ಕೋಲಾರ: ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರಕಾರ ಕೂಡಲೇ ಘೋಷಣೆ ಮಾಡಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ಶುಕ್ರವಾರ ನಗರದ ತಹಶಿಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್ ಮಾತನಾಡಿ, ಶತಮಾನಗಳಲ್ಲೇ ಕಂಡರಿಯದ ಬರಗಾಲಕ್ಕೆ ರಾಜ್ಯ ಸಿಲುಕಿ ಒದ್ದಾಡುತ್ತಿದೆ. ರಾಜ್ಯ ಸರ್ಕಾರವೇ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳು ತೀವ್ರ ಬರಪೀಡಿತ ಎಂದು ಘೋಷಿಸಿದೆ. ಕೃಷಿ ಇಲಾಖೆ ವರದಿ ಪ್ರಕಾರ ಸುಮಾರು 50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಕಳೆದ ಜೂನ್ ನ ಮುಂಗಾರು ವೈಫಲ್ಯದಿಂದ ಉಂಟಾದ ಬರಗಾಲ, ನಂತರದ ಯಾವ ಮಳೆಯೂ ಕಾಣದೇ ರೈತಾಪಿ ಸಮುದಾಯದ ಸಂಕಟ ದಿನೇ ದಿನೇ ಹೆಚ್ಚು ಉಲ್ಬಣಗೊಳ್ಳುವಂತೆ ಮಾಡುತ್ತಿದೆ ಎಂದು ಹೇಳಿದರು.
ಬರಪೀಡಿತ ಜನರ ಅಗತ್ಯಗಳನ್ನು ಪೂರೈಸಬೇಕಾಗಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತೀವ ನಿರ್ಲಕ್ಷ್ಯವನ್ನು ವಹಿಸಿವೆ. ಬರಗಾಲದ ಪರಿಹಾರಕ್ಕಾಗಿ ಕೇಂದ್ರದಿಂದ 18177 ಕೋಟಿ ರೂಗಳನ್ನು ಒದಗಿಸಬೇಕೆಂದು ರಾಜ್ಯ ಸರ್ಕಾರ ಕೋರಿಕೆ ಸಲ್ಲಿಸಿ ಹಲವಾರು ನಿಯೋಗಗಳ ಮೂಲಕ ಒತ್ತಾಯಿಸಿದ್ದರೂ, ಒಂದು ನಯಾ ಪೈಸೆ ಕೊಟ್ಟಿಲ್ಲ ಬೇಸಿಗೆಯಲ್ಲಿ ನೀರು, ಮೇವು, ಆಹಾರ, ಉದ್ಯೋಗಕ್ಕೆ ಹಾಹಾಕಾರ ಇರುವಾಗ, ಇಡೀ ವರ್ಷ ಶತಮಾನದಲ್ಲೇ ಕಂಡರಿಯದ ಭೀಕರ ಬರಗಾಲ ಉಂಟು ಮಾಡಬಹುದಾದ ಪರಿಣಾಮಗಳನ್ನು ಊಹಿಸಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ವಿ.ನಾರಾಯಣರೆಡ್ಡಿ ಮಾತನಾಡಿ, ಬರಗಾಲ ಇದ್ದರೂ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ವಸೂಲಾತಿಗಾಗಿ ರೈತರಿಗೆ ನೋಟಿಸ್ ಗಳನ್ನು ನೀಡುತ್ತಿರುವುದು ರಾಜ್ಯದ ಎಲ್ಲಾ ಕಡೆ ವರದಿಯಾಗುತ್ತಿದೆ. ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಷ್ಟ್ರೀಕೃತ ಬ್ಯಾಂಕುಗಳು, ಮೈಕ್ರೋ ಫೈನಾನ್ಸ್ ಕಂಪನಿಗಳು, ಖಾಸಗಿ ಲೇವಾದೇವಿ ಸಾಲಗಳ ವಸೂಲಾತಿ ಗಾಯದ ಮೇಲೆ ಬರೆರಾಷ್ಟ್ರೀಕೃತ ಬ್ಯಾಂಕುಗಳು ಎಳೆದಂತಾಗಿದೆ. ದುಬಾರಿ ಮೀಟರ್ ಬಡ್ಡಿ ಸಾಲದ ಜಾಲ ಬಹಳ ವ್ಯಾಪಕವಾಗಿ ಬೆಳೆಯುತ್ತಿದೆ. ಬರಗಾಲದಿಂದ ಉಂಟಾದ ಸಾಲದ ಬೇಡಿಕೆ, ಬಡ್ಡಿದರದ ಹೆಚ್ಚಳಕ್ಕೆ ಕಾರಣವಾಗಿದ್ದು ರೈತರ ಹಾಗೂ ಗ್ರಾಮೀಣ ಜನತೆಯ ಪರಿಸ್ಥಿತಿಯನ್ನು ಹದಗೆಡಿಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರವನ್ನು ಒದಗಿಸಬೇಕು. ಒಂದು ಹೆಕ್ಟರ್ ಗೆ ಬೆಳೆ ನಷ್ಟ ಪರಿಹಾರವಾಗಿ 50 ಸಾವಿರ ರೂ. ನೀಡಬೇಕು ಇಡೀ ರಾಜ್ಯವನ್ನು ಸಂಪೂರ್ಣ ಬರಗಾಲ ಪಿಡೀತ ಪ್ರದೇಶ ಎಂದು ಘೋಷಿಸಬೇಕು. ಬರಗಾಲ ಘೋಷಣೆಗೆ ಸಂಬಂಧಿಸಿ, ಕೇಂದ್ರ ಸರ್ಕಾರವು ತನ್ನ ವಸಾಹತುಶಾಹಿ ಕಾಲಘಟ್ಟದ ಮಾನದಂಡಗಳಿಗೆ ಬದಲಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾನದಂಡಗಳನ್ನು ರೂಪಿಸಬೇಕು ರಾಜ್ಯದಾದ್ಯಂತ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು. ಟ್ಯಾಂಕರ್ ನೀರಿನ ಮಾರಾಟದ ಮೇಲೆ ನಿಯಂತ್ರಣ ಸಾಧಿಸಬೇಕು ಎಂದರು.
ಸರಕಾರ ಕೂಡಲೇ ಬಿಪಿಎಲ್, ಎಪಿಎಲ್ ತಾರತಮ್ಯ ಇಲ್ಲದೇ ಬರಗಾಲ ಪರಿಹಾರ ಪಡಿತರ ವಿತರಣೆಯಲ್ಲಿ ಹೆಚ್ಚುವರಿ ಆಹಾರ ಧಾನ್ಯ ಒದಗಿಸಬೇಕು. ಆಹಾರ ಧಾನ್ಯಗಳ ಬೆಲೆ ಏರಿಕೆ ಮೇಲೆ ಕಡಿವಾಣ ವಿಧಿಸಬೇಕು. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ವಹಿಸಬೇಕು. ಮೇವು ಕುಂದು ಕೊರತೆ ಪರಿಹರಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಕೂಡಲೇ ಕೇಂದ್ರ ಸರ್ಕಾರವು, ಎಲ್ಲಾ ರೈತರ, ಕೃಷಿ ಕೂಲಿಕಾರರ, ಗ್ರಾಮೀಣ ಮಹಿಳೆಯರ ಸಾಲ ಮನ್ನಾ ಹಾಗೂ ಬಡ್ಡಿ ಮನ್ನಾ ಮಾಡಬೇಕು. ಎಲ್ಲಾ ರೀತಿಯ ಸಾಲ ವಸೂಲಾತಿಯನ್ನು ನಿಷೇಧಿಸಿ ಆದೇಶ ಹೊರಡಿಸಬೇಕು. ರೈತರ ಕೃಷಿ ಕೂಲಿಕಾರರ, ಗೇಣಿ ರೈತರ ಆತ್ಮಹತ್ಯೆ ತಡೆಗಟ್ಟಲು ಕೂಡಲೇ ಕ್ರಮ ವಹಿಸಬೇಕು. ಗ್ರಾಪಂ ಮಟ್ಟದಲ್ಲಿ ಬರಗಾಲ ಪರಿಹಾರ ಕ್ರಮಗಳನ್ನು ಯೋಜಿಸಲು ವಿಶೇಷ ಗ್ರಾಮ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು
ಈ ಧರಣಿಯ ನೇತೃತ್ವವನ್ನು ಸಂಘಟನೆಯ ತಾಲೂಕು ಅಧ್ಯಕ್ಷ ಆಲಹಳ್ಳಿ ವೆಂಕಟೇಶ್, ಉಪಾಧ್ಯಕ್ಷರಾದ ಎನ್.ಎನ್ ಶ್ರೀರಾಮ್, ಗಂಗಮ್ಮ, ಅಪ್ಪಯ್ಯಣ್ಣ, ಮುಖಂಡರಾದ ಯಲ್ಲಪ್ಪ, ಮುನಿರತ್ನಮ್ಮ, ಚಿನ್ನಮ್ಮ, ಶ್ರೀನಿವಾಸ್, ವೆಂಕಟರಾವ್, ರಾಜೇಂದ್ರ ಚಪ್ರಾಸ್, ನಾರಾಯಣಸ್ವಾಮಿ ಮುಂತಾದವರು ಇದ್ದರು.
"ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " - ಡಾಕ್ಟರ್ ಬಾಬಾ ಸಾಹೇಬ್…
Cheap Emotional Support Animal Letter: Your Guide Understanding Cheap Emotional Support Animal Letters In recent…
Understanding ESA Letters for Mental Health Support The Role of ESA Letters in Mental Health…
ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ. ಆದ್ದರಿಂದ ದೇಶಕ್ಕೆ ಕಾಂಗ್ರೆಸ್ ಬೇಕು. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ…
ದೇವಿಯ ಕರಗ ಉತ್ಸವದಲ್ಲಿ ಅಶ್ಲೀಲ ನರ್ತನ ಮಾಡಿದ್ದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ…
ಬಾಬು ಜಗಜೀವನ್ ರಾಮ್ ಜಯಂತಿ ಪ್ರಯುಕ್ತ ಏ.5ರ ಭಾನುವಾರ ತೂಬಗೆರೆ ಸರ್ಕಾರಿ ಶಾಲೆಯಲ್ಲಿ ಬಾಬು ಜಗಜೀವನ ರಾಮ್ ರಾಷ್ಟ್ರೀಯ ಶಿಕ್ಷಣ…