ಮಾನ – ಪ್ರಾಣ………..
ಮಾನ ಮರ್ಯಾದೆ ಉಳಿಸಿಕೊಳ್ಳಲು ಪ್ರಾಣ ಬಿಡಬೇಕೆ ?
ಪ್ರಾಣ ಉಳಿಸಿಕೊಳ್ಳಲು ಮಾನ ಮರ್ಯಾದೆ ಬಿಡಬೇಕೆ ?……
ಮಾನ ಮತ್ತು ಪ್ರಾಣ,
ಇವೆರಡರಲ್ಲಿ ಯಾವುದು ಮುಖ್ಯ ಮತ್ತು ಅನಿವಾರ್ಯವಾದಾಗ ಯಾವುದರ ರಕ್ಷಣೆಗೆ ನಾವು ಮಹತ್ವ ಕೊಡಬೇಕು. ಯಾವುದಕ್ಕಾಗಿ ನಾವು ಹೋರಾಡಬೇಕು………………..
ಎಲ್ಲರಿಗೂ ತಿಳಿದಿರುವಂತೆ ಹಿಂದಿನ ಕಾಲದಲ್ಲಿ ಮತ್ತು ಇಂದಿಗೂ ಜನಮಾನಸದಲ್ಲಿ ಮಾನಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಪ್ರಾಣ ಹೋದರೂ ಮಾನ ಕಾಪಾಡಿಕೊಳ್ಳಬೇಕು ಎಂಬ ಬಲವಾದ ನಂಬಿಕೆ ಇದೆ.
ಇದು ನಿಜವೇ ? ಸರಿಯೇ ? ಇಂದಿನ ಆಧುನಿಕ ಸಂಕೀರ್ಣ ಬದುಕಿನಲ್ಲೂ ಇದು ಪ್ರಸ್ತುತವೇ ?
ಒಮ್ಮೆ ಅವಲೋಕನ ಮಾಡಿಕೊಳ್ಳೋಣ……….
ಮಾನ ಎಂಬುದು ಭಾವ – ಭ್ರಮೆ – ನಂಬಿಕೆ – ಮಾನಸಿಕ ಸ್ಥಿತಿ. ಪ್ರಾಣ ಎಂಬುದು ವಾಸ್ತವ ಮತ್ತು ದೈಹಿಕ ಸ್ಥಿತಿ.
ಇಂದಿನ ಆಧುನಿಕ – ಸ್ಪರ್ಧಾತ್ಮಕ ಭಾರತೀಯ ಸಮಾಜ ಮತ್ತು ಮನಸ್ಥಿತಿಯಲ್ಲಿ ಮಾನ ಎಂಬುದು ತನ್ನ ನೈಜ ಅರ್ಥ ಮತ್ತು ಗುಣವನ್ನು ಕಳೆದುಕೊಂಡಿದೆ ಎನ್ನಬಹುದು. ಮಾನ ಒಂದು ವ್ಯಕ್ತಿತ್ವವನ್ನು ನಿರ್ಧರಿಸುವ ಮಾನದಂಡವಾಗಿ ಉಳಿದಿಲ್ಲ. ಅದನ್ನು ಕಳೆದುಕೊಳ್ಳಬಹುದು ಮತ್ತು ಗಳಿಸಿಕೊಳ್ಳಬಹುದು.
ಒಂದು ವೇಳೆ ಯಾವುದೋ ಕಾರಣದಿಂದ ನಿಮ್ಮ ಮಾನಹಾನಿಯಾಗಿದ್ದರೆ ಮುಂದೆ ಪ್ರತಿಭೆ, ಸಾಮರ್ಥ್ಯ, ದಿಟ್ಟತನ, ಆತ್ಮ ವಿಮರ್ಶೆ, ಸಾಧನೆ ಅಥವಾ ಹಣ, ಅಧಿಕಾರ, ಭಂಡತನ, ನಿರ್ಲಜ್ಜೆ, ವಿತಂಡ ಸಮರ್ಥನೆ, ಜನರನ್ನು ಮರುಳು ಮಾಡುವಿಕೆ ಮುಂತಾದ ಕ್ರಮಗಳ ಮುಖಾಂತರ ಅದನ್ನು ಮೇಲ್ನೋಟಕ್ಕಾದರೂ ಮರಳಿ ಪಡೆಯಬಹುದು. ಕೊಲೆ, ಅತ್ಯಾಚಾರ, ಭ್ರಷ್ಟಾಚಾರ ಮುಂತಾದ ಗಂಭೀರ ಪ್ರಕರಣಗಳಲ್ಲಿ ನೇರ ಸಿಕ್ಕಿ ಹಾಕಿಕೊಂಡು ಜೈಲುವಾಸ ಅನುಭವಿಸಿ ಬಂದ ನಂತರವೂ ಹಣಬಲ, ಜಾತಿಬಲ, ಅಧಿಕಾರಬಲ ಇರುವವನು ಮಾನ ಮರ್ಯಾದೆಯೂ ಸೇರಿದಂತೆ ಎಲ್ಲವನ್ನೂ ಮರಳಿ ಗಳಿಸಬಹುದು ಮತ್ತು ಗಳಿಸುತ್ತಿದ್ದಾರೆ. ಅದಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.
ಅಷ್ಟೇ ಏಕೆ ಸಾಮಾನ್ಯರು ಕೂಡ ಆಕಸ್ಮಿಕವಾಗಿ – ಅನಿವಾರ್ಯವಾಗಿ – ಪರಿಸ್ಥಿತಿಯ ಒತ್ತಡದಿಂದ ಒಂದು ವೇಳೆ ತಪ್ಪುಮಾಡಿ ಅವಮಾನಕ್ಕೆ ಗುರಿಯಾದರೂ ಮುಂದೊಂದು ದಿನ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ಮಾನವೀಯ ಅಂತಃಕರಣದಿಂದ ಸಮಾಜಮುಖಿ ಕೆಲಸಗಳನ್ನು ಮಾಡಿದರೆ ಹೋದ ಮಾನವನ್ನು ಸ್ವಲ್ಪಮಟ್ಟಿಗೆ ಮರಳಿ ಪಡೆಯಬಹುದು. ( ಅತ್ಯಂತ ಹುಟ್ಟಾ ಕ್ರಿಮಿನಲ್ ಗಳಿಗೆ ಇದು ಯಾವ ಕಾರಣಕ್ಕೂ ಅನ್ವಯಿಸುವುದಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಮತ್ತೆ ಮತ್ತೆ ಅದೇ ತಪ್ಪು ಮಾಡುವ ಕಿರಾತಕ ಮನೋಭಾವದವರನ್ನು ಈ ಲೇಖನದಿಂದ ಹೊರಗಿಡಲಾಗಿದೆ. ಸಾಮಾನ್ಯರ ಸಹಜ ಪರಿಸ್ಥಿತಿಯಲ್ಲಿ ಮಾತ್ರ ಇದನ್ನು ಪರಿಗಣಿಸಬೇಕು.)
ಅದರೆ ಪ್ರಾಣವನ್ನು ಒಮ್ಮೆ ಕಳೆದುಕೊಂಡರೆ ಮತ್ತೆಂದೂ ಅದನ್ನು ಗಳಿಸಲು ಸಾಧ್ಯವಿಲ್ಲ. ಅದೊಂದು ಅತ್ಯಮೂಲ್ಯ ಮತ್ತು ಪ್ರಕೃತಿಯ ವರ. ಅದನ್ನು ಕಾಪಾಡಿಕೊಳ್ಳುವುದೇ ನಮಗೆ ಬಹುಮುಖ್ಯ ಆದ್ಯತೆಯಾಗಬೇಕು. ಪ್ರಾಣ ಇದ್ದರೆ ಮಾತ್ರ ಉಳಿದದ್ದೆಲ್ಲಾ ಲೆಕ್ಕಕ್ಕೆ ಬರುತ್ತದೆ.
ಆದ್ದರಿಂದ,
ಪ್ರೀತಿಗಾಗಿ – ಕೌಟುಂಬಿಕ ಕಾರಣಗಳಿಗಾಗಿ – ಹಣಕಾಸಿನ ನಷ್ಟದಿಂದಾಗಿ ಅಥವಾ ಮತ್ಯಾವುದೇ ಕಾರಣದಿಂದಾಗಿ ನಿಮಗೆ ಅವಮಾನವಾಗಿ ಸಹಿಸಲಾಸಾಧ್ಯವಾದರೂ ಸಹ ಆತ್ಮಹತ್ಯೆ ಅಥವಾ ಕೊಲೆ ಮಾಡುವಂತ ಯಾವ ಜೀವಹಾನಿಯ ಕ್ರಮಗಳನ್ನೂ ಕೈಗೊಳ್ಳಬೇಡಿ.
” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ ”
ಜೀವವಿದ್ದರೆ ಎಲ್ಲವನ್ನೂ ಮರಳಿ ಪಡೆಯಬಹುದು.
ಅಂತಿಮವಾಗಿ ನನ್ನ ದೃಷ್ಟಿಯಲ್ಲಿ ಮಾನಕ್ಕಿಂತ ಪ್ರಾಣವೇ ಮುಖ್ಯ.
ಆದರೆ ಇದು ಅಪರಾಧವೆಸಗಲು ಸಿಕ್ಕ ಅನುಮತಿಯೆಂದು ಭಾವಿಸಬಾರದು. ಪರಿಸ್ಥಿತಿಯ ಒತ್ತಡದ ನಾಗರಿಕ ಪ್ರಜ್ಞೆ ಜಾಗೃತರಾಗಿರುವವರಿಗೆ ಮಾತ್ರ ಇದು ಅನ್ವಯ………..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ
ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…
ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…
ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…
ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್ಪಿ ಗುಂಜನ್…
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…