ರಾಂಪುರ ಮಜರ ವಡೇರಹಳ್ಳಿ ಗ್ರಾಮದ ಗ್ರಾಮಠಾಣಾ ಜಾಗ ಒತ್ತುವರಿ ತೆರವು

ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡಬೆಳವಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಂಪುರ ಮಜರ ವಡೇರಹಳ್ಳಿ ಗ್ರಾಮದಲ್ಲಿರುವ ಸುಮಾರು 2 ಎಕರೆ 10 ಗುಂಟೆ ಗ್ರಾಮಠಾಣ ಜಾಗದ ಒತ್ತುವರಿಯನ್ನು ತೆರವುಗೊಳಿಸಲಾಯಿತು. ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಆದರ್ಶ್ ಕುಮಾರ್. ಸಿ ನೇತೃತ್ವದಲ್ಲಿ ಪಂಚಾಯ್ತಿ ಸಿಬ್ಬಂದಿ ಹಾಗೂ ಪೊಲೀಸ್ ಭದ್ರತೆಯಲ್ಲಿ ಜೆಸಿಬಿ ಮೂಲಕ ತೆರವು ಮಾಡಲಾಯಿತು.

ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಗಲಭೆ ಅಥವಾ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ರಕ್ಷಣೆ ಮತ್ತು ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಸೆಪ್ಟೆಂಬರ್ 16ರಂದು ಸರ್ವೇ ಅಧಿಕಾರಿಗಳು ಸರ್ಕಾರಿ ಜಾಗದ ಗಡಿಯನ್ನು ಗುರುತಿಸಿದ್ದರು.
ಅಂದು ಗ್ರಾಮ ಠಾಣಾ ಸರ್ವೆ ಮಾಡುವ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆ.ಆರ್.ಎಸ್ ಪಕ್ಷದ ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯದರ್ಶಿ ಜಯರಾಮ್ ಎಂಬುವರ ಮೇಲೆ ಒತ್ತುವರಿದಾರ ಪ್ರಕಾಶ್ ಕುಟುಂಬದವರು ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು.
ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗ್ರಾಮಠಾಣಾ ಒತ್ತುವರಿ ತೆರವು ವಿಚಾರವಾಗಿ ಮಾತನಾಡಿದ ಜಯರಾಮ್ ನಾವು ಗ್ರಾಮಠಾಣ ಸರ್ವೇಗೆ ಕಳೆದ 2 ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಈಗ ದೊಡ್ಡಬೆಳವಂಗಲ ಗ್ರಾಮ ಪಂಚಾಯ್ತಿಯಿಂದ ಸರ್ವೇ ಮಾಡುವಂತೆ ಅರ್ಜಿ ಸಲ್ಲಿಸಿದ್ದು ಆ ಪ್ರಕಾರ ಸರ್ವೇ ಅಧಿಕಾರಿಗಳು ಸರ್ವೇ ಮಾಡಿದ್ದಾರೆ. ಆ ನಂತರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆದರ್ಶ ಗ್ರಾಮ ಠಾಣ ಒತ್ತುವರಿ ತೆರವು ಮಾಡಿಸಿ ಪಂಚಾಯ್ತಿ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
ನಮ್ಮ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರ ಹೋರಾಟಕ್ಕೆ ಜಯ ಸಿಕ್ಕಿದೆ. ನಾವು ಕಳೆದ 2 ವರ್ಷಗಳಿಂದ ಸಾಕಷ್ಟು ಸರ್ಕಾರಿ ಭೂಮಿ, ಸ್ಮಶಾನ, ಕೆರೆ, ಗುಂಡುತೋಪುಗಳನ್ನು ರಕ್ಷಿಸುವಂತ ಕೆಲಸ ಮಾಡಿದ್ದೇವೆ.
ನಮ್ಮ ಈ ಹೋರಾಟ ಮುಂದುವರಿಸುತ್ತೇವೆ. ಯಾರು ಎಷ್ಟೇ ಧಮ್ಕಿ ಹಾಕಿದರೂ ನಾವು ಎದರುವುದಿಲ್ಲ. ಯಾರ ಭಯಕ್ಕೂ ನಾವು ಜಗ್ಗಲ್ಲ, ಬಗ್ಗಲ್ಲ ಎಂದಿದ್ದಾರೆ.

ಈ ವೇಳೆ ಕೆ.ಆರ್.ಎಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ತಾಲ್ಲೂಕು ಉಸ್ತುವಾರಿ ಚಿಕ್ಕೆಗೌಡರು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ತಾಲ್ಲೂಕು ಕಾರ್ಯದರ್ಶಿಗಳಾದ ಸುಬ್ರಮಣಿ, ಜಯರಾಮ್, ವೆಂಕಟೇಗೌಡ, ಸೈನಿಕರಾದ ನಂಜಪ್ಪ, ರಾಜಶೇಖರ್, ಹಾಗೂ ದೇವನಹಳ್ಳಿ ಸೈನಿಕರಾದ ಶಿವಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!