ಮಳೆ ಕೈಕೊಟ್ಟಿತು, ರಾಗಿ ಕೈಬಿಟ್ಟಿತು: ಬೆಳೆಗೇ ಟ್ರ್ಯಾಕ್ಟರ್ ಹರಿಸಿದ ರೈತ: ದೊಡ್ಡಬಳ್ಳಾಪುರವನ್ನೂ ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹ: 3.5 ಎಕರೆ ರಾಗಿ ಬೆಳೆ ನಾಶ

ದೊಡ್ಡಬಳ್ಳಾಪುರ: ಮಳೆ ಕೈಕೊಟ್ಟ ಪರಿಣಾಮ ಬಿತ್ತಿದ್ದ ರಾಗಿ ಬೆಳೆ ಒಣಗಿ, ಕೈಗೆ ಬಾರದ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಬೇಸರಗೊಂಡ ರೈತರೊಬ್ಬರು ತಮ್ಮ ಜಮೀನಿಗೆ ಟ್ರ್ಯಾಕ್ಟರ್ ಹರಿಸಿ ಬೆಳೆಯನ್ನೇ ನಾಶಪಡಿಸಿರುವ ಘಟನೆ ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೈತ ಕೆ. ಮುಕುಂದ ಅವರು ತಮ್ಮ 3.5 ಎಕರೆ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಿದ್ದರು. ಉತ್ತಮ ಮಳೆಯ ನಿರೀಕ್ಷೆಯಲ್ಲಿ ಸಾಲ ಮಾಡಿ ಸುಮಾರು 45 ಸಾವಿರ ಖರ್ಚು ಮಾಡಿ ಎರಡು ಬಾರಿ ರಾಗಿ ಬಿತ್ತನೆ ಮಾಡಿದ್ದರು. ಕಳೆದ ವರ್ಷ ಇದೇ ಜಮೀನಿನಲ್ಲಿ ಸುಮಾರು 35 ಮೂಟೆ ರಾಗಿ ಬೆಳೆದಿದ್ದ ಹಿನ್ನೆಲೆಯಲ್ಲಿ ಈ ಬಾರಿಯೂ ಉತ್ತಮ ಇಳುವರಿ ನಿರೀಕ್ಷಿಸಿದ್ದರು.

ಆದರೆ ಈ ಬಾರಿ ಮಳೆ ಕೈಕೊಟ್ಟ ಪರಿಣಾಮ ರಾಗಿ ಪೈರು ಬೆಳವಣಿಗೆಯಾಗದೆ ಒಣಗುವ ಹಂತಕ್ಕೆ ತಲುಪಿದೆ. ಬಿತ್ತನೆ ಮಾಡಿದ್ದ ಬೆಳೆ ಉಳಿಯುವುದಿಲ್ಲ ಎಂಬುದು ಖಚಿತವಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಟ್ರ್ಯಾಕ್ಟರ್ ಮೂಲಕ ಜಮೀನನ್ನು ಉಳುಮೆ ಮಾಡಿ ರಾಗಿ ಬೆಳೆಯನ್ನೇ ನಾಶಪಡಿಸಿದ್ದಾರೆ.

ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತನಿಗೆ ಮಳೆ ಕೊರತೆ ಮತ್ತೊಂದು ಆಘಾತ ನೀಡಿದ್ದು, ಸುಮಾರು 3ರಿಂದ 4 ಲಕ್ಷದಷ್ಟು ನಷ್ಟ ಉಂಟಾಗಿದೆ ಎಂದು ಮುಕುಂದ ಅವರು ಅಳಲು ತೋಡಿಕೊಂಡಿದ್ದಾರೆ.

ರಾಗಿ ಒಂದು ಕ್ವಿಂಟಲ್‌ಗೆ ಸರ್ಕಾರ ಸುಮಾರು 5 ಸಾವಿರ ದರ ನಿಗದಿಪಡಿಸಿದ್ದರೂ, ಬೆಳೆ ಕೈಗೆ ಬಾರದ ಕಾರಣ ಈ ಬಾರಿ ಯಾವುದೇ ಆದಾಯ ದೊರೆಯದಂತಾಗಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ರೈತ ಮುಕುಂದ, ಸಾಲ ಮಾಡಿ ಹಣ ಖರ್ಚು ಮಾಡಿ ಎರಡು ಬಾರಿ ರಾಗಿ ಬಿತ್ತನೆ ಮಾಡಿದ್ದೇನೆ. ಆದರೆ ಮಳೆಯೇ ಬರಲಿಲ್ಲ. ಕಣ್ಣೆದುರೇ ಬೆಳೆ ಒಣಗಿ ಹೋಯಿತು. ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ನಮಗೆ ಈಗ ದಿಕ್ಕೇ ತೋಚದಂತಾಗಿದೆ. ಸರ್ಕಾರ ಕೂಡಲೇ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದರೂ ದೊಡ್ಡಬಳ್ಳಾಪುರ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿರುವುದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ವಾಸ್ತವ ಬರ ಪರಿಸ್ಥಿತಿಯ ಕುರಿತು ಅಧಿಕಾರಿಗಳು ಸರ್ಕಾರಕ್ಕೆ ಸಮರ್ಪಕ ಮಾಹಿತಿ ನೀಡಿಲ್ಲ. ಮಳೆ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳು ಹಾನಿಯಾಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ದೊಡ್ಡಬಳ್ಳಾಪುರ ತಾಲೂಕನ್ನು ತಕ್ಷಣ ಬರಪೀಡಿತ ತಾಲೂಕು ಎಂದು ಘೋಷಿಸಿ, ಬೆಳೆ ನಷ್ಟದ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಮುಕುಂದ ಒತ್ತಾಯಿಸಿದರು.

‘ಮಳೆ ಇಲ್ಲ… ಬೆಳೆ ಇಲ್ಲ… ಆದಾಯವೂ ಇಲ್ಲ…’ ಎಂಬ ಪರಿಸ್ಥಿತಿಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಾಲೂಕಿನ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವುದರ ಜೊತೆಗೆ ಮುಂದಿನ ಕೃಷಿ ಚಟುವಟಿಕೆಗಳಿಗೆ ಅಗತ್ಯ ನೆರವು ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಯುವ ರೈತರಾದ ಚೇತನ್ ಕುಮಾರ್, ಭೈರೇಗೌಡ, ತ್ಯಾಗರಾಜು, ಲೋಹಿತ್ ಹಾಗೂ ಶ್ರೀನಿವಾಸ್ ಉಪಸ್ಥಿತರಿದ್ದರು.

Ramesh Babu

Journalist

Recent Posts

“ಸರ್ಕಾರದ ಕೆಲಸ ದೇವರ ಕೆಲಸ ” ಎಂದು ಹೇಳುವವರು ದೇವರಿಗೂ ವಂಚಿಸುತ್ತಿದ್ದಾರೆ…

ರೆಕ್ಕೆ ಮುರಿದ ಹಕ್ಕಿಯೊಂದು, ಬಿಕ್ಕಿ ಬಿಕ್ಕಿ ಅಳುತಲಿದೆ........ ಕಾಲು ಮುರಿದ ನಾಯಿಯೊಂದು, ಕುಂಟಿ ಕುಂಟಿ ನಡೆಯುತಿದೆ..... ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯನ್ನು…

3 hours ago

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

17 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

22 hours ago

ಅಕ್ಟೋಬರ್ 2….. ಶಾಸ್ತ್ರಿ ಮತ್ತು ಗಾಂಧಿ……..,

ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…

1 day ago

ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ ಖರೀದಿಗೆ ಕೇಂದ್ರದ ಅನುಮೋದನೆ

2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…

2 days ago

ಸಿಎಂಗೆ ರೈತಪರ ಕಾಳಜಿ ಇಲ್ಲ ಶಾಸಕ ಧೀರಜ್ ಮುನಿರಾಜು ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…

2 days ago