಮರಿಗಳ ಬಿತ್ತನೆ ಗುರಿ ಹೊಂದಿದ್ದು, 92 ಸಾವಿರ ಮೀನುಮರಿಗಳ ಬಿತ್ತನೆ ಮಾಡಲಾಗಿದೆ.

8,500 ಟನ್ ಗುರಿಗೆ 800 ಟನ್!

ಮೀನುಮರಿ ಬಿತ್ತನೆ ಕುಂಠಿತಗೊಂಡಿರುವ ಪರಿಣಾಮ ಮೀನು ಉತ್ಪಾದನೆಯ ಮೇಲೂ ನೇರ ಪರಿಣಾಮ ಬಿದ್ದಿದೆ. ಜಿಲ್ಲೆಯಲ್ಲಿ ವಾರ್ಷಿಕ 8,500 ಟನ್ ಮೀನು ಉತ್ಪಾದನೆ ಗುರಿ ಹೊಂದಲಾಗಿದೆ. ಆದರೆ ಸೆಪ್ಟೆಂಬರ್ ಆರಂಭದವರೆಗೆ ಕೇವಲ 800 ಟನ್ ಮೀನು ಉತ್ಪಾದನೆಯಾಗಿದೆ. ಅಂದರೆ ವಾರ್ಷಿಕ ಗುರಿಯ ಶೇ.10ರಷ್ಟೂ ಉತ್ಪಾದನೆ ಆಗಿಲ್ಲ. ಸದ್ಯ ಜಿಲ್ಲೆಯ ಶೇ.70ಕ್ಕೂ ಹೆಚ್ಚು ಕೆರೆಗಳು ಬರಿದಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮೀನು ಉತ್ಪಾದನೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.

ಬೆಲೆ ಏರಿಕೆ ಸಾಧ್ಯತೆ

ಕೆರೆಗಳಲ್ಲಿ ನೀರಿನ ಕೊರತೆಯಿಂದ ಮೀನು ಸಾಕಾಣಿಕೆ ಕುಂಠಿತಗೊಂಡರೆ ಸ್ಥಳೀಯ ಮಾರುಕಟ್ಟೆಗೆ ಮೀನುಗಳ ಪೂರೈಕೆ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಸಮುದ್ರ ಮೀನುಗಳ ಜತೆಗೆ ಒಳನಾಡು ಮೀನುಗಳ ದರವೂ ಏರಿಕೆಯಾಗುವ ಸಾಧ್ಯತೆ ಇದೆ. ಉತ್ತಮ ಗಾತ್ರದ ಮೀನುಗಳ ಲಭ್ಯತೆಯ ಮೇಲೂ ಪರಿಣಾಮ ಬೀರುವ ಆತಂಕವಿದೆ. ಮೀನುಗಾರಿಕೆಗೆ ಕೆರೆಗಳ ವಿಲೇವಾರಿ ಮೂಲಕ ಜಿಲ್ಲೆಯಲ್ಲಿ 40,90,101 ಆದಾಯ ಸಂಗ್ರಹವಾಗಿದೆ. ಆದರೆ ಕೆರೆಗಳಲ್ಲಿ ನೀರಿನ ಕೊರತೆ ಮುಂದುವರಿದಿರುವುದರಿಂದ ಮೀನುಗಾರಿಕೆ ಹಕ್ಕು ಪಡೆದಿರುವ ಗುತ್ತಿಗೆದಾರರು ಹಾಗೂ ಮೀನುಗಾರರ ಮೇಲೂ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ.

ಮಳೆ ಕೊರತೆಯಿಂದ ಜಿಲ್ಲೆಯ ಕೆರೆಗಳು ಬರಿದಾಗಿದ್ದು, ಮೀನುಮರಿ ಬಿತ್ತನೆಗೂ ಸಮಸ್ಯೆಯಾಗಿದೆ. ನೀರಿನ ಲಭ್ಯತೆ ಕಡಿಮೆಯಾಗಿರುವುದು ಮತ್ಸ್ಯಪಾಲನೆ ಮತ್ತು ಮೀನು ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಶಿವಶಂಕರ್ ಹೇಳಿದ್ದಾರೆ.

Ramesh Babu

Journalist

Recent Posts

ಪೌರ ಕಾರ್ಮಿಕನಿಗೆ ಮಹಿಳೆಯಿಂದ ನಿಂದನೆ ಆರೋಪ: ಮನೆ ಮುಂದೆ ಕಸ ಸುರಿದು ಆಕ್ರೋಶ

ನೆಲಮಂಗಲ: ನಗರದ ವೀವರ್ಸ್ ಕಾಲೋನಿಯ ಮಾರುತಿ ನಗರದಲ್ಲಿ ಕಸ ತೆರವು ವಿಚಾರವಾಗಿ ಮಹಿಳೆ ಮತ್ತು ಪೌರ ಕಾರ್ಮಿಕನ ನಡುವೆ ವಾಗ್ವಾದ…

2 hours ago

ಜಿಲ್ಲೆಯಲ್ಲಿ 8,04,534 ಮತದಾರರು: 3814 ಮತದಾರರ ಹೆಸರು ಡಿಲಿಟ್

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಂತಿಮ ಮತದಾರರ ಪಟ್ಟಿಯುಲ್ಲಿ 8,04,534 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್…

20 hours ago

ಅತಿಯಾದ ಆತ್ಮವಿಶ್ವಾಸದಿಂದ ಕಾಂಗ್ರೆಸ್‌ಗೆ ಹಿನ್ನಡೆ: ಸಚಿವ ಚಲುವರಾಯಸ್ವಾಮಿ

ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಹಾಗೂ ಎರಡು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿರುವುದಕ್ಕೆ ಅತಿಯಾದ ಆತ್ಮವಿಶ್ವಾಸವೂ…

22 hours ago

ಪ್ರಾಮಾಣಿಕತೆಯ ಪ್ರಾಯೋಗಿಕತೆ…….

ಪ್ರಾಮಾಣಿಕತೆ ಎಂಬುದು ಬರಹದಲ್ಲಿ - ಭಾಷಣಗಳಲ್ಲಿ ಅಥವಾ ಬೇರೆ ಯಾವುದೇ ವೇದಿಕೆಯಲ್ಲಿ ‌ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಹೇಳುವುದು ಮತ್ತು ಅದರಂತೆ…

1 day ago

ದೇವನಹಳ್ಳಿ ಬಳಿ ಆರ್‌ಟಿಒ ಮೆಗಾ ರೇಡ್‌: 50ಕ್ಕೂ ಹೆಚ್ಚು ಬಸ್‌ಗಳಿಂದ ತೆರಿಗೆ ವಸೂಲಿ

ದೇವನಹಳ್ಳಿ: ಕರ್ನಾಟಕ ರಾಜ್ಯಕ್ಕೆ ಪಾವತಿಸಬೇಕಾದ ತೆರಿಗೆಯನ್ನು ಕಟ್ಟದೆ ಸಂಚರಿಸುತ್ತಿದ್ದ ಹೊರರಾಜ್ಯಗಳಲ್ಲಿ ನೋಂದಣಿಯಾದ ಖಾಸಗಿ ಬಸ್‌ಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು…

1 day ago

ರಸ್ತೆಗಳಲ್ಲಿ ಮೊಳೆಗಳ ರಾಶಿ: ‘ಪಂಕ್ಚರ್‌ ದಂಧೆ’ ಶಂಕೆ: ವಾಹನಗಳ ಟೈರ್‌ ಪದೇಪದೇ ಠುಸ್‌

ಜಿಲ್ಲೆಯಲ್ಲಿ ಇತ್ತೀಚೆಗೆ ವಾಹನಗಳ ಟೈರ್‌ಗಳು ಪಂಕ್ಚರ್‌ ಆಗುವ ಪ್ರಕರಣಗಳು ಹೆಚ್ಚುತ್ತಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿವೆ. ರಸ್ತೆಗಳಲ್ಲಿ ಮೊಳೆ ಹಾಗೂ ಮೊನಚಾದ…

1 day ago