Categories: ಲೇಖನ

ರಾಹುಲ್ ಗಾಂಧಿ ಸೈದ್ಧಾಂತಿಕ ಬದ್ಧತೆಯಿರುವ ವ್ಯಕ್ತಿ….

ರಾಹುಲ್ ಗಾಂಧಿ……

ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ ಬಗ್ಗೆ ಮೊದಲಿಗಿಂತ ಹೆಚ್ಚು ತೀವ್ರವಾದ ಚರ್ಚೆಗಳನ್ನು ಮಾಡಲಾಗುತ್ತಿದೆ. ಜೊತೆಗೆ ಅವರ ವಿರೋಧಿಗಳು ಅವರನ್ನು ಹಿಂದಿಗಿಂತ ಹೆಚ್ಚಾಗಿ ಮತ್ತಷ್ಟು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಪಪ್ಪು ಮತ್ತು ಐರನ್ ಲೆಗ್ ( ಅಪಶಕುನ) ಎಂದೇ ಮಾಧ್ಯಮಗಳು ಸೇರಿ ಬಹಳಷ್ಟು ಜನ ನಿಂದಿಸುತ್ತಿದ್ದಾರೆ.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಗಿ ಸ್ವಾತಂತ್ರ್ಯ ಹೋರಾಟದವರೆಗೂ ಒಂದು ರೀತಿಯ ಸೈದ್ಧಾಂತಿಕ ಬದ್ಧತೆಯಿಂದ ಕೆಲಸ ಮಾಡಿತು. ತದನಂತರ ಅದೇ ರಾಷ್ಟ್ರೀಯ ಕಾಂಗ್ರೆಸ್ ರಾಜಕೀಯ ಪಕ್ಷವಾಗಿ ಇಂದಿನವರೆಗೂ ಅಸ್ತಿತ್ವದಲ್ಲಿದೆ.

ಈ ಕ್ಷಣದಲ್ಲಿ ರಾಹುಲ್ ಗಾಂಧಿ ಅದರ ಅಧಿಕೃತ ಅಧ್ಯಕ್ಷರಲ್ಲದೇ ಇದ್ದರೂ ಅದನ್ನು ರಾಜಕೀಯವಾಗಿ ಮುನ್ನಡೆಸುತ್ತಿರುವುದು ಅವರೇ ಆಗಿದ್ದಾರೆ.

ಕಾಂಗ್ರೆಸ್ ಪಕ್ಷದ ಈ ಸ್ವಾತಂತ್ರ್ಯ ನಂತರದ ಸುಮಾರು 78 ವರ್ಷಗಳ ಇತಿಹಾಸವನ್ನು ಗಮನಿಸಿದರೆ ಚುನಾವಣಾ ರಾಜಕೀಯದಲ್ಲಿ ಕಾಂಗ್ರೆಸ್ ತೀರ ಕೆಳಹಂತಕ್ಕೆ ಇಳಿದಿರುವುದು ನಿಜ ಮತ್ತು ವಾಸ್ತವ. ಹಾಗಾದರೆ ರಾಹುಲ್ ಗಾಂಧಿ ಅಷ್ಟೊಂದು ದುರ್ಬಲ ವ್ಯಕ್ತಿಯೇ, ವ್ಯಕ್ತಿತ್ವವೇ, ತೀರಾ ಕೆಟ್ಟ ನಾಯಕರೇ…..

ನಮ್ಮ ಮನಸ್ಸನ್ನು ಯಾರಿಗೂ ಸೇರದ ಅಂದರೆ ನೋಮ್ಯಾನ್ಸ್ ಲ್ಯಾಂಡ್ ನಲ್ಲಿ ನಿಂತು ಇದನ್ನು ಗಮನಿಸಬೇಕು. ಕೇವಲ ಲೋಕಾಭಿರಾಮದ ಅಥವಾ ಸಂಕುಚಿತ ಮನಸ್ಥಿತಿಯಲ್ಲಿ, ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ಕೇವಲ ಚುನಾವಣಾ ಫಲಿತಾಂಶದ ಆಧಾರದ ಮೇಲೆ ಮಾತ್ರ ರಾಹುಲ್ ಗಾಂಧಿಯವರ ವ್ಯಕ್ತಿತ್ವ ವಿಮರ್ಶಿಸಿದರೆ ಅದು ಅಪರಿಪೂರ್ಣ ಮತ್ತು ಬಾಲಿಶ ಅಭಿಪ್ರಾಯವಾಗಬಹುದು.

ಸ್ವಾತಂತ್ರ ನಂತರ ಕಾಂಗ್ರೆಸ್ಸನ್ನು ಮುನ್ನಡೆಸಿದ ನಾಯಕರುಗಳಲ್ಲಿ ಸೈದ್ಧಾಂತಿಕ ಬದ್ಧತೆಯ ನಾಯಕತ್ವದಲ್ಲಿ ರಾಹುಲ್ ಗಾಂಧಿ ಎಲ್ಲರಿಗಿಂತ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ತಾವು ಚುನಾವಣಾ ರಾಜಕೀಯದ ಫಲಿತಾಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ, ಚುನಾವಣೆಯನ್ನು ಗೆಲ್ಲಲು ತೀರಾ ಅತಿಯಾದ ಕೆಟ್ಟ ತಂತ್ರ ಕುತಂತ್ರ ಮಾಡದೆ, ಗೆಲ್ಲಲೇಬೇಕೆಂಬ ಹಠದಿಂದ ಚಿತ್ರ ವಿಚಿತ್ರ ವೇಷಗಳನ್ನು ಹಾಕಿಕೊಳ್ಳದೆ, ತಮ್ಮ ಪಕ್ಷದ ಮೂಲ ಸೈದ್ಧಾಂತಿಕ ವಿಷಯಗಳನ್ನೇ ಮುಂದೆ ಮಾಡಿ ಹಠವಾದಿಯಂತೆ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದು ಅವರ ಶಕ್ತಿಯು ಹೌದು ದೌರ್ಬಲ್ಯವೂ ಹೌದು. ಏಕೆಂದರೆ ಈ ಚುನಾವಣಾ ವ್ಯವಸ್ಥೆಯಲ್ಲಿ ಸಾಮ ದಾನ ಭೇದ ದಂಡ ಎಲ್ಲವನ್ನು ಉಪಯೋಗಿಸಿದ ನಂತರ ಮಾತ್ರವೇ ಗೆಲುವು ಸಾಧ್ಯ. ಸೈದ್ಧಾಂತಿಕ ಬದ್ಧತೆಯಾಗಲಿ, ಯಾವುದೇ ಹೋರಾಟಗಳಾಗಲಿ, ಮೌಲ್ಯಗಳಾಗಲಿ ಗೆಲುವು ಸಾಧಿಸಲು ಸಾಧ್ಯವೇ ಆಗುವುದಿಲ್ಲ.

ಸಾಮಾನ್ಯವಾಗಿ ಕೆಲವು ಕಠೋರ ಕಮ್ಯುನಿಸ್ಟ್ ಸಿದ್ದಾಂತವಾದಿಗಳು, ಕಠೋರ ಹಿಂದುತ್ವ ವಾದಿಗಳು ಮಾತ್ರ ಈ ರೀತಿಯ ವ್ಯಕ್ತಿತ್ವ ಹೊಂದಿರುತ್ತಾರೆ. ಅಂದರೆ ಸೋಲು ಗೆಲುವಿಗಿಂತ ಮುಖ್ಯವಾಗಿ ತಮ್ಮ ಸೈದ್ಧಾಂತಿಕ ಬದ್ಧತೆಯೇ ಮುಖ್ಯ. ಅಧಿಕಾರಕ್ಕಾಗಿ ಅದನ್ನು ಬದಲಾಯಿಸಲು ಇಷ್ಟಪಡುವುದಿಲ್ಲ.

ಇದಕ್ಕೆ ಕೆಲವು ತಕ್ಷಣದ ಉದಾಹರಣೆ ನೀಡಬಹುದು. ರಾಹುಲ್ ಗಾಂಧಿ ಜಾತಿ ಜನಗಣತಿಯ ಬಗ್ಗೆ ಪ್ರತಿಪಾದಿಸುತ್ತಾ ಬಂದಿದ್ದಾರೆ. ಅವರ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷ ಜಾತಿ ಜನಗಣತಿಯನ್ನು ವಿರೋಧಿಸಿ ನಾವೆಲ್ಲರೂ ಹಿಂದೂ, ನಾವೆಲ್ಲರೂ ಒಂದು ಎಂದು ಪ್ರತಿಪಾದಿಸುತ್ತದೆ. ಆದರೆ ಬಿಹಾರ ಚುನಾವಣೆಯ ಹತ್ತಿರದಲ್ಲಿ ಮಾನ್ಯ ಪ್ರಧಾನಿಯವರು ತಮ್ಮ ಮೂಲ ಆಶಯಕ್ಕೆ ವಿರುದ್ಧವಾಗಿ ಇಡೀ ದೇಶದಾದ್ಯಂತ ಜಾತಿ ಜನಗಣತಿಯ ಘೋಷಣೆ ಮಾಡಿದ್ದಾರೆ. ಅಂದರೆ ಅವರ ನಿಲುವಿಗೆ ವಿರುದ್ಧವಾಗಿ ಚುನಾವಣೆ ಗೆಲ್ಲಲು ಈ ರೀತಿಯಲ್ಲಿ ವರ್ತಿಸಿದರು.

ಹಾಗೆಯೇ ಬಿಜೆಪಿ ಪಕ್ಷ ಉಚಿತ ಯೋಜನೆಗಳನ್ನು ಸದಾ ವಿರೋಧಿಸುತ್ತದೆ. ಅದರಿಂದಾಗಿ ರಾಜ್ಯ ಮತ್ತು ದೇಶಗಳ ಆರ್ಥಿಕ ಪರಿಸ್ಥಿತಿ ದಿವಾಳಿತನದತ್ತ ಸಾಗುತ್ತದೆ ಎನ್ನುವ ಅಭಿಪ್ರಾಯ ಹೊಂದಿದ್ದಾರೆ. ಆದರೆ ಚುನಾವಣಾ ಸಂದರ್ಭದಲ್ಲಿ ಅವರೂ ಸಹ ಅಧಿಕಾರಕ್ಕಾಗಿ ಉಚಿತ ಯೋಜನೆಗಳನ್ನು ಘೋಷಿಸಿದರು. 10000 ರೂಪಾಯಿಗಳನ್ನು ಮಹಿಳೆಯರ ಖಾತೆಗೆ ವರ್ಗಾಯಿಸಿದ ನಿಲುವಿನಲ್ಲಿ ಭಾಗಿಯಾದರು.

ಇದನ್ನು ಚುನಾವಣಾ ರಾಜಕೀಯದ ತಂತ್ರಗಾರಿಕೆ, ಚಾಣಕ್ಯ ನಡೆ, ಗೆಲುವೇ ಮುಖ್ಯ ಎಂಬುದಾಗಿ ಅರ್ಥೈಸಿದರೆ ಅದು ಸರಿ ಇರಬಹುದು. ಆದರೆ ಮೌಲ್ಯಗಳ ದೃಷ್ಟಿಯಿಂದ ಖಂಡಿತವಾಗಲೂ ಇದು ಅಂತಹ ಒಳ್ಳೆಯ ನಡೆಯಲ್ಲ. ಏಕೆಂದರೆ ಪ್ರತಿಯೊಬ್ಬರೂ ಯೋಚಿಸ ಬೇಕಾಗಿರುವುದು ದೇಶದ ಹಿತದೃಷ್ಟಿಯಿಂದಲೇ ಹೊರತು ಪಕ್ಷದ ಹಿತದೃಷ್ಟಿಯಿಂದಲ್ಲ. ಗೆಲುವೇ ಮುಖ್ಯವಾದರೆ ದೇಶದ ಒಟ್ಟು ಹಿತಾಸಕ್ತಿಯ ಗತಿಯೇನು…..

ಹಾಗಾದರೆ ರಾಹುಲ್ ಗಾಂಧಿಯವರು ತುಂಬಾ ಒಳ್ಳೆಯವರೇ, ಚುನಾವಣಾ ರಾಜಕೀಯದ ತಂತ್ರಗಾರಿಕೆ ಮಾಡುವುದಿಲ್ಲವೇ ಎಂದರೆ ಖಂಡಿತ ಮಾಡುತ್ತಾರೆ. ಆದರೆ ಅದನ್ನೇ ಮುಖ್ಯ ಉದ್ದೇಶವಾಗಿ ಇಟ್ಟುಕೊಂಡಿರುವುದಿಲ್ಲ. ಅವರಲ್ಲಿ ಚುನಾವಣಾ ನಾಯಕತ್ವದ ಗುಣಗಳಿಗಿಂತ ಕಮ್ಯುನಿಸ್ಟ್ ಹೋರಾಟ ರೀತಿಯ ಮನೋಭಾವವೇ ಹೆಚ್ಚಾಗಿದೆ.

ಹಾಗೆಯೇ ರಾಹುಲ್ ಗಾಂಧಿಯವರನ್ನು ಅವರ ಸೋಲಿನ ಕಾರಣಕ್ಕಾಗಿ ಅತ್ಯಂತ ದಡ್ಡ, ಮೂರ್ಖ ಶಿಖಾಮಣಿ ಎಂದು ಕರೆಯುವುದು ಸಹ ಉತ್ತಮ ನಡೆಯಲ್ಲ. ಸೋತ ಮಾತ್ರಕ್ಕೆ ವ್ಯಕ್ತಿಯನ್ನು ನಿಕೃಷ್ಟವಾಗಿ ಕಾಣುವುದು ಒಳ್ಳೆಯದಲ್ಲ. ಏಕೆಂದರೆ ಕ್ರೀಡೆ ಇರಬಹುದು, ಚುನಾವಣೆಯೇ ಇರಬಹುದು, ಬದುಕೇ ಇರಬಹುದು ಬಹುತೇಕರು ಸೋಲುತ್ತಲೇ ಜೀವನ ಮುಗಿಸುತ್ತಾರೆ. ಹಾಗಾದರೆ ಅವರ ಬದುಕಿಗೆ ಅರ್ಥ ಇರುವುದಿಲ್ಲವೇ ಗೆಲುವು ಮಾತ್ರ ಈ ಸಮಾಜದ ಗೌರವಕ್ಕೆ ಪಾತ್ರವಾಗುವುದಾದರೆ ಸೋಲನ್ನು ಸ್ವೀಕರಿಸುವ ಮಾನವೀಯ ಮೌಲ್ಯ ನಮಗೆ ಬೇಡವೇ. ಸೋತವರು ನಮ್ಮವರಲ್ಲವೇ…..

ಮಾಧ್ಯಮಗಳು ಅವರನ್ನು ಪ್ರಜಾಪ್ರಭುತ್ವದ ಮೌಲ್ಯಗಳ ದೃಷ್ಟಿಯಿಂದ ನೋಡಬೇಕೆ ಹೊರತು ಶತ್ರುವಿನಂತೆ ನೋಡಬಾರದು. ತನ್ನ ವಂಶದ ಎಲ್ಲಾ ಕೆಟ್ಟ ನಿರ್ಧಾರಗಳ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತು ಸಾಗುತ್ತಿರುವ ರಾಹುಲ್ ಗಾಂಧಿ ಮಾನವೀಯ ಮೌಲ್ಯಗಳ ಬಗ್ಗೆ, ಸಾಮಾಜಿಕ ಮೌಲ್ಯಗಳ ಬಗ್ಗೆ ಹೆಚ್ಚು ಮಾತನಾಡುವುದನ್ನು ಕಾಣಬಹುದು. ಶೋಷಿತರ ಪರವಾಗಿ ನಿರಂತರವಾಗಿ ಹೋರಾಡುತ್ತಿರುವುದು ಗಮನಿಸಬಹುದು. ಆ ಕಾರಣದಿಂದಾಗಿಯೇ ಅವರಿಗೆ ಮತಗಳು ಬಾರದೇ ಇರಬಹುದು. ಅವರ ಪಕ್ಷದ ಕೆಲವು ನಾಯಕರ ವಂಶಾಡಳಿತ, ಭ್ರಷ್ಟಾಚಾರ, ದೌರ್ಜನ್ಯಗಳ ಕಾರಣದಿಂದಾಗಿ ಜನ ಅವರ ಬಗ್ಗೆ ರೋಸಿ ಹೋಗಿರಬಹುದು.

ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಕುಸಿತವಾಗಿ ಹಣ ಕೇಂದ್ರಿತ ಸಮಾಜ ನಿರ್ಮಾಣವಾಗಿರುವಾಗ ಯುವಕರ ಯೋಚನಾ ಶಕ್ತಿ ಭಕ್ತ ಗಣದತ್ತ, ಗುಲಾಮಿತನದತ್ತ ಸಾಗುತ್ತಿರುವಾಗ ಸಹಜವಾಗಿಯೇ ರಾಹುಲ್ ಗಾಂಧಿ ಅವರುಗಳಿಗೆ ಇಷ್ಟವಾಗದೇ ಇರಬಹುದು. ಹಾಗೆಂದು ಗೆಲುವಿಗಾಗಿ ಕೆಟ್ಟ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೇ. ಅದಕ್ಕಿಂತ ಸೋಲೇ ಸಾಮಾಜಿಕವಾಗಿ ಒಳ್ಳೆಯದಲ್ಲವೇ.

ಪ್ರಜಾಪ್ರಭುತ್ವದಲ್ಲಿ ಗೆದ್ದವರನ್ನು ಅಭಿನಂದಿಸೋಣ. ಆದರೆ ಸೋತವರನ್ನು ಹೀಗಳೆಯುವುದು ಬೇಡ. ನಾವೆಲ್ಲರೂ ಬಹುತೇಕ ಭಾರತೀಯ ಮಧ್ಯಮ ವರ್ಗದವರು ಜೀವನಪೂರ್ತಿ ಸೋಲುತ್ತಲೇ ಬದುಕು ಮುಗಿಸುತ್ತಿರುವವರು. ಸೋಲು ಎಂಬುದು ನಮ್ಮೆಲ್ಲರ ಬದುಕಿನ ಅತ್ಯಂತ ಸಹಜ ಜೀವನ ಕ್ರಮ. ಎಲ್ಲೋ ಕೆಲವರಿಗೆ ಮಾತ್ರ ಗೆಲುವು ಸಿಗುತ್ತದೆ. ಆ ಸೋಲಿನ ಪಟ್ಟಿಯಲ್ಲಿ ರಾಹುಲ್ ಗಾಂಧಿಯು ಇರಬಹುದು. ಅಥವಾ ಈಗ ಅವರಿಗೆ ಇರುವ ಅನುವಂಶಿಯ ಮತ್ತು ಅಧಿಕಾರ ಸ್ಥಾನದ ಬಲದಿಂದ ಮುಂದೊಮ್ಮೆ ಅವರು ದೊಡ್ಡ ಮಟ್ಟದ ಯಶಸ್ಸು ಪಡೆಯಬಹುದು. ಆದರೆ ಅದಕ್ಕಾಗಿ ಅವರು ಉತ್ತಮ ಮೌಲ್ಯಗಳು, ಒಳ್ಳೆಯ ಯೋಚನೆಗಳಿಂದ, ಯೋಜನೆಗಳಿಂದ ಯಶಸ್ಸು ಪಡೆಯಲಿ‌.

ರಾಹುಲ್ ಗಾಂಧಿಯವರನ್ನು ತೀರಾ ಕೆಳಹಂತದ ಟೀಕೆಗಳಿಗೆ ಗುರಿಪಡಿಸಿದ್ದರಿಂದಾಗಿ ಅವರ ಬಗ್ಗೆ ಒಂದಷ್ಟು ಒಳ್ಳೆಯ ಮಾತುಗಳನ್ನು ಆಡಬೇಕಾಯಿತು. ಆತ ಸೈದ್ಧಾಂತಿಕ ಬದ್ಧತೆಯಿರುವ ವ್ಯಕ್ತಿ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆಯ ಹಿತದೃಷ್ಟಿಯಿಂದ ವಿರೋಧ ಪಕ್ಷದ ನಾಯಕನನ್ನು ತೀರಾ ನಿಕೃಷ್ಟವಾಗಿ ಕಾಣುವುದು ಒಳ್ಳೆಯದಲ್ಲ. ಅದನ್ನು ಹೊರತುಪಡಿಸಿ ಯಾವುದೇ ರಾಜಕೀಯ ನಿಲುವುಗಳ ಬಗ್ಗೆ ಪರ ವಿರೋಧದ ಅಭಿಪ್ರಾಯ ಇಲ್ಲಿ ವ್ಯಕ್ತವಾಗಿಲ್ಲ. ವ್ಯಕ್ತಿ ನಿಂದನೆ ಒಳ್ಳೆಯದಲ್ಲ. ಧನ್ಯವಾದಗಳು

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಇಬ್ಬರು ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾಲೇಜಲ್ಲಿ ಶೋಕಿ ಮಾಡೋ ಖಯಾಲಿ: ಆದ್ರೆ ಜೇಬಲ್ಲಿ ಕಾಂಚಾಣ ಇಲ್ಲ: ಕಾಸಿಗಾಗಿ ಏನು ಮಾಡಿದ್ರು ಗೊತ್ತಾ……

ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…

15 hours ago

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹೀಲಿನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…

16 hours ago

ದೇಶದ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ರಾಯಚೂರಿನ ಕವಿತಾಳ ಪೊಲೀಸ್ ಠಾಣೆ ಆಯ್ಕೆ

ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…

20 hours ago

ನಾಯಿ, ಹಾವು/ ಇತರೆ ಪ್ರಾಣಿಗಳ ದಾಳಿ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳು

ನಮ್ಮ‌ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…

22 hours ago

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು….ಮನಸ್ಸಿನ ದಾರಿಯಲ್ಲಿ ಅನಂತ ಪಯಣ….

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…

1 day ago

ನಿರ್ಜನ ಪ್ರದೇಶದಲ್ಲಿ ದೊರೆತಿದ್ದ ನವಜಾತ ಶಿಶುವಿನ ಆರೋಗ್ಯ ಸ್ಥಿರ: ಜಿಲ್ಲಾ ಸರ್ಕಾರಿ ದತ್ತು ಕೇಂದ್ರಕ್ಕೆ ಹಸ್ತಾಂತರ

ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…

1 day ago