ಮೋದಿ 3.0 ಬಜೆಟ್: ರಾಜ್ಯದ ಜನತೆಯ ಕೈಗೆ ಚೊಂಬು- ಮೋದಿ ಅಧಿಕಾರ ಉಳಿಸಿಕೊಳ್ಳಲು ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಅನುದಾನ-ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಜ್ಯದ ಯಾವುದೇ ಬೇಡಿಕೆಗಳಿಗೂ ಮನ್ನಣೆ ನೀಡದೆ ಅತ್ಯಂತ ನಿರಾಶಾದಾಯಕ ಬಜೆಟ್‌ ಮಂಡಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಹಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮೂಲಕ ರಾಜ್ಯದ ಜನತೆಯ ಕೈಗೆ ಚೊಂಬು ಕೊಟ್ಟಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಅನುದಾನ ಒದಗಿಸಿದ್ದು, ಇತರ ರಾಜ್ಯಗಳನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಈ ಬಜೆಟ್ ನಲ್ಲಿ ಏಳು ಕೋಟಿ ಕನ್ನಡಿಗರಿಗೆ ಸಿಕ್ಕಿದ್ದು ಮತ್ತದೇ ಚೊಂಬು ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಬಜೆಟ್ ವಿರುದ್ಧ ಕಿಡಿಕಾರಿದ್ದಾರೆ.

ಬಜೆಟ್‌ ಪೂರ್ವ ಸಭೆಯಲ್ಲಿ ರಾಜ್ಯ ಸರ್ಕಾರ ಹಲವಾರು ಮನವಿಗಳನ್ನು ಕೇಂದ್ರ ಸರ್ಕಾರದ ಮುಂದಿರಿಸಿತ್ತು. ಆದರೆ ಯಾವುದೇ ಬೇಡಿಕೆಗಳಿಗೂ ಕೇಂದ್ರ ಹಣಕಾಸು ಸಚಿವರು ಸ್ಪಂದಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಒದಗಿಸುವುದಾಗಿ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ್ದರು. ಆದರೆ ಈ ಯೋಜನೆಗೆ ನಯಾಪೈಸೆ ಒದಗಿಸಿಲ್ಲ. ಈ ಆಯವ್ಯಯದಲ್ಲಿ ಒದಗಿಸುವಂತೆ ಕೋರಲಾಗಿತ್ತು ಎಂದರು.

ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈ ವರ್ಷ 5 ಸಾವಿರ ಕೋಟಿ ರೂ. ಅನುದಾನ ಒದಗಿಸುತ್ತಿದೆ. ಆದರೆ ಇದಕ್ಕೆ ಪೂರಕವಾಗಿ ಹಿಂದುಳಿದ ತಾಲ್ಲೂಕುಗಳಿಗೆ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿತ್ತು. ಇದೇ ರೀತಿ ಮಹಾದಾಯಿ ಯೋಜನೆ, ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಗಳ ಕುರಿತು ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡದೆ ರೈತರಿಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಪೆರಿಫೆರಲ್‌ ರಸ್ತೆ ನಿರ್ಮಾಣ, ಕೆರೆಗಳ ಅಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ ಯೋಜನೆಗಳಿಗೆ ಒಟ್ಟು 11,485 ಕೋಟಿ ರೂ. ಅನುದಾನವನ್ನು ನೀಡುವಂತೆ ಕೋರಲಾಗಿತ್ತು. ಜೊತೆಗೆ ಹಲವಾರು ವರ್ಷಗಳಿಂದ ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸುವಂತೆ ಬೇಡಿಕೆಯಿದ್ದು, ಬಜೆಟ್‌ ಪೂರ್ವಭಾವಿ ಸಭೆಯಲ್ಲಿಯೂ ಈ ಕುರಿತು ಬೇಡಿಕೆ ಸಲ್ಲಿಸಲಾಗಿತ್ತು. ಈ ಯಾವ ಮನವಿಗಳಿಗೂ ಕೇಂದ್ರ ಸರ್ಕಾರ ಮನ್ನಣೆ ನೀಡಿಲ್ಲ ಎಂದರು.

ಈ ಹಿಂದಿನ ಬಜೆಟ್‌ನಲ್ಲಿ ರಾಜ್ಯಕ್ಕೆ ಘೋಷಿಸಿದ್ದ ಯೋಜನೆಗಳಿಗೇ ಕೇಂದ್ರ ಸರ್ಕಾರ ಇನ್ನೂ ಯಾವುದೇ ಅನುದಾನ ಒದಗಿಸಿಲ್ಲ. ಹೀಗಾಗಿ ಈ ಬಾರಿ ಕೈಗಾರಿಕಾ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿರುವುದು ಕೇವಲ ಘೋಷಣೆಯಾಗಿ ಮಾತ್ರ ಉಳಿಯಲಿದೆ ಎಂದು ತಿಳಿಸಿದರು.

ಈ ಬಜೆಟ್‌ ಜನವಿರೋಧಿಯಾಗಿದ್ದು, ವಿಶೇಷವಾಗಿ ಬಡವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಈ ಬಜೆಟ್ ನಲ್ಲಿ ರೈತರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರೈತರು 5 ವರ್ಷಗಳಿಂದ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ರಚಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಬಜೆಟ್ ನಲ್ಲಿ ಚಕಾರವನ್ನೇ ಎತ್ತಿಲ್ಲ. ಸ್ವಾಮಿನಾಥನ್‌ ಆಯೋಗದ ಶಿಫಾರಸ್ಸುಗಳ ಜಾರಿ ಬಗ್ಗೆಯೂ ಯಾವುದೇ ಮಾತು ಆಡದೆ ರೈತರಿಗೆ ಪಂಗನಾಮ ಹಾಕಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರ ಸಂಪುಟದಲ್ಲಿ ರಾಜ್ಯದ ಐದು ಜನ‌ ಸಚಿವರಾಗಿದ್ದರೂ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಈ‌ ಐದೂ ಮಂದಿ ರಾಜ್ಯಕ್ಕೆ ಅನುಕೂಲ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಆರೋಗ್ಯ, ರಕ್ಷಣೆ, ಐಟಿ ಮತ್ತು ಸಂವಹನ ಕ್ಷೇತ್ರಗಳಿಗೆ ಕಳೆದ ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನವನ್ನು ಈಗ ಕಡಿತಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿಗೆ ಅನುದಾನದಲ್ಲೂ ಗಣನೀಯವಾಗಿ ಕಡಿತಗೊಳಿಸಿರುವುದು ಈ ಸಮುದಾಯಗಳಿಗೆ ಎಸಗಿರುವ ದ್ರೋಹವಾಗಿದೆ ಎಂದು ಗುಡುಗಿದರು.

ಕೇಂದ್ರದ 16ನೇ ಹಣಕಾಸು ಆಯೋಗವು ಆಗಸ್ಟ್‌ 28 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಹಿಂದಿನ ಬಾರಿ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಲಾಗುವುದು. ಈ ಕುರಿತು ಸಮರ್ಥವಾಗಿ ವಿಷಯ ಮಂಡಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

Ramesh Babu

Journalist

Recent Posts

ಹೃದಯವಿದ್ರಾವಕ ಘಟನೆ: ಒಂದೇ ದಿನ ಪತಿ-ಪತ್ನಿ ದಾರುಣ ಸಾವು

ಬೆಳಗಾವಿಯಲ್ಲಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ದಿನ ಪತಿ-ಪತ್ನಿ ದಾರುಣ ಸಾವನ್ನಪ್ಪಿದ್ದಾರೆ. ಅರವಳ್ಳಿ…

5 hours ago

ಮಾರಕಾಸ್ತ್ರಗಳಿಂದ ಶಿಕ್ಷಕಿಯ ಕ್ರೂರ ಹತ್ಯೆ: ಕೊಲೆ ಬಳಿಕ ದುಷ್ಕರ್ಮಿಗಳಿಂದ ಶವಕ್ಕೆ ಬೆಂಕಿ

ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಮೇಲೆ ನಡೆದ ಕ್ರೂರ ಹತ್ಯೆ ಪ್ರಕರಣ ಎಲ್ಲರಲ್ಲೂ ಆತಂಕ ಮೂಡಿಸಿದೆ. ಕಮಲಾಪುರ ತಾಲೂಕಿನ…

6 hours ago

ಲಾಕಪ್ ಡೆತ್ ಮತ್ತು ಮರಣದಂಡನೆ….

ಸುಮಾರು ಆರು ವರ್ಷಗಳ ಹಿಂದೆ ಅಂದರೆ 2020ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ಅಮಾನುಷ ಲಾಕಪ್ ಡೆತ್ ಬಗ್ಗೆ ಬರೆದ…

8 hours ago

ತಂದೆ-ಮಗನ ಲಾಕಪ್ ಡೆತ್ ಕೇಸ್; ತಮಿಳುನಾಡಿನ 9 ಪೊಲೀಸರಿಗೆ ಗಲ್ಲು ಶಿಕ್ಷೆ

2020ರಲ್ಲಿ ತಮಿಳುನಾಡಿನಲ್ಲಿ ನಡೆದ ಸಾತಂಕುಲಂ ಕಸ್ಟಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮದ್ರಾಸ್ ಹೈಕೋರ್ಟ್‌ ಪೀಠವು 9 ಪೊಲೀಸ್ ಸಿಬ್ಬಂದಿಗೆ…

17 hours ago

ಇಂಧನ ತೈಲ ಮತ್ತು ಅನಿಲ ಪೂರೈಕೆ ಸಮಸ್ಯೆ – ರಾಜ್ಯದ ಜನತೆಗೆ ತೀವ್ರ ಸಂಕಷ್ಟ- ಸಚಿವ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯೆ

ರಾಜ್ಯದಲ್ಲಿ ಇಂಧನ ತೈಲ ಮತ್ತು ಅನಿಲ ಪೂರೈಕೆಯ ಸಮಸ್ಯೆ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ಆಹಾರ, ನಾಗರಿಕ ಸರಬರಾಜು ಮತ್ತು…

18 hours ago

ಆಟೋ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತ ನೂರಾರು ಆಟೋಗಳು

ಆಟೋ ಎಲ್‌ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ…

20 hours ago