Categories: ಲೇಖನ

ವೆನಿಜುಲಾ ಮೇಲಿನ ಆಕ್ರಮಣ….ಈ ಜಗತ್ತಿಗೆ ಡೊನಾಲ್ಡ್ ಟ್ರಂಪ್ ಒಂದು ಗತಿ ಕಾಣಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ….

ಈ ಜಗತ್ತಿಗೆ ಡೊನಾಲ್ಡ್ ಟ್ರಂಪ್ ಒಂದು ಗತಿ ಕಾಣಿಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಹಪಾಹಪಿಸುತ್ತಿರುವ ವ್ಯಕ್ತಿ ಯಾವುದೇ ತಕ್ಷಣದ ಪ್ರಲೋಭನೆ, ಪ್ರಚೋದನೆ, ಯುದ್ಧ ಅಥವಾ ನಿರ್ಧಿಷ್ಟ ಮುನ್ನೆಚ್ಚರಿಕೆ ನೀಡದೆ ಒಂದು ಸಾರ್ವಭೌಮ, ಸ್ವತಂತ್ರ ದೇಶದೊಳಕ್ಕೆ ನುಗ್ಗಿ ಆ ದೇಶದ ಅಧ್ಯಕ್ಷರನ್ನು ಅವರ ಪತ್ನಿ ಸಮೇತ ಬಂಧಿಸಿ ಎಳೆದೊಯ್ದಿರುವುದು ಜಗತ್ತು ಮತ್ತೊಬ್ಬ ಹುಚ್ಚು ದೊರೆಯ ಕ್ರೌರ್ಯಕ್ಕೆ ಸಿಲುಕಿ ನಲುಗಬಹುದಾದ ಸಾಧ್ಯತೆ ಕಾಣುತ್ತಿದೆ……

ಅಮೆರಿಕ ದೇಶ ವಿಶ್ವದಲ್ಲೇ ಬಲಿಷ್ಠ ದೇಶವಾಗಿರಬಹುದು, ವಿಶ್ವದ 200 ದೇಶಗಳಲ್ಲಿ ಸುಮಾರು 150ಕ್ಕೂ ಹೆಚ್ಚು ದೇಶಗಳೊಳಗೆ ನುಗ್ಗಿ ಅದರ ಮುಖ್ಯಸ್ಥರನ್ನು ಬಂಧಿಸುವ ಶಕ್ತಿಯೂ ಇರಬಹುದು. ಆದರೆ ಮಾನವ ಸಮಾಜದ ಇಂದಿನ ಆಧುನಿಕ ಕಾಲದಲ್ಲಿ ವಿಶ್ವಕ್ಕೇ ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿಯ ಬಗ್ಗೆ ಮಾರ್ಗದರ್ಶನ ಮಾಡಬೇಕಾದ ದೊಡ್ಡಣ್ಣನ ಸ್ಥಾನದಲ್ಲಿರುವ, ಪ್ರಜಾಪ್ರಭುತ್ವ ದೇಶದ ಅಧ್ಯಕ್ಷನೊಬ್ಬ ಈ ರೀತಿಯ ಮಿಲಿಟರಿ ಕಾರ್ಯಾಚರಣೆ ನಡೆಸುವುದು ಅತ್ಯಂತ ಖಂಡನೀಯ.

ಅಮೆರಿಕಾ ಆಪಾದಿಸುತ್ತಿರುವಂತೆ ವೆನಿಜುಲಾ ಅಧ್ಯಕ್ಷನ ಮೇಲಿನ ಎಲ್ಲಾ ಆರೋಪಗಳು ಅವರ ಪ್ರಕಾರ ನಿಜವೇ ಆಗಿದ್ದರೂ ಸಹ, ಅದು ಆ ದೇಶದ ಆಂತರಿಕ ವಿಷಯ. ಅಲ್ಲಿನ ಜನ ಮತ್ತು ವಿರೋಧ ಪಕ್ಷಗಳು ಆ ಬಗ್ಗೆ ಜಾಗೃತರಾದಾಗ ಆ ಅಧ್ಯಕ್ಷನನ್ನು ಪದಚ್ಯುತಗೊಳಿಸುವ ಹಕ್ಕು ಇರುವುದು ಅವರಿಗೆ ಮಾತ್ರ. ಒಂದು ವೇಳೆ ಆ ದೇಶದ ಅಧ್ಯಕ್ಷನಿಂದ ಅಮೆರಿಕಾ ದೇಶಕ್ಕೆ ತುಂಬಾ ತೊಂದರೆ ಇದ್ದರೆ ಅದನ್ನು ಅವರಿಗೆ ಇರುವ ಬೇರೆ ಬೇರೆ ಮಾರ್ಗಗಳ ಮೂಲಕ ನಿಯಂತ್ರಿಸಬೇಕು. ಅನೇಕ ರೀತಿಯ ನಿರ್ಬಂಧ ಹೇರಬೇಕು ಅಥವಾ ಅಂತಿಮವಾಗಿ ಸೂಚನೆ ಕೊಟ್ಟು ಆ ದೇಶದ ಮೇಲೆ ಯುದ್ಧವನ್ನು ಸಾರುವ ಅಂತಿಮ ಸ್ವಾತಂತ್ರ್ಯವೂ ಆ ದೇಶಕ್ಕೆ ಇದೆ. ಆದರೆ ಹೀಗೆ ಏಕಾಏಕಿ ಸೈನಿಕ ಶಕ್ತಿಯನ್ನು ಉಪಯೋಗಿಸಿಕೊಂಡು ಸುಮಾರು ಮೂರು ಕೋಟಿಯಷ್ಟು ಜನಸಂಖ್ಯೆ ಇರುವ, ವಿಶ್ವದಲ್ಲೇ ಅತಿ ದೊಡ್ಡ ತೈಲ ನಿಕ್ಷೇಪ ಹೊಂದಿರುವ ದೇಶದ ಮೇಲೆ ಹೀಗೆ ರಾತ್ರೋರಾತ್ರಿ ಆಕ್ರಮಣ ಮಾಡುವುದು ಅಮೆರಿಕಾದ ಘನತೆಯನ್ನೇ ಕುಗ್ಗಿಸುತ್ತದೆ.

ನಮಗೆ ಶಕ್ತಿ ಇದ್ದ ಮಾತ್ರಕ್ಕೆ ದುರ್ಬಲರ ಮೇಲೆ ಅಥವಾ ಇನ್ನೊಬ್ಬರ ಸ್ವಾತಂತ್ರ್ಯದ ಮೇಲೆ ಯಾವುದೋ ನೆಪ ಹೇಳಿ ದಾಳಿ ಮಾಡುವುದು ಒಳ್ಳೆಯ ಲಕ್ಷಣವಲ್ಲ. ಏಕೆಂದರೆ ಇದೇ ತಂತ್ರವನ್ನು ರಷ್ಯಾ ಮಾಡಿರುವಾಗ ಅದನ್ನು ಖಂಡಿಸುತ್ತೇವೆ. ಅಮಾಸ್ ಮೇಲೆ ಇಸ್ರೇಲ್ ನ ಅಷ್ಟು ದೊಡ್ಡ ದಾಳಿಯನ್ನು ಖಂಡಿಸುತ್ತೇವೆ, ತೈವಾನನ್ನು ವಶಪಡಿಸಿಕೊಳ್ಳುವ ಚೀನಾದ ಹುನ್ನಾರವನ್ನೂ ಖಂಡಿಸುತ್ತೇವೆ.

ಹೌದು, ಪಕ್ಕದ ದೇಶಗಳಿಂದ ಕೆಲವು ದೇಶಗಳಿಗೆ ತುಂಬಾ ತೊಂದರೆ ಇದೆ. ನಮ್ಮ ನೆಮ್ಮದಿಗೆ ಆ ದೇಶದ ಕೆಲವು ಮದ್ಯ, ಮಾದಕದ್ರವ್ಯ, ಧರ್ಮದ ಸಂಘಟನೆಗಳಿಂದ ತೊಂದರೆ ಇರುವುದು ನಿಜ. ಅದನ್ನು ಸರಿಪಡಿಸಿಕೊಳ್ಳಲು ಸಾಕಷ್ಟು ಪರ್ಯಾಯ ಮಾರ್ಗಗಳು ಇವೆ. ಈ ರೀತಿ ದೌರ್ಜನ್ಯ ಸದಾ ಕಾಲ ನಡೆಯುವುದಿಲ್ಲ. ಜೊತೆಗೆ ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಇತರ ದೇಶಗಳು ಸಂಘಟನೆಯಾಗಿ ಮೂರನೇ ಮಹಾಯುದ್ಧವೇನಾದರೂ ನಡೆದರೆ ಆಗ ವಿಶ್ವವೇ ತುಂಬಾ ತೊಂದರೆಗೆ ಸಿಲುಕುವುದು ನಿಶ್ಚಿತ. ಯಾವ ಸಾಧನೆಗಾಗಿ ಈ ಒಂದು ಕಾರ್ಯಾಚರಣೆ……

ಈ ಕ್ಷಣದ ವಿವಿಧ ದೇಶಗಳ ಮುಖ್ಯಸ್ಥರನ್ನು ನೋಡಿದರೆ ಯಾಕೋ ಸರ್ವಾಧಿಕಾರಿ ಮತ್ತು ಆಕ್ರಮಣಕಾರಿ ಮನೋಭಾವದ ಮುಖ್ಯಸ್ಥರೇ ಕಾಣುತ್ತಾರೆ. ತನ್ನ ದೇಶವೇ ಮೊದಲು ಎನ್ನುವ ಹುಚ್ಚು ರಾಷ್ಟ್ರೀಯತೆಯ ಮೋಹಕ್ಕೆ ಬಲಿಯಾಗಿ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಜಿನ್ ಪಿಂಗ್, ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಚಾಂಗ್ ಉನ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಭಾರತದ ಪ್ರಧಾನಿ ನರೇಂದ್ರ ಮೋದಿ, ಇರಾನ್ ಮುಖ್ಯಸ್ಥ ಆಯಾತುಲ್ಲಾ ಖಮೇನಿ, ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝಲೆನ್ಸ್ಕಿ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸೀಫ್ ಮುನೀರ್ ಇವರೆಲ್ಲರೂ ಯಾಕೋ ತಮ್ಮ ದೇಶದ ಪರವಾಗಿ ಅತಿಯಾದ ಸಣ್ಣತನ ಪ್ರದರ್ಶಿಸಿ ಆ ಮೂಲಕ ವಿಶ್ವವನ್ನೇ ಆತಂಕಕ್ಕೆ ದೂಡುತ್ತಿದ್ದಾರೆ ಎನಿಸುತ್ತದೆ.

ಜಾಗತೀಕರಣದ ನಂತರ ಮುಕ್ತ ಮಾರುಕಟ್ಟೆಗೆ ಎಲ್ಲಾ ದೇಶಗಳು ಸಹಿ ಹಾಕಿದ ಮೇಲೆ ಹೇಗೋ ಏನೋ ಒಂದಷ್ಟು ಬಡ ದೇಶಗಳ ಶೋಷಣೆಯ ನಡುವೆಯೂ ವಿಶ್ವದಲ್ಲೇ ವ್ಯಾಪಾರ ವಹಿವಾಟುಗಳಲ್ಲಿ ಕ್ರಾಂತಿಯಾಗಿದ್ದೇನೋ ನಿಜ. ಒಂದು ರೀತಿಯಲ್ಲಿ ತಂತ್ರಜ್ಞಾನ ಮತ್ತು ಆಧುನಿಕತೆ ಎಲ್ಲಾ ದೇಶಗಳಲ್ಲೂ ವಿಸ್ತರಿಸಿ ಜನರ ಜೀವನ ಮಟ್ಟ ಸುಧಾರಣೆಯ ಒಂದಷ್ಟು ಅಭಿವೃದ್ಧಿ ಆಗಿದ್ದು ನಿಜ. ಆದರೆ ಅದನ್ನು
ಅರಗಿಸಿಕೊಳ್ಳದ ಕೆಲವು ಬಲಾಢ್ಯ ದೇಶಗಳು ಮತ್ತಷ್ಟು ಅಸೂಯೆ ಮತ್ತು ದುರಾಸೆಗೆ ಬಿದ್ದು ಮತ್ತೆ ಬಿಲದೊಳಗೆ ಸೇರಿಕೊಳ್ಳುವ ಮಾತುಗಳನ್ನು ಆಡುತ್ತಿವೆ. ಮತ್ತದೇ ನಾವೇ ಶ್ರೇಷ್ಠರು, ನಮ್ಮ ದೇಶವೇ ಶ್ರೇಷ್ಠ ಎನ್ನುವ ರಾಷ್ಟ್ರೀಯತೆಯ ಅತಿರೇಕಕ್ಕೆ ಸಿಲುಕುತ್ತಿರುವ ಸೂಚನೆಗಳಿವೆ. ಅದಕ್ಕೆ ತಕ್ಕಂತೆ ಅಮೆರಿಕ ಅಧ್ಯಕ್ಷ ತಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವ ಬಾಲಿಶತನಕ್ಕೆ ಬಲಿಯಾಗಿದ್ದಾರೆ.

ಡೊನಾಲ್ಡ್ ಟ್ರಂಪ್ ಅಹಂಕಾರ ಮತ್ತು ತಿಕ್ಕಲುತನಕ್ಕೆ ಅಮೆರಿಕದ ಮತದಾರರೇ ಹೊಣೆ……..

ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಆ ದೇಶದ ಜನಪ್ರತಿನಿಧಿಗಳಾಗಿ ಅಥವಾ ಆ ದೇಶದ ಮುಖ್ಯಸ್ಥರಾಗಿ ಪ್ರಧಾನಿ ಅಥವಾ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವಾಗ ಮತದಾರರು ಸಮಗ್ರವಾಗಿ ಪಕ್ಷ ಮತ್ತು ಅಭ್ಯರ್ಥಿಗಳ ಬಗ್ಗೆ ಚಿಂತಿಸಿ ಮತ ಚಲಾಯಿಸಬೇಕಾಗುತ್ತದೆ. ಯಾವುದೋ ಧರ್ಮ, ಜಾತಿ, ರಾಷ್ಟ್ರೀಯತೆ, ಅಭಿವೃದ್ಧಿಯ ಭರವಸೆ ಮುಂತಾದ ಭ್ರಮಾತ್ಮಕ ವಿಷಯಗಳಿಗೆ ಮರುಳಾಗಿ ವಿವೇಚನೆ ಇಲ್ಲದೆ ನೈತಿಕತೆ ಇಲ್ಲದ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಮಾಡಿದರೆ ಅದರ ಪರಿಣಾಮ ಇಡೀ ದೇಶ ಅನುಭವಿಸಬೇಕಾಗುತ್ತದೆ.

ಆ ರೀತಿಯ ಅಚಾತುರ್ಯವೊಂದು ವಿಶ್ವದ ಮಹತ್ವದ ಪ್ರಜಾಪ್ರಭುತ್ವ ದೇಶ ಅಮೆರಿಕಾದ ಮತದಾರರಿಂದ ನಡೆದು ಹೋಗಿದೆ. ನಿಜಕ್ಕೂ ಮೊದಲನೆಯ ಬಾರಿಯಾಗಿರಲಿ ಅಥವಾ ಈಗ ಆಯ್ಕೆ ಆಗಿರುವ ಎರಡನೆಯ ಬಾರಿ ಆಗಿರಲಿ ಅಮೆರಿಕಾದಂತಹ ದೇಶಕ್ಕೆ ಅಧ್ಯಕ್ಷರಾಗುವ ವ್ಯಕ್ತಿತ್ವ ಮತ್ತು ನೈತಿಕತೆ ಖಂಡಿತ ಡೊನಾಲ್ಡ್ ಟ್ರಂಪ್ ಎಂಬ ವ್ಯಕ್ತಿ ಹೊಂದಿಲ್ಲ ಎಂಬುದು ವಿಶ್ವದ ಬಹುತೇಕ ಸಂವೇದನಾಶೀಲ ಮನಸ್ಸುಗಳ ಅನಿಸಿಕೆ.

ಟ್ರಂಪ್ ಶ್ರೀಮಂತನಿರಬಹುದು, ಧೈರ್ಯಸ್ತನಿರಬಹುದು, ತನ್ನ ದೇಶದ ಬಗ್ಗೆ ಅಪಾರ ಕಾಳಜಿ ಉಳ್ಳವನೇ ಇರಬಹುದು ಅಥವಾ ತಾನೊಬ್ಬ ಅತ್ಯಂತ ಬಲಿಷ್ಠ ವ್ಯಕ್ತಿಯಾಗಿರಬಹುದು, ಆದರೆ ಪ್ರಬುದ್ಧತೆ ಇಲ್ಲದಿದ್ದಲ್ಲಿ ಆ ಎಲ್ಲಾ ಗುಣಗಳು ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚು.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಲಸೆ ನೀತಿಯೇ ಇರಬಹುದು, ವಿದೇಶಾಂಗ ನೀತಿಯೇ ಇರಬಹುದು, ತೆರಿಗೆ ನೀತಿಯೇ ಇರಬಹುದು, ಆಂತರಿಕ ನಿರುದ್ಯೋಗ ನಿವಾರಣೆಯ ನೀತಿಯೇ ಇರಬಹುದು, ಅದರಲ್ಲಿ ಖಂಡಿತವಾಗಲೂ ತಪ್ಪು ಮತ್ತು ಆಕ್ರಮಣಕಾರಿ ಹೆಜ್ಜೆಗಳನ್ನು ಇಡುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಮೇಲ್ನೋಟಕ್ಕೆ ಕೆಲವು ರಾಜಕೀಯ ಮತ್ತು ಆರ್ಥಿಕ ತಜ್ಞರು ಅದು ಸರಿ ಇರಬಹುದೇನೋ ಎನ್ನುವ ರೀತಿಯಲ್ಲಿ ಚರ್ಚೆಗಳಲ್ಲಿ ಹೇಳುತ್ತಿದ್ದಾರೆ. ಆದರೆ ಅಮೆರಿಕ ವಿಶ್ವದ ದೊಡ್ಡಣ್ಣ. ಅದಕ್ಕೆ ಅನಧಿಕೃತವಾಗಿ ದೊಡ್ಡ ಜವಾಬ್ದಾರಿಯೂ ಇದೆ. ವಿಶ್ವದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಒಂದಷ್ಟು ಹೊಣೆಗಾರಿಕೆಯೂ ಇದೆ.

ಅಮೆರಿಕಾದ ಘನತೆಯನ್ನು ಉಳಿಸಿಕೊಳ್ಳುವಲ್ಲಿ ಡೊನಾಲ್ಡ್ ಟ್ರಂಪ್ ಎಡವುತ್ತಿದ್ದಾರೆ. ಜೊತೆಗೆ ದೊಡ್ಡಣ್ಣನಾಗುವ ಅವಕಾಶವನ್ನು ಅದರ ಪ್ರತಿಸ್ಪರ್ಧಿ ಚೀನಾ ಉಪಯೋಗಿಸಿಕೊಳ್ಳುವಂತೆ ವೇದಿಕೆ ಕಲ್ಪಿಸುತ್ತಿದ್ದಾರೆ. ಇದು ಒಳ್ಳೆಯ ಲಕ್ಷಣವಲ್ಲ. ಈ ಅಹಂಕಾರ ಅತಿಯಾಯಿತು. ಈಗಾಗಲೇ ಅಮೆರಿಕಾದ ಎಲ್ಲಾ 50 ರಾಜ್ಯಗಳಲ್ಲಿ ಇವರ ನೀತಿಗಳ ವಿರುದ್ಧ ಪ್ರತಿಭಟನೆಗಳಾಗಿದೆ. ಇದು ಹೀಗೆಯೇ ಮುಂದುವರೆಯಲಿ. ಈ ವ್ಯಕ್ತಿಯನ್ನು ಕನಿಷ್ಠ ಈಗಲಾದರೂ ಒಂದು ನಿಯಂತ್ರಣಕ್ಕೆ ಒಳಪಡಿಸುವುದು ಅಮೆರಿಕಾದ ಮತದಾರರ ಕರ್ತವ್ಯ. ಅದನ್ನು ಅವರು ನಿಭಾಯಿಸಲಿ. ಇಲ್ಲದಿದ್ದರೆ ಅಮೆರಿಕಾದ ಘನತೆ ಮಣ್ಣು ಪಾಲಾಗುವುದು ಖಚಿತ ……

ಈ ಭೂಮಿಯ ಮೇಲೆ ಈ ಕ್ಷಣದಲ್ಲಿ ಅಸ್ತಿತ್ವದಲ್ಲಿರುವ ಸುಮಾರು 200ಕ್ಕೂ ಹೆಚ್ಚು ದೇಶಗಳಲ್ಲಿ ಅತ್ಯಂತ ಹೆಚ್ಚು ಬಲಿಷ್ಠ ದೇಶ ಅಮೆರಿಕ ಸಂಯುಕ್ತ ಸಂಸ್ಥಾನ. ಆಧುನಿಕ ವಿಶ್ವದಲ್ಲಿ ಜಾಗತಿಕವಾಗಿ ದೊಡ್ಡಣ್ಣ ಎಂದೇ ಹೆಸರಾಗಿದೆ. ಆರ್ಥಿಕವಾಗಿ, ಸೈನಿಕವಾಗಿ, ವೈಜ್ಞಾನಿಕವಾಗಿ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನದಲ್ಲಿ, ವ್ಯಾಪಾರ, ವ್ಯವಹಾರಗಳಲ್ಲಿ ಜೊತೆಗೆ ವಿಶ್ವದಲ್ಲಿ ಸ್ವಾತಂತ್ರ್ಯ, ಸಮಾನತೆ, ಮಾನವ ಹಕ್ಕು, ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಈ ಕ್ಷಣಕ್ಕೂ ಮುಂಚೂಣಿಯಲ್ಲಿ ನಿಂತಿರುವ ದೇಶ ಅಮೆರಿಕ. ಜಗತ್ತು ಎರಡು ಮಹಾಯುದ್ಧಗಳ ನಂತರ ಒಂದಷ್ಟು ಅಭಿವೃದ್ಧಿಯತ್ತ ಮುನ್ನಡೆದು ಇಡೀ ವಿಶ್ವದಲ್ಲಿ ಒಂದಷ್ಟು ಶಾಂತಿ, ಸೌಹಾರ್ದತೆ ಉಳಿದಿದ್ದರೆ ಅದರಲ್ಲಿ ಅಮೆರಿಕಾದ ಕೊಡುಗೆಯೂ ಸಾಕಷ್ಟಿದೆ.

ಹಾಗೆಯೇ ಅದರ ಮೇಲೆ ಕೆಲವೊಂದು ಆರೋಪಗಳೂ ಇವೆ. ತನ್ನ ವ್ಯಾಪಾರ ಮತ್ತು ವಿದೇಶಾಂಗ ನೀತಿಯಿಂದ ವಿಶ್ವದಲ್ಲಿ ಒಡಕುಂಟು ಮಾಡಿ ತಾನೇ ಸರ್ವಾಧಿಕಾರಿಯಂತೆ ವರ್ತಿಸುತ್ತದೆ. ಗಲಭೆಗಳನ್ನು ಸೃಷ್ಟಿ ಮಾಡಲು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತದೆ. ದೇಶ ದೇಶಗಳ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಸಿ ಯುದ್ಧ ಮಾಡಿಸುತ್ತದೆ ಹೀಗೆ ನಾನಾ ಆರೋಪಗಳಿದ್ದರೂ ಅಮೆರಿಕ ಜಗತ್ತಿಗೆ ಒಂದು ಆಕರ್ಷಕ ಮತ್ತು ಮಾದರಿ ದೇಶವಾಗಿದೆ…..

ಅಂತಹ ಅಮೆರಿಕ ದೇಶಕ್ಕೆ ಎರಡನೆಯ ಬಾರಿ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎಂಬ ವ್ಯಾಪಾರಿ ಮನೋಭಾವದ, ನೈತಿಕವಾಗಿ ಅಷ್ಟೇನೂ ಉತ್ತಮ ಹಿನ್ನೆಲೆ ಹೊಂದಿರದ, ತೀರ ಆಕ್ರಮಣಕಾರಿ ಮತ್ತು ಅಪ್ರಬುದ್ಧತೆಯ, ತುಂಬಾ ಹಗುರವಾದ ಮಾತಿನ ವ್ಯಕ್ತಿ ಆ ದೇಶದ ಮೇಲಿನ ಅಭಿಮಾನ, ಗೌರವ ಮತ್ತು ಘನತೆಯನ್ನು ಕಡಿಮೆ ಮಾಡುತ್ತಿದ್ದಾರೆ.

ಅಮೆರಿಕ ಮೊದಲು ಎಂಬ ಅವರ ನೀತಿಯೇ ಸಂಕುಚಿತ ಮನೋಭಾವದಿಂದ ಕೂಡಿದೆ. ಏಕೆಂದರೆ ಈಗಲೂ ವಿಶ್ವದಲ್ಲಿ ಅಮೆರಿಕವೇ ಎಲ್ಲ ರೀತಿಯಲ್ಲೂ ಮೊದಲನೆಯ ಸ್ಥಾನದಲ್ಲಿದೆ. ಅಮೆರಿಕವೇ ಅತ್ಯಂತ ಬಲಿಷ್ಠವಾಗಿದೆ. ಆರ್ಥಿಕವಾಗಿ ಮಾರುಕಟ್ಟೆಯ ದೃಷ್ಟಿಯಿಂದ ಅಮೆರಿಕವೇ ವಿಶ್ವದ ಹೆಚ್ಚು ಕಡಿಮೆ ಎಲ್ಲಾ ಆಗುಹೋಗುಗಳನ್ನು ನಿರ್ಧರಿಸುತ್ತದೆ. ಅಂತಹ ಸಂದರ್ಭದಲ್ಲಿ ತಾನು ವಹಿಸಬೇಕಾದ ದೃಢ ನಾಯಕತ್ವದ ರೀತಿಯಲ್ಲಿ ಮುನ್ನಡೆಯದೆ ಯಾವುದೋ ಆತುರಕ್ಕೆ ಬಿದ್ದ ಸಾಮಾನ್ಯ, ಮಧ್ಯಮ ದರ್ಜೆಯ ದೇಶದಂತೆ ವರ್ತಿಸುತ್ತಿರುವುದು ಅಷ್ಟೇನೂ ಒಳ್ಳೆಯ ಲಕ್ಷಣವಲ್ಲ.

ತನ್ನ ದೇಶಕ್ಕೆ ಭವಿಷ್ಯದಲ್ಲಿ ತೊಂದರೆಯಾಗಬಹುದು ಎನಿಸಿದಾಗ ಈಗ ತೆಗೆದುಕೊಳ್ಳುತ್ತಿರುವ ಆಕ್ರಮಣಕಾರಿ ನಿರ್ಧಾರಗಳಿಗಿಂತ ಉತ್ತಮ ನಿರ್ಧಾರಗಳು, ಆಯ್ಕೆಗಳು ಖಂಡಿತ ಅದರ ಮುಂದಿದೆ.

ಇದೊಂದೇ ವಿಷಯವಲ್ಲ, ಅಕ್ರಮ ವಲಸಿಗರನ್ನು ಹೊರಹಾಕುವಲ್ಲಿ, ತೆರಿಗೆ ವಿಷಯದಲ್ಲಿ, ಇತರ ದೇಶಗಳಿಗೆ ಆರ್ಥಿಕ ಸಹಾಯ ನೀಡುವಲ್ಲಿ ಇನ್ನೂ ಮುಂತಾದ ವಿಷಯಗಳಲ್ಲಿ ಡೊನಾಲ್ಡ್ ಟ್ರಂಪ್ ವರ್ತನೆ ಖಂಡಿತಾ ಸ್ವೀಕಾರಾರ್ಹವಲ್ಲ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ: ವೈದ್ಯ, ಪತ್ರಕರ್ತ, ಪೊಲೀಸ್, ಪೌರಕಾರ್ಮಿಕರಿಗೆ ಸನ್ಮಾನ

"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…

10 hours ago

ಭಗತ್ ಸಿಂಗ್ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ದಿನಾಚರಣೆ: ಪತ್ರಕರ್ತ, ಪೊಲೀಸ್, ಪೌರಕಾರ್ಮಿಕರು ಸೇರಿದಂತೆ ಇತರೆ ಸಾಧಕರಿಗೆ ಸನ್ಮಾನ

"77ನೇ ಗಣರಾಜ್ಯೋತ್ಸವ”ದ ಅಂಗವಾಗಿ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ…

11 hours ago

ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ದರೋಡೆ ಪ್ರಕರಣ: ದಟ್ಟಾರಣ್ಯದ ಮೌನದಲ್ಲಿ ಅಡಗಿದ್ದ ಭೀಕರ ರಹಸ್ಯ..ಬೆಚ್ಚಿಬೀಳಿಸುವ ಪ್ರಮುಖ ಅಂಶಗಳು…ಇಲ್ಲಿವೆ ಓದಿ…

ಬೆಳಗಾವಿಯ ದಟ್ಟ ಅರಣ್ಯ ಪ್ರದೇಶದ ನಡುವೆ ಸಾಗುವ ಚೋರ್ಲಾ ಘಾಟ್‌ನ ರಸ್ತೆಗಳು ಸಾಮಾನ್ಯವಾಗಿ ಮೌನದಿಂದ ಕೂಡಿರುತ್ತವೆ. ಆದರೆ, ಆ ಮೌನದಲ್ಲೇ…

20 hours ago

2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: ಕರ್ನಾಟಕದ 8 ಮಂದಿಯು ಈ ನಾಗರಿಕ ಗೌರವಕ್ಕೆ ಭಾಜನ

2026ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಒಟ್ಟು 131 ಮಂದಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದ 8 ಮಂದಿಯು ಈ…

1 day ago

ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ರಥೋತ್ಸವ

ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ಇಂದು (ಜ.25) ವೀರಭದ್ರಸ್ವಾಮಿ ಮತ್ತು ಪ್ರಸನ್ನ…

1 day ago

ರಘುನಾಥಪುರ ಬಳಿ ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ: ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವು

ಪಿಕಪ್ ವಾಹನ, ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ…

2 days ago