
ದೊಡ್ಡಬಳ್ಳಾಪುರ: ವಾಲ್ಮೀಕಿ ರಾಮಾಯಣವು ಪ್ರಾಚೀನ ಭಾರತದ ಸಂಸ್ಕೃತಿ, ಧರ್ಮ, ರಾಜನೀತಿ, ಕುಟುಂಬ ವ್ಯವಸ್ಥೆ, ಪ್ರಕೃತಿ ಸೌಂದರ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಪರಿಚಯಿಸುವ ಮಹಾಕಾವ್ಯವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ. ಕೆ.ಆರ್. ರವಿಕಿರಣ್ ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಡಾ. ರಾಜ್ಕುಮಾರ್ ಕಲಾಮಂದಿರದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಜಗತ್ತಿನ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರ ರಾಮಾಯಣ ಮಹಾಕಾವ್ಯ ಭಾವನಾಪ್ರಧಾನ ಕೃತಿಯಾಗಿದ್ದು, ಭಾರತೀಯ ಭಾಷೆಗಳ ಮೇಲೆ ಬೀರಿರುವ ಪ್ರೇರಣೆ ಮತ್ತು ಪ್ರಭಾವ ಅನನ್ಯವಾದುದು ಎಂದರು.
ರಾಮಾಯಣದ ಓದು ಇಂದಿಗೂ ನಿರಂತರವಾಗಿ ಸಾಗುತ್ತಿದೆ. ಮಹಾಕಾವ್ಯದಲ್ಲಿ ಭಾರತದ ನದಿಗಳು, ವನಗಳು ಹಾಗೂ ಪರ್ವತಗಳ ವರ್ಣನೆಯ ಮೂಲಕ ಪ್ರಕೃತಿ ಮತ್ತು ಪರಿಸರದ ಪರಿಚಯವಾಗುತ್ತದೆ. ವಿವಿಧ ಪಾತ್ರಗಳು ಹಾಗೂ ಸನ್ನಿವೇಶಗಳು ಅಂದಿನ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ವಿಶ್ಲೇಷಿಸಲು ನೆರವಾಗುತ್ತವೆ ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ. ಶ್ರೀಕಾಂತ್ ಮಾತನಾಡಿ, ರಾಮಾಯಣದ ಪಾತ್ರಗಳ ಮೂಲಕ ಮಾನವೀಯ ಸಂಬಂಧಗಳು ಮತ್ತು ನೈತಿಕ ಸಂಘರ್ಷಗಳನ್ನು ಮಹರ್ಷಿ ವಾಲ್ಮೀಕಿ ಕಲಾತ್ಮಕವಾಗಿ ಚಿತ್ರಿಸಿದ್ದಾರೆ. ಶತಶತಮಾನಗಳಿಂದ ರಾಮಾಯಣ ಭಾರತೀಯರ ಮನ್ನಣೆಗೆ ಪಾತ್ರವಾಗಿದ್ದು, ವಾಲ್ಮೀಕಿಯ ವಿದ್ವತ್ತಿಗೆ ಜನಮನ್ನಣೆ ದೊರೆತಿದೆ. ಅವರ ಸೃಜನಶೀಲತೆ ಮತ್ತು ಕಲಾತ್ಮಕತೆಯ ಪ್ರಭಾವದಿಂದ ಭಾರತೀಯ ಭಾಷೆಗಳಲ್ಲಿ ಅನೇಕ ರಾಮಾಯಣ ಕೃತಿಗಳು ರಚನೆಯಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್, ಜಿಲ್ಲಾಧ್ಯಕ್ಷ ಮುನಿಪಾಪಣ್ಣ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ. ಗೋವಿಂದರಾಜು, ಗೌರವ ಕಾರ್ಯದರ್ಶಿ ಎ. ಜಯರಾಮ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ದಾದಾಪೀರ್, ಕೋಶಾಧ್ಯಕ್ಷ ಜಿ. ಸುರೇಶ್, ಪ್ರತಿನಿಧಿಗಳಾದ ಸಫೀರ್, ರಂಗಸ್ವಾಮಯ್ಯ, ಕೋದಂಡರಾಮ್, ಅಣ್ಣಯ್ಯ, ನಿವೃತ್ತ ಮುಖ್ಯಶಿಕ್ಷಕ ಕೆ.ವಿ. ವೆಂಕಟರೆಡ್ಡಿ, ಲಾವಣ್ಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಸಿ. ಮಂಜುನಾಥ್, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜ್, ಕಲಾವಿದರಾದ ದರ್ಗಾಜೋಗಿಹಳ್ಳಿ ಮಲ್ಲೇಶ್, ವೆಂಕಟರಾಜು, ಶ್ರೀನಿವಾಸಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.