Categories: ಲೇಖನ

ಮಾತಿಗಿಂತ – ಬರಹಕ್ಕಿಂತ ಬದುಕಿನ ರೀತಿಯೇ ಮುಖ್ಯ….

ಹುತಾತ್ಮರ ದಿನದಂದು ಭಾರತೀಯ ನೆಲದ ಮಹಾತ್ಮರ ಹುಡುಕುತ್ತಾ…….

ಯಾರು ಮಹಾತ್ಮರು ಯಾರು ಹುತಾತ್ಮರು……

ಒಂದು ಹುಚ್ಚು ಪ್ರಶ್ನೆಗೆ ಸತ್ಯದ ಉತ್ತರ ಹುಡುಕುತ್ತಾ……

2025 ರ ವರೆಗಿನ ಭಾರತದ ಒಟ್ಟು ಇತಿಹಾಸದ ಪುಟಗಳಲ್ಲಿ ದಾಖಲಾದ ವ್ಯಕ್ತಿ ಮತ್ತು ಘಟನೆಗಳ ಆಧಾರದಲ್ಲಿ……

ಜೊತೆಗೆ ಹೆಚ್ಚು ಜನರ ಮನಸ್ಸಿನಲ್ಲಿ ಈಗಲೂ ಹರಿದಾಡುತ್ತಿರುವ ಜನಪ್ರಿಯತೆಯ ಮಾನದಂಡದಲ್ಲಿ,….

ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗೆ ಒಳಪಡುತ್ತಿರುವ ವ್ಯಕ್ತಿತ್ವಗಳ ‌ಆಧಾರದಲ್ಲಿ…………

ಮನುಷ್ಯನ ಮಾನಸಿಕ ಅಂತರಾಳವನ್ನು ಶೋಧಿಸಿ ಈ ಕ್ಷಣಕ್ಕೂ ಹೌದು ಹೌದು ಎನ್ನುವಷ್ಟು ವಿಷಯಗಳನ್ನು ಸ್ವತಃ ಅನುಭವದಿಂದ ನುಡಿದ
” ಗೌತಮ ಬುದ್ಧ ”
ಆಧ್ಯಾತ್ಮಿಕ ಮಹಾತ್ಮ…….

ಸಾಹಿತ್ಯದಲ್ಲಿಯೇ ಬದುಕು, ಸಮಾಜ ಸೇರಿ ತ್ರಿಲೋಕಗಳನ್ನು ವರ್ಣಿಸಿ ಜಗತ್ತಿನ ಅದ್ಬುತ ಗ್ರಂಥ ಮಹಾಭಾರತ ರಚಿಸಿದ
” ವ್ಯಾಸ ”
ಸಾಹಿತ್ಯದ ಮಹಾತ್ಮ….

ಆಡಳಿತಾತ್ಮಕ ನೀತಿ ನಿಯಮಗಳನ್ನು ಎಲ್ಲಾ ತಂತ್ರಗಳಿಂದ ನಿಯಂತ್ರಿಸಿ ರಾಜ್ಯ ಕಟ್ಟುವ – ಬೆಳೆಸುವ – ನಿಯಂತ್ರಿಸುವ ಮಾನದಂಡಗಳನ್ನು ಅತ್ಯಂತ ವಾಸ್ತವ ನೆಲೆಯಲ್ಲಿ ಹೇಳಿದ
” ಚಾಣಕ್ಯ ”
ರಾಜಕೀಯ ಮಹಾತ್ಮ……..

ಸಮ ಸಮಾಜದ ಕನಸಿಗೆ ಗಿಡ ನೆಟ್ಟು ಬೆಳೆಸಿ ಈಗಲೂ ಸಮೃದ್ಧ ಚಿಂತನೆಯ ಫಸಲನ್ನು ನೀಡುತ್ತಿರುವ
” ಬಸವಣ್ಣ ”
ಸಾಮಾಜಿಕ ಮಹಾತ್ಮ……..

ಸಿಂಧೂ ನಾಗರಿಕತೆಯ ಜೀವನಶೈಲಿಯ ಹಿಂದೂ ಸಂಸ್ಕೃತಿಯ ಮಹತ್ವದ ಚಿಂತನೆಗಳನ್ನು ಇಂದಿಗೂ ಜೀವಂತವಿಟ್ಟಿರುವ
” ಶಂಕರಾಚಾರ್ಯ ”
ಧಾರ್ಮಿಕ ಮಹಾತ್ಮ………

ಭಾರತದ ನಿಜವಾದ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿ ಹಿಡಿದು ಅದನ್ನು ವಿಶ್ವಕ್ಕೆ ಸಾರಿದ
” ಸ್ವಾಮಿ ವಿವೇಕಾನಂದ ” ಸಾಂಸ್ಕೃತಿಕ ಮಹಾತ್ಮ…….

ಶತಶತಮಾನಗಳ ಶೋಷಿತರಿಗೆ ಧ್ವನಿಯಾಗಿ ಇಡೀ ಬದುಕನ್ನು ಅವರಿಗಾಗಿ ಮೀಸಲಿಟ್ಟು ಇತಿಹಾಸ ಕಂಡರಿಯದ ಅಧ್ಯಯನದಿಂದ ಅನೇಕ ಸಮುದಾಯಗಳಿಗೆ ಸ್ವಾಭಿಮಾನದ ಜೀವನ ನೀಡಿದ
” ಅಂಬೇಡ್ಕರ್ ” ಹೋರಾಟಗಳ ಮಹಾತ್ಮ…….

ಹೀಗೆ ಇನ್ನೂ ಕೆಲವರನ್ನು ಹೆಸರಿಸಬಹುದು.

ಆದರೆ, ಮೋಹನ್‌ ದಾಸ್ ಕರಮಚಂದ್ ಗಾಂಧಿ ಮಹಾತ್ಮರಲ್ಲಿ ಮಹಾತ್ಮ……

ಹೇಗೆ ಎಂಬ ಕುತೂಹಲ ನಿಮಗಿದ್ದರೆ ದಯವಿಟ್ಟು ಸೂಕ್ಷ್ಮವಾಗಿ ಗಮನಿಸಿ…

ಮೇಲೆ ವಿವರಿಸಿದ ಎಲ್ಲಾ ಮಹಾತ್ಮರು ಬದುಕಿನ ಮತ್ತು ಸಮಾಜದ ಅಸಮಾನತೆ, ಅಮಾನವೀಯ ವ್ಯವಸ್ಥೆಯ ಬಗ್ಗೆ, ಜೀವನದ ಗುಣಮಟ್ಟ – ನೆಮ್ಮದಿಯ ಹೆಚ್ಚಿಸುವ ಅಂಶಗಳ ಬಗ್ಗೆ ನಿರಂತರ ಅಧ್ಯಯನ ಮತ್ತು ಹೋರಾಟ ಮಾಡಿದವರು…..

ಆದರೆ ಗಾಂಧಿ ಅಧ್ಯಯನ – ಹೋರಾಟ – ಬದುಕು – ಬರಹಗಳು – ಚಿಂತನೆಗಳಲ್ಲಿ ಸತ್ಯದೊಂದಿಗೆ ಪ್ರಯೋಗ ಮಾಡಿದವರು. ನೈತಿಕತೆಯ ವಿಷಯದಲ್ಲಿ – ಸತ್ಯದ ಹುಡುಕಾಟದಲ್ಲಿ ಜಗತ್ತಿನ ಮಾದರಿ ಗಾಂಧಿ…..

ಗಾಂಧಿ ಒಂದು ಜೀವನ ವಿಧಾನ, ಗಾಂಧಿ ಒಬ್ಬ ನಾಗರಿಕ ಸಮಾಜದ ಆದರ್ಶ ಮಾನವ, ಗಾಂಧಿ ದೈವಿಕ ಪ್ರಜ್ಞೆಯ ನಿಜ ಮನುಷ್ಯ…..

ಸತ್ಯವೆಂಬುದೇ ಒಂದು ಸಂಕೀರ್ಣ ಭಾವ, ಅದರೊಂದಿಗೆ ಪ್ರಯೋಗ ಬಹುತೇಕ ಸಾಮಾನ್ಯ ಜನರಿಗೆ ಹುಚ್ಚುತನದಂತೆ ಕಾಣುತ್ತದೆ. ಸತ್ಯಕ್ಕೆ ಮಿತಿ ಇಲ್ಲ, ಸಾವಿಲ್ಲ, ಸೋಲೂ ಇಲ್ಲ, ಗೆಲುವೂ ಇಲ್ಲ.
ಅದೊಂದು ನಿರಂತರ ಪ್ರಯೋಗ……

ಅಂಬೇಡ್ಕರ್ ಅವರ ಹೋರಾಟ ಎಲ್ಲಾ ಶೋಷಿತರ ಪರ. ನೇರ ಮತ್ತು ಸ್ಪಷ್ಟ. ತಮ್ಮ ಚಿಂತನೆಗಳಲ್ಲಿ ಯಾವುದೇ ಗೊಂದಲಗಳಿರಲಿಲ್ಲ. ಅಪಾರ ಅಧ್ಯಯನ ಮತ್ತು ಅನುಭವದ ಆಧಾರದ ಮೇಲೆ ಚಿಂತನೆಗಳನ್ನು ರೂಪಿಸಿಕೊಂಡವರು….

ಬಸವಣ್ಣನವರು ಸಹ ಸಮ ಸಮಾಜದ ಸ್ಪಷ್ಟ ಕಲ್ಪನೆಯೊಂದಿಗೆ ಹೋರಾಡಿದವರು. ಇಡೀ ಸಮಾಜದ ತಾರತಮ್ಯದ ಎಲ್ಲವನ್ನೂ ತಿರಸ್ಕರಿಸಿ ಎಲ್ಲಾ ಮನುಷ್ಯರು ಒಂದೇ ಎಂದು ಹೇಳಿದರು……

ಆದರೆ ಗಾಂಧಿಯವರ ಚಿಂತನೆಗಳು ಪ್ರಯೋಗಾತ್ಮಕ ಮತ್ತು ಸತ್ಯದ ಹುಡುಕಾಟ. ವೈಯಕ್ತಿಕ ಅಥವಾ ಸಾಮಾಜಿಕ ಪರಿಣಾಮಗಳನ್ನು ಅವರು ಲೆಕ್ಕಿಸದೆ ಸತ್ಯದೊಂದಿಗೆ ನಿರಂತರ ಸಂವಾದ ನಡೆಸಿದವರು…..

ವರ್ಣಾಶ್ರಮ ವ್ಯವಸ್ಥೆ, ಬ್ರಿಟಿಷರ ವಿರುದ್ಧ ಹೋರಾಟ, ಅಂಬೇಡ್ಕರ್ ಅವರೊಂದಿಗೆ ಘರ್ಷಣೆ, ಸುಭಾಷ್ ಚಂದ್ರ ಬೋಸರ ವಿರೋಧ, ರಾಮನ ಆದರ್ಶ, ಗೋಹತ್ಯೆ, ಮೀಸಲಾತಿ, ಸತ್ಯಾಗ್ರಹ, ಅಹಿಂಸೆ, ಸರಳತೆ, ಪಾಕಿಸ್ತಾನದ ಪರ ಉಪವಾಸ ಮುಷ್ಕರ ಎಲ್ಲದರಲ್ಲೂ ಅವರು ಸತ್ಯವನ್ನು ಸಮೀಕರಿಸಿ ಹೋರಾಟ ಮಾಡುತ್ತಿದ್ದರು ಅಥವಾ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಸ್ವತಃ ಹೆಂಡತಿ ಮಕ್ಕಳ ವಿಷಯದಲ್ಲಿ ಕೊನೆಗೆ ತಮ್ಮ ಜೀವನ ವಿಧಾನದಲ್ಲೂ ಸತ್ಯವನ್ನೇ ಪ್ರಯೋಗಿಸಿ ಹುಚ್ಚು ಮತ್ತು ಹಠಮಾರಿ ಧೋರಣೆ ಪ್ರದರ್ಶಿಸಿದರು……

ಕೆಲವೊಮ್ಮೆ ಇವರ ಈ ಪ್ರಯೋಗಗಳನ್ನು ನೋಡಿದ ಅವರ ಅತ್ಯಾಪ್ತ ಅಭಿಮಾನಿಗಳೇ ” ಈ ಮನುಷ್ಯ ಅಹಿಂಸೆ ಹೆಸರಿನಲ್ಲಿ ನಮಗೆಲ್ಲಾ ತುಂಬಾ ಹಿಂಸೆ ಕೊಡುತ್ತಿದ್ದಾರೆ ” ಎಂದು ಗೊಣಗುತ್ತಿದ್ದರು……

ಬೇರೆ ಎಲ್ಲಾ ಮಹಾತ್ಮರ ಚಿಂತನೆಗಳನ್ನು ನೀವು ಓದು, ಅಧ್ಯಯನದ ಮುಖಾಂತರ ಗ್ರಹಿಸಬಹುದು. ಆದರೆ ಗಾಂಧಿಯವರನ್ನು ಗ್ರಹಿಸಲು ಕೇವಲ ಓದು ಅಧ್ಯಯನ ಸಾಕಾಗುವುದಿಲ್ಲ. ಬದುಕಿನ ಬಹುದೊಡ್ಡ ಅನುಭವ ಬೇಕಾಗುತ್ತದೆ. ಇಲ್ಲದಿದ್ದರೆ ಗಾಂಧಿ ಒಬ್ಬ ಹುಚ್ಚನಂತೆ ಮಾತ್ರ ಕಾಣುತ್ತಾರೆ…..

ಅಂಬೇಡ್ಕರ್ ಅವರನ್ನು ಇಡೀ ಶೋಷಿತ ಸಮುದಾಯ ದೇವರಿಗಿಂತ ಹೆಚ್ಚಿಗೆ ಅಭಿಮಾನಿಸುತ್ತಾರೆ. ಅದಕ್ಕೆ ಅವರು ಅರ್ಹರು ಸಹ. ಏಕೆಂದರೆ ಅವರಿಗೆ ನಿಜವಾದ ಸ್ವಾಭಿಮಾನದ ಬದುಕು ನೀಡಿದವರೇ ಅಂಬೇಡ್ಕರ್…..

ಬಸವಣ್ಣನವರು ಅನೇಕ ಸಮುದಾಯಗಳಿಗೆ ಸ್ವತಃ ದೇವರು. ಅವರ ಚಿಂತನೆಗಳೇ ಒಂದು ಧರ್ಮದ ಸ್ಥಾಪನೆಗೆ ಕಾರಣವಾಗಿದೆ…..

ಶಂಕರಾಚಾರ್ಯರನ್ನು ಸಹ ಕೆಲವು ಸಮುದಾಯಗಳು ದೇವರ ಸಮನಾಗಿ ಕಾಣುತ್ತಾರೆ……

ಆದರೆ ಗಾಂಧಿಯವರಿಗೆ ಈ ರೀತಿಯ ಯಾವುದೇ ಬೆಂಬಲವಿಲ್ಲ. ಅವರ ಪರವಾಗಿ ಬಲವಾಗಿ ನಿಲ್ಲುವವರು ಇಲ್ಲ. ಅವರ ಪ್ರತಿಮೆಗೆ ಮತ್ತೆ ಮತ್ತೆ ಗುಂಡಿಟ್ಟು ಕೊಂದು ಅದನ್ನು ಆನಂದಿಸುವವರು ಬಹಳಷ್ಟು ಜನರಿದ್ದಾರೆ. ಅಂಬೇಡ್ಕರ್, ಬಸವಣ್ಣ, ಶಂಕರಾಚಾರ್ಯ, ಮುಂತಾದವರ ಬಗ್ಗೆ ಟೀಕೆ ಮಾಡಿ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಗಾಂಧಿಯನ್ನು ಒಂದು ಬೆದರು ಗೊಂಬೆಯಾಗಿ ನಿಲ್ಲಿಸಿ ನಿಮ್ಮ ಮನಸ್ಸೋ ಇಚ್ಚೆ ನಿಂದಿಸಬಹುದು. ಯಾರೂ ಕೇಳುವುದಿಲ್ಲ. ಯಾರೋ ಕೆಲವು ವಯಸ್ಸಾದವರು ಅಯ್ಯೋ ಹಾಗೆ ಮಾಡಬೇಡಿ ಎಂದು ವಿನಯ ಪೂರ್ವಕ ಬುದ್ದಿವಾದ ಹೇಳಿ ಮುಂದೆ ಸಾಗುತ್ತಾರೆ…..

ಅದಕ್ಕೆ ಕಾರಣ ಸತ್ಯದ ಹುಡುಕಾಟ ಜಾತಿ, ಭಾಷೆ, ಸಮುದಾಯ, ಧರ್ಮ, ಪ್ರದೇಶಗಳನ್ನು ಮೀರಿದ್ದು. ಅದು ಯಾರಿಗೂ ಸರಿಯಾಗಿ ಅರ್ಥವಾಗುವುದೇ ಇಲ್ಲ. ಎಲ್ಲರೂ ಅವರವರ ಭಾವಕ್ಕೆ ಅರ್ಥೈಸಿಕೊಳ್ಳುತ್ತಾರೆ…..

ನೆಹರು ಕುಟುಂಬದ ಮೇಲಿನ ಕೋಪ, ಮುಸ್ಲಿಮರು ಮತ್ತು ಪಾಕಿಸ್ತಾನದ ಮೇಲಿನ ಕೋಪ, ಸ್ವಾತಂತ್ರ್ಯಕ್ಕೆ ಅವರೊಬ್ಬರೇ ಹೋರಾಡಿದರು ಎಂಬ ತಪ್ಪು ಕಲ್ಪನೆ, ವಿವಿಧ ಸಿದ್ದಾಂತಗಳ ಶರಣಾಗತಿ, ಪ್ರಾರಂಭದ ವರ್ಣಾಶ್ರಮ ವ್ಯವಸ್ಥೆಯ ಪರ ನಿಲುವು, ಮಹಿಳಾ ಸ್ವಾತಂತ್ರ್ಯದ ವಿರೋಧ, ಗಾಂಧಿ ನಿರ್ಧಾರಗಳ ಈಗಿನ ಫಲಿತಾಂಶ ಇವುಗಳ ಆಧಾರದಲ್ಲಿ ಗಾಂಧಿ ಸಿಗುವುದಿಲ್ಲ…..

ಇಂದಿನ ದಿನಮಾನಗಳಲ್ಲಿ ಗಾಂಧಿಯ ಟೀಕೆ ಅತ್ಯಂತ ಸಹಜ ಮತ್ತು ವಾಸ್ತವ. ಅದಕ್ಕೆ ಅವರು ಅರ್ಹರು ಸಹ. ಏಕೆಂದರೆ ನೈತಿಕ ಮೌಲ್ಯಗಳ ನಾಗರಿಕ ಸಮಾಜ ಅವನತಿಯತ್ತ ಸಾಗುತ್ತಾ, ಹಣ ಕೇಂದ್ರೀಕೃತ ವ್ಯಾವಹಾರಿಕ ಜಗತ್ತಿನಲ್ಲಿ, ಮುಖವಾಡಗಳ ಮರೆಯಲ್ಲಿ, ಆತ್ಮವಂಚಕ ಮನಸ್ಥಿತಿಯ ಜನರಿಗೆ ಗಾಂಧಿ ಕಿರಿಕಿರಿಯ ವಿಲನ್…….

ಸತ್ಯದೊಂದಿಗೆ ಅವರ ನಿಷ್ಠೆ ಯಾವ ಪ್ರಮಾಣದಲ್ಲಿ ಇತ್ತು ಎಂಬುದನ್ನು ಒಂದು ಸಣ್ಣ ಕಥೆಯೊಂದಿಗೆ ಮುಗಿಸುತ್ತಿದ್ದೇನೆ.

ಒಮ್ಮೆ ಬ್ರಿಟಿಷ್ ವ್ಯಕ್ತಿಯೊಬ್ಬ ಗಾಂಧಿಯವರ ಬಳಿ ಅವರ ಸತ್ಯ ನಿಷ್ಠೆಯನ್ನು ಪ್ರಶ್ನೆ ಮಾಡುವ ಅಥವಾ ಅವಹೇಳನ ಮಾಡುವ ರೀತಿಯಲ್ಲಿ ಅವರಿಗೆ ಹೀಗೆ ಹೇಳುತ್ತಾನೆ.

” ಗಾಂಧಿಯವರೆ, ನಿಮ್ಮ ಕಠೋರ ಸತ್ಯ ಎಷ್ಟೊಂದು ಅಮಾನವೀಯ ಗೊತ್ತೆ. ಒಮ್ಮೆ ಒಬ್ಬ ಬೇಟೆಗಾರ ಒಂದು ಜಿಂಕೆಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬರುತ್ತಾನೆ. ಅವನಿಂದ ತಪ್ಪಿಸಿಕೊಂಡು ಓಡುತ್ತಾ ಬರುವ ಜಿಂಕೆ ದಾರಿಯಲ್ಲಿ ಒಂದು ಮರದ ಕೆಳಗೆ ತಪಸ್ಸು ಮಾಡುತ್ತಾ ಕುಳಿತಿದ್ದ ಮಹಾನ್ ಸತ್ಯಸಂಧ ಮುನಿಯ ಬಳಿ ” ಅಯ್ಯಾ ಋಷಿ , ಬೇಟೆಗಾರನೊಬ್ಬ ನನ್ನನ್ನು ಕೊಲ್ಲಲು ಬರುತ್ತಿದ್ದಾನೆ. ದಯವಿಟ್ಟು ರಕ್ಷಿಸು. ತಪ್ಪಿಸಿಕೊಳ್ಳಲು ಜಾಗ ತೋರಿಸು ” ಎಂದು ಕೇಳಿಕೊಳ್ಳುತ್ತದೆ.

ಆಗ ಋಷಿ ‘ ಆಯಿತು. ಇಲ್ಲೇ ನನ್ನ ಹಿಂದೆ ಇರುವ ಆ ಗುಹೆಯಲ್ಲಿ ಅಡಗಿಕೋ’ ಎಂದು ಹೇಳುತ್ತಾನೆ.

ಸ್ವಲ್ಪ ಹೊತ್ತಿನಲ್ಲಿ ಜಿಂಕೆಯನ್ನು ಹುಡುಕುತ್ತಾ ಅದೇ ದಾರಿಯಲ್ಲಿ ಬಂದ ಬೇಟೆಗಾರ ಅಲ್ಲಿದ್ದ ಅದೇ ಮುನಿಯನ್ನು ‘ ಋಷಿವರ್ಯ ನಾನೊಂದು ಜಿಂಕೆಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬಂದೆ ನೀವೇನಾದರೂ ನೋಡಿದಿರೆ ‘

ಅದಕ್ಕೆ ಎಂದೂ ಸುಳ್ಳಾಡದ ಆ ಮುನಿ ‘ ಹೌದು ನೋಡಿದೆ ‘ ಎನ್ನುತ್ತಾನೆ. ಬೇಟೆಗಾರ ‘ ಹಾಗಾದರೆ ಎಲ್ಲಿ ಹೋಯಿತು ‘

ಆಗ ಮುನಿ ‘ ನನ್ನನ್ನು ರಕ್ಷಣೆಗಾಗಿ ಕೇಳಿಕೊಂಡಿತು. ನಾನೇ ಹಿಂದೆ ಇರುವ ಗುಹೆಯಲ್ಲಿ ಬಚ್ಚಿಟ್ಟುಕೊಳ್ಳಲು ಹೇಳಿದ್ದೇನೆ ‘

ಅದನ್ನು ಕೇಳಿದ ಬೇಟೆಗಾರ ಗುಹೆಗೆ ಹೋಗಿ ಜಿಂಕೆಯನ್ನು ಕೊಂದು ಹೊತ್ತೊಯ್ಯುತ್ತಾನೆ.”

ಈ ಕಥೆಯನ್ನು ಗಾಂಧಿಗೆ ಹೇಳಿದ ಆ ಬ್ರಿಟಿಷ್
” ನೋಡಿದಿರಾ ಗಾಂಧಿ, ಸಾಮಾನ್ಯ ಸಮಯ ಪ್ರಜ್ಞೆ ಇಲ್ಲದ ಮುನಿ ಒಂದು ಸಣ್ಣ ಸುಳ್ಳು ಹೇಳಿದ್ದರೆ ಆ ಅಮಾಯಕ ಜಿಂಕೆಯ ಪ್ರಾಣ ಉಳಿಸಬಹುದಿತ್ತು. ನಿಮ್ಮ ಆ ಸತ್ಯ ಕೂಡ ಕೆಲವೊಮ್ಮೆ ಎಷ್ಟೊಂದು ಕಠೋರ ”

ಅದಕ್ಕೆ ಗಾಂಧಿಯ ಉತ್ತರ
” ಗೆಳೆಯ, ನಿಮ್ಮ ಕಥೆಯಲ್ಲಿ ತಪ್ಪು ಸತ್ಯದ್ದಲ್ಲ. ಅದು ಋಷಿಮುನಿಯದು. ಒಂದು ವೇಳೆ ನಾನು ಋಷಿಯ ಜಾಗದಲ್ಲಿದ್ದಿದ್ದರೆ ಬೇಟೆಗಾರ ಬಂದು ಕೇಳಿದಾಗ ‘ ಹೌದು ಜಿಂಕೆಯನ್ನು ನಾನೇ ಬಚ್ಚಿಟ್ಟಿದ್ದೇನೆ, ಅದು ಇರುವ ಜಾಗ ತಿಳಿದಿದೆ. ಆದರೆ ಅದನ್ನು ನೀನು ಕೊಲ್ಲುವುದರಿಂದ ಅದು ಎಲ್ಲಿದೆ ಎಂದು ಹೇಳುವುದಿಲ್ಲ. ಅದಕ್ಕಾಗಿ ನನ್ನ ಪ್ರಾಣ ತ್ಯಾಗಕ್ಕೂ ಸಿದ್ದ ಎಂದೇ ಹೇಳುತ್ತೇನೆ.

ಸಮಸ್ಯೆ ಇರುವುದು ಸತ್ಯದ ಆಳದಲ್ಲಿ ಅಲ್ಲ.ಅದರ ಆಚರಣೆಗಳ ಪ್ರಾಮಾಣಿಕತೆಯಲ್ಲಿ.” ಎನ್ನುತ್ತಾರೆ.

ಮುಂದಿನ ವಿವರಣೆ ಬೇಕಿಲ್ಲ ಅಲ್ಲವೇ ?

Nobility of the Values ಅಂದರೆ ಇದೇ.
ಮಾತಿಗಿಂತ – ಬರಹಕ್ಕಿಂತ ಬದುಕಿನ ರೀತಿಯೇ ಮುಖ್ಯ.
ಮೌಲ್ಯಗಳ ಪ್ರವಚನಕ್ಕಿಂತ ಅಳವಡಿಕೆಯೇ ನಮ್ಮ ಗುರಿಯಾಗಲಿ ಎಂಬ ಆಶಯದೊಂದಿಗೆ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಅಗಸ್ತ್ಯ ಅಂತರರಾಷ್ಟ್ರೀಯ ಸಂಸ್ಥೆ ವತಿಯಿಂದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ: ವಿಜೇತರಿಗೆ ಬಹುಮಾನ ವಿತರಣೆ

ಫೆ.24ರಂದು ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಅಗಸ್ತ್ಯ ಅಂತರರಾಷ್ಟ್ರೀಯ ಸಂಸ್ಥೆಯ ವತಿಯಿಂದ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ…

35 minutes ago

ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ: ಚಿಕಿ*ತ್ಸೆ ಫಲಕಾರಿಯಾಗದೆ ಸಾವು: ಪ್ರತಿಭಟನೆ ಮತ್ತು ಪ್ರಕರಣ ದಾಖಲು

ಹಾಸನ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯೊಬ್ಬರು ಚಿಕಿ*ತ್ಸೆ ಫಲಕಾರಿಯಾಗದೆ ಮೃ*ಪಟ್ಟ ಘಟನೆ ಹಾಸನ ನಗರದ ಹಿಮ್ಸ್ (HIMS) ಆಸ್ಪತ್ರೆಯಲ್ಲಿ ನಡೆದಿದೆ.…

12 hours ago

ತೂಬಗೆರೆಯ ದೊಡ್ಡಮ್ಮ ದೇವಾಲಯದಲ್ಲಿ ಕಳ್ಳತನ: ಹುಂಡಿ, ತಾಳಿ, ಆಭರಣ ಕಳವು

ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮದ ದೊಡ್ಡಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮಂಗಳವಾರ ಬೆಳಿಗ್ಗೆ ದೇವಾಲಯದ ಬಾಗಿಲಿನ ಬೀಗ…

13 hours ago

ಸಂಬಳಕ್ಕಾಗಿ ಕಾರ್ಮಿಕರಿಂದ ಕಾರ್ಖಾನೆ ಮುಂದೆ ಪ್ರತಿಭಟನೆ

ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆ(ಶೈಲೇಂದ್ರ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್)ಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ…

14 hours ago

ನೆಲಮಂಗಲ ನಗರಸಭೆಯ ಏಳು ಸದಸ್ಯರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ಎಬಿ ಬಸವರಾಜು ಆದೇಶ

ಕರ್ನಾಟಕ ಸ್ಥಳೀಯ ಸಂಸ್ಥೆಗಳ(ಪಕ್ಷಾಂತರ ನಿಷೇಧ) ಅಧಿನಿಯಮ 4(2)(|||) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ನೆಲಮಂಗಲ ನಗರಸಭೆಯ ಏಳು ಸದಸ್ಯರನ್ನು ಅನರ್ಹಗೊಳಿಸಿ…

16 hours ago

ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯ ಹತ್ಯೆ

ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ. ನನ್ನ ಮೊಮ್ಮಗ ಯಾರ ತಂಟೆಗೂ…

23 hours ago