ರೈತಪರ ಯೋಜನೆ : ವಿಬಿ-ಜಿ ರಾಮ್ ಜಿ ಯೋಜನೆ


ಚಿಕ್ಕನಾಯಕನಹಳ್ಳಿ: ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜುಲೈ.1 ರಿಂದ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯು ದೇಶಾದ್ಯಂತ ಅಧಿಕೃತವಾಗಿ ಜಾರಿಯಾಗಿದ್ದು, ದಿನಕ್ಕೆ 382 ರೂ.ಕೂಲಿ ನಿಗಧಿಯಾಗಿದೆ ಹಾಗೂ ವರ್ಷದಲ್ಲಿ 125 ದಿನ ಉದ್ಯೋಗ ನೀಡಲಾಗುತ್ತದೆ ಎಂದು ದ್ವಿತಿಯ ದರ್ಜೆ ಸಹಾಯಕರಾದ ಶ್ರೀ ಓಂಕಾರ್ ಮೂರ್ತಿ ತಿಳಿಸಿದರು.

ಕಂದಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾದರಹಳ್ಳಿ ಗ್ರಾಮದ ಕರಿಯಮ್ಮ ದೇವಾಲಯದ ಮುಂಭಾಗ ವಿಬಿ-ಜಿ ರಾಮ್ ಜಿ ಯೋಜನೆಯಡಿ ಹಮ್ಮಿಕೊಂಡಿದ್ದ ಕೂಲಿ ಆಧಾರಿತ ಕಾಮಗಾರಿಗಳ ಅಭಿಯಾನ ಹಾಗೂ ಜಾಬ್ ಕಾರ್ಡ್ ಮೇಳ ಅಭಿಯಾನದಡಿ ಐಇಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಬಿ-ಜಿ ರಾಮ್ ಜಿ ಯೋಜನೆಯಡಿ ಜಲಸಂರಕ್ಷಣೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಕಾಮಗಾರಿಗಳಿಗೆ ಹೆಚ್ಚಿನ ಆಧ್ಯತೆ ನೀಡಿಲಾಗಿದೆ, ಮಹಿಳೆಯರು, ರೈತರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದರಿ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು ಎಂದರು.

ತಾಲ್ಲೂಕು ಐಇಸಿ ಸಂಯೋಜಕರಾದ ರಮ್ಯ ಕೆ.ಎಸ್ ಮಾತನಾಡಿ, ರೈತರು ತಮ್ಮ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿಗಳು/ತೋಟಗಾರಿಕಾ ಬೆಳೆಗಳು, ಕೃಷಿಹೊಂಡ, ದನ/ಕುರಿ ಕೊಟ್ಟಿಗೆ ಮಾಡಿಕೊಳ್ಳಬಹುದಾಗಿದೆ ಹಾಗೂ ಆಗಸ್ಟ್ 15 ರಿಂದ ಸೆಪ್ಟೆಂಬರ್ 15 ರ ರವರೆಗೆ ತಾಲ್ಲೂಕಿನಾದ್ಯಂತ ಜಾಬ್ ಕಾರ್ಡ್ ಮೇಳ ಹಮ್ಮಿಕೊಂಡಿದ್ದು, ವಿಬಿ-ಜಿ ರಾಮ್ ಜಿ ಯೋಜನೆಯಡಿ ಬೆಳೆ ಕಟಾವು ಸಮಯದಲ್ಲಿ 60 ದಿನಗಳ ಬಿಡುವಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.

ಉದ್ಯೋಗ ಚೀಟಿ ಪಡೆಯದೆ ಇರುವವರು ಅಗತ್ಯ ದಾಖಲೆಗಳಾದ ವೈಯಕ್ತಿಕ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋವನ್ನು ಗ್ರಾಮ ಪಂಚಾಯಿತಿಗೆ ನೀಡಿ ಉದ್ಯೋಗ ಚೀಟಿ ಪಡೆದುಕೊಳ್ಳಿ ಎಂದು ತಿಳಿಸಿದರು.

ಈ ವೇಳೆ ವಿಬಿ-ಜಿ ರಾಮ್ ಜಿ ಯೋಜನೆಯಡಿ ನೂತನ ಗ್ಯಾರಂಟಿ ರೋಜ್ ಗಾರ್ ಕಾರ್ಡ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗಣಕಯಂತ್ರ ನಿರ್ವಾಹಕರಾದ ತೇಜಸ್ , ಗ್ರಾಮ ಕಾಯಕ ಮಿತ್ರರಾದ ವಿಜಯಕುಮಾರಿ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಸ್ವ-ಸಹಾಯ ಸಂಘದ ಸದಸ್ಯರು, ಗ್ರಾಕೂಸು ಕೂಲಿಕಾರರು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!