ಸ್ವಾಮಿಯೇ……..
ಶರಣಂ ಅಯ್ಯಪ್ಪ………
ಮಹಿಳೆಯರಿಗೆ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶ ನೀಡಬೇಕೆ ? ಬೇಡವೇ ? ಎಂಬ ಬಗ್ಗೆ ಮತ್ತೆ ಸುಪ್ರೀಂಕೋರ್ಟಿನಲ್ಲಿ ವಾದ ವಿವಾದ ಪ್ರಾರಂಭವಾಗಿದೆ. ಕೇಂದ್ರ ಮತ್ತು ಕೇರಳ ಸರ್ಕಾರಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸ್ವತಃ ಅಯ್ಯಪ್ಪ ಸ್ವಾಮಿ ಇದ್ದಿದ್ದರೆ ಹೇಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು ಎಂಬ ಕಲ್ಪನೆ……
ನಾನು ಅಯ್ಯಪ್ಪ ……….
ಶಬರಿಮಲೆಯಿಂದ ನೇರವಾಗಿ ಮಾತನಾಡುತ್ತಿದ್ದೇನೆ……….
ನನ್ನ ಎಲ್ಲಾ ಭಕ್ತರಿಗೂ ಆಶೀರ್ವಾದ ಮಾಡುತ್ತಾ………….
ಪ್ರೀತಿಯ ನನ್ನ ಅನುಯಾಯಿಗಳೇ…….
ಹೆಣ್ಣು ಇನ್ನೂ ಅಬಲೆಯಾಗಿದ್ದ, ಆಕೆಗೆ ರಕ್ಷಣೆಯೇ ಇಲ್ಲದ, ಆಕೆಯನ್ನು ಭೋಗದ ವಸ್ತುವಾಗಿ ನೋಡುತ್ತಿದ್ದ ದಿನಗಳಲ್ಲಿ ಅದರಲ್ಲೂ 10/50 ವಯಸ್ಸಿನ ಹೆಣ್ಣು ಮಕ್ಕಳನ್ನು ಜೋಪಾನ ಮಾಡುವುದೇ ಒಂದು ಬಹುದೊಡ್ಡ ಸವಾಲು ಆಗಿದ್ದ ಸಂದರ್ಭದಲ್ಲಿ , ಜೊತೆಗೆ ಗಂಡಿನ ಅರಿಷಡ್ವರ್ಗಗಳ ನಿಯಂತ್ರಣಕ್ಕಾಗಿ ನಾನು ನೆಲೆಸಿದ ದಟ್ಟ ಅರಣ್ಯ ಪ್ರದೇಶದಲ್ಲಿ ಒಂದು ನಿರ್ಧಿಷ್ಟ ವಯಸ್ಸಿನ ಹೆಂಗಸರನ್ನು ನಿಷೇಧಿಸಲಾಗಿತ್ತು.
ಅದಕ್ಕೆ ಆಗಿನ ಕಾಲದಲ್ಲಿ ಬಲವಾದ ಕಾರಣ ಇರಬಹುದು.. ಬಹುಶಃ ಅದಕ್ಕಾಗಿಯೇ ನನ್ನನ್ನು ನೋಡಿಕೊಳ್ಳುತ್ತಿದ್ದ ಆಡಳಿತ ಮಂಡಳಿ ಈ ನಿರ್ಧಾರ ಮಾಡಿರಬೇಕು. ಮುಂದೆ ಅದೇ ಸಂಪ್ರದಾಯವಾಗಿ ಬೆಳೆದು ಬಂದಿತು.. ಹೀಗೆ ಅವರು ಹೇಳಿದ್ದರಿಂದ ನಿಜ ಇರಬಹುದು ಎಂದು ನಾನು ಸುಮ್ಮನಿದ್ದೆ. ಏಕೆಂದರೆ ಭಕ್ತರ ಆಸೆಗೆ ನಾನು ಎಂದೂ ಅಡ್ಡಿಬರುವುದಿಲ್ಲ. ಅದರಿಂದಲೇ ನಾನು ಕಲ್ಲಾಗಿರುವುದು.
ಆದರೆ ,….
ಇಂದು ಮಾತನಾಡಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ. ಸುಪ್ರೀಂಕೋರ್ಟಿನಲ್ಲಿ ವಾದ ವಿವಾದ ನಡೆಯುತ್ತಿದೆ. ದೇವರ ನಾಡಿನಲ್ಲಿ ಗಲಭೆಗಳಾಗುತ್ತಿದೆ. ನನ್ನ ಮೇಲಿನ ನಂಬಿಕೆ ಕುಸಿಯುತ್ತಿದೆ. ಅದಕ್ಕಾಗಿ ನಿಮ್ಮ ಮುಂದೆ…….
ನನ್ನ ನಿರೀಕ್ಷೆಯನ್ನು ಮೀರಿ ಆಧುನಿಕತೆ ಬೆಳೆದು ಜನಸಂಖ್ಯೆಯ ಸ್ಪೋಟವಾಗಿ ಕಾಡು ನಾಶವಾಗಿ, ಕಾನೂನು ಪೋಲೀಸ್ ವ್ಯವಸ್ಥೆ ಜಾರಿಗೆ ಬಂದು, ಹೆಣ್ಣಿಗೂ ಸ್ವಾತಂತ್ರ್ಯ ಸಮಾನತೆ ಸಿಕ್ಕಿ ಗಂಡು ಹೆಣ್ಣಿನ ನಡುವಿನ ಅಂತರ ಕಡಿಮೆಯಾಯಿತು. ಹೆಣ್ಣಿಗೆ ರಕ್ಷಣೆಯೂ ಸಿಕ್ಕಿದೆ. ಕ್ರೀಡೆ, ವಿಜ್ಞಾನ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿ ಆದ ಕ್ರಾಂತಿಕಾರಕ ಬದಲಾವಣೆಗಳಿಂದ ಮುಟ್ಟು ಮೈಲಿಗೆ ಎಂಬುದು ತನ್ನ ನಂಬಿಕೆಯ ಮಹತ್ವವನ್ನು ಕಳೆದುಕೊಂಡು ಅದು ಒಂದು ಪ್ರಕೃತಿಯ ಸಹಜ ಕ್ರಿಯೆ ಎಂದು ಪರಿಗಣಿಸಲ್ಪಟ್ಟಿತು. ಮುಟ್ಟೇ ಹುಟ್ಟಿನ ಮೂಲ ಎಂದು ಎಲ್ಲರಿಗೂ ಖಚಿತವಾಯಿತು.
ಹೆಣ್ಣು, ಗಂಡಸರು ಮಾಡುವ ಬಹುತೇಕ ಎಲ್ಲಾ ಕೆಲಸಗಳನ್ನು ಮಾಡುವಂತಾದರು. ಸೈನ್ಯ, ರಾಜಕೀಯ, ಆಡಳಿತ, ವಾಹನ ಚಾಲನೆ ಹೀಗೆ ಎಲ್ಲವೂ ಪುರುಷ ಸಮಾನವಾಗಿ ದುಡಿಯಲು ಸಾಧ್ಯವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ,
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ,
ಸಂವಿಧಾನ ಅಡಿಯಲ್ಲಿ,
ಸುಪ್ರೀಂಕೋರ್ಟ್ ಎಂಬ ನ್ಯಾಯಾಲಯ ಸ್ಥಾಪಿಸಿಕೊಂಡು ಅದರ ಅಣತಿಯಂತೆ ಬದುಕುತ್ತಿರುವಾಗ ಈಗ ಮಹಿಳೆಯರಿಗೆ ನನ್ನ ದೇವಸ್ಥಾನಕ್ಕೆ ಪ್ರವೇಶ ಇಲ್ಲ ಎನ್ನುವುದು ಸರಿಯಲ್ಲ. ಅದು ನೀವು ನನಗೆ ಮಾಡುವ ಅವಮಾನ ಮತ್ತು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವಂತಹುದು.
ಭಕ್ತರೇ……
ಸಣ್ಣ ವಯಸ್ಸಿನಿಂದ ಗಂಡು ಹೆಣ್ಣುಗಳು, ಶಾಲೆಯೂ ಸೇರಿ ಎಲ್ಲಾ ಕಡೆ ಒಟ್ಟಿಗೆ ಇರುತ್ತೀರಿ. ಉದ್ಯೋಗ, ಮದುವೆ, ಪ್ರೀತಿ, ಪ್ರೇಮ, ಪ್ರಣಯ, ಸಂಸಾರ ಎಲ್ಲವೂ ಇಬ್ಬರೂ ಜೊತೆಯಾಗಿ ಮತ್ತು ಸಮಾನವಾಗಿ ನಿರ್ವಹಿಸುತ್ತೀರಿ. ರಸ್ತೆ, ಹೋಟೆಲ್, ಸಮಾರಂಭ, ಮಾರುಕಟ್ಟೆ, ಶಿಕ್ಷಣ ಮುಂತಾದ ಎಲ್ಲಾ ಕಡೆಯೂ ಇಬ್ಬರೂ ಹಂಚಿಕೊಂಡು ಜೀವನ ಮಾಡುತ್ತಿದ್ದೀರಿ. ಈಗ ಯಾವುದೋ ಕಾರಣದಿಂದ ಹೆಣ್ಣಿಗೆ ನನ್ನ ಬಳಿ ಪ್ರವೇಶ ನಿರಾಕರಿಸುವುದು ಖಂಡಿತ ಅನ್ಯಾಯ.
ನನ್ನ ಆತ್ಮೀಯ ಆರಾಧಕರೇ………
ನೀವು ನನ್ನನ್ನು ನಿಜವಾಗಲೂ ಭಕ್ತಿಯಿಂದ ಗೌರವಿಸುವುದಾದರೇ ……
ದಯವಿಟ್ಟು ಇನ್ನು ಮುಂದೆ ನನ್ನ ದರ್ಶನಕ್ಕೆ ಯಾವುದೇ ಮಹಿಳೆಯರಿಗೆ, ಯಾವುದೇ ರೀತಿಯ ನಿರ್ಬಂಧ ವಿಧಿಸಬೇಡಿ. ನಿಮ್ಮ ಆಂತರ್ಯದ ಭಕ್ತಿ ನಂಬಿಕೆ ನಿಮಗಿರಲಿ. ಅವರ ಸ್ವಾತಂತ್ರ್ಯ ಅವರಿಗಿರಲಿ.
ಸಂಪ್ರದಾಯ ಎಂಬುದು
” ಬದಲಾವಣೆ ಜಗದ ನಿಯಮ ” ಎಂಬ ತತ್ವದ ಅಡಿಯಲ್ಲಿ ಬರುತ್ತದೆ.
ಅಭಿಮಾನಿಗಳೇ….
ವನದೇವತೆ ಎಂದು ಪೂಜಿಸುತ್ತಿದ್ದ ಕಾಡಿನಲ್ಲಿ ಜಂಗಲ್ ಲಾಡ್ಜ್ ಗಳನ್ನು ಮಾಡಿ ಏನೇನು ಅವ್ಯವಹಾರ ಮಾಡುತ್ತಿರುವಿರಿ ಎಂದು ಪ್ರತ್ಯೇಕವಾಗಿ ಹೇಳಬೇಕೆ ?
ಪವಿತ್ರ ಗಾಳಿ ನೀರು ಆಹಾರಗಳಿಗೆ ವಿಷ ಬೆರೆಸಿ ಮಾರಾಟ ಮಾಡುತ್ತಿಲ್ಲವೇ ?
ದೇವರ ಮೇಲೆ ಪ್ರಮಾಣ ಮಾಡಿ ನಂತರ ಭ್ರಷ್ಟಾಚಾರ ಮಾಡುತ್ತಿಲ್ಲವೇ ?
ಒಂದೇ ಎರಡೇ .. ಈ ರೀತಿ ಹಲವಾರು ಸಂಪ್ರದಾಯ ಸಂಸ್ಕಾರಗಳನ್ನು ಮುರಿದು ಹಾಕಿರುವ ನೀವು ಮಹಿಳೆಯರಿಗೆ ಸ್ವಾತಂತ್ರ್ಯ ಸಮಾನತೆ ನೀಡುವ ಒಂದು ಒಳ್ಳೆಯ ಮತ್ತು ಕೌಟುಂಬಿಕ ವ್ಯವಸ್ಥೆ ಬಲಪಡಿಸುವ ಹಾಗೂ ಕುಟುಂಬ ಪರಿವಾರ ಸಮೇತ ನನ್ನನ್ನು ಬಂದು ದರ್ಶನ ಪಡೆಯುವ ಅವಕಾಶವನ್ನು ಎಲ್ಲರಿಗೂ ಕಲ್ಪಿಸಿ ವಿಶ್ವದ ಇತರ ಧರ್ಮಗಳಿಗೆ ಮಾದರಿಯಾಗಿ ಎಂದು ವಿನಯ ಪೂರ್ವಕವಾಗಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಆಶೀರ್ವಾದಗಳೊಂದಿಗೆ,
ಎಂದೆಂದಿಗೂ ನಿಮ್ಮವನೇ ಆದ…….
ಶಬರಿಮಲೆ ಅಯ್ಯಪ್ಪ…….
*******************************************
ಶಬರಿಮಲೆ ದೇವಸ್ಥಾನಕ್ಕೆ 10 ರಿಂದ 50 ವರ್ಷದ ಮಹಿಳೆಯರ ಪ್ರವೇಶಕ್ಕೆ ಇಷ್ಟೊಂದು ಹೋರಾಟದ ಅವಶ್ಯಕತೆ ಇದೆಯೇ ?
ಭಾರತದಲ್ಲಿ ಮಹಿಳೆಯರಿಗೆ ಗೌರವವಿದೆ, ಆದರೆ ಸಂಪ್ರದಾಯದ ಹೆಸರಲ್ಲಿ ನಿರ್ಧಿಷ್ಟ ವಯಸ್ಸಿನ ಮಹಿಳೆಯರಿಗೆ ಒಂದು ದೇವಸ್ಥಾನಕ್ಕೆ ಪ್ರವೇಶವಿಲ್ಲ.
ಇದನ್ನು ಹೇಗೆ ಸ್ವೀಕರಿಸುವುದು ?
ಮಹಿಳೆಯರಿಗೆ ಗೌರವ ಮಾತ್ರ ಸಾಕೆ ?
ಸಮಾನತೆ ಮತ್ತು ಸ್ವಾತಂತ್ರ್ಯ ಬೇಡವೇ ?
ತರ್ಕ, ಕುತರ್ಕ, ಸಮರ್ಥನೆಗಳು ಏನೇ ಇರಲಿ ನಿರ್ಧಿಷ್ಟ ವಯಸ್ಸಿನ ಮಹಿಳೆಯರನ್ನು ವಿಚಿತ್ರವಾಗಿ ಯಾವುದೋ ನೆಪದಲ್ಲಿ ದೂರ ಸರಿಸುವುದು ಆಕೆಗೆ ಅಪಮಾನವಲ್ಲದೆ ಇನ್ನೇನು ?
ನೈಸರ್ಗಿಕ ಕ್ರಿಯೆಯನ್ನು ಅಸ್ಪೃಶ್ಯತೆಯಂತೆ ಕಾಣುವುದು ಸೃಷ್ಟಿಗೆ ಮಾಡುವ ಅಪಚಾರವಲ್ಲವೇ ?
500/1000 ವರ್ಷದ ಸಂಪ್ರದಾಯ ಗೌರವಿಸಬೇಕೆ ? ಸೃಷ್ಟಿಯ ಸಹಜ ನಿಯಮಗಳನ್ನು ಗೌರವಿಸಬೇಕೆ ? ನಾಗರಿಕ ಸಮಾಜದ ಮಹಿಳೆಯರ ಸ್ವಾತಂತ್ರ್ಯ, ಸಮಾನತೆ, ಮಾನವೀಯತೆ ಗೌರವಿಸಬೇಕೆ ?
ಆಯ್ಕೆಯ ಸ್ವಾತಂತ್ರ್ಯ ನಿಮಗೆ ಬಿಟ್ಟಿದ್ದು……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟು ಹಬ್ಬದ ಮುನ್ನ ( ಏಪ್ರಿಲ್ 14 ) ಅವರ ವ್ಯಕ್ತಿತ್ವ ಮತ್ತು…
In der heutigen akademischen Welt steht die Qualität der schriftlichen Arbeiten im Mittelpunkt des Interesses.…
'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…
ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..…
ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…
ಸೆಲೂನ್ ನಲ್ಲಿ ಯುವಕನ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…