ರಾಜ್ಯದಲ್ಲಿ ಹೆಚ್ಚಿದ ಸನ್ ಸ್ಟ್ರೋಕ್‌ ಪ್ರಕರಣ : ಉರಿ ಬಿಸಿಲಿಗೆ ತತ್ತರಿಸಿದ ಜನಜೀವನ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣಾಂಶ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮೇ ತಿಂಗಳ ಉರಿ ಬಿಸಿಲು ಜನರನ್ನು ಹೈರಾಣಾಗಿಸುತ್ತಿದ್ದು, ಸನ್ ಸ್ಟ್ರೋಕ್ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿವೆ. ರಾಜ್ಯದ ವಿವಿಧ ಭಾಗಗಳಲ್ಲಿ ಬಿಸಿಲಿನ ಆಘಾತಕ್ಕೆ ಮೂವರು ಬಲಿಯಾಗಿರುವ ಘಟನೆಗಳು ವರದಿಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

ಮೇ 11ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ 70 ವರ್ಷದ ವೃದ್ಧರೊಬ್ಬರು ಸನ್ ಸ್ಟ್ರೋಕ್‌ಗೆ ಬಲಿಯಾಗಿದ್ದಾರೆ. ಮಧ್ಯಾಹ್ನದ ತೀವ್ರ ಬಿಸಿಲಿನ ನಡುವೆಯೇ ಅಸ್ವಸ್ಥಗೊಂಡ ಅವರು ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹೀಗೆ ನೆಲಮಂಗಲ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಬಿಸಿಲಿನ ಆಘಾತಕ್ಕೆ ಸಂಬಂಧಿಸಿದ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ರಾಜ್ಯದ ಉತ್ತರ ಒಳನಾಡು, ಮಧ್ಯ ಕರ್ನಾಟಕ ಹಾಗೂ ಕೆಲವು ದಕ್ಷಿಣ ಭಾಗಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟುತ್ತಿದ್ದು, ಮಧ್ಯಾಹ್ನ ವೇಳೆಯಲ್ಲಿ ಜನರು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಉರಿ ಬಿಸಿಲಿನ ಪರಿಣಾಮ ರಸ್ತೆಗಳು ಬಿಕೋ ಎನ್ನುತ್ತಿದ್ದು, ವ್ಯಾಪಾರ ವಹಿವಾಟುಗಳ ಮೇಲೂ ಪರಿಣಾಮ ಬೀರಿದೆ. ದಿನನಿತ್ಯದ ಜೀವನ ಕ್ರಮವೇ ಅಸ್ತವ್ಯಸ್ತವಾಗುತ್ತಿದೆ.

ವಿಶೇಷವಾಗಿ ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು, ಬೀದಿ ವ್ಯಾಪಾರಿಗಳು ಹಾಗೂ ಹೊರಾಂಗಣದಲ್ಲಿ ಕೆಲಸ ಮಾಡುವವರು ಬಿಸಿಲಿನ ತೀವ್ರತೆಗೆ ಹೆಚ್ಚು ತತ್ತರಿಸುತ್ತಿದ್ದಾರೆ. ಸನ್ ಸ್ಟ್ರೋಕ್‌ನಿಂದ ಮೃತಪಟ್ಟವರಲ್ಲಿ ಇಬ್ಬರು ಹೊರಾಂಗಣದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಸ್ವಸ್ಥಗೊಂಡಿದ್ದರು ಎಂದು ತಿಳಿದುಬಂದಿದೆ. ಮತ್ತೊಬ್ಬರು ಬಿಸಿಲಿನ ನಡುವೆ ಪ್ರಯಾಣಿಸುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸ್ಥಿತಿ ಗಂಭೀರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತೀವ್ರ ಬಿಸಿಲಿನ ಪರಿಣಾಮ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಡಿಹೈಡ್ರೇಷನ್, ತಲೆಸುತ್ತು, ದೇಹದ ಉಷ್ಣಾಂಶ ಏರಿಕೆ, ವಾಂತಿ, ದೌರ್ಬಲ್ಯ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕಾಗಿ ಕೆಲವು ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹೀಟ್ ಸ್ಟ್ರೋಕ್ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ.

ವೈದ್ಯರ ಪ್ರಕಾರ ಮಕ್ಕಳು, ಹಿರಿಯ ನಾಗರಿಕರು, ಗರ್ಭಿಣಿಯರು ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು.

ಸನ್ ಸ್ಟ್ರೋಕ್ ಎಂದರೆ ದೇಹದ ಉಷ್ಣಾಂಶ ನಿಯಂತ್ರಣ ವ್ಯವಸ್ಥೆ ವಿಫಲವಾಗುವ ಸ್ಥಿತಿ. ದೇಹದ ತಾಪಮಾನ ಅತಿಯಾಗಿ ಏರಿದಾಗ ಮೆದುಳು ಹಾಗೂ ಇತರ ಅಂಗಾಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ತಕ್ಷಣ ಚಿಕಿತ್ಸೆ ದೊರಕದಿದ್ದರೆ ಜೀವಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

ತಲೆನೋವು, ತಲೆಸುತ್ತು, ಅತಿಯಾದ ದಾಹ, ದೇಹ ಬಿಸಿಯಾಗುವುದು, ಉಸಿರಾಟದ ತೊಂದರೆ, ವಾಂತಿ ಹಾಗೂ ಪ್ರಜ್ಞಾಹೀನತೆ ಸನ್ ಸ್ಟ್ರೋಕ್‌ನ ಪ್ರಮುಖ ಲಕ್ಷಣಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಜನರಿಗೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದೆ.

 ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಅಗತ್ಯವಿಲ್ಲದಿದ್ದರೆ ಹೊರಗಡೆ ಹೋಗಬಾರದು. ಹೆಚ್ಚು ನೀರು, ಮಜ್ಜಿಗೆ, ನಿಂಬೆಹಣ್ಣು ಜ್ಯೂಸ್ ಹಾಗೂ ಇತರ ದ್ರವ ಆಹಾರಗಳನ್ನು ಸೇವಿಸಬೇಕು. ಹಗುರ ಬಣ್ಣದ ಸಡಿಲ ಬಟ್ಟೆ ಧರಿಸುವುದು, ತಲೆ ಮುಚ್ಚಿಕೊಳ್ಳುವುದು ಹಾಗೂ ಬಿಸಿಲಿನಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುವುದನ್ನು ತಪ್ಪಿಸುವಂತೆ ಸಲಹೆ ನೀಡಲಾಗಿದೆ.

ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳ ಕಾಲ ಬಿಸಿಲಿನ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಹೀಟ್ ವೇವ್ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿವೆ. ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಆರೋಗ್ಯ ಕೇಂದ್ರಗಳಲ್ಲಿ ತುರ್ತು ಚಿಕಿತ್ಸಾ ವ್ಯವಸ್ಥೆ ಸಿದ್ಧವಾಗಿಡುವುದು ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ.

ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. “ಬಾಯಾರಿಕೆ ಇಲ್ಲದಿದ್ದರೂ ಆಗಾಗ ನೀರು ಕುಡಿಯುತ್ತಿರಿ. ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಓಡಾಡಬೇಡಿ. ಅನಿವಾರ್ಯವಾಗಿ ಹೊರಹೋಗುವಂತಿದ್ದರೆ ಛತ್ರಿ, ಟೋಪಿ ಬಳಸಿ ಹಾಗೂ ಮಜ್ಜಿಗೆ, ಎಳನೀರಿನಂತಹ ಪಾನೀಯಗಳಿಗೆ ಆದ್ಯತೆ ನೀಡಿ” ಎಂದು ಅವರು ಮನವಿ ಮಾಡಿದ್ದಾರೆ.

“ಮುಖ್ಯವಾಗಿ ಮಕ್ಕಳು, ಹಿರಿಯರು ಮತ್ತು ಗರ್ಭಿಣಿಯರ ಬಗ್ಗೆ ಹೆಚ್ಚಿನ ನಿಗಾ ಇರಲಿ. ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಕಠಿಣ ವ್ಯಾಯಾಮ ಮಾಡುವುದು ಅಥವಾ ಮಕ್ಕಳನ್ನು ವಾಹನಗಳಲ್ಲಿ ಒಂಟಿಯಾಗಿ ಬಿಟ್ಟು ಹೋಗುವುದನ್ನು ಮಾಡಬೇಡಿ. ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಕಂಡುಬಂದರೂ ನಿರ್ಲಕ್ಷಿಸದೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಥವಾ ಆಂಬ್ಯುಲೆನ್ಸ್ ಸಹಾಯ ಪಡೆಯಿರಿ” ಎಂದು ಸಚಿವರು ತಿಳಿಸಿದ್ದಾರೆ..

ಒಟ್ಟಿನಲ್ಲಿ ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಉರಿ ಬಿಸಿಲಿನ ನಡುವೆ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಅನಿವಾರ್ಯವಾಗಿದೆ. ಸಣ್ಣ ನಿರ್ಲಕ್ಷ್ಯವೂ ಜೀವಕ್ಕೆ ಅಪಾಯ ತರಬಹುದಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ವರ್ತಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯ ಇದೆ.

Leave a Reply

Your email address will not be published. Required fields are marked *

error: Content is protected !!