ಗ್ರಾಮೀಣ ಪ್ರದೇಶಗಳಲ್ಲೊಲಿ ಕುರಿ- ಮೇಕೆ ಸಾಕಾಣಿಕೆಯು ಪ್ರಮುಖವಾಗಿ ಆದಾಯ ತರುವ ಮುಖ್ಯ ಕಸುಬಾಗಿದೆ. ರಾಜ್ಯವು ತನ್ನಲ್ಲಿರುವ ವಾತಾವರಣ ಹಾಗೂ ಭೂಪ್ರದೇಶಗಳಿಂದಾಗಿ ಒಂದು ಆದರ್ಶಮಯ ಕುರಿ-ಮೇಕೆ ಸಾಕಣೆ ಪ್ರದೇಶವಾಗಿ ಗಮನಸೆಳೆಯುತ್ತದೆ.
ಭಾರತ ದೇಶದಲ್ಲಿ ಕರ್ನಾಟಕ ರಾಜ್ಯವು ಕುರಿ-ಮೇಕೆ ಸಾಕಾಣಿಕೆಯಲ್ಲಿ ಪ್ರಮುಖ ಸ್ಥಾನದಲ್ಲಿದೆ. ಬೆಂಗಳೂರು ಗ್ರಾ. ಜಿಲ್ಲೆಯಲ್ಲಿ 2019ರ ಜಾನುವಾರು ಗಣತಿ ಪ್ರಕಾರ 1,18,788 ಕುರಿಗಳು, 95,150 ಮೇಕೆಗಳಿವೆ. ರಾಜ್ಯದಲ್ಲಿ 61,69,392 ಮೇಕೆಗಳು, 11050728 ಕುರಿಗಳು ಇವೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚು ರೈತರು ಕುರಿ-ಮೇಕೆ ಸಾಕಾಣಿಕೆ ಕೈಗೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಕುರಿ, ಮೇಕೆಗಳ ಉತ್ಪನ್ನಗಳಾದ ಮಾಂಸ, ಹಾಲು, ಉಣ್ಣೆ, ಚರ್ಮ, ಗೊಬ್ಬರಗಳಿಂದ ರೈತರ ಆರ್ಥಿಕತೆ ಹೆಚ್ಚಳವಾಗಲಿದ್ದು, ಗ್ರಾಮೀಣ ಭಾಗದಲ್ಲಿ ಕುರಿ-ಮೇಕೆ ಸಾಕಾಣಿಕೆ ಪ್ರಮುಖ ಕಸುಬಾಗಿ ಹೊರ ಹೊಮ್ಮುತ್ತಿದೆ. ಆದರೆ, ಈ ಕಸುಬಿಗೆ ವಾಣಿಜ್ಯಕ ಸ್ವರೂಪ ಬಂದಿರುವುದು ತೀರಾ ಇತ್ತೀಚಿಗಷ್ಟೆ.
ಅವಕಾಶಗಳು:
ಇತ್ತೀಚಿನ ದಿನಗಳಲ್ಲಿ ಯುವ ಜನತೆ, ನಗರ ವಾಸಿಗಳು ಮಾಂಸಾಹಾರದ ಕಡೆಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಕುರಿ-ಮೇಕೆ, ಮಾಂಸ ಸೇವನೆಗೆ ಯಾವುದೇ ಧಾರ್ಮಿಕ ನಿಬಂಧನೆಗಳಿಲ್ಲ. ಅಲ್ಲದೇ ಬೇರೆ ಪ್ರಾಣಿ ಮಾಂಸಕ್ಕೆ ಹೋಲಿಸಿದಲ್ಲಿ ಔಷಧ/ ರಾಸಾಯನಿಕಗಳ ಉಳಿಕೆ ಪ್ರಮಾಣ ತೀರಾ ಕಡಿಮೆ ಇರುವ ಆರೋಗ್ಯಕರ ಮಾಂಸವಾಗಿದೆ. ಹೀಗಾಗಿ ಕುರಿ ಮಾಂಸಕ್ಕೆ ಅಧಿಕ ಬೇಡಿಕೆ ಇದೆ.
ಮಾಂಸದ ಬೇಡಿಕೆ ಮತ್ತು ದರ ಸದಾ ಏರುಮುಖವಾಗಿದೆ. ಪ್ರಸ್ತುತ ಪ್ರತಿ ಭಾರತೀಯ ಪ್ರಜೆಗೆ ಮಾಂಸದ ಬೇಡಿಕೆ ವಾರ್ಷಿಕ 11 ಕಿ.ಗ್ರಾಂ. ಇದ್ದು, ಅದರಲ್ಲಿ ಎಲ್ಲಾ ಪ್ರಾಣಿಗಳ (ದನ, ಎಮ್ಮೆ, ಹಂದಿ, ಕೋಳಿ) ಮಾಂಸವು ಸೇರಿದಂತೆ ಕೇವಲ 5.50 ಕಿ.ಗ್ರಾಂ. ಮಾತ್ರ ಲಭ್ಯವಿದೆ, ಅದರಲ್ಲೂ ಕುರಿ-ಮೇಕೆ ಮಾಂಸದ ಲಭ್ಯತೆ ಕೇವಲ 0.7 ಕಿ.ಗ್ರಾಂ. ಮಾತ್ರ. ಆದ್ದರಿಂದ ಕುರಿ-ಮೇಕೆಗಳ ಸಂತತಿ ಹಾಗೂ ಮಾಂಸ ಉತ್ಪಾದನೆಯನ್ನು ಹೆಚ್ಚಿಸುವುದು ಬಹು ಮುಖ್ಯ.
ಗ್ರಾಹಕರ ಬೇಡಿಕೆಗಳಿಗನುಗುಣವಾಗಿ ವಿವಿಧ ಭಾಗಗಳನ್ನು ಕತ್ತರಿಸಿ, ಪ್ಯಾಕ್ ಮಾಡಿ ಸಿದ್ಧಪಡಿಸಿದ ಮಾಂಸ ಮತ್ತು ಮೌಲ್ಯವರ್ಧಿತ ಮಾಂಸದ ಖಾದ್ಯ ಪದಾರ್ಥಗಳನ್ನು ಆಕರ್ಷಕ ಪೊಟ್ಟಣಗಳಲ್ಲಿ ಬೃಹತ್ ಮಾರಾಟ ಮಳಿಗೆಗಳಲ್ಲಿ, ಸುಸಜ್ಜಿತ ಮಾಂಸ ಮಾರಾಟ ಮಳಿಗೆಗಳಲ್ಲಿಟ್ಟು ಉತ್ತಮ ಬೆಲೆಗೆ ಮಾರಾಟ ಮಾಡಬಹುದಾಗಿದೆ.
ಕುರಿ-ಮೇಕೆಗಳ ಹಿಕ್ಕೆ ಉತ್ತಮ ಸಾವಯವ ಗೊಬ್ಬರವಾಗಿದ್ದು, ಇದರ ಬಳಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದಾಗಿದೆ. ಮೌಲ್ಯವರ್ಧಿತ ಕುರಿ- ಮೇಕೆ ಗೊಬ್ಬರಕ್ಕೆ ತೋಟಗಾರಿಕೆ ಬೆಳೆಗಾರರಿಂದ ಹೆಚ್ಚಿನ ಬೇಡಿಕೆಯಿದ್ದು, ಮೌಲ್ಯವರ್ಧಿತ ಗೊಬ್ಬರ ತಯಾರಿಕಾ ಘಟಕಗಳನ್ನು ಆರಂಭಿಸಲು ಹೆಚ್ಚು ಅವಕಾಶಗಳಿವೆ.
ಕುರಿ-ಮೇಕೆ ಸಾಕಾಣಿಕೆಗೆ ಪಶುಪಾಲನಾ ಇಲಾಖೆ ಹಾಗೂ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ತಾಂತ್ರಿಕ ನೆರವು ಹಾಗೂ ಅವುಗಳ ಆರೋಗ್ಯ ರಕ್ಷಣೆ ಮಾಡಲಾಗುತ್ತಿದೆ.
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚೀಲನಹಳ್ಳಿ ಗ್ರಾಮದ ಸರ್ವೆ ನಂ:14 ರಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಕುರಿ/ಮೇಕೆಗಳ ಮಾಂಸ ಉತ್ಪಾದನೆ ಮತ್ತು ಅಧುನಿಕ ಸಂಸ್ಕರಣ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಈಗಾಗಲೇ ಶೇ.70 ರಷ್ಟು ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಈ ಘಟಕದಲ್ಲಿ ಪ್ರತಿ ದಿನ 1500 ಕುರಿ- ಮೇಕೆಗಳ ಮಾಂಸವನ್ನು ಸಂಸ್ಕರಿಸಲಾಗುವುದು.
ಹಾಗಾಗಿ, ಪ್ರಸ್ತುತ ಹೆಚ್ಚಿನ ಪ್ರಮಾಣದಲ್ಲಿ ರೈತರು ಹಾಗೂ ನಿರುದ್ಯೋಗಿ ಯುವಕ-ಯುವತಿಯರು, ದೊಡ್ಡ ಉದ್ದಿಮೆದಾರರು ಕುರಿ-ಮೇಕೆ ಸಾಕಾಣಿಕೆ ಮಾಡಲು ಪ್ರಾರಂಭಿಸಿದ್ದು, ಬಹಳಷ್ಟು ಜನ ಇದನ್ನೇ ಮೂಲ ಕಸುಬಾಗಿ ರೂಪಿಸಿಕೊಳ್ಳುತ್ತಿರುವುದು ವಿಶೇಷ.
ಕುರಿ-ಮೇಕೆಗಳನ್ನು ಸಾಕಾಣಿಕೆ ಉದ್ದೇಶ
1. ಮಾಂಸದ ಉತ್ಪಾದನೆಗಾಗಿ ಮರಿಗಳ ಕೊಬ್ಬಿಸುವಿಕೆ: ಮೊದಲ ಆರು ತಿಂಗಳ ವಯಸ್ಸಿನವರೆಗೂ ಮೇಕೆ ಮರಿಗಳಿಗಿಂತ ಕುರಿ ಮರಿಗಳಲ್ಲಿ ದೇಹದ ತೂಕದ ಗಳಿಕೆಯಲ್ಲಿ ಗಣನೀಯ ಹೆಚ್ಚಳವಿರುವುದರಿಂದ, ಮರಿಗಳ ಕೊಬ್ಬಿಸುವಿಕೆಗೆ ಕುರಿ ಮರಿಗಳೇ ಹೆಚ್ಚು ಸೂಕ್ತ. 3-4 ತಿಂಗಳ ವಯಸ್ಸಿನ ಕುರಿ ಮರಿಗಳನ್ನು ಖರೀದಿಸಿ ತಂದು, 6-7 ತಿಂಗಳ ವಯಸಿನವರೆಗೆ ಸಾಕಾಣಿಕೆ ಮಾಡಿ, ಮಾರಾಟ ಮಾಡಬಹುದಾಗಿದೆ.
2. ತಳಿ ಸಂವರ್ಧನೆಗಾಗಿ: 20 ಹೆಣ್ಣು ಒಂದು ಗಂಡು ಅನುಪಾತದಲ್ಲಿ ವಯಸ್ಕ ಹೆಣ್ಣು ಮತ್ತು ಗಂಡು ಕುರಿ/ಮೇಕೆಗಳನ್ನು ಖರೀದಿಸಿ, ಕಾಣಿಕೆ ಮಾಡಬಹುದು. ಇವುಗಳಿಗೆ ಜನಿಸಿದ ಮರಿಗಳನ್ನು 3 ತಿಂಗಳ ವಯಸ್ಸಿನಲ್ಲಿ ತಾಯಿಯಿಂದ ಬೇರ್ಪಡಿಸಿ, ಉತ್ತಮವಾಗಿ ಸಾಕಾಣಿಕೆ ಮಾಡಿ, ಗಂಡು ಮರಿಗಳನ್ನ 6-7ತಿಂಗಳ ವಯಸ್ಸಿನಲ್ಲಿ ಮಾಂಸಕ್ಕಾಗಿ ಮಾರಾಟ ಮಾಡಬಹುದು ಮತ್ತು ಹೆಣ್ಣು ಮರಿಗಳನ್ನ ತಳಿ ಸಂವರ್ಧನೆಗಾಗಿ ಉಳಿಸಿಕೊಳ್ಳಬಹುದಾಗಿದೆ.
ತಳಿಗಳ ಆಯ್ಕೆ:
ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಥಳೀಯ ತಳಿಯ ಕುರಿ, ಮೇಕೆ ಮಾಂಸಕ್ಕೆ ಅಧಿಕ ಬೇಡಿಕೆ ಇದ್ದು, ರಾಜ್ಯದಲ್ಲಿನ ಡೆಕ್ಕನಿ, ಬಳ್ಳಾರಿ, ಯಳಗಾ, ಕೆಂಗುರಿ, ಹಾಸನ ಮತ್ತು ಬಂಡೂರು ತಳಿ ಕುರಿಗಳು ಹಾಗೂ ನಂದಿದುರ್ಗ ಮತ್ತು ಬಿದ್ರಿ ಮೇಕೆ ತಳಿಗಳನ್ನು ಸಾಕಾಣಿಕೆ ಮಾಡಬಹುದು.
ಇವುಗಳಲ್ಲದೇ, ಸುಧಾರಿತ ತಳಿಯ ಕುರಿ-ಮೇಕೆಗಳನ್ನು ಸಹ ಸಾಕಾಣಿಕೆ ಮಾಡಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಂಸ ಉತ್ಪಾದಿಸಿ, ಅಧಿಕ ಲಾಭ ಗಳಿಸಬಹುದಾಗಿದೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ-
• ಬೀಟಲ್ ಮೇಕೆ : ಪಂಜಾಬ್ ಮೂಲದ ಈ ತಳಿಯ ಮೇಕೆಯು ಹಾಲು ಮತ್ತು ಮಾಂಸದ ಉತ್ಪಾದನೆಗೆ ಪ್ರಸಿದ್ಧಿ ಪಡೆದಿವೆ. ವಯಸ್ಕ ಹೆಣ್ಣು 35-40 ಕಿ.ಗ್ರಾಂ, ಗಂಡು 50-75 ಕಿ.ಗ್ರಾಂ. ತೂಕವಿದ್ದು, ದಿನಕ್ಕೆ 2 ರಿಂದ 2.5 ಲೀಟರು ಹಾಲು ಕೊಡಬಲ್ಲದು.
ವಸತಿ:
ವಿದ್ಯುತ್ ಮತ್ತು ನೀರಿನ ಲಭ್ಯತೆ ಇರುವ ಎತ್ತರದ ಸ್ಥಳದಲ್ಲಿ ಕೊಟ್ಟಿಗೆ ನಿರ್ಮಿಸುವುದು ಒಳ್ಳೆಯದು. ಪೂರ್ವ-ಪಶ್ಚಿಮ ದಿಕ್ಕಿಗೆ ಉದ್ದ ಹಾಗೂ ಉತ್ತರ- ದಕ್ಷಿಣ ದಿಕ್ಕಿಗೆ ಅಗಲ
ಇರುವಂತೆ ಕೊಟ್ಟಿಗೆ ನಿರ್ಮಿಸಬೇಕು. ಕೊಟ್ಟಿಗೆ ಇಕ್ಕೆಲಗಳಲ್ಲಿ ಚರಂಡಿ ವ್ಯವಸ್ಥೆ ಮಾಡಿರಬೇಕು. ಕೊಟ್ಟಿಗೆಯನ್ನು ನಿರ್ಬಂಧಿತ ವಿಭಾಗ ಮತ್ತು ಸ್ವಚ್ಛ ವಿಭಾಗ (Paddock)ಗಳಾಗಿ ಪ್ರತ್ಯೇಕವಾಗಿ ವಿಂಗಡಿಸಿ,ಸ್ಥಳಾವಕಾಶ ಕಲ್ಪಿಸಬೇಕು.
1. ನಿರ್ಬಂಧಿತ ವಿಭಾಗ (Confined area): ಪ್ರತಿ ಕುರಿ-ಮೇಕೆಗೆ 10-12 ಚದರ ಅಡಿ, ಮರಿಗಳಿಗೆ ತಲಾ 5 ಚದರ ಅಡಿ, ಟಗರು/ಹೋತಕ್ಕೆ 15-18 ಚದರ ಅಡಿ, ತಾಯಿ ಕುರಿ/ಮೇಕೆ ಮತ್ತು ಮರಿಗೆ 20-25 ಚ.ಅಡಿ ಸ್ಥಳಾವಕಾಶ ಕಲ್ಪಿಸಬೇಕು.
2. ಸ್ವಚ್ಛ ವಿಭಾಗ (Paddock): ಪ್ರತಿ ಕುರಿ-ಮೇಕೆಗೆ 30 ಚ.ಅಡಿ, ಮರಿಗಳಿಗೆ ತಲಾ 15 ಚ.ಅಡಿ., ಟಗರು / ಹೋತಕ್ಕೆ 45 ಚದರ ಅಡಿ ಸ್ಥಳಾವಕಾಶ ಕಲ್ಪಿಸಬೇಕು.
ಕಡಿಮೆ ವೆಚ್ಚದಲ್ಲಿ ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳುವುದು ಒಳಿತು. 1/3 ಭಾಗದಷ್ಟು ಜಾಗದಲ್ಲಿ ಹೆಂಚು ಇಲ್ಲವೇ ಕಲ್ನಾರಿನ ಅಥವಾ ಜಿ.ಐ. ಶೀಟ್‌ನಿಂದ ಮೇಲ್ಟಾವಣೆ ನಿರ್ಮಿಸಬಹುದಾಗಿದೆ. ಉಳಿದ 2/3 ಭಾಗಕ್ಕೆ ಬಿಸಿಲು ಬೀಳು ವಂತಿರಬೇಕು. ಸುತ್ತಲೂ ತಂತಿಜಾಲರ (Chain link Mesh) ದಿಂದ 7 ಅಡಿ ಎತ್ತರದ ಬೇಲಿ ಹಾಕುವುದು ಸೂಕ್ತ.
ನೆಲ ಹಾಸು ಸಿಮೆಂಟ್ (ತರಕಲು)ನದಾಗಿದ್ದರೆ ಸೂಕ್ತ. ಇಲ್ಲವೇ ಒಂದರ ಪಕ್ಕದರಲ್ಲೊಂದು ಇಟ್ಟಿಗೆಗಳನ್ನು ಜೋಡಿಸಿ ನೆಲಹಾಸು ನಿರ್ಮಿಸಬಹುದು.. ಇತ್ತೀಚೆಗೆ ಸಿಮೆಂಟ್ ಕಂಬ / ಕಬ್ಬಿಣದ ಪಟ್ಟಿಗಳನ್ನು ಬಳಸಿಕೊಂಡು 5-6 ಅಡಿ ಎತ್ತರದಲ್ಲಿ ಅಟ್ಟ ನಿರ್ಮಿಸಿ ಅದರ ಮೇಲೆ ಮರದ ರೀಪರ್ / ಅಡಿಕೆ ದಬ್ಬೆ ಅಥವಾ ಪ್ರಸ್ತುತ ಹೆಚ್ಚು ಚಾಲ್ತಿಯಲ್ಲಿರುವ ಪಿ.ವಿ.ಸಿ. ಪ್ಲಾಸ್ಟಿಕ್ ಸ್ಲಾಟೆಡ್ ಮ್ಯಾಟ್‌ಗಳನ್ನು ಬಳಸಿ ನೆಲಹಾಸು ನಿರ್ಮಿಸುತ್ತಿದ್ದಾರೆ.
ಕೊಟ್ಟಿಗೆಯಲ್ಲಿ ಗರ್ಭಧರಿಸಿದ, ಮರಿ ಹಾಕಿರುವ, ತಾಯಿಯಿಂದ ಬೇರ್ಪಡಿಸಿದ ಮರಿಗಳು, ಗರ್ಭಧರಿಸದ, ರೋಗ ಪೀಡಿತ ಕುರಿ/ ಮೇಕೆಗಳಿಗೆ ಮತ್ತು ತಳಿ ಸಂವರ್ಧನೆಗಾಗಿ ಬಳಸುವ ಟಗರು/ಹೋತಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ/ ಗುಂಪುಗಳಲ್ಲಿ ಇಡಬೇಕಾಗುತ್ತದೆ.
ಆಹಾರ ನಿರ್ವಹಣೆ:
ಸುಧಾರಿತ ಮತ್ತು ಅಧಿಕ ಪೌಷ್ಟಿಕಾಂಶಗಳುಳ್ಳ ಮೇವಿನ ಬೆಳೆ, ಮೇವಿನ ಮರಗಳನ್ನು ಬೆಳೆಸಬೇಕು.
ಏಕ ಕಟಾವು ಮೇವಿನ ಬೆಳೆಗಳು:
ಏಕದಳ: ಜೋಳ, ಸೌತ್ ಆಫ್ರಿಕನ್ ಟಾಲ್ ಮುಸುಕಿನ ಜೋಳ, ಸಜ್ಜೆ.
ದ್ವಿದಳ: ಮೇವಿನ ಅಲಸಂದೆ, ಅವರೆ, ಮೇವಿನ ಹುರುಳಿ.
ಬಹು ಕಟಾವು ಮೇವಿನ ಬೆಳೆಗಳು
ಏಕದಳ: ಹೈಬ್ರಿಡ್ ಮೇವಿನ ಸಜ್ಜೆ, ಹೈಬ್ರಿಡ್ ಮೇವಿನ ಜೋಳ(CSH-24), ಸೂಡಾನ್ ಸೊರ್ಗಂ ಹುಲ್ಲು, COFS-31, ಗಿನಿ, ರೋಡ್ಸ್.
ದ್ವಿದಳ: ಕುದುರೆ ಮೆಂತೆ, ಸ್ಟೈಲೋಜಾಂತಸ್ ಸೀಯಾಬ್ರಾನ, ಬೇಲಿ ಮೆಂತೆ.
ಮೇವಿನ ಮರಗಳು
ಹಾಲವಾಣ, ಅಗಸೆ, ಸುಬಾಬುಲ್, ಹಿಪ್ಪಿಲು ನೇರಳೆ, ಹೆಬ್ಬೇವು, ನುಗ್ಗೆ, ಚಾಯಾ ಇತ್ಯಾದಿ.
ಸಂತಾನಾಭಿವೃದ್ಧಿ:
ಕುರಿಗಳಲ್ಲಿ ಮಾಂಸ ಉತ್ಪಾದನೆ ಹಾಗೂ ಮೇಕೆಗಳಲ್ಲಿ ಮಾಂಸ ಮತ್ತು ಹಾಲಿನ ಉತ್ಪಾದನೆಯ ಉದ್ದೇಶಗಳಿಗನುಗುಣವಾಗಿ ತಳಿಸಂವರ್ಧನೆಯನ್ನು ಆಯೋಜಿಸಬೇಕಾಗುತ್ತದೆ.
ಕುರಿ/ಮೇಕೆಗಳು ಪ್ರೌಢಾವಸ್ಥೆಗೆ ಬರುವ ವಯಸ್ಸು:
ಹೆಣ್ಣು ಕುರಿ/ಮೇಕೆಗಳು : 12-14 ತಿಂಗಳು ಹಾಗೂ ಗಂಡು ಕುರಿ/ಮೇಕೆಗಳು: 10-12 ತಿಂಗಳು.
ಕುರಿ/ಮೇಕೆ ಮಂದೆಗಳಲ್ಲಿ ಇರಬೇಕಾದ ಟಗರು/ಹೋತಗಳ ಸಂಖ್ಯೆ:
ತಳಿ ವರ್ಧನೆಗಾಗಿ ಇರುವ 100 ಹೆಣ್ಣು ಕುರಿ/ಮೇಕೆಗಳ ಮಂದೆಗೆ ಗರಿಷ್ಟ 5 ಟಗರು/ ಹೋತಗಳನ್ನು ತಳಿವರ್ಧನೆಗಾಗಿ ನಿರ್ವಹಿಸಬೇಕು.
ಸಣ್ಣ ಮಂದೆಗಳಲ್ಲಿ 20 ಅಥವಾ ಅದಕ್ಕಿಂತ ಕಡಿಮೆ ಇರುವ ಹೆಣ್ಣು ಕುರಿ/ಮೇಕೆಗಳಿಗೆ 1 ಟಗರು/ಹೋತ ಇಡಬೇಕು. ಪ್ರತಿ 2 ವರ್ಷಗಳಿಗೊಮ್ಮೆ ತಳಿ ಸಂವರ್ಧನೆಗೆ ಬಳಸುವ ಬಿತ್ತನೆ ಟಗರು/ಹೋತಗಳನ್ನು ಕಡ್ಡಾಯವಾಗಿ ಬದಲಾಯಿಸಬೇಕು.
ಸಾಮಾನ್ಯವಾಗಿ ಗರ್ಭ ಕಟ್ಟಿಸುವ ಕಾಲ: ಮಾರ್ಚ್-ಏಪ್ರಿಲ್ ಮತ್ತು ಜುಲೈ-ಆಗಸ್ಟ್
ಮರಿ ಹಾಕುವ ಕಾಲ: ಆಗಸ್ಟ್-ಸೆಪ್ಟೆಂಬರ್ ಮತ್ತು ಡಿಸೆಂಬರ್-ಜನವರಿ
ಬೆದೆಯ ಅವಧಿ: 1-15 ಗಂಟೆ
ಬೆದೆಯ ಅಂತರ: 18-21 ದಿನಗಳು
ಗರ್ಭಧಾರಣೆಯ ಅವಧಿ: 145-150 ದಿನಗಳು
ಗರ್ಭಧಾರಣಾ ಪ್ರಮಾಣ:
ಕುರಿ/ಮೇಕೆ ಸಂವರ್ಧನಾ ಕೇಂದ್ರಗಳಲ್ಲಿ ತಳಿ ಸಂವರ್ಧನೆಗೆ ಅರ್ಹವಾದ ಹೆಣ್ಣು ಕುರಿ/ಮೇಕೆಗಳಲ್ಲಿ ಗರ್ಭದಾರಣೆ ಪ್ರಮಾಣ ಶೇಕಡ 80 ಕ್ಕಿಂತ ಕಡಿಮೆ ಇರಬಾರದು ಹಾಗೂ ಮರಿಗಳ ಜನನ ಪ್ರಮಾಣ ವಾರ್ಷಿಕವಾಗಿ ತಳಿ ಸಂವರ್ಧನೆಗೆ ಅರ್ಹವಾಗಿರುವ ಕುರಿಗಳ ಶೇಕಡ 110 ರಷ್ಟು (1:1.10) ಮತ್ತು ಮೇಕೆಗಳಲ್ಲಿ ಶೇಕಡ 150 ರಷ್ಟು (1:1.50) ಇರಬೇಕು.
ಎಲ್ಲಾ ತಳಿಗಳ ಕುರಿ/ಮೇಕೆಗಳಲ್ಲಿ ಒಮ್ಮೆ ಮರಿ ಹಾಕಿದ ನಂತರ ಮತ್ತೊಮ್ಮೆ ಮರಿ ಹಾಕುವ ನಡುವಿನ ಅವಧಿಯು 8 ತಿಂಗಳಿಗಿಂತ ಹೆಚ್ಚು ಇರಬಾರದು.
ಸಾಂಪ್ರದಾಯಿಕ ಸಾಕಾಣಿಕೆಯಲ್ಲಿ ಎಲ್ಲಾ ವಯಸ್ಸಿನ/ಲಿಂಗದ ಕುರಿಗಳನ್ನು ಕೊಟ್ಟಿಗೆಯಲ್ಲಿ ಮತ್ತು ಹೊರಗಡೆ ಮೇಯಿಸುವಾಗಲು ಒಟ್ಟಿಗೆ ಬಿಟ್ಟಿರುತ್ತಾರೆ. ಹಾಗಾಗಿ ಒಳ ಸಂಕರಣಗೊಂಡು (Inbreeding) ಕ್ರಮೇಣ, ಕುರಿ-ಮೇಕೆಗಳ ವರ್ಷ ದೇಹದ ತೂಕ ಕಡಿಮೆಯಾಗುತ್ತಿದೆ ಮತ್ತು ಕಂದು ಹಾಕುವುದು ಮುಂತಾದ ತೊಂದರೆಗೆ ಕಾರಣವಾಗುತ್ತದೆ. ಇದನ್ನು ನಿಯಂತ್ರಿಸಲು ಆರೋಗ್ಯವಂತ ಕುರಿ ಮಂದೆಯಿಂದ ಆಯ್ಕೆ ಮಾಡಿದ ಬಿತ್ತನೆ ಟಗರನ್ನು ಖರೀದಿಸಿ ಅಥವಾ ವಿನಿಮಯ ಮಾಡಿ ಒಳಸಂಕರಣ ಆಗದಂತೆ ಎಚ್ಚರ ವಹಿಸುವುದು ಸೂಕ್ತ. ಬಿತ್ತನೆ ಟಗರು/ಹೋತವನ್ನು ಪ್ರತ್ಯೇಕವಾಗಿಡಬೇಕಾಗುತ್ತದೆ.
ಕೊಟ್ಟಿಗೆ ಪದ್ಧತಿಯಲ್ಲಿ ವ್ಯವಸ್ಥಿತವಾಗಿ ಸಾಕಾಣಿಕೆ ಮಾಡುವವರು ಕುರಿ- ಮೇಕೆಗಳನ್ನು ವಯಸ್ಸಿಗನುಗುಣವಾಗಿ ಮತ್ತು ಲಿಂಗ ಆಧರಿಸಿ ಪ್ರತ್ಯೇಕ ಗುಂಪುಗಳಲ್ಲಿ ಇಡಬೇಕಾಗುತ್ತದೆ. ಗರ್ಭಧರಿಸದ (ಬೆದೆಗೆ ಬರಲಿರುವ) ಕುರಿಗಳನ್ನು 30-35 ರಂತೆ ಗುಂಪುಗಳಾಗಿ ವಿಂಗಡಿಸಿ, ಪ್ರತಿ ಗುಂಪಿಗೆ 15 ದಿನಗಳ ಕಾಲ ಆಯ್ದ ಬಿತ್ತನೆ ಟಗರನ್ನು ಬಿಡಬೇಕು. ಆಗ ಎಲ್ಲಾ ಕುರಿಗಳು ಒಮ್ಮೆಗೆ ಬೆದೆಗೆ (RAM EFFECT) ಬರುತ್ತವೆ ಮತ್ತು ಗರ್ಭಧರಿಸುತ್ತವೆ.
* ಗಂಡು ಮತ್ತು ಹೆಣ್ಣು ಕುರಿ/ಮೇಕೆಗಳು ಒಂದೇ ವಂಶಾವಳಿಯವಾಗಿರಬಾರದು.
* ಸುಧಾರಿತ ತಳಿ ಹಾಗೂ ಹಿಂಡುಗಳಿಂದ ಆಯ್ಕೆ ಮಾಡಿಕೊಂಡಿರಬೇಕು.
* ಶರೀರದ ಅಂಗಾಂಗಗಳ ರಚನೆ, ಮೈಕಟ್ಟು ಮೂಲ ತಳಿಯನ್ನು ಹೋಲಬೇಕು. ಉತ್ತಮ ದೇಹದಾಡ್ಯ ಹೊಂದಿರಬೇಕು. ಯಾವುದೇ ಅನುವಂಶಿಯನ್ಯೂನತೆಗಳನ್ನು ಹೊಂದಿರಬಾರದು.
1. ಪ್ರತಿ 3 ತಿಂಗಳಿಗೊಮ್ಮೆ ಸಗಣಿ/ಹಿಕ್ಕೆ ಪರೀಕ್ಷೆ ಮಾಡಿಸಿ, ಅವಶ್ಯಕತೆ ಇದ್ದಲಿ ಜಂತುನಾಶಕ ಔಷಧಿ ಕುಡಿಸಬೇಕು.
2. ಸಾಂಕ್ರಾಮಿಕ ರೋಗಗಳ ವಿರುದ್ಧ ತಪ್ಪದೇ ಲಸಿಕೆ ಹಾಕಿಸಬೇಕು.
3. ರೋಗ ಪೀಡಿತ ಕುರಿ-ಮೇಕೆಗಳನ್ನು ಪ್ರತ್ಯೇಕವಾಗಿರಿಸಿ, ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಮಾಡಬೇಕು.
ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಲು ಹೆಚ್ಚಿನ ಮಾಹಿತಿಗಾಗಿ ಹಾಗೂ ಸರ್ಕಾರದಿಂದ ಸಿಗುವ ಯೋಜನಾ ಸೌಲಭ್ಯ, ಲೋನ್, ಸಬ್ಸಿಡಿ ಸೇರಿದಂತೆ ಇತರೆ ಸೇವೆ ಪಡೆಯಲು ಸ್ಥಳೀಯ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯನ್ನ ಸಂಪರ್ಕಿಸಿ.
ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…
ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್…
18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…
ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…
ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…
ರಾಹುಲ್ ಗಾಂಧಿ...... ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ…