ತೆರಿಗೆ ಹಂಚಿಕೆಯೂ ಸೇರಿದಂತೆ ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ನಮ್ಮ ಸರ್ಕಾರ ನಡೆಸಿದ್ದ ‘’ದೆಹಲಿ ಚಲೋ’’ ಹೋರಾಟ ದೇಶದ ಏಕತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಅಚ್ಚರಿ ಉಂಟು ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದೇ ಮೋದಿಯವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ವಿರುದ್ಧ ಪುಂಖಾನುಪುಂಖವಾಗಿ ನೀಡಿರುವ ಹೇಳಿಕೆಗಳನ್ನು ಅವರ ಗಮನಕ್ಕೆ ತರಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಹೇಳಿಕೆಗಳು ದೇಶದ ಏಕತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿರಲಿಲ್ಲವೇ? ದಯವಿಟ್ಟು ಉತ್ತರ ಕೊಡಿ ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಹಣಕಾಸು ಆಯೋಗದ ವಿರುದ್ದ ಮೊದಲು ಮಾತನಾಡಿದ್ದೇ ನರೇಂದ್ರ ಮೋದಿ ಅವರು. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2012ರ ಡಿಸೆಂಬರ್ ಆರರಂದು ಹೇಳಿಕೆಯೊಂದನ್ನು ನೀಡಿ ‘’ಗುಜರಾತ್ ರಾಜ್ಯ ಕೇಂದ್ರ ಸರ್ಕಾರಕ್ಕೆ ರೂ.60,000 ಕೋಟಿ ನೀಡುತ್ತಿದೆ, ಇದರಲ್ಲಿ ನಮಗೆ ವಾಪಸ್ ಬಂದದ್ದು ಎಷ್ಟು? ಗುಜರಾತ್ ಭಿಕ್ಷುಕ ರಾಜ್ಯವೇ? ಎಂದು ಪ್ರಶ್ನಿಸಿದ್ದರು ಎಂದು ತಿಳಿದ್ದಾರೆ.
2008ರಲ್ಲಿ ವಡೋದರಾದ ಸಮಾರಂಭದಲ್ಲಿ ಮಾತನಾಡುತ್ತಾ ‘ಗುಜರಾತ್ ರಾಜ್ಯ ಪ್ರತಿವರ್ಷ ರೂ.40,000 ಕೋಟಿ ರೂ.ಗಳನ್ನು ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಪಾವತಿಸುತ್ತಿದೆ. ಅದರಲ್ಲಿ ಕೇವಲ ಶೇಕಡಾ 2.5ರಷ್ಟು ಮಾತ್ರ ರಾಜ್ಯಕ್ಕೆ ವಾಪಸು ನೀಡಲಾಗುತ್ತದೆ. ಇಷ್ಟು ಜುಜುಬಿ ಮೊತ್ತವನ್ನು ವಾಪಸು ನೀಡುವ ಬದಲಿಗೆ ಒಂದು ವರ್ಷದ ಅವಧಿಗೆ ನಮ್ಮ ತೆರಿಗೆಯನ್ನು ನಾವೇ ಬಳಸಿಕೊಳ್ಳಲು ಅವಕಾಶ ನೀಡಬಾರದೇಕೆ? ಎಂದು ಕೇಂದ್ರ ಸರ್ಕಾರದ ಅಸ್ತಿತ್ವನ್ನೇ ಪ್ರಶ್ನಿಸಿದ್ದರು ಎಂದು ಹೇಳಿದ್ದಾರೆ.
ಹದಿನಾಲ್ಕನೇ ಹಣಕಾಸು ಆಯೋಗದ ಜೊತೆಗಿನ ಮಾತುಕತೆಯಲ್ಲಿ ಇದೇ ನರೇಂದ್ರ ಮೋದಿಯವರು ‘ಕೇಂದ್ರ ಸರ್ಕಾರ ರಾಜ್ಯದಿಂದ ಸಂಗ್ರಹಿಸುವ ತೆರಿಗೆಯಲ್ಲಿ ಕನಿಷ್ಠ ಶೇಕಡಾ 32 ರಿಂದ 50ರ ವರೆಗೆ ರಾಜ್ಯಕ್ಕೆ ಪಾಲು ನೀಡಬೇಕು’ ಎಂದು ವಾದಿಸಿದ್ದರು ಎಂದು ಹೇಳಿದ್ದಾರೆ.
‘’ತೆರಿಗೆ ಹಂಚಿಕೆಗೆ ಅನುಸರಿಸಲಾಗುತ್ತಿರುವ ಮಾನದಂಡವನ್ನು ಹಣಕಾಸು ಆಯೋಗ ಬದಲಾವಣೆ ಮಾಡಬೇಕು, ಉತ್ತಮ ರೀತಿಯಲ್ಲಿ ಹಣಕಾಸು ನಿರ್ವಹಣೆ ಮತ್ತು ಅಭಿವೃದ್ದಿ ಕಾರ್ಯಗಳನ್ನು ನಡೆಸುವ ರಾಜ್ಯಗಳಿಗೆ ಹೆಚ್ಚಿನ ಪ್ರೊತ್ಸಾಹ ನೀಡಬೇಕು. ಹಣಕಾಸು ನಿರ್ವಹಣೆಯಲ್ಲಿ ಸೋತಿರುವ ರಾಜ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಿ ಉತ್ತಮ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡುತ್ತಿರುವ ರಾಜ್ಯಗಳನ್ನು ನಿರ್ಲಕ್ಷಿಸುವ ಈಗಿನ ತೆರಿಗೆ ಹಂಚಿಕೆ ವಿಧಾನವನ್ನು ಬದಲಿಸಬೇಕಾಗಿದೆ. ಮೂಲಸೌಕರ್ಯಗಳ ಸುಧಾರಣೆ ಮತ್ತು ದೇಶದ ಅಭಿವೃದ್ದಿಗೆ ಗಣನೀಯ ಕೊಡುಗೆಗಳನ್ನು ನೀಡುವ ರಾಜ್ಯಗಳಿಗೆ ಹೆಚ್ಚಿನ ಉತ್ತೇಜನ ನೀಡಬೇಕು’’ ಎಂದು ಹಣಕಾಸು ಆಯೋಗದ ಮುಂದೆ ವಾದ ಮಾಡಿದ್ದರು. ಇದು ಕೇಂದ್ರ ಸರ್ಕಾರದ ವಿರುದ್ಧದ ನಿಲುವಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಯುಪಿಎ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆಯ ಕಾನೂನನ್ನು ಜಾರಿಗೆ ತಂದಾಗ ಅದನ್ನು ವಿರೋಧಿಸಿದ್ದ ನರೇಂದ್ರ ಮೋದಿಯವರು ‘ಇನ್ನು ಮುಂದೆ ನಿತ್ಯ ಬಳಕೆಯ ಉಪ್ಪು, ಸಾಂಬಾರ ಪದಾರ್ಥಗಳನ್ನೂ ವಿದೇಶಿಯರೇ ಮಾರುತ್ತಾರೆ’ ಎಂದು ವ್ಯಂಗ್ಯವಾಡಿದ್ದರು. ಎಫ್ ಡಿ ಐ ನಿಂದಾಗಿ ದೇಶದ ಸಣ್ಣ ಸಣ್ಣ ಅಂಗಡಿ ಮಾಲೀಕರು ಮತ್ತು ಉತ್ಪಾದನಾ ಕ್ಷೇತ್ರದಲ್ಲಿರುವವರು ನಿರುದ್ಯೋಗಿಗಳಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ್ದಾರೆ.
ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಆಧಾರ್ ಗುರುತಿನ ಚೀಟಿಯ ಪ್ರಬಲ ವಿರೋಧಿಯಾಗಿದ್ದ ನರೇಂದ್ರ ಮೋದಿಯವರು ‘ಆಧಾರ್ ಕಾರ್ಡ್ ಗೆ ಭವಿಷ್ಯದ ಮುನ್ನೋಟವೇ ಇಲ್ಲ, ಇದು ಕೇವಲ ರಾಜಕೀಯ ಗಿಮಿಕ್ ಎಂದು ಟೀಕಿಸಿದ್ದರು. ಅದೇ ಮೋದಿಯವರು ಪ್ರಧಾನಿಯಾದ ನಂತರ ತಮ್ಮ ನಿಲುವು ಬದಲಿಸಿ ಆಧಾರ್ ಗುರುತಿನ ಚೀಟಿಯ ಪ್ರಬಲ ಪ್ರತಿಪಾದಕರಾಗಿದ್ದಾರೆ ಎಂದಿದ್ದಾರೆ.
2022ರ ಡಿಸೆಂಬರ್ ತಿಂಗಳಲ್ಲಿ ವಿಧಾನಸಭೆಯಲ್ಲಿಯೇ ನಾನು ಮಾತನಾಡುತ್ತಾ “15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದಾಗ ಆಗ ಮುಖ್ಯಮಂತ್ರಿಗಳಾಗಿದ್ದ ಬೊಮ್ಮಾಯಿಯವರು ಅನ್ಯಾಯವಾಗಿರುವುದು ನಿಜ ಎಂದು ಒಪ್ಪಿಕೊಂಡಿರುವುದು ಸದನದ ದಾಖಲೆಯಲ್ಲಿದೆ, ಪತ್ರಿಕೆಗಳಲ್ಲಿಯೂ ಪ್ರಕಟವಾಗಿದೆ. ಇದೇ ಬೊಮ್ಮಾಯಿಯವರು ಹಣಕಾಸು ಆಯೋಗದಿಂದ ಅನ್ಯಾಯವೇ ಆಗಿಲ್ಲ ಎಂದು ಕೂಗಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರೈತರಿಗೆ ನೋವಾಗುವ ಯಾವುದೇ ತೀರ್ಮಾನಗಳನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ. ರೈತರ ಸಹಕಾರವಿದ್ದರೆ, ಅವರಿಗೆ ಅಗತ್ಯವಿರುವ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ ಎಂದು…
ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…
ದೇವನಹಳ್ಳಿ: ತುರ್ತು ರಕ್ತದ ಅವಶ್ಯಕತೆ ಹಿನ್ನೆಲೆಯಲ್ಲಿ ರಕ್ತದಾನ ಮಾಡಲು ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು…
ನಾವು ಅಕ್ರಮ ವಲಸಿಗರಲ್ಲ, ವಂಚಕರಲ್ಲ, ಈ ಮಣ್ಣಿನ ಮೂಲ ನಿವಾಸಿಗಳು. ದಯವಿಟ್ಟು ನಮ್ಮ ಅಸ್ತಿತ್ವವನ್ನು, ಸ್ವಾಭಿಮಾನವನ್ನು ಪ್ರಶ್ನಿಸಬೇಡಿ. ನಾವು ಭಾರತೀಯರು......…
ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…
ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…