ರಾಜ್ಯದ ಬರ ಪರಿಸ್ಥಿತಿ, ಮಳೆಗಾಲ, ಕುಡಿಯುವ ನೀರು ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಬರ ಪರಿಸ್ಥಿತಿ, ಮಳೆಗಾಲ, ಕುಡಿಯುವ ನೀರು ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೂಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದರು.

ಮುಖ್ಯಮಂತ್ರಿಗಳ ಪ್ರಾರಂಭಿಕ ನುಡಿಗಳು ಇಂತಿವೆ:

ನೈಋತ್ಯ ಮುಂಗಾರು ನಮಗೆ ತೀವ್ರವಾಗಿ ಕೈಕೊಟ್ಟಿದೆ. ಪ್ರಸ್ತುತ ಮುಂಗಾರು ಬಿತ್ತನೆ ಗುರಿಯು ಕೇವಲ ಶೇಕಡಾ 34 ರಷ್ಟು ಮಾತ್ರ ತಲುಪಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ವ್ಯಾಪಕ ಬೆಳೆ ಹಾನಿಯಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹವು ಶೇಕಡಾ 34 ರಷ್ಟಕ್ಕೆ ಕುಸಿದಿದ್ದು, ಅಂತರ್ಜಲ ಮಟ್ಟವೂ ಸಹ ತೀವ್ರವಾಗಿ ಆಳಕ್ಕೆ ಕುಸಿಯುತ್ತಿದೆ.

ರಾಜ್ಯದ ಯಾವುದೇ ಒಬ್ಬ ನಾಗರಿಕನಿಗೆ ಅಥವಾ ಮೂಕ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮ ಪರಮೋಚ್ಚ ಕರ್ತವ್ಯವಾಗಿದೆ. ಇಡೀ ಆಡಳಿತ ಯಂತ್ರವು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿದೆ.

ನಿಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಯಾವುದೇ ಲೋಪದೋಷಗಳಾದರೆ ಅದಕ್ಕೆ ನೇರವಾಗಿ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು.
ತುರ್ತು ಬರ ಪರಿಹಾರ ಕಾರ್ಯಗಳಿಗೆ ರಾಜ್ಯ ಸರ್ಕಾರದಲ್ಲಿ ಹಣದ ಕೊರತೆಯೇ ಇಲ್ಲ. ನಿಮ್ಮ ಜಿಲ್ಲೆಗಳಿಗೆ ಅಗತ್ಯವಿರುವ ಹಣವನ್ನೂ ಕೊಟ್ಟಿದ್ದೇವೆ ಮತ್ತು ನಿರ್ಣಯ ಕೈಗೊಳ್ಳುವ ಅಧಿಕಾರವನ್ನೂ ನೀಡಿದ್ದೇವೆ. ಹಾಗಾಗಿ ಯಾವುದೇ ನೆಪವಿಲ್ಲದೇ, ತಳಮಟ್ಟದಲ್ಲಿ ಕೆಲಸದ ಪ್ರತ್ಯಕ್ಷ ರಿಸಲ್ಟ್‌ಗಳು ಮಾತ್ರ ಬೇಕು. ಎಲ್ಲಾ ಪರಿಹಾರ ಕ್ರಮಗಳಲ್ಲಿ ಶೇ. 100 ರಷ್ಟು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು.

ಬರ ಪರಿಸ್ಥಿತಿಯ ವೈಜ್ಞಾನಿಕ ಅಧ್ಯಯನಕ್ಕಾಗಿ ಕೇಂದ್ರದ ತಂಡವನ್ನು ತಕ್ಷಣವೇ ಕಳುಹಿಸುವಂತೆ ಮತ್ತು ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಈಗಾಗಲೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ.

ಸಣ್ಣ ಮತ್ತು ಅತಿ ಸಣ್ಣ ರೈತರ ಸಂಪೂರ್ಣ ವಿವರಗಳನ್ನು ‘ಫ್ರೂಟ್ಸ್’ (FRUITS) ತಂತ್ರಾಂಶದ ಮೂಲಕ ಸಿದ್ಧವಾಗಿಟ್ಟುಕೊಂಡು, ಪ್ರತಿಯೊಂದು ಪರಿಹಾರವೂ ತಳಮಟ್ಟದ ಅರ್ಹ ಫಲಾನುಭವಿಗೆ ತಲುಪುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಥವಾ ತಾಂತ್ರಿಕ ಲೋಪದಿಂದ ಯಾವುದೇ ಒಬ್ಬ ರೈತನಿಗೆ ಬೆಳೆವಿಮೆ ಸಿಗದೆ ಇರುವುದು ಅಥವಾ ಪರಿಹಾರ ವಂಚಿತವಾಗುವ ಸ್ಥಿತಿ ಉದ್ಭವಿಸಲೇಬಾರದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆವಿಮೆ ಮಾಡಿಸುವಂತೆ ಪ್ರೇರೇಪಿಸಿ ಹಾಗೂ ಬೆಳೆಹಾನಿ ಸಮೀಕ್ಷೆಯನ್ನು ನಿಯಮಾನುಸಾರ ತಕ್ಷಣವೇ ಪೂರ್ಣಗೊಳಿಸಿ.

ನಮ್ಮ ಮೊದಲ ಮತ್ತು ಪ್ರಧಾನ ಆದ್ಯತೆ ಕುಡಿಯುವ ನೀರು. ರಾಜ್ಯದ ಯಾವುದೇ ಹಳ್ಳಿ ಅಥವಾ ನಗರದ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಳ್ಳಬಾರದು. ಸ್ಥಳೀಯ ನೀರಿನ ಮೂಲಗಳಿಲ್ಲದಿದ್ದರೆ, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಅಥವಾ ಟ್ಯಾಂಕರ್‌ಗಳ ಮೂಲಕ ತಕ್ಷಣವೇ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಿ. ಆದರೆ, ನೀರು ಸರಬರಾಜು ಮಾಡುವ ಮುನ್ನ ಕಡ್ಡಾಯವಾಗಿ ಅದರ ಗುಣಮಟ್ಟ ತಪಾಸಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರು ಪೂರೈಕೆಯಾಗಿ ಸಾಂಕ್ರಾಮಿಕ ರೋಗಗಳು ಹರಡದಂತೆ ತೀವ್ರ ಮುನ್ನೆಚ್ಚರಿಕೆ ವಹಿಸಿ. ಅಸ್ತಿತ್ವದಲ್ಲಿರುವ ಜಲಮೂಲಗಳು ಕಲುಷಿತವಾಗದಂತೆ ರಕ್ಷಿಸಿ ಮತ್ತು ಮಳೆನೀರು ಎಲ್ಲೂ ಪೋಲಾಗದಂತೆ ತಡೆಯಲು ಸಾರ್ವಜನಿಕರಲ್ಲಿ ಮಳೆನೀರು ಕೊಯ್ಲಿನ ಕುರಿತು ಜಾಗೃತಿ ಮೂಡಿಸಿ.

ಮಾನವರಷ್ಟೇ ಅಲ್ಲದೆ, ಜಾನುವಾರುಗಳ ಸಂರಕ್ಷಣೆಯೂ ಅಷ್ಟೇ ಮುಖ್ಯ. ಅಗತ್ಯವಿರುವ ಕಡೆಗಳಲ್ಲೆಲ್ಲ ತಕ್ಷಣವೇ ಮೇವಿನ ಬ್ಯಾಂಕ್‌ಗಳು ಹಾಗೂ ಗೋಶಾಲೆಗಳನ್ನು ತೆರೆಯಿರಿ. ಹಸಿವು ಮತ್ತು ನೀರಡಿಕೆಯಿಂದ ರಾಜ್ಯದಲ್ಲಿ ಒಂದೇ ಒಂದು ಜಾನುವಾರು ಕೂಡ ಸಾಯಬಾರದು.
ಸರ್ಕಾರದ ಎಲ್ಲಾ ಪರಿಹಾರ ಕ್ರಮಗಳು ಜನರನ್ನು ನೇರವಾಗಿ ತಲುಪಬೇಕು. ಬರದ ತೀವ್ರತೆಯ ಬಿಸಿ ಸಾಮಾನ್ಯ ಜನರಿಗೆ ತಟ್ಟದ ಹಾಗೆ ಅವರನ್ನು ಆಡಳಿತ ಯಂತ್ರವು ಕೈಹಿಡಿಯಬೇಕು. ತಳಮಟ್ಟದಲ್ಲಿ ಆಡಳಿತ ಕಾರ್ಯವೈಖರಿ ಚುರುಕಾಗಬೇಕು ಎಂದು ಹೇಳಿದರು.

ಈ ವಿಡಿಯೋ ಸಂವಾದ ಸಭೆಯಲ್ಲಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ಸಚಿವರಾದ ರಾಮಲಿಂಗರೆಡ್ಡಿ, ಕೆ.ಜೆ. ಜಾರ್ಜ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Ramesh Babu

Journalist

Recent Posts

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆ

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್‌ (MIL)…

2 hours ago

ಸ್ಟಿಂಗ್ ಆಪರೇಷನ್ ವಿವಾದ: ಸಿದ್ದರಾಮಯ್ಯನವರದ್ದು ಕುಮಾರಸ್ವಾಮಿ ತರಹದ ಚರಿತ್ರೆಯಲ್ಲ: ಎಚ್.ಡಿ.ಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ

ಸ್ಟಿಂಗ್ ಆಪರೇಷನ್ ಮಾಡಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ತಲೆ ಕೆಟ್ಟಿದೆಯೇ? ಪದೇಪದೇ ಈ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಎಳೆದು ತರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ…

14 hours ago

ರಾಜಾನುಕುಂಟೆ ಬಳಿ ರೈಲು ಬೋಗಿಗಳಿಗೆ ಬೆಂಕಿ: ಎರಡು ಬೋಗಿಗಳು ಸುಟ್ಟು ಭಸ್ಮ

ದೊಡ್ಡಬಳ್ಳಾಪುರ: ಯಲಹಂಕ ಸಮೀಪದ ರಾಜಾನುಕುಂಟೆ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ನಿಲ್ಲಿಸಿದ್ದ ಎರಡು ರೈಲು ಬೋಗಿಗಳಿಗೆ ಬೆಂಕಿ…

20 hours ago

ಮಧುರೆ ಕೆರೆಯಲ್ಲಿ ಮಣ್ಣು ದಂಧೆ ಆರೋಪ: ಸುಮಾರು 35 ಟ್ರ್ಯಾಕ್ಟರ್, 5 ಜೆಸಿಬಿಗಳ ಅಬ್ಬರ; ಮಣ್ಣು ತೆಗೆಯುವುದಕ್ಕೆ ಗ್ರಾಮಸ್ಥರ ಬ್ರೇಕ್!

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುವ ದಂಧೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸುಮಾರು 35 ಟ್ರ್ಯಾಕ್ಟರ್‌ಗಳು…

21 hours ago

ನಮ್ಮ ತೆರಿಗೆ ನಮ್ಮ ಹಕ್ಕು…

ನಮ್ಮ ತೆರಿಗೆ ನಮ್ಮ ಹಕ್ಕು, ಈ ವಿಷಯದಲ್ಲಿ ರಾಜಕೀಯ ಮೀರಿ ವೈಜ್ಞಾನಿಕ ಸಮತೋಲನ ಸಾಧಿಸಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ..... ಕೇಂದ್ರದ…

1 day ago

ದೇವನಹಳ್ಳಿ ಬಳಿ ಭೀಕರ ಅಪಘಾತ: ಓರ್ವ ಸಾವು: ಹಲವರಿಗೆ ಗಾಯ

ದೇವನಹಳ್ಳಿ: ನಿಧಾನವಾಗಿ ಸಾಗುತ್ತಿದ್ದ ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ರೇಂಜ್ ರೋವರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಳಕಾಲ್ಮೂರು ಕ್ಷೇತ್ರದ…

1 day ago