
ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಹಲವು ಮಹತ್ವದ ಸೂಚನೆಗಳನ್ನ ನೀಡಿದರು. ವಿಶೇಷವಾಗಿ ಮಾರ್ಖಂಡೇಯ ಜಲಾಶಯದಲ್ಲಿ ನೀರು ಪೋಲಾಗುತ್ತಿರುವುದನ್ನ ತಡೆಗಟ್ಟುವುದು, ಡ್ಯಾಂ ರೆಜಿನುವೇಷನ್ (ಪುನಶ್ಚೇತನ) ಕೈಗೊಳ್ಳುವುದು, ಅಪೂರ್ಣ ಕಾಮಗಾರಿಗಳನ್ನ ಪೂರ್ಣಗೊಳಿಸುವುದು ಹಾಗೂ ಬಲದಂಡೆ ಯೋಜನೆಯನ್ನ ಸುಧಾರಿಸುವುದು ಪ್ರಮುಖವಾಗಿ ಚರ್ಚೆಯಾಯಿತು.
ವಿಕಾಸಸೌಧದ ಕೊಠಡಿ ಸಂಖ್ಯೆ 317ರಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಜಲಸಂಪನ್ಮೂಲ ಹಾಗೂ ನೀರಾವರಿ ಯೋಜನೆಗಳ ಪ್ರಗತಿ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಭೆಯಲ್ಲಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಉಪಸ್ಥಿತರಿದ್ದರು.
*ನೀರು ಪೋಲಾಗುತ್ತಿದ್ದರೂ ಸುಮ್ಮನಿರುವ ಪ್ರಶ್ನೆಯೇ ಇಲ್ಲ- ಎನ್ ಚೆಲುವರಾಯಸ್ವಾಮಿ*
ಮಾರ್ಖಂಡೇಯ ಜಲಾಶಯದಲ್ಲಿ ನೀರು ಪೋಲಾಗುತ್ತಿರುವ ವಿಚಾರ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪವಾಯಿತು. ಜಲಾಶಯದಲ್ಲಿ ಸಂಗ್ರಹವಾಗುವ ಅಮೂಲ್ಯ ನೀರು ಸೋರಿಕೆ ಅಥವಾ ಇತರೆ ಕಾರಣಗಳಿಂದ ವ್ಯರ್ಥವಾಗದಂತೆ ತಾಂತ್ರಿಕವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಲಾಶಯದಲ್ಲಿ ನೀರು ಉಳಿದರಷ್ಟೇ ರೈತರ ಹೊಲಗಳಿಗೆ ನೀರು ತಲುಪುತ್ತದೆ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಹ ಬಹಳ ಕಷ್ಟವಾಗುತ್ತದೆ. ವಿಳಂಭ ಮಾಡದೆ ಅಧಿಕಾರಿಗಳು ತುರ್ತಾಗಿ ಜಲಾಶಯದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಸಚಿವರು ತಿಳಿಸಿದರು.
*ಜಲಾಶಯದ ಪುನಶ್ಚೇತನಕ್ಕೆ ಮೊದಲ ಆದ್ಯತೆ ನೀಡಬೇಕು*
ಮಾರ್ಖಂಡೇಯ ಜಲಾಶಯದ ಡ್ಯಾಂ ರೆಜಿನುವೇಷನ್ ಕಾಮಗಾರಿಯನ್ನ ಕೈಗೆತ್ತಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಜಲಾಶಯದ ರಚನೆ, ನೀರು ಸೋರಿಕೆ ಸೇರಿದಂತೆ ಸಂಬಂಧಿಸಿದ ತಾಂತ್ರಿಕ ಅಂಶಗಳನ್ನ ಪರಿಶೀಲಿಸಿ, ಅಗತ್ಯ ಪುನಶ್ಚೇತನ ಕಾಮಗಾರಿಗಳನ್ನ ಕೈಗೊಳ್ಳುವಂತೆ ಸೂಚಿಸಲಾಯಿತು. ಜಲಾಶಯದ ಬಲವರ್ಧನೆ ಮಾತ್ರವಲ್ಲ, ನೀರಿನ ಪ್ರತಿಯೊಂದು ಹನಿಯ ಸಂರಕ್ಷಣೆಯೂ ಮುಖ್ಯ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
*ಅರ್ಧಕ್ಕೆ ನಿಂತ ಕಾಮಗಾರಿಗಳಿಗೆ ಪೂರ್ಣ ವಿರಾಮ*
ಬೆಳಗಾವಿ ಜಿಲ್ಲೆಯಲ್ಲಿ ವಿವಿಧ ಹಂತಗಳಲ್ಲಿ ಬಾಕಿ ಉಳಿದಿರುವ ಹಾಗೂ ಅಪೂರ್ಣಗೊಂಡಿರುವ ನೀರಾವರಿ ಕಾಮಗಾರಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಕಾಮಗಾರಿಗಳು ವರ್ಷಗಟ್ಟಲೆ ಬಾಕಿ ಉಳಿಯದಂತೆ ಅವುಗಳ ಪ್ರಗತಿಯನ್ನ ಪರಿಶೀಲಿಸಿ, ಅಗತ್ಯ ಕ್ರಮಗಳ ಮೂಲಕ ಅಪೂರ್ಣ ಕಾಮಗಾರಿಗಳನ್ನ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.
ಕಾಮಗಾರಿ ಆರಂಭಿಸಿ ಅರ್ಧಕ್ಕೆ ನಿಲ್ಲಿಸುವುದರಿಂದ ಸಾರ್ವಜನಿಕ ಹಣದ ಬಳಕೆಗೂ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ ಈಗಾಗಲೇ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳನ್ನ ಬಗೆಹರಿಸಿ ಪೂರ್ಣಗೊಳಿಸುವತ್ತ ಗಮನಹರಿಸುವಂತೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡದರು.
*ಬಲದಂಡೆ ಯೋಜನೆಗೆ ಹೊಸ ಚೈತನ್ಯ*
ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಮಾರ್ಖಂಡೇಯ ಬಲದಂಡೆ ಯೋಜನೆಯ ಸುಧಾರಣೆ ಕುರಿತು ಚರ್ಚೆ ನಡೆಯಿತು. ಯೋಜನೆಯಡಿ ನೀರಾವರಿ ಸೌಲಭ್ಯ ಪರಿಣಾಮಕಾರಿಯಾಗಿ ರೈತರಿಗೆ ತಲುಪುವಂತೆ ಇರುವ ಸಮಸ್ಯೆಗಳನ್ನ ಗುರುತಿಸಿ, ಅಗತ್ಯ ಸುಧಾರಣಾ ಕಾಮಗಾರಿಗಳನ್ನ ಕೈಗೊಳ್ಳುವಂತೆ ಸೂಚಿಸಲಾಯಿತು.
ಯೋಜನೆಯ ಪ್ರಸ್ತುತ ಸ್ಥಿತಿ, ಬಾಕಿ ಇರುವ ಕಾಮಗಾರಿಗಳು ಹಾಗೂ ಎದುರಾಗಿರುವ ಸಮಸ್ಯೆಗಳನ್ನ ಪರಿಶೀಲಿಸಿ ರೈತರಿಗೆ ನೀರು ತಲುಪುವ ವ್ಯವಸ್ಥೆಯನ್ನ ಮತ್ತಷ್ಟು ಪರಿಣಾಮಕಾರಿಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
*ನೀರಾವರಿ ಯೋಜನೆಗಳಿಗೆ ವೇಗ ನೀಡುವ ಸಂದೇಶ*
ಮಾರ್ಖಂಡೇಯ ಜಲಾಶಯದ ನೀರು ಪೋಲು, ಡ್ಯಾಂ ಪುನಶ್ಚೇತನ, ಅಪೂರ್ಣ ಕಾಮಗಾರಿಗಳು ಹಾಗೂ ಬಲದಂಡೆ ಯೋಜನೆಯ ಸುಧಾರಣೆ – ಈ ನಾಲ್ಕು ಪ್ರಮುಖ ವಿಚಾರಗಳ ಬಗ್ಗೆ ನಡೆದ ಚರ್ಚೆ ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳತ್ತ ಸರ್ಕಾರದ ಗಮನವನ್ನ ಮತ್ತೊಮ್ಮೆ ಸೆಳೆಯಿತು.
ಅಧಿಕಾರಿಗಳು ಯೋಜನೆಗಳ ಕುರಿತು ಅಗತ್ಯ ಪರಿಶೀಲನೆ ನಡೆಸಿ, ಸಮಸ್ಯೆಗಳನ್ನ ಗುರುತಿಸಿ ಪರಿಹಾರ ಕ್ರಮಗಳನ್ನ ಕೈಗೊಳ್ಳಬೇಕು. ಕಾಮಗಾರಿಗಳಲ್ಲಿ ವಿಳಂಬವಾಗದಂತೆ ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವಂತೆಯೂ ಸಭೆಯಲ್ಲಿ ಸೂಚಿಸಲಾಯಿತು. ಸಭೆಯಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು, ಇಬ್ಬರು ಸಚಿವರ ಆಪ್ತ ಕಾರ್ಯದರ್ಶಿಗಳು ಹಾಗೂ ಇಂಜಿನಿಯರ್ ಗಳು ಉಪಸ್ಥಿತರಿದ್ದರು.