ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬೆಂಗಳೂರು ಸೈಬರ್ ಕ್ರೈಂ ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಬಲಿ

ಬೆಂಗಳೂರು: ಆರೋಪಿಯ ಹುಡುಕಾಟಕ್ಕೆ ತೆರಳುತ್ತಿದ್ದ ಬೆಂಗಳೂರು ಸೈಬರ್ ಕ್ರೈಂ ತಂಡ ಪ್ರಯಾಣಿಸುತ್ತಿದ್ದ ಬಸ್ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತಕ್ಕೀಡಾಗಿ, ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ರಾಜ್‌ಗಢ ಜಿಲ್ಲೆಯ ಬಿಯೋರಾ ನಗರದಲ್ಲಿ ಬಸ್ ನಿಯಂತ್ರಣ ತಪ್ಪಿ ಸುಮಾರು 30 ಅಡಿ ಎತ್ತರದ ಸೇತುವೆಗೆ ಡಿಕ್ಕಿ ಹೊಡೆದು ಉರುಳಿದೆ. ಅಪಘಾತದಲ್ಲಿ 11ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ.

ಮೃತರನ್ನು ಸೈಬರ್ ಕ್ರೈಂ ತಂಡದ ಇನ್‌ಸ್ಪೆಕ್ಟರ್ ರವಿ ಕೆ.ವಿ., ಬಸ್ ಚಾಲಕ ವಿಕಾಸ್ ಶುಕ್ಲಾ, ಬೆಲಾಲ್ ಅಲಿ ಹಾಗೂ ಜ್ಯೋತಿರಾದಿತ್ಯ ಸಿಂಗ್ ಗೌಡ್ ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಇಂದೋರ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಸೈಬರ್ ಕ್ರೈಂ ತಂಡದ ಪೊಲೀಸರು ಪ್ರಯಾಣಿಸುತ್ತಿದ್ದರು. ಆರೋಪಿಯೊಬ್ಬನನ್ನು ಹುಡುಕಿಕೊಂಡು ಮಧ್ಯಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಬಸ್‌ನಲ್ಲಿದ್ದ ಕೆಲವರು ಹೊರಕ್ಕೆ ಎಸೆಯಲ್ಪಟ್ಟು 30 ಅಡಿ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಭೋಪಾಲ್‌ಗೆ ಸ್ಥಳಾಂತರಿಸಲಾಗಿದೆ.

ಅಪಘಾತದಲ್ಲಿ ಸಬ್‌ಇನ್‌ಸ್ಪೆಕ್ಟರ್ ರಮೇಶ್ ನಾಯಕ್, ಎಎಸ್‌ಐ ಶ್ರೀನಿವಾಸ್ ಹಾಗೂ ತಾಂತ್ರಿಕ ಸಿಬ್ಬಂದಿ ವಿಶ್ವನಾಥ್ ಸೇರಿದಂತೆ ಸೈಬರ್ ಕ್ರೈಂ ತಂಡದ ಸಿಬ್ಬಂದಿಗೂ ಗಾಯಗಳಾಗಿವೆ. ಈ ಪೈಕಿ ಶ್ರೀನಿವಾಸ್ ಅವರ ಸ್ಥಿತಿ ಗಂಭೀರವಾಗಿದೆ.

Leave a Reply

Your email address will not be published. Required fields are marked *

error: Content is protected !!