Categories: ಲೇಖನ

ಮತ್ತೊಂದು ರೂಪದಲ್ಲಿ ವರದಕ್ಷಿಣೆ ಭೂತ…..

 

ಶ್ರೀ ಅತುಲ್ ಸುಭಾಶ್ ಎಂಬ ಟೆಕ್ಕಿಯೊಬ್ಬ ಒಂದು ರೀತಿಯಲ್ಲಿ ಕ್ರಮಬದ್ಧವಾಗಿ, ಪೂರ್ವ ತಯಾರಿಯೊಂದಿಗೆ, ತನ್ನೆಲ್ಲ ಅಸಹಾಯಕತೆಯನ್ನು ಬರೆದಿಟ್ಟು, ಮಹಿಳಾ ದೌರ್ಜನ್ಯದ ಬಗ್ಗೆ ಅಮೆರಿಕ ಅಧ್ಯಕ್ಷರಿಂದ, ಭಾರತದ ನ್ಯಾಯಮೂರ್ತಿಗಳವರೆಗೆ, ಎಲ್ಲರಿಗೂ ಇಮೇಲ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅದು ರಾಷ್ಟ್ರ ವ್ಯಾಪಿ ಚರ್ಚೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಸಹ ಈ ಬಗ್ಗೆ ವಿವರಣೆ ಕೇಳಿದೆ.
ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸಹ ವಿವಿಧ ಅಭಿಪ್ರಾಯಗಳು ಮೂಡಿ ಬರುತ್ತಿವೆ.

ಮೊದಲನೆಯದಾಗಿ,
ಆತ್ಮಹತ್ಯೆ ಎಂಬುದೇ ಹೇಡಿತನದ ಕೃತ್ಯ. ಅದು ಯಾರೇ ಆಗಿರಲಿ, ಯಾವ ಕಾರಣವೇ ಆಗಿರಲಿ, ಆತ್ಮಹತ್ಯೆ ಈಗಿನ ನಾಗರಿಕ ಸಮಾಜಕ್ಕೆ ಸಹನೀಯವಲ್ಲ. ಇಡೀ ಜೀವ ಜಗತ್ತು ಹೋರಾಡುತ್ತಿರುವುದು ಬದುಕಲಿಕ್ಕೇ ಹೊರತು ಸಾಯುವುದಕ್ಕಲ್ಲ. ಏಕೆಂದರೆ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯ ವ್ಯಕ್ತಿ ಅದು ಹೆಣ್ಣೇ ಆಗಿರಲಿ, ಗಂಡೇ ಆಗಿರಲಿ, ಖಂಡಿತವಾಗಲೂ ಮಾನಸಿಕ ರೋಗಕ್ಕೆ ತುತ್ತಾಗಿರುತ್ತಾರೆ ಎಂದು ನಿಸ್ಸಂಶಯವಾಗಿ ಹೇಳಬಹುದು.

ಸಾವನ್ನು ಅಂದರೆ ತನ್ನ ದೇಹವನ್ನು ಸ್ವತಃ ತಾನೇ ಕೊಂದುಕೊಳ್ಳುವುದು ಯಾವ ದೃಷ್ಟಿಯಿಂದಲೂ ಒಪ್ಪಿಕೊಳ್ಳುವಂತಹ ಕ್ರಿಯೆಯಲ್ಲ. ಬದಲಾಗಿ ವಿರೋಧಿಸುವ, ದ್ವೇಷಿಸುವ, ಅಸಹ್ಯಪಡುವ ಕ್ರಿಯೆ ಎಂದು ಸಾಮಾನ್ಯ ಜ್ಞಾನದ ಅನುಭವದಿಂದ ಹೇಳಬಹುದು.

” ಸಾಯುವ ವ್ಯಕ್ತಿ ಸುಳ್ಳು ಹೇಳುವುದಿಲ್ಲ ” ಎಂಬ ಲೋಕಾರೂಡಿಯ ಮಾತುಗಳು ಸಂಪೂರ್ಣ ನಿಜವಲ್ಲ. ಕೆಲವು ಸಂದರ್ಭಗಳಲ್ಲಿ ಮಾತ್ರ ಭಾಗಶಃ ನಿಜವಾಗಿರುವ ಸಾಧ್ಯತೆ ಇದೆ. ಏಕೆಂದರೆ ಸಾಯುವ ಮುನ್ನ ಆ ವ್ಯಕ್ತಿ ಏನೆಲ್ಲ ವಿಚಾರಗಳನ್ನು ಹೇಳಿದ್ದರೂ ಆತ್ಮಹತ್ಯೆ ಎಂಬ ಕೃತ್ಯ ಅದರ ಮಹತ್ವವನ್ನು ಗೌಣವಾಗಿಸುತ್ತದೆ ಮತ್ತು ವ್ಯಕ್ತಿತ್ವದ ಸಣ್ಣತನವನ್ನು, ದುರ್ಬಲತೆಯನ್ನು ತೋರಿಸುತ್ತದೆ.

ಹಾಗೆಂದು ಅತುಲ್ ಸುಭಾಷ್ ಅಥವಾ ಆ ರೀತಿಯ ವ್ಯಕ್ತಿಗಳು ಪಟ್ಟಿರುವ ಕಷ್ಟ, ಹಿಂಸೆ, ಯಾತನೆ, ಒತ್ತಡ ಕಡಿಮೆ ಏನಲ್ಲ. ಖಂಡಿತವಾಗಲೂ ಆದು ಭಯಂಕರ ಎಂಬುದು ಸಹ ಅಷ್ಟೇ ನಿರ್ವಿವಾದ. ಆದರೆ ಅದನ್ನು ಆತ ಎದುರಿಸಿದ ರೀತಿ, ಸ್ವೀಕರಿಸಿದ ರೀತಿ ಮಾತ್ರ ಒಪ್ಪುವಂತಹದ್ದಲ್ಲ. ಈ ಕ್ಷಣದಲ್ಲಿ ವರದಕ್ಷಿಣೆ ಕಾನೂನು ಅಥವಾ ಮಹಿಳೆಯ ಪರವಾಗಿರುವ ಕೆಲವು ಕಾನೂನುಗಳಿಂದ ಆತನಿಗೆ ಅನ್ಯಾಯವಾಗಿರಬಹುದು. ಅದೇ ರೀತಿ ಕೆಲವು ಹೆಣ್ಣು ಮಕ್ಕಳು, ಹೆಣ್ಣಿನ ಕುಟುಂಬದವರು ಈ ಕಾನೂನುಗಳನ್ನ ಪುರುಷರ ಮೇಲೆ ದಬ್ಬಾಳಿಕೆ ಮಾಡಲು, ಹಿಂಸಿಸಲು ಉಪಯೋಗಿಸಿಕೊಳ್ಳುತ್ತಿರಬಹುದು. ಅದನ್ನು ಅಲ್ಲಗಳೆಯುವಂತಿಲ್ಲ.

ಆದರೆ ನೆನಪಿಡಿ ಕೇವಲ 15/20 ವರ್ಷಗಳ ಹಿಂದೆ ವರದಕ್ಷಿಣೆಯ ಭೂತ ಇಡೀ ಸಮಾಜವನ್ನು ಆಕ್ರಮಿಸಿಕೊಂಡಿತ್ತು. ಲಕ್ಷ ಲಕ್ಷ ಮಹಿಳೆಯರನ್ನು ನಮ್ಮ ಕಣ್ಣ ಮುಂದೆಯೇ ವರದಕ್ಷಿಣೆಗಾಗಿ ಜೀವಂತ ಬೆಂಕಿ ಇಟ್ಟು ಸುಡಲಾಯಿತು. ಎಷ್ಟೋ ಹೆಣ್ಣು ಮಕ್ಕಳನ್ನು ಕ್ರೂರವಾಗಿ ಕೊಲ್ಲಲಾಯಿತು. ಹೆಣ್ಣು ಹೆತ್ತ ಪೋಷಕರು ಮದುವೆ ಮಾಡಿಕೊಡಲೇ ತುಂಬಾ ಭಯಪಡುತ್ತಿದ್ದರು. ಹೆಣ್ಣು ಹುಟ್ಟುವುದೇ ಶಾಪವಾಗಿತ್ತು.
” ಬಡತನದ ಮನೆಯೊಳಗೆ ಹೆಣ್ಣು ಹುಟ್ಟ ಬಾರದವ್ವ ” ಎಂಬ ಜಾನಪದ ಗೀತೆ ಬಹಳ ಹಿಂದೆಯೇ ರಚಿತವಾಗಿತ್ತು. ಅತ್ತೆ ಎಂಬ ಪದವೇ ಬಹುತೇಕ ರಾಕ್ಷಸತ್ವದ ಪರ್ಯಾಯ ಎಂದು ಹಿಂದಿನ ಕಾಲದ ಅನೇಕರು ಮಾತನಾಡಿಕೊಳ್ಳುತ್ತಿದ್ದರು.
ಆ ಕಾರಣಕ್ಕಾಗಿಯೇ ಹೆಣ್ಣಿನ ಬಗ್ಗೆ, ಹೆಣ್ಣಿನ ಪರವಾಗಿ, ವರದಕ್ಷಿಣೆ ಕಾನೂನು ಮಾತ್ರವಲ್ಲ ಅನೇಕ ಸಂದರ್ಭದಲ್ಲಿ ವಿಚ್ಛೇದನ, ಪರಿಹಾರ, ಕೌಟುಂಬಿಕ ದೌರ್ಜನ್ಯ ಮುಂತಾದ ಕಾನೂನುಗಳನ್ನು ಜಾರಿಗೆ ತರಲಾಯಿತು.

ಆದರೆ ಕಳೆದ 20 ವರ್ಷಗಳಲ್ಲಿ ಭಾರತ ಜಾಗತೀಕರಣದ ಕಾರಣದಿಂದ ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ತನ್ನನ್ನು ತೆರೆದುಕೊಂಡ ಮೇಲೆ, ಮಹಿಳೆಯರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ಗಣನೀಯ, ಕ್ರಾಂತಿಕಾರಕ ಬದಲಾವಣೆಗಳಾದವು. ಅವರ ಉದ್ಯೋಗದ ಅವಕಾಶಗಳು ಬಹುದೊಡ್ಡ ರೀತಿಯಲ್ಲಿ ಬಾಗಿಲು ತೆರೆದವು. ಮಹಿಳಾ ಸ್ವಾತಂತ್ರ್ಯ, ಸ್ವಾಭಿಮಾನ, ಸಮಾನತೆಗೆ ಹೆಚ್ಚಿನ ಅವಕಾಶಗಳು ದೊರೆಯಿತು.

ಸಹಜವಾಗಿಯೇ ಹೆಣ್ಣಿನ ಸ್ವಾವಲಂಬನೆ ಪುರುಷ ಕೇಂದ್ರಿತ ಸಮಾಜದಲ್ಲಿ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಕೌಟುಂಬಿಕ ವಿಘಟನೆಗಳು, ಗಲಾಟೆಗಳು, ದೌರ್ಜನ್ಯಗಳು ಹೆಚ್ಚಾದವು. ಸಾಮಾಜಿಕ ಜಾಲತಾಣಗಳು ಬೆಳವಣಿಗೆ ಅದಕ್ಕೆ ಪೂರಕ ವಾತಾವರಣ ಕಲ್ಪಿಸಿದವು. ನ್ಯಾಯಾಲಯಗಳು, ವಕೀಲರು, ಅದಕ್ಕೆ ಬೇಕಾದ ಸಂಪರ್ಕಗಳು ಸುಲಭವಾಗಿ ಸಿಕ್ಕಿ, ಹಣಕಾಸಿನ ವ್ಯವಸ್ಥೆಯು ಉತ್ತಮ ಗೊಂಡಿತು. ಆಗ ಸಹಜವಾಗಿಯೇ ಹೆಣ್ಣಿನಲ್ಲಿ ಸ್ವಾಭಿಮಾನ, ಅಹಂ, ಕೆಲವರಲ್ಲಿ ಸ್ವೇಚ್ಛಾಚಾರ ಪುರುಷ ಸಮಾಜದಂತೆಯೇ ವೃದ್ಧಿಯಾದವು.

ಅದರ ಮುಂದುವರಿದ, ದುಷ್ಪರಿಣಾಮದ ಭಾಗವಾಗಿ ಈಗ ನಿಧಾನವಾಗಿ ಮಹಿಳೆಯರಿಂದ ಪುರುಷರ ಮೇಲಿನ ದೌರ್ಜನ್ಯಗಳು, ವರದಕ್ಷಣೆ ಕಾನೂನಿನ ದುರುಪಯೋಗ ಸಹಜವಾಗಿ ಹೆಚ್ಚಾಗುತ್ತಿದೆ.

ಇದೊಂದು ಸಾಮಾಜಿಕ ಸಮಸ್ಯೆ. ಅಷ್ಟು ಸುಲಭವಾಗಿ, ಸರಳವಾಗಿ ಈ ಕ್ಷಣದಲ್ಲೇ ಪರಿಹಾರ ಸಿಗುವುದಿಲ್ಲ. ಒಂದಷ್ಟು ನ್ಯಾಯ, ಅನ್ಯಾಯಗಳು ನಡೆದು, ಅದೃಷ್ಟ, ದುರಾದೃಷ್ಟಗಳೂ ಕೆಲಸ ಮಾಡುತ್ತವೆ. ಅದರಲ್ಲಿ ನತದೃಷ್ಟರು ಸಿಕ್ಕಿ ಹಾಕಿಕೊಂಡು ನರಳುವುದು ನಿಜ. ಇದನ್ನು ಎದುರಿಸಲೇಬೇಕು.

ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ಅಂದರೆ ಬಲಿಷ್ಠರು ಉಳಿಯುತ್ತಾರೆ ಎಂಬ ಡಾರ್ವಿನ್ನನ ಸಿದ್ದಾಂತದಂತೆ ಈ ಕ್ಷಣದಲ್ಲಿ ನಾವು, ಅಂದರೆ ಪುರುಷರೇ ಆಗಿರಲಿ, ಮಹಿಳೆಯರೇ ಆಗಿರಲಿ ಮಾನಸಿಕ ಮತ್ತು ದೈಹಿಕ ಬಲಿಷ್ಠತೆಗೆ ಪ್ರಾಮುಖ್ಯತೆ ಕೊಡಲೇಬೇಕು. ಈ ಸಮಯವನ್ನು ಧೈರ್ಯದಿಂದ ಎದುರಿಸಬೇಕು. ಇಲ್ಲದಿದ್ದರೆ ಹೆಣ್ಣಾಗಲಿ, ಗಂಡಾಗಲಿ ಸಾವು ನೋವಿಗೆ ಸಿಲುಕುವುದು ಶತಸಿದ್ಧ.

ಇಲ್ಲಿ ಕೆಲವೊಮ್ಮೆ ಪುರುಷರು, ಕೆಲವೊಮ್ಮೆ ಮಹಿಳೆಯರು ಪರಿಸ್ಥಿತಿಯ ಲಾಭ ಪಡೆಯುವುದು, ದುರ್ಬಲರ ಮೇಲೆ ಸವಾರಿ ಮಾಡುವುದು ನಡೆಯುತ್ತಲೇ ಇರುತ್ತದೆ. ಇದೇನು ಹೊಸದಲ್ಲ. ಈ ದಬ್ಬಾಳಿಕೆ, ದೌರ್ಜನ್ಯ ಕೇವಲ ಗಂಡು ಹೆಣ್ಣಿನ ಕೌಟುಂಬಿಕ ಸಮಸ್ಯೆಗೆ ಮಾತ್ರ ಸೀಮಿತವಲ್ಲ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಇದು ವ್ಯಾಪಿಸಿದೆ. ಅದನ್ನು ಅರ್ಥ ಮಾಡಿಕೊಂಡು ವಿಶಾಲ ಮನೋಭಾವದಿಂದ, ತಾಳ್ಮೆಯಿಂದ, ಸಮಗ್ರ ಚಿಂತನೆಯಿಂದ, ಜ್ಞಾನದಿಂದ ಸವಾಲಾಗಿ ಸ್ವೀಕರಿಸಿ ಕಾಲದೊಂದಿಗೆ ಮುಂದುವರಿಯಬೇಕೆ ಹೊರತು ಪಶ್ಚಾತ್ತಾಪದಿಂದ, ದುರಾದೃಷ್ಟದಿಂದ, ಅಸಹಾಯಕತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ಪರಿಹಾರವೂ ಅಲ್ಲ, ಒಳ್ಳೆಯದು ಅಲ್ಲ.

ಹೇಗಿದ್ದರೂ ಸಾವು ಸಹಜವಾಗಿಯೇ ಬರುತ್ತದೆ. ಜಸ್ಟ್ ಕೀಪ್ ಮೂವಿಂಗ್. ಆ ಮನಸ್ಥಿತಿಯನ್ನೇ ಸ್ಥಿತಪ್ರಜ್ಞತೆ ಅಥವಾ ಬುದ್ಧತ್ವ ಎಂದು ಕರೆಯಲಾಗುತ್ತದೆ. ಎಲ್ಲವನ್ನೂ ಒಳಗೊಳ್ಳುವ ಕ್ರಿಯೆಯದು.

ವರದಕ್ಷಿಣೆ ವಿಷಯವಿರಲಿ, ಯಾವುದೇ ರೀತಿಯ ದೌರ್ಜನ್ಯವೇ ಇರಲಿ, ವಂಚನೆ ಮೋಸಗಳೇ ಇರಲಿ, ಇಲ್ಲಿ ಹೆಣ್ಣು ಸಮುದಾಯ ಅಥವಾ ಗಂಡು ಸಮುದಾಯ ಎಂದು ನೋಡಬಾರದು. ಅದನ್ನು ಒಂದು ಕ್ರಿಮಿನಲ್ ಅಪರಾಧದಂತೆ ನೋಡಬೇಕು. ಏಕೆಂದರೆ ಯಾವುದಾದರೂ ಒಂದು ಕಾನೂನು ಕೆಟ್ಟವರನ್ನು ನಿಯಂತ್ರಿಸಲು ಮತ್ತು ಒಳ್ಳೆಯವರನ್ನು ರಕ್ಷಿಸಲು ಇರುತ್ತದೆ. ಅದನ್ನೇ ದುರುಪಯೋಗಪಡಿಸಿಕೊಂಡು ಇನ್ನೊಬ್ಬರನ್ನು ಶೋಷಿಸುವುದು ಮತ್ತೊಂದು ರೀತಿಯ ಅಪರಾಧ. ಇದಕ್ಕೆ ಹೆಣ್ಣು ಗಂಡು ಇಬ್ಬರೂ ಹೊರತಲ್ಲ.

ಸಮಾಜದ ಒಟ್ಟು ಮೌಲ್ಯಗಳು ಕುಸಿತವಾದಾಗ, ಹಣಕೇಂದ್ರಿತ ಸಮಾಜ ನಿರ್ಮಾಣವಾದಾಗ ಈ ರೀತಿಯ ಪರಿಸ್ಥಿತಿ ಏರ್ಪಡುತ್ತದೆ. ಇದನ್ನು ನಿಯಂತ್ರಿಸಲು ಮತ್ತೊಂದು ಕಾನೂನಿನ ಅವಶ್ಯಕತೆ ಇಲ್ಲ. ಒಂದು ಸಣ್ಣ ತಿದ್ದುಪಡಿ ಸಾಕು.
ಹೆಣ್ಣೆಂದರೆ ಅವರು ನಮ್ಮ ತಾಯಿ ತಂಗಿ ಅಕ್ಕ ಗೆಳತಿ ಹೆಂಡತಿ ಪ್ರೇಯಸಿ ಎಂಬುದನ್ನು ಮರೆಯಬಾರದು. ಅವರ ಸುರಕ್ಷತೆಯೂ ನಮಗೆ ಮುಖ್ಯ.

ಆದರೆ ಕೌಟುಂಬಿಕ ವ್ಯವಸ್ಥೆಯಲ್ಲಿ ತಂದೆ ತಾಯಿಗಳ ಜವಾಬ್ದಾರಿ ಬಹಳ ಇದೆ. ಮದುವೆ ಎಂಬುದು ಒಂದು ವ್ಯವಹಾರವಲ್ಲ. ಅದು ಸಂಬಂಧಗಳ ಬೆಸೆಯುವಿಕೆ. ಒಂದು ವೇಳೆ ಅದು ಸಡಿಲವಾದರೆ ಅಥವಾ ಮುರಿದು ಬಿದ್ದರೆ ಸಮಸ್ಯೆ ಏನು ಇಲ್ಲ. ಆದರೆ ಆ ಪ್ರಕ್ರಿಯೆ ಸಾಧ್ಯವಾದಷ್ಟು ನಾಗರೀಕವಾಗಿ, ಕಾನೂನು ಬದ್ಧವಾಗಿ ಇದ್ದರೆ ಒಳ್ಳೆಯದು.

ಹೆಣ್ಣು ಗಂಡುಗಳ ನಡುವೆ ಬಹಳಷ್ಟು ಕಾರಣಗಳಿಗಾಗಿ ಸಂಪರ್ಕದ ಕೊರತೆ, ಜ್ಞಾನದ ಕೊರತೆ ಏರ್ಪಡುತ್ತದೆ. ಅದನ್ನು ಸರಿದೂಗಿಸುವುದು ಅವರವರ ವಿವೇಚನೆಗೆ ಬಿಟ್ಟದ್ದು. ಆದರೆ ದ್ವೇಷ, ಅಸೂಯೆ, ಹೊಡೆದಾಟಗಳು ಮಾತ್ರ ಖಂಡಿತ ಒಳ್ಳೆಯದಲ್ಲ. ಜೊತೆಗೆ ಹೆಣ್ಣಾಗಲಿ, ಗಂಡಾಗಲಿ ಆತ್ಮಹತ್ಯೆಯನ್ನು ಯಾರು ಉತ್ತೇಜಿಸಬೇಡಿ. ಅದೊಂದು ಹೀನ ಕೃತ್ಯ.

ಈ ಸಂಘರ್ಷಗಳು ಬಹಳ ವರ್ಷಗಳೇನು ಇರುವುದಿಲ್ಲ. ಇನ್ನು ಕೆಲವೇ ವರ್ಷಗಳಲ್ಲಿ ಮದುವೆ ಎಂಬುದು ಮತ್ತೊಂದು ರೂಪ ಪಡೆಯಬಹುದು. ಆದ್ದರಿಂದ ಆಯಾ ಕಾಲಘಟ್ಟದ ಸಾಮಾಜಿಕ ಸಮಸ್ಯೆಗಳನ್ನು ದಯವಿಟ್ಟು ಯುವಸಮೂಹ ಅರ್ಥ ಮಾಡಿಕೊಂಡು, ಸಹಿಸಿಕೊಂಡು ಮುಂದುವರೆಯಿರಿ.

ತಪ್ಪಿನಲ್ಲಿ ಹೆಣ್ಣು ಗಂಡು ಎಂಬುದೇನು ಇಲ್ಲ. ತಪ್ಪು ತಪ್ಪೇ. ಸಮಗ್ರ ಚಿಂತನೆ ರೂಪಿಸಿಕೊಳ್ಳಿ. ಖಂಡಿತವಾಗಲು ತಪ್ಪು ಸರಿಯನ್ನು ಎದುರಿಸುವ ಧೈರ್ಯ ಬರುತ್ತದೆ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

“ಗುರಿ” ಇಟ್ಟ ದೊಡ್ಡಬಳ್ಳಾಪುರ ಪ್ರತಿಭೆ ಮಹಾನಿಧಿ

ವಿದ್ಯಾರ್ಥಿ ಮತ್ತು ಶಿಕ್ಷಕನ ಬಾಂಧವ್ಯ, ಸರ್ಕಾರಿ ಶಾಲೆಗಳ ಇಂದಿನ ಸ್ಥಿತಿಗತಿ ಮೊದಲಾದ ಅಂಶಗಳು ಒಳಗೊಂಡಿರುವ 'ನನ್ನ ಶಾಲೆಯನ್ನು ಪ್ರೀತಿಸುತ್ತೇನೆ' ಎಂಬ…

22 minutes ago

ನೇಪಾಳದ ದಂಗೆ……

ಕೋವಿಡ್ ನಂತರದ ವಿಶ್ವದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಜಗತ್ತು ಬದಲಾವಣೆಯ ಹಾದಿಯಲ್ಲಿರುವಂತೆ ಕಾಣುತ್ತಿದೆ. ಕೆಲವು ಆಕ್ರಮಣಕಾರಿ ಯುದ್ಧಗಳು, ಮುಂದುವರಿದ ಭಯೋತ್ಪಾದನಾ…

6 hours ago

22 ವರ್ಷದ ಯುವಕ‌ ಮನೆಯಲ್ಲಿ ನೇಣಿಗೆ ಶರಣು

22 ವರ್ಷದ ಯುವಕ‌ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ‌ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ…

9 hours ago

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…

20 hours ago

ನಟ ಪ್ರಥಮ್ ಗೆ ಜೀವ ಬೆದರಿಕೆ, ಹಲ್ಲೆ ಯತ್ನ ಪ್ರಕರಣ: ಆರೋಪಿ ಯಶಸ್ವಿನಿ‌ ಗೌಡ, ಬೇಕರಿ ರಘುಗೆ ನ್ಯಾಯಾಂಗ ಬಂಧನ: ಸತ್ಯಕ್ಕೆ ಸಿಕ್ಕ ಜಯ ಎಂದ ಪ್ರಥಮ್

ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ‌ ಗೌಡ,…

20 hours ago

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 25 ಪ್ರವಾಸಿ ತಾಣಗಳು ಗುರುತು

ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…

24 hours ago