ಮಣ್ಣಿನಡಿ ಹುದುಗಿಹೋಗುತ್ತಿದ್ದ ವಿಜಯನಗರ ಕಾಲದ 6 ವೀರಗಲ್ಲುಗಳಿಗೆ ಮರುಜೀವ: ರಸ್ತೆ ವಿಸ್ತರಣೆ ವೇಳೆ ಪತ್ತೆ; ಪುರಾತತ್ವ ಇಲಾಖೆ ತ್ವರಿತ ಕಾರ್ಯಾಚರಣೆ

ದೊಡ್ಡಬಳ್ಳಾಪುರ: ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಮಣ್ಣಿನಡಿ ಹುದುಗಿಹೋಗುವ ಅಪಾಯದಲ್ಲಿದ್ದ ವಿಜಯನಗರ ಅರಸರ ಕಾಲದ ಆರು ಐತಿಹಾಸಿಕ ವೀರಗಲ್ಲುಗಳನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಸಂರಕ್ಷಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಲಿಂಗದಹಳ್ಳಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ವೀರಗಲ್ಲುಗಳು ಪತ್ತೆಯಾಗಿವೆ. ಕಾಮಗಾರಿಯ ವೇಳೆ ಕಾರ್ಮಿಕರು ಅವುಗಳನ್ನು ಮಣ್ಣಿನಡಿ ಮುಚ್ಚಲು ಮುಂದಾಗಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪುರಾತತ್ವ ಇಲಾಖೆಯ ಉಪ ನಿರ್ದೇಶಕಿ ಕಾವ್ಯಶ್ರೀ ಅವರು ಕಾಮಗಾರಿ ಸ್ಥಗಿತಗೊಳಿಸಿ, ಮಣ್ಣಿನಡಿ ಹುದುಗಿದ್ದ ಕಲ್ಲುಗಳನ್ನು ಹೊರತೆಗೆಸುವ ಮೂಲಕ ಅವುಗಳ ಸಂರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ.

ಮೂರು ಯುದ್ಧ ವೀರಗಲ್ಲು, ಮೂರು ಮಾಸ್ತಿಕಲ್ಲು

ಲಿಂಗದಹಳ್ಳಿಯಲ್ಲಿ ಪತ್ತೆಯಾಗಿರುವ ಆರು ಕಲ್ಲುಗಳಲ್ಲಿ ಮೂರು ಯುದ್ಧ ವೀರಗಲ್ಲುಗಳು ಹಾಗೂ ಮೂರು ವೀರ ಮಾಸ್ತಿಕಲ್ಲುಗಳಿವೆ. ಇವುಗಳ ಕೆತ್ತನೆ ಮತ್ತು ಕಲಾತ್ಮಕ ವಿನ್ಯಾಸಗಳು ವಿಜಯನಗರ ಅರಸರ ಕಾಲದ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೀರಗಲ್ಲಿನಲ್ಲಿ ವೀರನು ಬಿಲ್ಲು ಮತ್ತು ಕತ್ತಿಯನ್ನು ಹಿಡಿದಿರುವ ಚಿತ್ರಣವಿದೆ. ಆತನ ಬಲಭಾಗದಲ್ಲಿ ಸರ್ವಾಲಂಕಾರಭೂಷಿತಳಾದ ಪತ್ನಿ ನಿಂತಿರುವ ದೃಶ್ಯವನ್ನು ಕೆತ್ತಲಾಗಿದೆ. ಇತರ ಕಲ್ಲುಗಳಲ್ಲಿಯೂ ಆಕರ್ಷಕ ಕೆತ್ತನೆಗಳಿದ್ದು, ಅಂದಿನ ಕಾಲದ ಶಿಲ್ಪಕಲೆ, ಸಾಮಾಜಿಕ ಜೀವನ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಅಧ್ಯಯನ ಮಾಡಲು ಇವು ಸಹಕಾರಿಯಾಗಲಿವೆ.

ಸ್ಥಳೀಯವಾಗಿಯೇ ಸಂರಕ್ಷಣೆ

ಸ್ಥಳೀಯವಾಗಿ ದೊರೆತ ಐತಿಹಾಸಿಕ ಅವಶೇಷಗಳನ್ನು ಬೇರೆಡೆಗೆ ಸ್ಥಳಾಂತರಿಸುವುದರಿಂದ ಅವುಗಳ ಮೂಲ ಸ್ಥಳದ ಇತಿಹಾಸದ ಕೊಂಡಿ ತಪ್ಪುವ ಸಾಧ್ಯತೆಯಿದೆ. ಹೀಗಾಗಿ, ಅವು ದೊರೆತ ಪ್ರದೇಶದಲ್ಲಿಯೇ ಸೂಕ್ತ ಸ್ಥಳದಲ್ಲಿ ಸಂರಕ್ಷಿಸುವುದು ಮಹತ್ವದ್ದಾಗಿದೆ ಎಂಬುದು ಪುರಾತತ್ವ ಇಲಾಖೆಯ ಅಭಿಪ್ರಾಯವಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಆರು ವೀರಗಲ್ಲುಗಳನ್ನು ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಇರಿಸಿ ಸಂರಕ್ಷಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಇತಿಹಾಸ ಸಂಶೋಧಕರು ಹಾಗೂ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಈ ಅವಶೇಷಗಳ ಅಧ್ಯಯನಕ್ಕೆ ಅನುಕೂಲವಾಗಲಿದೆ.

ಲಿಂಗದಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನಷ್ಟು ಐತಿಹಾಸಿಕ ಅವಶೇಷಗಳು ದೊರೆಯುವ ಸಾಧ್ಯತೆಯಿದ್ದು, ಅವುಗಳನ್ನು ಗುರುತಿಸಿ ಸಂರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

ಈ ಸಂದರ್ಭದಲ್ಲಿ ಕೆಐಎಡಿಬಿ ಮ್ಯಾನೇಜರ್, ಡಾ. ಆರ್. ಯುವರಾಜು, ಕೆ.ಆರ್. ಮಧುಸೂದನ್, ಹರ್ಷಿತ್, ರಾಮಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

“ದೊಡ್ಡಬಳ್ಳಾಪುರ ತಾಲೂಕಿನ ಲಿಂಗದಹಳ್ಳಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಐತಿಹಾಸಿಕ ಕಲ್ಲುಗಳು ಪತ್ತೆಯಾಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕೆಲವು ಕಲ್ಲುಗಳು ಮಣ್ಣಿನಡಿ ಮುಚ್ಚಲ್ಪಟ್ಟಿದ್ದವು. ಕಾಮಗಾರಿ ಸ್ಥಗಿತಗೊಳಿಸಿ ಅವುಗಳನ್ನು ಹೊರತೆಗೆಸಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸಂರಕ್ಷಿಸಲಾಗಿದೆ. ಈ ಭಾಗದಲ್ಲಿ ಇನ್ನಷ್ಟು ಇಂತಹ ಅವಶೇಷಗಳು ಸಿಗುವ ಸಾಧ್ಯತೆಯಿದ್ದು, ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪುರಾತತ್ವ ಇಲಾಖೆಯ ಉಪ ನಿರ್ದೇಶಕಿ ಕಾವ್ಯಶ್ರೀ ಹೇಳಿದ್ದಾರೆ.

Ramesh Babu

Journalist

Recent Posts

ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾದ ವ್ಯಕ್ತಿ

ದೊಡ್ಡಬಳ್ಳಾಪುರ: ಮನೆಯವರಿಗೆ ವಿಡಿಯೋ ಕಾಲ್ ಮಾಡಿದ ಬಳಿಕ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

2 hours ago

ಅರಳುಮಲ್ಲಿಗೆ ಕ್ಷೇತ್ರದಿಂದ ಸ್ಪರ್ಧೆಗೆ ಕೃಷ್ಣಪ್ಪ ಒಲವು

ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು…

3 hours ago

ಮಳೆ ಕೊರತೆ, ಟೊಮೆಟೊ ದರ ಕುಸಿತ: ಸಾಲದ ಸುಳಿಯಲ್ಲಿ ರೈತ!

ದೊಡ್ಡಬಳ್ಳಾಪುರ: ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿರುವ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ಟೊಮೆಟೊ ದರ ಕುಸಿತವೂ ರೈತರನ್ನು ಕಂಗಾಲಾಗಿಸಿದೆ. ಬೆಳೆ…

7 hours ago

ಸಿನಿಮಾ ನೋಡಲು ಹೋದ ಕುಟುಂಬದ ಮನೆಗೆ ಕನ್ನ; 130 ಗ್ರಾಂ ಚಿನ್ನದೊಂದಿಗೆ ಸಿಕ್ಕಿಬಿದ್ದ ಕಳ್ಳ!

ಮನೆಯವರೆಲ್ಲರೂ ಸಿನಿಮಾ ನೋಡಲು ತೆರಳಿದ್ದ ವೇಳೆ ಮನೆಗೆ ನುಗ್ಗಿ 130 ಗ್ರಾಂ ಚಿನ್ನ ಕಳವು ಮಾಡಿದ್ದ ಆರೋಪಿಯೊಬ್ಬ, ಮನೆ ಮಾಲೀಕನ…

8 hours ago

ಡ್ರಗ್ಸ್ ಮುಕ್ತ ಭಾರತ, ವ್ಯಸನ ಮುಕ್ತ ಕರ್ನಾಟಕ……..

ಡ್ರಗ್ಸ್ ಮುಕ್ತ ಭಾರತ, ವ್ಯಸನ ಮುಕ್ತ ಕರ್ನಾಟಕ........ ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿವೆ. ಇನ್ನು ಕೆಲವೇ ವರ್ಷಗಳಲ್ಲಿ…

14 hours ago

ಘಾಟಿ ಕ್ಷೇತ್ರದಲ್ಲಿ ಮಕ್ಕಳ ಸಂಕಷ್ಟದ ಬದುಕಿಗೆ ಮುಕ್ತಿ: ಪಾಲಕರಿದ್ದರೂ ಅನಾಥರಂತಿದ್ದ ಮೂವರು ಮಕ್ಕಳ ರಕ್ಷಣೆ

ದೇಗುಲದ ಪ್ರಸಾದದಿಂದ ಹೊಟ್ಟೆ ತುಂಬಿಸಿಕೊಳ್ಳುವುದು, ದೇವಸ್ಥಾನದ ಬೀದಿಯಲ್ಲಿ ಭಿಕ್ಷಾಟನೆ ಮಾಡುವುದು, ರಾತ್ರಿ ವೇಳೆ ಬಂಡೆಗಳ ಪೊಟರೆ ಹಾಗೂ ಪೊದೆಗಳ ನಡುವೆ…

1 day ago