
ದೊಡ್ಡಬಳ್ಳಾಪುರ: ಲೀಸ್‌ಗೆ ಪಡೆದಿದ್ದ ಜಮೀನಿನ ವಿಚಾರವಾಗಿ ರೈತನೊಬ್ಬರ ಮೇಲೆ ಪಿಸ್ತೂಲ್‌ನಿಂದ ಹಲ್ಲೆ ನಡೆಸಿ, ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಜೂನ್ 27ರ ರಾತ್ರಿ ಕ್ಯಾಪ್ಸಿಕಂ ಬೆಳೆ ಸಾಗಾಟ ಮುಗಿಸಿ, ತೋಟದ ಕಾರ್ಮಿಕರಿಗೆ ಊಟ ತೆಗೆದುಕೊಂಡು ಬೊಲೆರೋ ಪಿಕ್‌ಅಪ್ ವಾಹನದಲ್ಲಿ ತೋಟದತ್ತ ತೆರಳುತ್ತಿದ್ದ ವೇಳೆ ಹೊನ್ನಾಘಟ್ಟ ಗ್ರಾಮದ ನರಸಿಂಹಮೂರ್ತಿ ಮನೆ ಸಮೀಪದ ಮಣ್ಣಿನ ರಸ್ತೆಯಲ್ಲಿ ಆರೋಪಿಯು ವಾಹನ ಅಡ್ಡಗಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರುದಾರರು ಸುಮಾರು ಒಂದೂವರೆ ವರ್ಷಗಳಿಂದ ಹೊನ್ನಾಘಟ್ಟ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ 6.5 ಎಕರೆ ಜಮೀನನ್ನು ಮೂರು ವರ್ಷಗಳ ಲೀಸ್‌ಗೆ ಪಡೆದು ಕ್ಯಾಪ್ಸಿಕಂ ಬೆಳೆ ಬೆಳೆಯುತ್ತಿದ್ದರು. ಜಮೀನಿನ ಮಾಲೀಕ ಹಾಗೂ ಆರೋಪಿ ನರಸಿಂಹಮೂರ್ತಿ ನಡುವೆ ಹಿಂದಿನಿಂದಲೂ ವೈಮನಸ್ಸು ಇದ್ದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ವಾಹನ ನಿಲ್ಲಿಸಿದ ಬಳಿಕ “ನೀನು ಯಾರು, ಇಲ್ಲಿ ಏಕೆ ಬಂದಿದ್ದೀಯ?” ಎಂದು ಪ್ರಶ್ನಿಸಿದ ಆರೋಪಿ, ಜಮೀನು ಲೀಸ್‌ಗೆ ಪಡೆದಿರುವ ವಿಚಾರ ತಿಳಿದ ತಕ್ಷಣ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪಿಸ್ತೂಲ್‌ನಿಂದ ಬಾಯಿಗೆ ಹೊಡೆದ ಪರಿಣಾಮ ದೂರುದಾರರ ಒಂದು ಹಲ್ಲು ಕಿತ್ತು ಬಿದ್ದಿದೆ ಎಂದು ಆರೋಪಿಸಲಾಗಿದೆ.
ನಂತರ ಆರೋಪಿ ಪಿಸ್ತೂಲ್ ಲೋಡ್ ಮಾಡಲು ಮುಂದಾದಾಗ ದೂರುದಾರರು ವಾಹನ ಚಲಾಯಿಸಿಕೊಂಡು ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿ ಗಾಳಿಯಲ್ಲಿ ಹಾಗೂ ವಾಹನ ತೆರಳುತ್ತಿದ್ದ ದಿಕ್ಕಿನಲ್ಲಿ ಸುಮಾರು 7ರಿಂದ 8 ಸುತ್ತು ಗುಂಡು ಹಾರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮುಂದೆ ವಾಹನ ನಿಲ್ಲಿಸಿದಾಗಲೂ ಮತ್ತೊಮ್ಮೆ ಗುಂಡು ಹಾರಿಸಿರುವುದಾಗಿ ದೂರುದಾರರು ಆರೋಪಿಸಿದ್ದಾರೆ.
ಘಟನೆಯ ತಕ್ಷಣ ರಾತ್ರಿ 10.27 ಗಂಟೆಗೆ ದೂರುದಾರರು ತುರ್ತು ಸೇವೆ 112ಕ್ಕೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಬಳಿಕ ಆರೋಪಿಯ ಬಳಿಯಿದ್ದ ಪಿಸ್ತೂಲ್ ವಶಪಡಿಸಿಕೊಂಡು ಠಾಣೆಗೆ ಕರೆತಂದಿದ್ದಾರೆ ಎಂದು ತಿಳಿದುಬಂದಿದೆ.
ಸಾರ್ವಜನಿಕ ಸ್ಥಳದಲ್ಲಿ ಅಡ್ಡಗಟ್ಟಿ ಜೀವ ಬೆದರಿಕೆ ಒಡ್ಡುವುದು, ಪಿಸ್ತೂಲ್‌ನಿಂದ ಹಲ್ಲೆ ನಡೆಸುವುದು ಹಾಗೂ ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪಗಳಡಿ ಹೊನ್ನಾಘಟ್ಟ ಗ್ರಾಮದ ನರಸಿಂಹಮೂರ್ತಿ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.