ಗ್ರಾಮೀಣ ಭಾಗದ ಜನರಿಗೆ ಸಾರ್ವಜನಿಕ ಸಾರಿಗೆಯೇ ಪ್ರಮುಖ ಸಂಚಾರದ ಆಸರೆ. ಉದ್ಯೋಗ, ಕೃಷಿ ಚಟುವಟಿಕೆ, ವ್ಯಾಪಾರ, ಶಿಕ್ಷಣ ಹಾಗೂ ಆರೋಗ್ಯ ಸೇವೆ ಸೇರಿದಂತೆ ವಿವಿಧ ಅಗತ್ಯಗಳಿಗಾಗಿ ಪ್ರತಿನಿತ್ಯ ಹಳ್ಳಿಗಳಿಂದ ಪಟ್ಟಣಗಳಿಗೆ ತೆರಳುವ ಜನರು ಬಸ್ಗಳನ್ನೇ ಅವಲಂಬಿಸಿದ್ದಾರೆ. ಆದರೆ, ಇಂತಹ ಪ್ರಯಾಣಿಕರು ಬಸ್ಗಾಗಿ ಕಾಯಲು ನಿರ್ಮಿಸಿರುವ ತಂಗುದಾಣಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ. ಎಲ್ಲೆಡೆ ಸ್ವಚ್ಛತೆ, ನಿರ್ವಹಣೆ ಮತ್ತು ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಬಸ್ ತಂಗುದಾಣಗಳಿದ್ದರೂ ಇಲ್ಲದಂತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಬಸ್ ತಂಗುದಾಣಗಳು ಅವ್ಯವಸ್ಥೆಯ ಆಗರವಾಗಿವೆ. ಕೆಲವೆಡೆ ಕಸ, ಧೂಳು, ಮದ್ಯದ ಪ್ಯಾಕೆಟ್ಗಳು ತುಂಬಿಕೊಂಡಿದ್ದರೆ, ಇನ್ನೂ ಕೆಲವು ಕಡೆ ಗಿಡಗಂಟಿಗಳು ಬೆಳೆದು ತಂಗುದಾಣಗಳೇ ಕಣ್ಮರೆಯಾಗುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದು, ಮೇಲ್ಛಾವಣಿ ಹಾಳಾಗಿ ಮಳೆ ಬಂದರೆ ನೀರು ಸೋರಿಕೆಯಾಗುತ್ತದೆ. ಕುಳಿತುಕೊಳ್ಳಲು ಆಸನಗಳಿಲ್ಲದೆ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ನಿಂತುಕೊಂಡೇ ಬಸ್ಗಾಗಿ ಕಾಯಬೇಕಾಗಿದೆ.
ಬೇಸಿಗೆಯಲ್ಲಿ ಸುಡುವ ಬಿಸಿಲು, ಮಳೆಗಾಲದಲ್ಲಿ ಮಳೆಯ ಹೊಡೆತದ ನಡುವೆಯೇ ಬಸ್ಗಾಗಿ ಕಾಯುವುದು ಗ್ರಾಮೀಣ ಪ್ರಯಾಣಿಕರ ನಿತ್ಯದ ಗೋಳಾಗಿದೆ. ತಂಗುದಾಣಗಳ ನಿರ್ವಹಣೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಸಮರ್ಪಕ ಗಮನ ಹರಿಸದಿರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ ಎಂಬುದು ಸಾರ್ವಜನಿಕರ ಆರೋಪ.
1,000 ತಂಗುದಾಣಗಳ ನಿರ್ಮಾಣಕ್ಕೆ ಯೋಜನೆ : ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ಬಳಸುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ 1,000 ಗ್ರಾಮೀಣ ಬಸ್ ತಂಗುದಾಣಗಳನ್ನು ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವಿಬಿಜಿ ರಾಮ್ ಜಿ ಅಡಿಯಲ್ಲಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸುವ ಹಾಗೂ ನಿರ್ಗಮಿಸುವ 1,000 ಗ್ರಾಮಗಳನ್ನು ಗುರುತಿಸಿ, ಸ್ಥಳೀಯ ಸಂಸ್ಕೃತಿ, ಗ್ರಾಮೀಣ ಸೊಗಡು ಮತ್ತು ಪ್ರದೇಶದ ಹಿರಿಮೆಯನ್ನು ಪ್ರತಿಬಿಂಬಿಸುವ ವಿನ್ಯಾಸದಲ್ಲಿ ತಂಗುದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಅಗತ್ಯ ನಿರ್ಮಾಣ ಸಾಮಗ್ರಿಗಳ ವೆಚ್ಚ ಹಾಗೂ ಯೋಜನೆಯಡಿ ಲಭ್ಯವಾಗುವ ಕೂಲಿ ವೆಚ್ಚವನ್ನು ಅಂದಾಜಿಸಿ ವರದಿ ಸಲ್ಲಿಸುವಂತೆ ಪಂಚಾಯತ್ ರಾಜ್ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ರಾಜ್ಯದ 5,927 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಸಂಚರಿಸುತ್ತಿದ್ದರೂ, ಬಸ್ ನಿಲುಗಡೆ ಸ್ಥಳಗಳಲ್ಲಿ ಸಮರ್ಪಕ ತಂಗುದಾಣಗಳಿಲ್ಲದ ಕಾರಣ ಪ್ರಯಾಣಿಕರು ಬಿಸಿಲು, ಮಳೆಯಲ್ಲಿ ನಿಲ್ಲಬೇಕಾಗಿದೆ. ಇನ್ನು ಕೆಲವು ಕಡೆ ಇರುವ ತಂಗುದಾಣಗಳು ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿವೆ. ಹೀಗಾಗಿ ಹೊಸ ತಂಗುದಾಣಗಳ ನಿರ್ಮಾಣದ ಜೊತೆಗೆ ಹಳೆಯ ಕಟ್ಟಡಗಳ ದುರಸ್ತಿ ಹಾಗೂ ನಿರ್ವಹಣೆಗೂ ಆದ್ಯತೆ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಜಿಲ್ಲೆಯ ಗ್ರಾಮಗಳಿಗೂ ಸಿಗಲಿ ಆದ್ಯತೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಹಾಗೂ ಹೊಸಕೋಟೆ ತಾಲ್ಲೂಕುಗಳ ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿರುವ ಜನರ ಸಂಖ್ಯೆ ಹೆಚ್ಚಿದೆ. ಗ್ರಾಮಗಳಿಂದ ಪಟ್ಟಣಗಳಿಗೆ ಶಿಕ್ಷಣ, ಉದ್ಯೋಗ, ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಅಗತ್ಯ ವಸ್ತುಗಳ ಖರೀದಿಗಾಗಿ ತೆರಳುವವರು ಪ್ರತಿನಿತ್ಯ ಬಸ್ಗಾಗಿ ಕಾಯುತ್ತಾರೆ. ಆದರೆ, ಹಲವು ಗ್ರಾಮಗಳಲ್ಲಿ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳಿಲ್ಲದಿರುವುದು ಸಮಸ್ಯೆಯಾಗಿದೆ. ಹೊಸ ತಂಗುದಾಣಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಅಗತ್ಯವಿರುವ ಗ್ರಾಮಗಳನ್ನು ಗುರುತಿಸಿ ಆದ್ಯತೆ ನೀಡಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಕೇವಲ ಹೊಸ ಕಟ್ಟಡಗಳನ್ನು ನಿರ್ಮಿಸುವುದಷ್ಟೇ ಅಲ್ಲದೆ, ಈಗಾಗಲೇ ಇರುವ ತಂಗುದಾಣಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ದುರಸ್ತಿ, ಸ್ವಚ್ಛತೆ ಹಾಗೂ ನಿರ್ವಹಣೆಗೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕಿದೆ.
ಕೈಗಾರಿಕಾ ವಲಯದಲ್ಲೂ ಮೂಲಸೌಕರ್ಯ ಕೊರತೆ
ಜಿಲ್ಲೆಯ ನಗರ ಪ್ರದೇಶಗಳು ಹಾಗೂ ಕೈಗಾರಿಕಾ ವಲಯಗಳಲ್ಲಿಯೂ ಬಸ್ ತಂಗುದಾಣಗಳ ಸಮಸ್ಯೆ ಕಾಣಿಸಿಕೊಂಡಿದೆ. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಬಸ್ಗಳಿಗಾಗಿ ಕಾಯುವಾಗ ಸೂಕ್ತ ಸೌಲಭ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಕಡೆ ಆಸನಗಳಿಲ್ಲ, ಇನ್ನು ಕೆಲವು ಕಡೆ ಮೇಲ್ಛಾವಣಿ ಹಾಳಾಗಿದೆ. ಬೆಳಕಿನ ವ್ಯವಸ್ಥೆಯ ಕೊರತೆಯಿಂದ ರಾತ್ರಿ ವೇಳೆ ಬಸ್ಗಾಗಿ ಕಾಯುವ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ತಂಗುದಾಣಗಳ ಸುತ್ತಮುತ್ತ ಕಸ ಸಂಗ್ರಹವಾಗುವುದು, ಗಿಡಗಂಟಿಗಳು ಬೆಳೆಯುವುದು ಹಾಗೂ ನಿಯಮಿತ ಸ್ವಚ್ಛತೆ ಇಲ್ಲದಿರುವುದು ಸಾಮಾನ್ಯವಾಗಿದೆ. ಕೆಲವು ಕಡೆ ತಂಗುದಾಣಗಳು ಮುಖ್ಯ ರಸ್ತೆಯಿಂದ ದೂರದಲ್ಲಿರುವುದರಿಂದ ಪ್ರಯಾಣಿಕರು ಬಸ್ ಹತ್ತಲು ಮತ್ತು ಇಳಿಯಲು ಅನಾನುಕೂಲ ಅನುಭವಿಸುತ್ತಿದ್ದಾರೆ. ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರ ಸಂಚಾರ ಹೆಚ್ಚಿರುವುದನ್ನು ಗಮನದಲ್ಲಿಟ್ಟುಕೊಂಡು, ಬಸ್ ತಂಗುದಾಣಗಳನ್ನು ಸುಸಜ್ಜಿತಗೊಳಿಸುವುದು ಅಗತ್ಯವಾಗಿದೆ.
ಬಸ್ ತಂಗುದಾಣಗಳಿದ್ದರೂ ಇಲ್ಲದಂತಿರುವ ಪರಿಸ್ಥಿತಿ ಅನೇಕ ಹಳ್ಳಿಗಳಲ್ಲಿದೆ. ಬಸ್ಗಾಗಿ ಕಾಯುವ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಕುಳಿತುಕೊಳ್ಳಲು ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ. ಬಿಸಿಲು ಮತ್ತು ಮಳೆಯ ನಡುವೆಯೇ ನಿಲ್ಲಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಗ್ರಾಮೀಣ ತಂಗುದಾಣಗಳ ಅಭಿವೃದ್ಧಿಗೆ ಮುಂದಾಗಬೇಕು ದೊಡ್ಡಬಳ್ಳಾಪುರ ನಿವಾಸಿ ಚೇತನ್ ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1,000 ಗ್ರಾಮೀಣ ಬಸ್ ತಂಗುದಾಣಗಳನ್ನು ನಿರ್ಮಿಸಲು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ವಿಬಿಜಿ ರಾಮ್ ಜಿ ಅಡಿಯಲ್ಲಿ ಯೋಜನೆ ರೂಪಿಸುವಂತೆ ಸೂಚನೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.
ದೊಡ್ಡಬಳ್ಳಾಪುರ: ಕರ್ನಾಟಕ ರತ್ನ, ದಿವಂಗತ ಡಾ. ಪುನೀತ್ ರಾಜಕುಮಾರ್ ಅವರ ಐದನೇ ವರ್ಷದ ಪುಣ್ಯಸ್ಮರಣೆಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಎಳ್ಳುಪುರ ಗ್ರಾಮದಲ್ಲಿ…
ನೆಲಮಂಗಲ: ನಗರದ ವೀವರ್ಸ್ ಕಾಲೋನಿಯ ಮಾರುತಿ ನಗರದಲ್ಲಿ ಕಸ ತೆರವು ವಿಚಾರವಾಗಿ ಮಹಿಳೆ ಮತ್ತು ಪೌರ ಕಾರ್ಮಿಕನ ನಡುವೆ ವಾಗ್ವಾದ…
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಂತಿಮ ಮತದಾರರ ಪಟ್ಟಿಯುಲ್ಲಿ 8,04,534 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್…
ವಿಧಾನ ಪರಿಷತ್ತಿನ ಎರಡು ಶಿಕ್ಷಕರ ಹಾಗೂ ಎರಡು ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಂಡಿರುವುದಕ್ಕೆ ಅತಿಯಾದ ಆತ್ಮವಿಶ್ವಾಸವೂ…
ಪ್ರಾಮಾಣಿಕತೆ ಎಂಬುದು ಬರಹದಲ್ಲಿ - ಭಾಷಣಗಳಲ್ಲಿ ಅಥವಾ ಬೇರೆ ಯಾವುದೇ ವೇದಿಕೆಯಲ್ಲಿ ಖಾಸಗಿಯಾಗಿ ಅಥವಾ ಸಾರ್ವಜನಿಕವಾಗಿ ಹೇಳುವುದು ಮತ್ತು ಅದರಂತೆ…
ದೇವನಹಳ್ಳಿ: ಕರ್ನಾಟಕ ರಾಜ್ಯಕ್ಕೆ ಪಾವತಿಸಬೇಕಾದ ತೆರಿಗೆಯನ್ನು ಕಟ್ಟದೆ ಸಂಚರಿಸುತ್ತಿದ್ದ ಹೊರರಾಜ್ಯಗಳಲ್ಲಿ ನೋಂದಣಿಯಾದ ಖಾಸಗಿ ಬಸ್ಗಳ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು…