
ದೊಡ್ಡಬಳ್ಳಾಪುರ: ಮಳೆಗಾಲ ಆರಂಭವಾಗುತ್ತಿದ್ದಂತೆ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗಗಳ ರಸ್ತೆಗುಂಡಿಗಳ ಸಮಸ್ಯೆ ಮತ್ತೆ ತಲೆದೋರಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಗಳ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಸಾರ್ವಜನಿಕರಲ್ಲಿ ಆತಂಕ ಮತ್ತು ಅಸಮಾಧಾನ ಹೆಚ್ಚಾಗಿದೆ.
ನಗರದ ಪ್ರಮುಖ ರಸ್ತೆಗಳು, ಬಡಾವಣೆಗಳ ಒಳರಸ್ತೆಗಳು ಹಾಗೂ ಗ್ರಾಮೀಣ ಸಂಪರ್ಕ ರಸ್ತೆಗಳೆಲ್ಲೆಡೆ ಗುಂಡಿಗಳು ಉಂಟಾಗಿವೆ. ಮಳೆ ನೀರು ಗುಂಡಿಗಳಲ್ಲಿ ನಿಂತಿರುವುದರಿಂದ ವಾಹನ ಸವಾರರಿಗೆ ಅವುಗಳ ಆಳ ಅಂದಾಜು ಮಾಡಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ಬೈಕ್ ಸವಾರರು, ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ಅಪಾಯಕ್ಕೆ ಸಿಲುಕುತ್ತಿದ್ದಾರೆ.
ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನ ಸವಾರರು ನಿಯಂತ್ರಣ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ರಾತ್ರಿ ಸಮಯ ಮತ್ತು ಮಳೆಯ ಸಂದರ್ಭದಲ್ಲಿ ರಸ್ತೆಗುಂಡಿಗಳು ಅಪಘಾತಗಳಿಗೆ ನೇರ ಕಾರಣವಾಗುತ್ತಿವೆ. ಹಲವೆಡೆ ವಾಹನಗಳ ಟೈರ್ ಹಾನಿಗೊಳಗಾಗುವುದು, ಸವಾರರು ಬಿದ್ದು ಗಾಯಗೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ.

ಟೋಲ್ ತಪ್ಪಿಸಲು ಹಳ್ಳಿ ರಸ್ತೆಗಳ ಬಳಕೆ
ರಾಷ್ಟ್ರೀಯ ಹೆದ್ದಾರಿ-648ರ ಹುಲಿಕುಂಟೆ ಟೋಲ್ ಪ್ಲಾಜಾವನ್ನು ತಪ್ಪಿಸಲು ಬೃಹತ್ ವಾಹನಗಳು ರಾಜ್ಯ ಹೆದ್ದಾರಿ-74ರ ಮೂಲಕ ಸಂಚರಿಸುತ್ತಿರುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ.
ದೊಡ್ಡಬಳ್ಳಾಪುರದ ಅರಳುಮಲ್ಲಿಗೆ, ಕಾಡನೂರು ಹಾಗೂ ಮಧುರೆ ಮಾರ್ಗವಾಗಿ ಹಾದುಹೋಗುವ ಈ ರಸ್ತೆಯಲ್ಲಿ ವಾಹನ ದಟ್ಟಣೆ ಗಣನೀಯವಾಗಿ ಹೆಚ್ಚಿದೆ.
ಹಳ್ಳಿಗಳ ಮಧ್ಯೆ ಸಾಗುವ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರದಿಂದ ಅಪಘಾತಗಳ ಪ್ರಮಾಣ ಏರಿಕೆಯಾಗಿದ್ದು, ರಸ್ತೆಗಳು ಕೂಡ ವೇಗವಾಗಿ ಹಾಳಾಗುತ್ತಿವೆ. ಲೋಕೋಪಯೋಗಿ ಇಲಾಖೆ ಹಲವು ಬಾರಿ ದುರಸ್ತಿ ಕಾರ್ಯ ನಡೆಸಿದರೂ, ಬೃಹತ್ ವಾಹನಗಳ ಒತ್ತಡದಿಂದ ರಸ್ತೆ ಮತ್ತೆ ಹಾಳಾಗುತ್ತಿದೆ.
ಮೂರು ವರ್ಷಗಳಲ್ಲಿ ನಾಲ್ಕು ಪಟ್ಟು ವಾಹನ ಸಂಚಾರ
ನೆಲಮಂಗಲ-ದೊಡ್ಡಬಳ್ಳಾಪುರ-ಚಿಕ್ಕಬಳ್ಳಾಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿ-74 ಒಟ್ಟು 51.35 ಕಿಲೋಮೀಟರ್ ಉದ್ದವಿದೆ. 2023ರಲ್ಲಿ ಪ್ರತಿದಿನ 5,516 ವಾಹನಗಳು ಸಂಚರಿಸುತ್ತಿದ್ದರೆ, 2026ರಲ್ಲಿ ಈ ಸಂಖ್ಯೆ 22,065ಕ್ಕೆ ಏರಿಕೆಯಾಗಿದೆ. ವಾಣಿಜ್ಯ ವಾಹನಗಳ ಸಂಖ್ಯೆ 478ರಿಂದ 8,618ಕ್ಕೆ ಏರಿಕೆಯಾಗಿರುವುದು ದಾಖಲಾಗಿದೆ.
ಈ ಹೆದ್ದಾರಿ ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ 35.5 ಕಿಲೋಮೀಟರ್ ಉದ್ದವಿದ್ದು, ಪ್ರತಿ ಎರಡು ನಿಮಿಷಕ್ಕೊಮ್ಮೆ ಸುಮಾರು 30 ವಾಹನಗಳು ಸಂಚರಿಸುತ್ತಿವೆ. ವಾಹನ ಸಂಚಾರದ ಭಾರೀ ಏರಿಕೆಯಿಂದ ರಸ್ತೆ ನಿರ್ವಹಣೆ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ದೊಡ್ಡಬಳ್ಳಾಪುರ -ನೆಲಮಂಗಲ ಸಂಪರ್ಕಿಸುವ ಈ ರಸ್ತೆಯೂ ಈ ಹಿಂದೆ ಜಿಲ್ಲಾ ಮುಖ್ಯ ರಸ್ತೆಯಾಗಿತ್ತು. ಆದರೆ, ವಾಹನ ಸಂಚಾರ ಸಾಂದ್ರತೆಯ ಅನುಗುಣವಾಗಿ ಇದನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಈ ರಸ್ತೆಯೂ ಮಧ್ಯಮ ಪಥ, ದ್ವಿಪಥ, ಚತುಷ್ಪತ ರಸ್ತೆಯಾಗಿದೆ. ಇದನ್ನು ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡುತ್ತಿದೆ. ಆದರೆ, ವಾಹನ ದಟ್ಟನೆ ಹೆಚ್ಚಿದಂತೆ ಅಪಘಾತಗಳು ಸಂಭವಿಸುವ ಜತೆಗೆ ರಸ್ತೆಯೂ ಬೇಗನೇ ಹಾಳಾಗುತ್ತಿದೆ. ಈಗಾಗಲೇ ಸಾಕಷ್ಟು ಬಾರಿ ರಸ್ತೆಯನ್ನು ಸರಿಪಡಿಸುವ ಕೆಲಸ ಮಾಡಿದರೂ ಕೂಡ ಭಾರಿ ತೂಕದ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿದೆ. ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಕಾರಕ್ಕೆ ಪತ್ರದ ಮೂಲಕ ಲೋಕೋಪಯೋಗಿ ಇಲಾಖೆ ಟೋಲ್ ತಪ್ಪಿಸಲು ಈ ರಸ್ತೆಯನ್ನು ಬಳಸುತ್ತಿರುವ ಬಗ್ಗೆ ಪತ್ರ ಬರೆದು ಮಾಹಿತಿ ನೀಡಿದೆ. ಈ ಬಗ್ಗೆ ಉತ್ತರಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಟೋಲ್ ತಪ್ಪಿಸಲು ಈ ಹೆದ್ದಾರಿಯನ್ನು ಬಳಸುತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ತಿಳಿದುಬಂದಿದೆ. ಈ ವಾಹನ ಚಾಲಕರಿಗೆ ಯಾವುದೇ ಕ್ರಮವಹಿಸಲು ನಮಗೆ ಅಧಿಕಾರವಿಲ್ಲ ಎಂಬುದನ್ನು ತಿಳಿಸಿದೆ.
ದೊಡ್ಡಬಳ್ಳಾಪುರ – ನೆಲಮಂಗಲದ ನಡುವಿನ ಸಂಚಾರದ ವೇಳೆಯಲ್ಲಿ ಅರಳುಮಲ್ಲಿಗೆ, ಮಧುರೆಯಂತಹ ಕೆರೆ ಏರಿಗಳ ಮೇಲೆ ಸಂಚರಿಸಬೇಕಿದೆ. ಈ ರಸ್ತೆಗಳು ಹಲವೆಡೆ ಗುಂಡಿಗಳಿಂದ ಆವೃತ್ತವಾಗಿದೆ. ಜತೆಗೆ ಕಾಡನೂರು ಬಳಿಯಲ್ಲೂ ಕೂಡ ರಸ್ತೆಗಳು ಗುಂಡಿ ಬಿದ್ದಿದೆ. ಅದರಲ್ಲೂ ಸಂಜೆ ವೇಳೆಯಲ್ಲಿ ಇಲ್ಲಿ ಮತ್ತಷ್ಟು ವಾಹನ ದಟ್ಟನೆ ಹೆಚ್ಚಾಗುತ್ತಿದ್ದು, ಸಂಚಾರವೇ ಸವಾಲೊಡ್ಡುವಂತೆ ಮಾಡಿದೆ. ಈಗಾಗಲೇ ದೊಡ್ಡಬಳ್ಳಾಪುರ ಶಾಸಕರು ಕೂಡ ಈ ರಸ್ತೆಯನ್ನು ಮೇಲ್ದರ್ಜೆಗೇರಿಸುವಂತೆ ಪತ್ರ ಬರೆದಿದ್ದು, ಇಲ್ಲಿನ ಸಮಸ್ಯೆ ಬಗೆಹರಿಸಲು ಸಾಕಷ್ಟು ಪ್ರಯತ್ನವಾಗುತ್ತಿದೆ.

ರಸ್ತೆಯ ವಿವರ
* ರಸ್ತೆಯ ಒಟ್ಟು ಉದ್ದ : 51.35 ಕಿ.ಮೀ
* 2023ರಲ್ಲಿ ಪ್ರತಿದಿನ ಸಂಚರಿಸುತ್ತಿದ್ದ ವಾಹನಗಳು 5516
* 2026ರಲ್ಲಿ ಪ್ರತಿದಿನ ಸಂಚರಿಸುತ್ತಿರುವ ವಾಹನಗಳು : 22065
* ದೊಡ್ಡಬಳ್ಳಾಪುರ ವ್ಯಾಪ್ತಿಗೆ ಬರುವ ರಸ್ತೆಯ ಉದ್ದ : 35.5 ಕಿಮೀ
* ಪ್ರತಿ 2 ನಿಮಿಷಕ್ಕೆ ಸಂಚರಿಸುವ ವಾಹನಗಳ ಸಂಖ್ಯೆ: 30
ದೊಡ್ಡಬೆಳವಂಗಲದ ಮಧುರನಹೊಸಹಳ್ಳಿಯಲ್ಲಿ ಪ್ರತಿವರ್ಷ ಮಳೆ ಬಂದಾಗ ರಸ್ತೆ ಗುಂಡಿಗಳ ಸಮಸ್ಯೆ ಎದುರಾಗುತ್ತದೆ. ರಸ್ತೆ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳುತ್ತಾರೆ. ಆದರೆ, ಮೊದಲ ಮಳೆಯಲ್ಲೇ ರಸ್ತೆಗಳು ಕಿತ್ತುಹೋಗುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಧುರನಹೊಸಹಳ್ಳಿ ವೆಂಕಟಾಚಲಯ್ಯ ಆಗ್ರಹಿಸಿದರು.
ಅಧಿಕಾರಿಗಳು ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದ್ದರೂ, ಹೆಚ್ಚಿನ ಕಡೆಗಳಲ್ಲಿ ತಾತ್ಕಾಲಿಕ ದುರಸ್ತಿ ಮಾತ್ರ ನಡೆಯುತ್ತಿದೆ. ಮಳೆ ಬಂದ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿಗಳು ಕಾಣಿಸಿಕೊಳ್ಳುತ್ತಿವೆ. ಗುಣಮಟ್ಟದ ಕಾಮಗಾರಿ ಕೊರತೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಮೆಣಸಿ ಗ್ರಾಮದ ನಿವಾಸಿ ನಟರಾಜ್ ಆರೋಪಿಸಿದರು.
ರಸ್ತೆ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಬೇಕು. ಮಳೆಗಾಲದ ಮುನ್ನವೇ ರಸ್ತೆ ಪರಿಶೀಲನೆ ನಡೆಸಿ ಹಾನಿಗೊಳಗಾದ ರಸ್ತೆಗಳನ್ನು ದುರಸ್ತಿ ಮಾಡಬೇಕು. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಸ್ತೆಗುಂಡಿಗಳನ್ನು ತ್ವರಿತವಾಗಿ ಮುಚ್ಚಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ತಿರುಮಗೊಂಡನಹಳ್ಳಿ ನಿವಾಸಿ ಮಂಜುನಾಥ್ ಒತ್ತಾಯಿಸಿದರು.

2025-26ನೇ ಸಾಲಿನ ಅನುದಾನದಲ್ಲಿ ಗುಂಡಿಗಳನ್ನು ಮುಚ್ಚಲಾಗಿದೆ. 2026-27 ಸಾಲಿನ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆ ಆದ ಕೂಡಲೇ ಮಿಕ್ಕುಳಿದ ಗುಂಡಿಗಳನ್ನು ಮುಚ್ಚಲಾಗುವುದು. ಈಗಾಗಲೇ ಟೋಲ್ ತಪ್ಪಿಸಲು ರಾಜ್ಯ ಹೆದ್ದಾರಿಯಲ್ಲಿ ಬೃಹತ್ ವಾಹನಗಳು ಸಂಚರಿಸುತ್ತಿರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಈ ರಸ್ತೆಯ ನಿರ್ವಹಣೆಯೇ ಸವಾಲಾಗಿದೆ. 50 ಲಕ್ಷ ಅನುದಾನದಲ್ಲಿ ಅರಳುಮಲ್ಲಿಗೆ ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆಯ ಅಭಿವೃದ್ದಿಗೆ ಟೆಂಡರ್ ಕರೆಯಲಾಗಿದೆ. ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗಿರೀಗೌಡ ಹೇಳಿದ್ದಾರೆ.