ಮುಗಿಯದ ಕೆ.ಎಚ್. ಮುನಿಯಪ್ಪ ಖಾತೆ ‘ಮುನಿಸು’: ಪ.ಜಾ ಎಡಗೈ ಸಮುದಾಯಕ್ಕೆ ಸಿಗುವುದೇ ಉನ್ನತ ಸ್ಥಾನ?: ಪ್ರಬಲ ಖಾತೆಗೆ ಹಿರಿಯ ನಾಯಕನ ಪಟ್ಟು

ಬೆಂಗಳೂರು ಗ್ರಾಮಾಂತರ: ರಾಜ್ಯ ಕಾಂಗ್ರೆಸ್ ನಲ್ಲಿ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿರುವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಸಚಿವರ ಖಾತೆ ಹಂಚಿಕೆ ವಿಚಾರ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್. ಮುನಿಯಪ್ಪ ಅವರ ಅಸಮಾಧಾನ ಇನ್ನೂ ಶಮನಗೊಂಡಿಲ್ಲದೇ ಇರುವುದು ಮೇಲ್ಮೋಟಕ್ಕೆ ಕಂಡುಬಂದಿದೆ.

ಹಿರಿಯ ಸಚಿವ ದೇವನಹಳ್ಳಿ ಶಾಸಕ ಕೆ.ಎಚ್ ಮುನಿಯಪ್ಪ ಮುನಿಸು ಇನ್ನೂ ಕೆಂಡದ ಮೇಲೆ ಬೂದಿ ಮುಚ್ಚಿದಂತೆ ಕೊತ ಕೊತ ಕುದಿಯುತ್ತಿದೆ.

ಕೆ.ಎಚ್. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಪ್ರಭಾವಿ ಖಾತೆ ನೀಡಬೇಕೆಂಬ ಒತ್ತಾಯ ಪರಿಶಿಷ್ಟ ಜಾತಿಯ ಎಡಗೈ ಸಮುದಾಯ ಸೇರಿದಂತೆ ವಿವಿಧ ಸಂಘಟನೆಗಳಿಂದ ಕೇಳಿಬರುತ್ತಿದೆ. ಆದರೆ, ಅವರಿಗೆ ಈ ಹಿಂದೆ ನಿರ್ವಹಿಸಿದ್ದ ಆಹಾರ ಇಲಾಖೆಯನ್ನೇ ಮತ್ತೆ ಸರ್ಕಾರ ನೀಡಿದ್ದರಿಂದ ಮುನಿಯಪ್ಪ‌ ಮತ್ತು ಅವರ ಬೆಂಬಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಏಳು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಹಾಗೂ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿರುವ ಮುನಿಯಪ್ಪ ಅವರು ರಾಜ್ಯ ರಾಜಕೀಯದಲ್ಲೂ ಹಿರಿಯ ನಾಯಕರೆಂದು ಗುರುತಿಸಿಕೊಂಡಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದಿಂದ ಗೆಲುವು ಸಾಧಿಸಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದ ಅವರು, ತಮ್ಮ ಹಿರಿಯತೆ ಮತ್ತು ಅನುಭವಕ್ಕೆ ತಕ್ಕ ಗೌರವ ದೊರಕಿಲ್ಲ ಎಂಬ ಅಭಿಪ್ರಾಯವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಖಾತೆ ಕುರಿತಾಗಿ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ಅಸಮಾಧಾನಕ್ಕೆ ತೆರೆ ಬಿದ್ದಿದ್ದರೂ, ಮುನಿಯಪ್ಪ ಅವರ ಮುನಿಸು ಮಾತ್ರ ಇನ್ನೂ ಮುಂದುವರಿದಿದೆ. ಮೇಲ್ನೋಟಕ್ಕೆ ಪಕ್ಷದ ಹೈಕಮಾಂಡ್ ಭರವಸೆ ನೀಡಿದೆ ಎನ್ನಲಾಗುತ್ತಿದ್ದರೂ, ಅವರು ಇನ್ನೂ ಆಹಾರ ಇಲಾಖೆಯ ಜವಾಬ್ದಾರಿಯನ್ನು ಅಧಿಕೃತವಾಗಿ ವಹಿಸಿಕೊಂಡಿಲ್ಲ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇದು ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದೇ ವೇಳೆ ದಲಿತ ಎಡಗೈ ಸಮುದಾಯದ ವಿವಿಧ ಸಂಘಟನೆಗಳು, ಸ್ವಾಮೀಜಿಗಳು ಹಾಗೂ ಅಭಿಮಾನಿ ಬಳಗಗಳು ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಜೊತೆಗೆ ಸಮಾಜ ಕಲ್ಯಾಣ, ಕೃಷಿ, ಕಂದಾಯದಂತಹ ಜನಸಂಪರ್ಕ ಹೊಂದಿರುವ ಪ್ರಭಾವಿ ಖಾತೆಗಳನ್ನು ನೀಡುವಂತೆ ಆಗ್ರಹಿಸುತ್ತಿವೆ.

ಇತ್ತೀಚೆಗೆ ಕೆ.ಎಚ್. ಮುನಿಯಪ್ಪ ಅವರು ಆಹಾರ ಇಲಾಖೆಯ ಜೊತೆಗೆ ಮತ್ತೊಂದು ಹೆಚ್ಚುವರಿ ಖಾತೆ ನೀಡುವಂತೆ ಪಕ್ಷದ ಹೈಕಮಾಂಡ್‌ಗೆ ಮನವಿ ಸಲ್ಲಿಸಿರುವುದಾಗಿ ಸ್ವತಃ ಮುನಿಯಪ್ಪನವರೇ ತಿಳಿಸಿದ್ದಾರೆ. ಇದೇ ವಿಚಾರವಾಗಿ ಅವರು ಮಂಗಳವಾರ ರಾಹುಲ್ ಗಾಂಧಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಸಚಿವ ಸಂಪುಟ ಪುನರ್‌ರಚನೆ ಅಥವಾ ಹೆಚ್ಚುವರಿ ಖಾತೆಗಳ ಹಂಚಿಕೆ ಸಂದರ್ಭದಲ್ಲಿ ಜಾತಿ ಸಮೀಕರಣ, ಪ್ರಾದೇಶಿಕ ಪ್ರತಿನಿಧಿತ್ವ, ಅನುಭವ ಮತ್ತು ಯುವ ನಾಯಕತ್ವದ ಸಮತೋಲನವನ್ನು ಕಾಂಗ್ರೆಸ್ ಹೈಕಮಾಂಡ್ ಪರಿಗಣಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನಿಯಪ್ಪ ಅವರಿಗೆ ಹೆಚ್ಚುವರಿ ಜವಾಬ್ದಾರಿ ಅಥವಾ ಪ್ರಭಾವಿ ಖಾತೆ ದೊರೆಯಬಹುದೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಕೆ.ಎಚ್. ಮುನಿಯಪ್ಪ ಹೇಳಿದ್ದೇನು?

ನಾನು ಬೇರೆ ಖಾತೆ ಕೊಡುವಂತೆ ಹೈಕಮಾಂಡ್ ಬಳಿ ಕೇಳಿದ್ದೇನೆ. ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸಲು ಸಿದ್ಧನಿದ್ದೇನೆ. ನಾನು ಎಂಟು ಬಾರಿ ಚುನಾಯಿತನಾಗಿದ್ದೇನೆ. ಆದರೆ ಖಾತೆ ಹಂಚಿಕೆಯಲ್ಲಿ ನನ್ನ ಹಿರಿಯತೆಗೆ ತಕ್ಕ ಗೌರವ ಸಿಕ್ಕಿಲ್ಲ. ಸಮಾಜ ಕಲ್ಯಾಣ ಅಥವಾ ಕೃಷಿ ಇಲಾಖೆಯಂತಹ ಜನಸೇವೆಗೆ ಹೆಚ್ಚು ಅವಕಾಶವಿರುವ ಖಾತೆ ನೀಡುವಂತೆ ಮನವಿ ಮಾಡಿದ್ದೇನೆ. ಸಮತೋಲನ ಹಾಗೂ ಹಿರಿಯತೆಯನ್ನು ಪರಿಗಣಿಸಿ ಖಾತೆ ಹಂಚಿಕೆ ಆಗಬೇಕಿತ್ತು. ಪಕ್ಷದ ನಾಯಕತ್ವ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ನಂಬಿಕೆ ಇದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ಹೈಕಮಾಂಡ್ ನಿರ್ಧಾರದತ್ತ ಚಿತ್ತ

ಸಚಿವ ಕೆ.ಎಚ್. ಮುನಿಯಪ್ಪ ಅವರ ಅಸಮಾಧಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದು ಇದೀಗ ಕುತೂಹಲದ ವಿಷಯವಾಗಿದೆ. ದಲಿತ ಎಡಗೈ ಸಮುದಾಯದ ನಿರೀಕ್ಷೆ, ಜಿಲ್ಲೆಯ ರಾಜಕೀಯ ಸಮೀಕರಣ ಹಾಗೂ ಹಿರಿಯ ನಾಯಕರಿಗೆ ಗೌರವ ನೀಡುವ ಪ್ರಶ್ನೆ, ಈ ಮೂರು ಅಂಶಗಳ ನಡುವೆ ಪಕ್ಷ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದರ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಗಳು ಅವಲಂಬಿತವಾಗಿವೆ.

ಕೆ.ಎಚ್. ಮುನಿಯಪ್ಪ ಅವರು ನಮ್ಮ ಸಮಾಜದ ಸರ್ವೋಚ್ಚ ನಾಯಕರು. ಅವರಿಗೆ ಅವಮಾನವಾದರೆ ಅದು ಸಮಾಜಕ್ಕೆ ಅವಮಾನವಾದಂತೆಯೇ. ಅವರಿಗೆ ಡಿಸಿಎಂ ಸ್ಥಾನ ನೀಡಬೇಕು. ಜೊತೆಗೆ ಪ್ರಭಾವಿ ಖಾತೆಯನ್ನೂ ನೀಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಸಮಾಜದ ಬೆಂಬಲದ ಮೇಲೆ ಪರಿಣಾಮ ಬೀಳಬಹುದು ಎಂದು ಕರ್ನಾಟಕ ಮಾದಾರ ಮಹಾಸಭಾ ರಾಜ್ಯ ಸಂಘಟಕ ಬಿ.ಕೆ‌ ಶಿವಪ್ಪ ತಿಳಿಸಿದ್ದಾರೆ.

ಮುನಿಯಪ್ಪ ಅವರ ಅನುಭವ, ಹಿರಿತನ ಹಾಗೂ ಪಕ್ಷನಿಷ್ಠೆಯನ್ನು ಗೌರವಿಸಿ ಸರ್ಕಾರ ಡಿಸಿಎಂ ಸ್ಥಾನ ಅಥವಾ ಹೆಚ್ಚುವರಿ ಪ್ರಬಲ ಖಾತೆ ನೀಡಬೇಕು. ಯಾವುದೇ ಖಾತೆ ಕೊಟ್ಟರೂ ಅದನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಲಕ್ಷ್ಮೀಪತಿ.ಜಿ ಹೇಳಿದ್ದಾರೆ.

Ramesh Babu

Journalist

Recent Posts

ಟಾಕ್ಸಿಕ್

ಕ್ರಿಯಾತ್ಮಕತೆ ಮತ್ತು ಪ್ರಯತ್ನಗಳಿಗೂ ಒಂದಷ್ಟು ಮಿತಿ ಇರುತ್ತದೆ. ಏಕೆಂದರೆ ನಾವು ಸಾಮಾನ್ಯ ಮನುಷ್ಯರು. ಹಣ, ಜನಪ್ರಿಯತೆ, ಅಧಿಕಾರ ಬಂದ ತಕ್ಷಣ…

4 hours ago

ಚಿ.ನಾ.ಹಳ್ಳಿ ತಾಲ್ಲೂಕಿಗೆ ಸಿಇಒ ದಿಢೀರ್ ಭೇಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಚಿಕ್ಕನಾಯಕನಹಳ್ಳಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ ಬಿ.ವಿ. ಅವರು ತಾಲ್ಲೂಕಿಗೆ ದಿಢೀರ್ ಭೇಟಿ ನೀಡಿ ವಿವಿಧ ಅಭಿವೃದ್ಧಿ…

16 hours ago

ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರು ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಬಲಿ

ಬೆಂಗಳೂರು: ಆರೋಪಿಯ ಹುಡುಕಾಟಕ್ಕೆ ತೆರಳುತ್ತಿದ್ದ ಬೆಂಗಳೂರು ಸೈಬರ್ ಕ್ರೈಂ ತಂಡ ಪ್ರಯಾಣಿಸುತ್ತಿದ್ದ ಬಸ್ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತಕ್ಕೀಡಾಗಿ, ಪೊಲೀಸ್ ಇನ್‌ಸ್ಪೆಕ್ಟರ್…

21 hours ago

ರಕ್ಷಾ ಬಂಧನ ಮತ್ತು ಮದರ್ ತೆರೇಸಾ

ಮದರ್‌ ತೆರೇಸಾ - ಆಗಸ್ಟ್ 26, 1910..... ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ…

1 day ago

ರೈತಪರ ಯೋಜನೆ : ವಿಬಿ-ಜಿ ರಾಮ್ ಜಿ ಯೋಜನೆ

ಚಿಕ್ಕನಾಯಕನಹಳ್ಳಿ: ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜುಲೈ.1 ರಿಂದ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ)…

2 days ago

ಮೂರು ತಾಲೂಕು ಬರದ ಪಟ್ಟಿಗೆ; ದೊಡ್ಡಬಳ್ಳಾಪುರಕ್ಕೆ ವಿನಾಯಿತಿ

ಬೆಂಗಳೂರು ಗ್ರಾಮಾಂತರ: ಮುಂಗಾರು ಮಳೆ ಕೊರತೆಯಿಂದ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

2 days ago