ಶಿಷ್ಟಾಚಾರ ವಿವಾದಕ್ಕೆ ಮತ್ತಷ್ಟು ಕಾವು: ಶಾಸಕರಿಗೆ ಕಾನೂನು, ಶಿಷ್ಟಾಚಾರದ ಅರಿವಿಲ್ಲ- ಶಾಸಕ ಧೀರಜ್ ಮುನಿರಾಜ್ ವಿರುದ್ಧ ಮಾಜಿ ಶಾಸಕ ವೆಂಕಟರಮಣಯ್ಯ ವಾಗ್ದಾಳಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಧೀರಜ್ ಮುನಿರಾಜು ಹಾಗೂ ಮಾಜಿ ಶಾಸಕ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ (ಡಿಪಿಎ) ಅಧ್ಯಕ್ಷ ಟಿ. ವೆಂಕಟರಮಣಯ್ಯ ನಡುವಿನ ವಾಕ್ಸಮರ ಮುಂದುವರಿದಿದ್ದು, ಇದೀಗ ಶಿಷ್ಟಾಚಾರ ಹಾಗೂ ಸರ್ಕಾರಿ ಕಾರ್ಯಕ್ರಮಗಳ ವೇದಿಕೆ ವಿಚಾರವಾಗಿ ಇಬ್ಬರ ನಡುವಿನ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.

ತಮ್ಮ ವಿರುದ್ಧ ಶಾಸಕ ಧೀರಜ್ ಮುನಿರಾಜು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಟಿ. ವೆಂಕಟರಮಣಯ್ಯ, ಡಿಪಿಎ ಅಧ್ಯಕ್ಷ ಸ್ಥಾನ ಶಿಷ್ಟಾಚಾರಕ್ಕೆ ಒಳಪಡುವುದಿಲ್ಲ ಎಂದು ಹೇಳಿರುವ ಶಾಸಕರಿಗೆ ಯೋಜನಾ ಪ್ರಾಧಿಕಾರದ ಕಾನೂನು ಹಾಗೂ ಶಿಷ್ಟಾಚಾರದ ಬಗ್ಗೆ ಅರಿವು ಇಲ್ಲ ಎಂದು ಟೀಕಿಸಿದರು.

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರವು ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯಡಿ ರಚನೆಯಾಗಿರುವ ಶಾಸನಬದ್ಧ ಹಾಗೂ ಸ್ವಾಯತ್ತ ಸಂಸ್ಥೆಯಾಗಿದೆ. ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರದ ಜೇಷ್ಠತಾ ಪಟ್ಟಿಯಲ್ಲಿ ಗೌರವ ಹಾಗೂ ಸ್ಥಾನಮಾನವಿದೆ ಎಂದು ಹೇಳಿದರು.

ಇದು ಪ್ರಜಾಪ್ರಭುತ್ವ ದೇಶ. ಶಾಸಕರು ತಾಲೂಕಿನ ಮಾಲೀಕರಲ್ಲ. ಸರ್ಕಾರಿ ಕಾರ್ಯಕ್ರಮಗಳು ಯಾವುದೇ ವ್ಯಕ್ತಿ ಅಥವಾ ಪಕ್ಷದ ಖಾಸಗಿ ಕಾರ್ಯಕ್ರಮಗಳಲ್ಲ. ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಮುಖ್ಯ ಅತಿಥಿಯಾಗಿ ಹೆಸರು ಮುದ್ರಿಸಿ, ವೇದಿಕೆಯಲ್ಲಿ ಮಾತನಾಡಲು ಅವಕಾಶ ನೀಡದಿರುವುದು ಸರಿಯಲ್ಲ ಎಂದು ವೆಂಕಟರಮಣಯ್ಯ ಹೇಳಿದರು.

ಅಧಿಕಾರಿಗಳಿಗೆ ತಮ್ಮನ್ನು ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ನೀಡಬಾರದು ಎಂದು ಸೂಚಿಸಿರುವುದಾಗಿ ಆರೋಪಿಸಿದ ಅವರು, ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಶಾಸಕರು ತಾಲೂಕಿನ ಮಾಲೀಕರಲ್ಲ ಎಂದು ತಿರುಗೇಟು ನೀಡಿದರು.

ಜನರ ಕೆಲಸಕ್ಕಾಗಿ ಅಧಿಕಾರಿಗಳೊಂದಿಗೆ ಸಂಪರ್ಕ

ತಾವು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ವೆಂಕಟರಮಣಯ್ಯ, ನಾನು ಯಾವುದೇ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿಲ್ಲ. ಸರ್ಕಾರದ ವ್ಯವಸ್ಥೆಯನ್ನು ಬಳಸಿಕೊಂಡು ಜನಪರ ಕೆಲಸಗಳನ್ನು ಮಾಡಿಸುತ್ತಿದ್ದೇನೆ. ತಾಲೂಕಿನ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವುದನ್ನು ವಿರೋಧ ಪಕ್ಷದ ನಾಯಕರು ಸಹಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಶಾಸಕರಿಗೆ ಯೋಗ್ಯತೆ ಇದ್ದರೆ ಸರ್ಕಾರದಿಂದ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ತಂದು ತೋರಿಸಲಿ. ಅದನ್ನು ಬಿಟ್ಟು ವೈಯಕ್ತಿಕ ಟೀಕೆಗೆ ಇಳಿಯುವುದು ಸರಿಯಲ್ಲ ಎಂದರು.

‘ವಿಶ್ರಾಂತಿ ನೀಡುವುದು ಜನರ ತೀರ್ಮಾನ’

ತಮ್ಮ ರಾಜಕೀಯ ವಿಶ್ರಾಂತಿ ಕುರಿತು ಜೆಡಿಎಸ್ ಮುಖಂಡರು ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಸೋತಿದ್ದರೂ ಜನರ ನಡುವೆಯೇ ಇದ್ದೇನೆ. ತಮ್ಮ ಸುದೀರ್ಘ ರಾಜಕೀಯ ಅನುಭವ ಹಾಗೂ ಜನಸೇವೆಯನ್ನು ಗುರುತಿಸಿ ಸರ್ಕಾರ ಡಿಪಿಎ ಅಧ್ಯಕ್ಷ ಸ್ಥಾನ ನೀಡಿದೆ ಎಂದರು.

ಮನೆಗೆ ಕೂತುಕೊಳ್ಳಿ ಎಂದು ಹೇಳಲು ಜೆಡಿಎಸ್ ನಾಯಕರು ಜನಾದೇಶ ಕೊಟ್ಟ ಮಾಲೀಕರಲ್ಲ. ಮುಂದಿನ ದಿನಗಳಲ್ಲಿ ಯಾರಿಗೆ ವಿಶ್ರಾಂತಿ ನೀಡಬೇಕು ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ ಎಂದು ಹೇಳಿದರು.

ಸರ್ಕಾರಿ ಕಾರ್ಯಕ್ರಮದಲ್ಲಿ ನಡೆದಿರುವ ಶಿಷ್ಟಾಚಾರ ಉಲ್ಲಂಘನೆ ಕುರಿತು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಲಿಖಿತ ದೂರು ಸಲ್ಲಿಸಲಾಗಿದೆ. ಮುಂದಿನ ಹಂತದಲ್ಲಿ ಡಿಪಿಎಆರ್‌ನ ಶಿಷ್ಟಾಚಾರ ವಿಭಾಗಕ್ಕೂ ದೂರು ಸಲ್ಲಿಸಲಾಗುವುದು ಎಂದು ವೆಂಕಟರಮಣಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಲಕ್ಷ್ಮೀಪತಿ ಜಿ, ಮುಖಂಡರಾದ ಚುಂಚೇಗೌಡ, ಬೈರೇಗೌಡ, ಹೇಮಂತರಾಜು, ಕೃಷ್ಣಮೂರ್ತಿ, ರವಿಕುಮಾರ್, ಶರತ್ ಪಟೇಲ್, ಶಿವಶಂಕರ್, ಸುಬ್ಬಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!