ಜನವರಿ 22ರಂದು ರಾಮಮಂದಿರ ಉದ್ಘಾಟನೆಗೊಳ್ಳಲಿದ್ದು, ಇದರಿಂದ ಬಿಜೆಪಿಗೆ ರಾಜಕೀಯ ಲಾಭವಾಗಲ್ಲ. ವಿವಾದ ಬಹಳ ವರ್ಷಗಳಿಂದ ಇದ್ದು, ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ರಾಮಮಂದಿರ ಕಟ್ಟಲು ನಮ್ಮದೇನು ವಿರೋಧವಿಲ್ಲ. ಅದರಿಂದ ಮತದಾರರು ಬದಲಾಗುತ್ತಾರೆ ಎನ್ನುವುದು ಸುಳ್ಳು. ನಮ್ಮ ದೇಶದ ಜನ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡುಕೊಂಡಿದ್ದಾರೆ. ಬ್ರಿಟಿಷರ ಹಾಗೂ ಮೊಘಲರ ದಾಳಿಯಾದರೂ ಒಂದು ದೇಶವಾಗಿ ನಾವು ಉಳಿದುಕೊಂಡಿದ್ದೇವೆ. ಈ ದೇಶದಲ್ಲಿ ಅನೇಕ ಜಾತಿ, ಭಾಷೆಗಳು ಹಾಗೂ ಧರ್ಮಗಳಿದ್ದರೂ ದೇಶವಾಗಿ ಒಂದಾಗಿರುವುದು ಜನರ ನಡುವಿನ ಐಕ್ಯತೆ, ಒಗ್ಗಟ್ಟಿನಿಂದ. ಒಳಗೊಳ್ಳುವಿಕೆಯಲ್ಲಿ ನಂಬಿಕೆ ಇಟ್ಟವರು ದೇಶದಲ್ಲಿ ಹೆಚ್ಚಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಪಂಚ ರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ನನಗಿರುವ ಮಾಹಿತಿಯ ಪ್ರಕಾರ ಮೂರು ರಾಜ್ಯಗಳಲ್ಲಿ ನಮ್ಮ ಪಕ್ಷ ಗೆಲ್ಲಲಿದೆ. ಇದರ ಫಲಿತಾಂಶದಿಂದ ಲೋಕಸಭಾ ಚುನಾವಣೆ ಮುಂದೂಡಲಾಗುವುದಿಲ್ಲ ಏಕೆಂದರೆ ಈಗಾಗಲೇ ನವೆಂಬರ್ ಕೊನೆಯಲ್ಲಿದ್ದೇವೆ, ಚುನಾವಣಾ ನೀತಿ ಸಂಹಿತೆ ಮಾರ್ಚ್ ಅಂತ್ಯಕ್ಕೆ ಆಗಬಹುದು ಎಂಬ ನಿರೀಕ್ಷೆ ಇದೆ ಎಂದರು.
ಬೇರೆ ರಾಜ್ಯಗಳ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿ ನಾಯಕರು ಕರ್ನಾಟಕವನ್ನು ಟೀಕೆ ಮಾಡುತ್ತಿದ್ದಾರೆ. ಅದಕ್ಕೆ ಅವರು ಮಧ್ಯಪ್ರದೇಶದಲ್ಲಿ ನನ್ನ ಹಾಗೂ ಕರ್ನಾಟಕದ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಮಂತ್ರಿಗಳು ನಮ್ಮ ಗ್ಯಾರಂಟಿಗಳಿಗೆ ವಿರೋಧ ಮಾಡಿದ್ದರು. ಈಗ ‘ವಿಕಸಿತ್ ಭಾರತ್’ ಎಂದು ವ್ಯಾನ್ ಕಳಿಸಿ ಅದರಲ್ಲಿ ಪ್ರಧಾನಮಂತ್ರಿಗಳ ಗ್ಯಾರಂಟಿ ಎಂದು ಬರೆದಿದ್ದಾರೆ. ಅದನ್ನು ಭಾರತದ ಸರ್ಕಾರ ಕಳುಹಿಸಿದೆ. ಮೊದಲು ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿ ಈಗ ಅವರು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಇದನ್ನು ರಾಜಕೀಯ ಇಬ್ಬಂದಿತನ ಎಂದು ಕರೆಯದೆ ಬೇರೇನು ಹೇಳಬೇಕು? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಬರಪರಿಹಾರ ನೀಡುವ ಸಂಬಂಧ ಕೇಂದ್ರವನ್ನು ಹಲವು ಬಾರಿ ಒತ್ತಾಯಿಸಿದ್ದೇವೆ. ಕೇಂದ್ರದಿಂದ 17,900 ಕೋಟಿ ರೂ.ಗಳ ಬರಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ನಡೆಸಿ ಒಂದು ತಿಂಗಳಾದರೂ ಕೂಡ ವರದಿಯನ್ನು ನೀಡಿಲ್ಲ ಹಾಗೂ ನಮ್ಮ ಸರ್ಕಾರದ ಮನವಿಗೆ ಕೇಂದ್ರ ಇದುವರೆಗೂ ಸ್ಪಂದಿಸಿಲ್ಲ. ಬರಪರಿಹಾರ ರಾಜ್ಯಕ್ಕೆ ನೀಡುವ ಭಿಕ್ಷೆಯಲ್ಲ. ಎನ್.ಡಿ.ಆರ್.ಎಫ್ ನಡಿ ಪರಿಹಾರವನ್ನು ನೀಡಬೇಕಿದ್ದು, ಅದನ್ನು ರಾಜ್ಯ ನೀಡಿರುವ ತೆರಿಗೆಯ ಮೊತ್ತವೇ ಆಗಿದೆ. ಬರಪರಿಹಾರಕ್ಕೆ ಸಂಬಂಧಿಸಿದಂತೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಇಂದು ಕೂಡ ಪತ್ರಿಕಾಗೋಷ್ಠಿ ಕರೆದು ಸುಳ್ಳು ಸುಳ್ಳು ಆರೋಪ ಮಾಡಿದ್ದಾರೆ. ವಿಧಾನಸಭಾ ಅಧಿವೇಶನದಲ್ಲಿ ಅವರು ಚರ್ಚೆ ಮಾಡಲಿ ಉತ್ತರ ಕೊಡುತ್ತೇವೆ. ಸರ್ಕಾರ ಓಡಿಹೋಗುವುದಿಲ್ಲ. ಕುಮಾರಸ್ವಾಮಿಯವರು ಯಾವಾಗ ಸತ್ಯ ಹೇಳಿದ್ದಾರೆ. ಯಾವಾಗಲೂ ಹಿಟ್ ಅಂಡ್ ರನ್ ಕೇಸ್ ಅವರದ್ದು. ಸುಳ್ಳನ್ನೆಲ್ಲಾ ತನಿಖೆ ಮಾಡಿಸಲು ಆಗುವುದಿಲ್ಲ. ಏನಾದರೂ ಆಧಾರ ಇದ್ದರೆ, ದಾಖಲಾತಿ ಇದ್ದರೆ ತನಿಖೆ ಮಾಡಬಹುದು ಎಂದಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿಯವರು ಅವರ ಭ್ರಷ್ಟಾಚಾರಗಳ ಬಗ್ಗೆ ತನಿಖೆ ಮಾಡುವಂತೆ ಸವಾಲು ಹಾಕಿದ್ದಾರೆ. ತನಿಖೆ ಮಾಡಬೇಕಾಗಿ ಬಂದರೆ ಮಾಡುತ್ತೇವೆ, ಅದರಲ್ಲಿ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿಯಾಗಲಿ, ನಮ್ಮ ಪಕ್ಷದವರಾಗಲಿ ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು ಎಂದು ಹೇಳಿದ್ದಾರೆ.
ಜೆಡಿಎಸ್ ಅಥವಾ ಬಿಜೆಪಿಯ ನಾಯಕರು ಕಾಂಗ್ರೆಸ್ ನ ಸಿದ್ಧಾಂತ ಹಾಗೂ ನಾಯಕತ್ವವನ್ನು ಒಪ್ಪಿ ಬಂದಲ್ಲಿ ಅವರನ್ನು ಸ್ವಾಗತಿಸಲಾಗುವುದು. ರಾಜ್ಯದ ಒಟ್ಟು 224 ಸ್ಥಾನದಲ್ಲಿ 136 ನ್ನು ಕಾಂಗ್ರೆಸ್ ಪಡೆದಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್‌ನ ಶಕ್ತಿಯನ್ನು ವಿಸ್ತರಿಸಬೇಕಿದೆ. ಕೋಮುವಾದಿ ಪಕ್ಷಗಳು ಮತ್ತೆ ಅಧಿಕಾರಕ್ಕೆ ಬರಬಾರದು. ಜೆಡಿಎಸ್ ನ ಕುಮಾರಸ್ವಾಮಿಯವರು ಕೇವಲ ದ್ವೇಷ ಹಾಗೂ ಅಸೂಯೆಗಳ ರಾಜಕಾರಣ ಮಾಡುತ್ತಾರೆ. ನನ್ನ ಮಗ ಯತೀಂದ್ರ ಆಶ್ರಯ ಸಮಿತಿ ಅಧ್ಯಕ್ಷನಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೆ, ಅವರ ಮೇಲೆ ವೃಥಾ ಆರೋಪ ಮಾಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ದ್ವೇಷದ ರಾಜಕಾರಣವನ್ನು ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ತಿಳಿದಿಲ್ಲ. ಸುಳ್ಳೇ ಅವರ ಮನೆದೇವರು ಎಂದು ಗುಡುಗಿದ್ದಾರೆ.
ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…
ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…
ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…
ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…